ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್–ಜೆಡಿಎಸ್‌ ಪ್ರಬಲ ಪೈಪೋಟಿ

ಎಚ್‌.ಪಿ. ಮಂಜುನಾಥ್‌ಗೆ 5ನೇ, ಹರೀಶ್‌ಗೌಡಗೆ ಪ್ರಥಮ ಚುನಾವಣೆ
Last Updated 6 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಮೈಸೂರು: ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸು ಅವರ ಕರ್ಮಭೂಮಿಯಾದ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್–ಜೆಡಿಎಸ್‌ ನಡುವೆ ತೀವ್ರ ಹಣಾಹಣಿ ಕಂಡುಬಂದಿದೆ.

ಮೊದಲ ಚುನಾವಣೆ ನಡೆದ 1952ರಿಂದಲೂ ಅಸ್ತಿತ್ವದಲ್ಲಿರುವ ಈ ಕ್ಷೇತ್ರವು ಈವರೆಗೆ 19 ಚುನಾವಣೆಗಳನ್ನು ಕಂಡಿದೆ. ಈ ಪೈಕಿ 4 ಉಪ ಚುನಾವಣೆಗಳಾಗಿವೆ. ಕಾಂಗ್ರೆಸ್ ಬರೋಬ್ಬರಿ 12 ಬಾರಿ, ಜನತಾ ಪರಿವಾರದವರು ಐದು ಸಲ ಗೆದ್ದಿದ್ದಾರೆ. ಬಿಜೆಪಿ ಕೇವಲ 2 ಬಾರಿಯಷ್ಟೆ ಗೆದ್ದಿದೆ. ಎರಡು ಬಾರಿ ಶಾಸಕಿಯನ್ನೂ ಕಂಡ ಕ್ಷೇತ್ರವಿದು.

ಹಾಲಿ ಶಾಸಕ ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌ ಅವರಿಗೆ ಪಕ್ಷವು ಮತ್ತೊಮ್ಮೆ ಟಿಕೆಟ್ ಘೋಷಿಸಿದೆ. 5ನೇ ಬಾರಿಗೆ ಟಿಕೆಟ್ ಪಡೆದುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಜೆಡಿಎಸ್‌ನಿಂದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ, ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮತ್ತು ರಾಜ್ಯ ಅಪೆಕ್ಸ್ ಬ್ಯಾಂಕ್‌ ಉಪಾಧ್ಯಕ್ಷ ಜಿ.ಡಿ.ಹರೀಶ್‌ಗೌಡ ಅವರನ್ನು ಕಣಕ್ಕಿಳಿಸಲಾಗಿದೆ. ಇದು ಅವರಿಗೆ ಮೊದಲ ಚುನಾವಣೆ. ಅನುಭವಿ ಮಂಜುನಾಥ್‌–ಇದೇ ಮೊದಲಿಗೆ ಕಣಕ್ಕಿಳಿದಿರುವ ಹರೀಶ್‌ ಗೌಡ ನಡುವೆ ನೇರ ಜಿದ್ದಾಜಿದ್ದಿ ಕಂಡುಬಂದಿದೆ. ಹರೀಶ್‌ ಗೌಡ ಅವರ ತಂದೆ ಜಿ.ಟಿ.ದೇವೇಗೌಡ ಈ ಕ್ಷೇತ್ರದಿಂದಲೂ ಹಿಂದೆ ಶಾಸಕರಾಗಿದ್ದರು.

ಪ್ರಚಾರದ ಭರಾಟೆ: ಕ್ಷೇತ್ರದಲ್ಲಿ ಈ ಎರಡು ಪಕ್ಷಗಳಿಂದಲೂ ಪ್ರಚಾರದ ಭರಾಟೆ ಜೋರಾಗಿದೆ. ಬಿಜೆಪಿಯಿಂದ ಟಿಕೆಟ್‌ ಪ್ರಕಟವಾಗಿಲ್ಲ. ಆ ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಯೋಗಾನಂದ ಕುಮಾರ್, ಹೋದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜಿ.ಎಸ್.ರಮೇಶ್‌ಕುಮಾರ್, ನಾಗಣ್ಣಗೌಡ, ನಗರಸಭಾ ಸದಸ್ಯ ಗಣೇಶ್ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ತೊರೆದು ಬಂದಿರುವ ದೇವರಹಳ್ಳಿ ಸೋಮಶೇಖರ್ ಆಕಾಂಕ್ಷಿಗಳಾಗಿದ್ದಾರೆ.

ಇದು ಮೊದಲು (1952) ಏಕಸದಸ್ಯ ಕ್ಷೇತ್ರವಾಗಿತ್ತು. 2ನೇ ಚುನಾವಣೆಯಲ್ಲಿ (1957) ದ್ವಿಸದಸ್ಯ ಕ್ಷೇತ್ರವಾಗಿತ್ತು. ದೇವರಾಜ ಅರಸು ಅವರು ಇಲ್ಲಿ 6 ಬಾರಿ ಗೆದ್ದಿದ್ದರು. ಎರಡು ಬಾರಿ ಮುಖ್ಯಮಂತ್ರಿಯೂ ಆಗಿದ್ದರು. ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಅರಸು ಅವರೊಂದಿಗೆ ಎನ್.ರಾಚಯ್ಯ ಕಾಂಗ್ರೆಸ್‌ನಿಂದಲೇ ಗೆದ್ದಿದ್ದರು. 1962ರಲ್ಲಿ ಏಕ ಸದಸ್ಯ ಕ್ಷೇತ್ರವಾದಾಗ ಡಿ.ದೇವರಾಜ ಅರಸು ಅವಿರೋಧವಾಗಿ ಆಯ್ಕೆಯಾಗಿದ್ದರು. 1967ರಲ್ಲಿ ಪಕ್ಷೇತರ ತಿಮ್ಮಪ್ಪ ಅವರನ್ನು ಸೋಲಿಸಿದ ದೇವರಾಜ ಅರಸು ಗೆಲುವಿನ ಯಾತ್ರೆಯನ್ನು ಮುಂದುವರಿಸಿದ್ದರು.

ಕೆಪಿಸಿಸಿ ಅಧ್ಯಕ್ಷರಾಗಿದ್ದರಿಂದ: 1972ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ರಾಜ್ಯದಾದ್ಯಂತ ಪ್ರಚಾರ–ಪ್ರವಾಸ ನಡೆಸಿದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೂ ಇಲ್ಲಿ ಕಾಂಗ್ರೆಸ್‌ ಪಕ್ಷವೇ ಗೆದ್ದಿತ್ತು. ಆ ಪಕ್ಷದ ಅಭ್ಯರ್ಥಿಯಾಗಿದ್ದ ಕರಿಯಪ್ಪಗೌಡ ಅವರು ಸಂಸ್ಥಾ ಕಾಂಗ್ರೆಸ್‌ನ ಎಚ್‌.ಹೊಂಬೇಗೌಡ ವಿರುದ್ಧ ಗೆದ್ದಿದ್ದರು. ಇದರೊಂದಿಗೆ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಎನ್ನುವುದು ಮತ್ತಷ್ಟು ದೃಢವಾಗಿತ್ತು.

ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತು. ಮುಖ್ಯಮಂತ್ರಿಯಾದ ದೇವರಾಜ ಅರಸು ಅವರಿಗಾಗಿ ಕ್ಷೇತ್ರವನ್ನು ತೆರೆವು ಮಾಡಿಕೊಟ್ಟಿದ್ದ ಕರಿಯಪ್ಪಗೌಡ ವಿಧಾನಪರಿಷತ್‌ ಸದಸ್ಯ ಸ್ಥಾನವನ್ನು ಪಡೆದುಕೊಂಡಿದ್ದರು. ಅದೇ ವರ್ಷ ನಡೆದ ಉಪ ಚುನಾವಣೆಯಲ್ಲಿ ದೇವರಾಜ ಅರಸು ಪಕ್ಷೇತರರಾದ ರಂಗಸ್ವಾಮಿ ವಿರುದ್ಧ ಗೆದ್ದರು.

1978ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ದೇವರಾಜ ಅರಸು ಜನತಾ ಪಕ್ಷದ ಎಚ್‌.ಎಲ್.ತಿಮ್ಮೇಗೌಡ ಅವರ ವಿರುದ್ಧ ಗೆದ್ದು 2ನೇ ಬಾರಿಗೆ ಮುಖ್ಯಮಂತ್ರಿಯಾದರು.

ಚಂದ್ರಪ್ರಭಾ ಅರಸು: 1983ರಲ್ಲಿ ಜನತಾ ಪಕ್ಷದ ಚಂದ್ರಪ್ರಭಾ ಅರಸು ಅವರಿಗೆ ಮತದಾರರು ಆಶೀರ್ವದಿಸಿದ್ದರು. ಆಗ, ಕಾಂಗ್ರೆಸ್‌ನಿಂದ ಎಚ್‌.ಎನ್.ಪ್ರೇಮಕುಮಾರ್‌ ಕಣದಲ್ಲಿದ್ದರು. 1985ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಚಂದ್ರಪ್ರಭಾ ಅರಸು ಅವರನ್ನು ಜನತಾ ಪಕ್ಷದ ಎಚ್‌.ಎಲ್.ತಿಮ್ಮೇಗೌಡ ಮಣಿಸಿದ್ದರು. ಮುಂದಿನ ಚುನಾವಣೆಯಲ್ಲಿ (1989) ಕಾಂಗ್ರೆಸ್‌ನ ಚಂದ್ರಪ್ರಭಾ ಅರಸು ಜನತಾ ದಳದಿಂದ ಕಣದಲ್ಲಿದ್ದ ಡಿ.ಕರಿಯಪ್ಪಗೌಡ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚಂದ್ರಪ್ರಭಾ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗಿ, ಲೋಕಸಭೆಗೆ ಆಯ್ಕೆಯಾದ್ದರಿಂದ ತೆರವಾಗಿದ್ದ ಸ್ಥಾನಕ್ಕೆ 1991ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್.ಚಿಕ್ಕಮಾದು ಅವರು ಬಿಜೆಪಿಯ ಸಿ.ಎಚ್.ವಿಜಯಶಂಕರ್ ವಿರುದ್ಧ ವಿಜಯದ ನಗೆ ಬೀರಿದರು. ಅಲ್ಲಿವರೆಗೆ, ಚಿಕ್ಕಮಾದು ಎರಡು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು.

ಇಲ್ಲಿ ಬಿಜೆಪಿ ಗೆಲುವಿನ ಖಾತೆ ತೆರೆದದ್ದು 1994ರ ಚುನಾವಣೆಯಲ್ಲಿ. ಸಿ.ಎಚ್.ವಿಜಯಶಂಕರ್‌ ಅವರು ಪಕ್ಷಕ್ಕೆ ಗೆಲುವು ತಂದುಕೊಟ್ಟರು. ಆಗ, ಜನತಾದಳದ ವಿ.ಪಾಪಣ್ಣ ಪೈಪೋಟಿ ನೀಡಿದ್ದರು. ಬದಲಾದ ರಾಜಕೀಯ ಬೆಳವಣಿಗೆಗಳಿಂದಾಗಿ ವಿಜಯಶಂಕರ್‌ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದರು. ಇದರಿಂದ 1998ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಗೆದ್ದರು. ಜೆಡಿಎಸ್ ಟಿಕೆಟ್‌ ಸಿಗದಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ವಿ.ಪಾಪಣ್ಣ ಕಣದಲ್ಲಿದ್ದರು. ಮುಂದಿನ ಚುನಾವಣೆಯಲ್ಲಿ (1999) ವಿ.ಪಾಪಣ್ಣ ಬಿಜೆಪಿಯಿಂದ ಸ್ಪರ್ಧಿಸಿ ಜೆಡಿಎಸ್‌ನಿಂದ ಕಣದಲ್ಲಿದ್ದ ಜಿ.ಟಿ.ದೇವೇಗೌಡ ಅವರನ್ನು ಸೋಲಿಸಿ ಸೇಡು ತೀರಿಸಿಕೊಳ್ಳಲು ಮತದಾರರು ಆಶೀರ್ವಾದ ಮಾಡಿದ್ದರು.

ಗೆದ್ದ ಜಿ.ಟಿ.ದೇವೇಗೌಡ: 2004ರಲ್ಲಿ ಮತ್ತೆ ಜೆಡಿಎಸ್‌ನಿಂದಲೇ ಪ್ರಯತ್ನ ಮುಂದುವರಿಸಿದ ಜಿ.ಟಿ.ದೇವೇಗೌಡ, ಕಾಂಗ್ರೆಸ್‌ನ ಎಸ್.ಚಿಕ್ಕಮಾದು ವಿರುದ್ಧ ಗೆದ್ದರು. 2008ರಲ್ಲಿ ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌ ಪ್ರಬಲ ಎಸ್.ಚಿಕ್ಕಮಾದು (ಜನತಾ ದಳ) ಹಾಗೂ ಜಿ.ಟ.ದೇವೇಗೌಡ (ಬಿಜೆಪಿಯಿಂದ ಸ್ಪರ್ಧಿಸಿದ್ದರು) ಅವರ ವಿರುದ್ಧ ಗೆದ್ದಿದ್ದರು. 2013ರಲ್ಲಿ ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌ ಮತ್ತೊಮ್ಮೆ ಆಯ್ಕೆಯಾದರು. ಜೆಡಿಎಸ್‌ನ ಕುಮಾರಸ್ವಾಮಿ, ಕೆಜೆಪಿಯ ಮಂಜುನಾಥ ಅರಸು ಮತ್ತು ಬಿಜೆಪಿಯಿಂದ ಅಣ್ಣಯ್ಯ ನಾಯಕ್‌ ಸ್ಪರ್ಧಿಸಿದ್ದರು. 2018ರಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಡಗೂರು ಎಚ್.ವಿಶ್ವನಾಥ್ (91,667 ಮತ) ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌ (83,092) ವಿರುದ್ಧ ಗೆದ್ದಿದ್ದರು. ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಜೆ.ಎಸ್.ರಮೇಶ್‌ಕುಮಾರ್ 6,406 ಮತಗಳನ್ನು ಗಳಿಸಿದ್ದರು.

ನಂತರದ ಬೆಳವಣಿಗೆಯಲ್ಲಿ ವಿಶ್ವನಾಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಇದರಿಂದ ತೆರವಾಗಿದ್ದ ಸ್ಥಾನಕ್ಕೆ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್ 92,725 ಮತಗಳನ್ನು ಗಳಿಸಿ ಗೆದ್ದರು. ಬಿಜೆಪಿಯಿಂದ ಕಣದಲ್ಲಿದ್ದ ಎಚ್‌.ವಿಶ್ವನಾಥ್ ಅವರಿಗೆ 52,998 ಮತಗಳು ಬಂದಿದ್ದವು. ಜೆಡಿಎಸ್‌ನ ದೇವರಹಳ್ಳಿ ಸೋಮಶೇಖರ್ 32,895 ಮತಗಳನ್ನು ಗಳಿಸಿ 3ನೇ ಸ್ಥಾನ ಪಡೆದಿದ್ದರು. ಇನ್ನೂ ಏಳು ಮಂದಿ ಕಣದಲ್ಲಿದ್ದರು.

ಅರಸು ಕುಟುಂಬ...
ದೇವರಾಜ ಅರಸು ಅವರ ಪುತ್ರಿ ಚಂದ್ರಪ್ರಭಾ ಅರಸು ಇಲ್ಲಿ ಎರಡು ಬಾರಿ (1983ರಲ್ಲಿ ಜನತಾ ಪಕ್ಷ, 1989ರಲ್ಲಿ ಕಾಂಗ್ರೆಸ್‌ನಿಂದ) ಗೆದ್ದು ರಾಮಕೃಷ್ಣ ಹೆಗಡೆ ನೇತೃತ್ವದ ಸಂಪುಟದಲ್ಲಿ ಸಚಿವರಾಗಿದ್ದರು. ಅರಸು ಅವರ ಮತ್ತೊಬ್ಬ ಮಗಳು ಭಾರತಿ ಅರಸು 1998ರಲ್ಲಿ ನಡೆದ ಚುನಾವಣೆಯಲ್ಲಿ ಲೋಕಶಕ್ತಿ–ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಾದರೂ ಗೆಲ್ಲಲಾಗಲಿಲ್ಲ. ಅರಸು ಮೊಮ್ಮಗ ಮಂಜುನಾಥ ಅರಸು 2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋಲನುಭವಿಸಿದರು.

ಎಚ್‌.ಪಿ.ಮಂಜುನಾಥ್ ಅವರು 1983 ಹಾಗೂ 1998ರಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿದ್ದ ಎಚ್.ಎನ್.ಪ್ರೇಮಕುಮಾರ್ ಅವರ ಪುತ್ರ. ಒಟ್ಟು 3 ಬಾರಿ ಆಯ್ಕೆಯಾಗಿದ್ದಾರೆ. ಅರಸು ನಂತರ ಮೂರು ಬಾರಿ ಗೆದ್ದ ಹೆಗ್ಗಳಿಕೆ ಅವರದು. ಈಗ 5ನೇ ಚುನಾವಣೆ ಎದುರಿಸುತ್ತಿದ್ದಾರೆ.

ಮತದಾರರ ವಿವರ
ಪುರುಷರು
: 1,20,290
ಮಹಿಳೆಯರು: 12,0474
ತೃತೀಯ ಲಿಂಗಿಗಳು: 13
ಒಟ್ಟು: 2,40,777

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT