ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನತ್ತ ಜಿಗಿಯಲು ‘ಕೈ’ ಆಕಾಂಕ್ಷಿಗಳು ಸಜ್ಜು

‘ತೆನೆ’ ಹೊರಲು ಮುಂದಾದ ಚಿಕ್ಕಪೇಟೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಕೆಜಿಎಫ್‌ ಬಾಬು
Last Updated 8 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಟಿಕೆಟ್‌ ಕೈತಪ್ಪುವ ಭೀತಿಯಲ್ಲಿರುವ ಕೆಲವು ವಿಧಾನಸಭಾ ಕ್ಷೇತ್ರಗಳ ಆಕಾಂಕ್ಷಿಗಳು ಕೊನೆ ಗಳಿಗೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿಯುವ ಪ್ರಯತ್ನ ಆರಂಭಿಸಿದ್ದಾರೆ. ಮೊದಲ ಎರಡು ಪಟ್ಟಿಗಳಲ್ಲಿ ಅವಕಾಶ ಕೈತಪ್ಪಿದವರು ಜೆಡಿಎಸ್‌ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಮೂರನೇ ಪಟ್ಟಿ ಪ್ರಕಟವಾಗುವ ಮೊದಲೇ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಯೂಸುಫ್‌ ಷರೀಫ್‌ ಜೆಡಿಎಸ್‌ನತ್ತ ವಾಲಿದ್ದಾರೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಜಿ. ರಘು ಆಚಾರ್‌, ಟಿಕೆಟ್‌ ಕೈತಪ್ಪುತ್ತಿದ್ದಂತೆಯೇ ಜೆಡಿಎಸ್‌ಗೆ ಜಿಗಿದಿದ್ದಾರೆ. ಚಿತ್ರದುರ್ಗ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಕಸರತ್ತು ನಡೆಸಿ ವಿಫಲವಾಗಿರುವ ಅನೇಕರು, ಕೊನೆಯ ಕ್ಷಣದಲ್ಲಿ ಜೆಡಿಎಸ್‌ಗೆ ಜಿಗಿದು ಚುನಾವಣಾ ಕಣಕ್ಕಿಳಿಯುವ ಸಿದ್ಧತೆ ನಡೆಸಿದ್ದಾರೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ಯೂಸುಫ್‌ ಷರೀಫ್‌ ಅಲಿಯಾಸ್‌ ಕೆಜಿಎಫ್‌ ಬಾಬು ಕಾಂಗ್ರೆಸ್‌ನಿಂದ ಹೊರನಡೆಯುವ ಸಿದ್ಧತೆ ಆರಂಭಿಸಿದ್ದಾರೆ. ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ದೊರೆಯುವುದಿಲ್ಲ ಎಂಬ ಸುಳಿವು ದೊರೆತಿರುವುದರಿಂದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು. ಕುಮಾರಸ್ವಾಮಿ ಅವರು ಶನಿವಾರ ಸಂಜೆ ಯಶವಂತ‍ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ‘ಪಂಚರತ್ನ’ ರಥಯಾತ್ರೆ ನಡೆಸುತ್ತಿದ್ದರು. ಅಲ್ಲಿಯೇ ಇಬ್ಬರ ಭೇಟಿ ನಡೆದಿದೆ.

ಡಿಸೆಂಬರ್‌ನಲ್ಲೇ 93 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ಜೆಡಿಎಸ್‌, ಉಳಿದ ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡದೇ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬಳಿಕವೇ ಎರಡನೇ ಪಟ್ಟಿ ಪ್ರಕಟಿಸಲು ಜೆಡಿಎಸ್‌ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷ ಸೇರಲು 15 ಮಂದಿ ಸಿದ್ಧ: ಈ ಕುರಿತು ಪ್ರತಿಕ್ರಿಯಿಸಿದ ಎಚ್‌.ಡಿ. ಕುಮಾರಸ್ವಾಮಿ, ‘ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಾಗಿದ್ದ 15 ಮಂದಿ ಜೆಡಿಎಸ್‌ ಸೇರಲು ಸಿದ್ಧರಾಗಿದ್ದಾರೆ. 224 ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಗೆಲುವು ಸಾಧಿಸಬಲ್ಲ ಅಭ್ಯರ್ಥಿಗಳ ಅಗತ್ಯವೂ ನಮಗಿದೆ’ ಎಂದರು.

ವರುಣದಲ್ಲಿ ಅಭ್ಯರ್ಥಿ ಬದಲಿಸಲು ನಿರ್ಧಾರ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿರುವ ವರುಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯನ್ನು ಬದಲಿಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ.

ಎಸ್‌.ಎಂ. ಅಭಿಷೇಕ್‌ ಅವರನ್ನು ವರುಣ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಜೆಡಿಎಸ್‌ ಆಯ್ಕೆಮಾಡಿತ್ತು. ಆದರೆ, ಸಿದ್ದರಾಮಯ್ಯ ಅವರಿಗೆ ವರುಣಾದಲ್ಲಿ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾದ ಬಳಿಕ ಅಭಿಷೇಕ್‌ ಪ್ರಚಾರ ನಿಲ್ಲಿಸಿ ತಟಸ್ಥರಾಗಿದ್ದಾರೆ.

‘ವರುಣದಲ್ಲಿ ಅಭ್ಯರ್ಥಿ ಬದಲಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿ ಈ ಕುರಿತು ತೀರ್ಮಾನಕ್ಕೆ ಬರಲಾಗುವುದು’ ಎಂದು ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT