ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 28 ಕ್ಷೇತ್ರಗಳ ಮತದಾನ ಪೂರ್ಣ | ಮತ ಪಕ್ಕಾ; ಶುರು ಲೆಕ್ಕ

ಸರಾಸರಿ ಶೇ 70.41ರಷ್ಟು ಮತದಾನ
Published 8 ಮೇ 2024, 0:30 IST
Last Updated 8 ಮೇ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯ ಎರಡು ಮತ್ತು ಮೂರನೇ ಹಂತದ ಪ್ರಚಾರದ ವೇಳೆ ಕರ್ನಾಟಕ ಕೇಂದ್ರಿತ ರಾಜಕಾರಣವೇ ದೇಶದುದ್ದಕ್ಕೂ ಪ್ರಸ್ತಾಪವಾಗಿದ್ದು, ರಾಜ್ಯದಲ್ಲಿ ಎರಡೂ ಹಂತದ ಮತದಾನ ಮುಗಿದಿದೆ.

ಎಲ್ಲ 28 ಕ್ಷೇತ್ರಗಳ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಪಕ್ಕಾ ಮಾಡಿದ್ದಾರೆ. ಫಲಿತಾಂಶಕ್ಕೆ ಇನ್ನೂ 27 ದಿನ (ಜೂನ್ 4) ಕಾಯಬೇಕಾಗಿದೆ. ಮತದಾನ ಪ್ರಮಾಣದ ಆಧಾರ ಹಾಗೂ ಮತಗಟ್ಟೆವಾರು ಪಕ್ಷದ ಅಭ್ಯರ್ಥಿಗಳಿಗೆ ಬಿದ್ದ ಮತದಾನದ ಅಂದಾಜಿನ ಮೇಲೆ, ಯಾವ ಪಕ್ಷ ಎಷ್ಟು ಕ್ಷೇತ್ರ ಗೆಲ್ಲಬಹುದು ಎಂಬ ಲೆಕ್ಕಾಚಾರ ಬಿರುಸುಗೊಂಡಿದೆ.

ಎರಡನೇ ಹಂತದಲ್ಲಿ ಮಲೆನಾಡು, ಕರಾವಳಿ, ಮಧ್ಯ, ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕದ ಭಾಗದ 14 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಮತದಾನದ ಅಂತಿಮ ಪ್ರಮಾಣ ಹೊರ ಬಿದ್ದಿಲ್ಲ. ದಕ್ಷಿಣ ಭಾಗದ ಮತದಾನಕ್ಕೆ ಹೋಲಿಸಿದರೆ ಮತದಾರರು ಹೆಚ್ಚಿನ ಉತ್ಸಾಹ ತೋರಿದ್ದಾರೆ. ಲಭ್ಯವಾದ ಮಾಹಿತಿಯಂತೆ ಸರಾಸರಿ ಶೇ 70.41ರಷ್ಟು ಮತದಾನವಾಗಿದೆ.

ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಬರ ಪರಿಹಾರದ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಮೋದಿಗೆ ಕರ್ನಾಟಕದ ಜನರ ಬಗ್ಗೆ ಅಸಹನೆ ಇದೆ. ಹೀಗಾಗಿ ತೆರಿಗೆ ಪಾಲು, ಅನುದಾನ ಹಂಚಿಕೆ ಮತ್ತು ಬರಪರಿಹಾರ ನೀಡುವಲ್ಲಿ ವಂಚಿಸಿದೆ ಎಂದು ಕಾಂಗ್ರೆಸ್‌ ಪಕ್ಷ ಅಬ್ಬರದ ಪ್ರಚಾರ ಮಾಡಿತ್ತು.

ಇದಕ್ಕೆ ಪ್ರತಿಯಾಗಿ ಬಿಜೆಪಿಯು ಯುಪಿಎಯ 10 ವರ್ಷಗಳ ಅವಧಿ ಮತ್ತು ಮೋದಿಯವರ 10 ವರ್ಷಗಳ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆ ಆದ ಮೊತ್ತಗಳ ವಿವರವನ್ನು ನೀಡಿ, ಯುಪಿಎ ಅವಧಿಯಲ್ಲೇ ಕರ್ನಾಟಕಕ್ಕೆ ಹೆಚ್ಚು ಅನ್ಯಾಯ ಆಗಿತ್ತು. ಮೋದಿ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ತಿರುಗೇಟು ನೀಡಿತ್ತು.

ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆಯ ಪ್ರಕರಣ ವನ್ನು ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ಪ್ರಮುಖ ಅಸ್ತ್ರವನ್ನಾಗಿ ಬಳಸಿತು. ಇದರ ಬೆನ್ನಲ್ಲೇ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಭಾಗಿಯಾಗಿದ್ದರೆನ್ನಲಾದ ಅಶ್ಲೀಲ ವಿಡಿಯೊ ಬಿಡುಗಡೆಯಾಗಿ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಕಾಂಗ್ರೆಸ್‌ ಇದನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡಿದೆ.

ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಅವರ ತವರು ಕ್ಷೇತ್ರದಲ್ಲಿ ಬಿಜೆಪಿ ಹಿರಿಯ ನಾಯಕರಾಗಿದ್ದ ಕೆ.ಎಸ್‌. ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.  ದಾವಣಗೆರೆಯಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿದ್ದ ಜಿ.ಬಿ. ವಿನಯಕುಮಾರ್ ಕಣದಲ್ಲಿದ್ದಾರೆ. ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ, ಲಿಂಗಾಯತ ಸಮುದಾಯದ ಕೆಲವು ಸ್ವಾಮೀಜಿಗಳು ತಿರುಗಿ ಬಿದ್ದಿದ್ದಾರೆ. ಈ ಎಲ್ಲವೂ ಯಾವ ರೀತಿ ಸೋಲು–ಗೆಲುವಿನ ಮೇಲೆ ಪರಿಣಾಮ ಬೀರಬಹುದು ಎಂಬ ತರ್ಕವೂ ಜೋರಾಗಿ ನಡೆದಿದೆ. 

ಈ ಎಲ್ಲ ವಿವಾದಗಳು, ಆರೋಪ– ಪ್ರತ್ಯಾರೋಪಗಳು, ಅಭ್ಯರ್ಥಿಗಳಿಗೆ ಅನುಕೂಲಕಾರಿ ಸಂಗತಿಗಳು, ಬಂಡಾಯ ಇವೆಲ್ಲವುಗಳನ್ನು ಮುಂದಿಟ್ಟು, ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಮುಂದಿನ ದಿನಗಳಲ್ಲಿ ಪ್ರಮುಖ ಚರ್ಚೆಯ ವಿಷಯವಾಗಲಿದೆ.  ಸಿದ್ದರಾಮಯ್ಯ ವರ್ಚಸ್ಸು, ಗ್ಯಾರಂಟಿಗಳ ಪ್ರಭಾವ ಮತ್ತು ಬರ ಪರಿಹಾರದ ವಿಚಾರಗಳನ್ನು ಪ್ರಸ್ತಾಪಿಸಿದ್ದರಿಂದ ಕಾಂಗ್ರೆಸ್‌ ಸುಮಾರು 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಮತ್ತೊಂದು ಕಡೆ ಬಿಜೆಪಿ, ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ, ಮೋದಿ ವರ್ಚಸ್ಸಿನ ಕಾರಣಕ್ಕೆ 19ರಿಂದ 23 ಸ್ಥಾನ ಗೆಲ್ಲಬಹುದು ಎಂದು ಹೇಳಿಕೊಳ್ಳುತ್ತಿದೆ. ಜೆಡಿಎಸ್‌ ಸ್ಪರ್ಧಿಸಿರುವ 3 ಸ್ಥಾನಗಳನ್ನೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ.

ಸುರಪುರ ಬಿಟ್ಟರೆ ಎಲ್ಲೆಡೆ ಶಾಂತಿಯುತ

ಬೆಂಗಳೂರು: ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮಂಗಳವಾರ ನಡೆದ ಮತದಾನದ ವೇಳೆ ಹೊಡೆದಾಟ ನಡೆದಿದ್ದು ಬಿಟ್ಟರೆ, 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.

ಬಿಸಿಲಿನ ಝಳದ ಮಧ್ಯೆಯೂ ಕಲಬುರಗಿ, ಬೀದರ್, ವಿಜಯಪುರ ಮತ್ತು ರಾಯಚೂರು ಕ್ಷೇತ್ರಗಳನ್ನು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಉತ್ತಮವಾಗಿತ್ತು. ಚಿಕ್ಕೋಡಿ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಬಳ್ಳಾರಿ, ಉತ್ತರ ಕನ್ನಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ.

ಮೊದಲ ಹಂತದಲ್ಲಿ ನಡೆದ 14 ಕ್ಷೇತ್ರಗಳಲ್ಲಿ ಶೇ 72 ರಷ್ಟು ಮತದಾನವಾಗಿತ್ತು. 2019ರ ಚುನಾವಣೆಗಿಂತಲೂ ಶೇ 2ರಷ್ಟು ಹೆಚ್ಚು ಮತದಾನವಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT