ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಮರಳಿ ಗದ್ದುಗೆಗೆ, ಬಿಜೆಪಿಗೆ ದಯನೀಯ ಸೋಲು

ಸ್ಪಷ್ಟ ಬಹುಮತ ನೀಡಿದ ಕರ್ನಾಟಕದ ಮತದಾರ
Published 13 ಮೇ 2023, 12:56 IST
Last Updated 13 ಮೇ 2023, 12:56 IST
ಅಕ್ಷರ ಗಾತ್ರ

ಬೆಂಗಳೂರು: ಅಬ್ಬರದ ಪ್ರಚಾರ ಕಂಡ ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದ ಚುನಾವಣೆಗಳಲ್ಲಿ, 135ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲು ಸಿದ್ಧತೆ ನಡೆಸಿದೆ. ಆಡಳಿತಾರೂಢ ಬಿಜೆಪಿ ರಣತಂತ್ರ ವಿಫಲವಾಗಿದ್ದು, 65ರಷ್ಟು ಸ್ಥಾನಗಳನ್ನಷ್ಟೇ ಪಡೆಯಲು ಸಾಧ್ಯವಾಗಿ ದಯನೀಯ ಸೋಲು ಕಂಡಿದೆ. ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಕನಸು ಕಂಡಿದ್ದ ಜೆಡಿಎಸ್ 20ರ ಆಸುಪಾಸು ಸ್ಥಾನಗಳಿಗೆ ತೃಪ್ತಿಪಟ್ಟಿದೆ.

ಕಾಂಗ್ರೆಸ್ ಪಕ್ಷ ಅತ್ಯುತ್ಸಾಹದಿಂದ ಸರಕಾರ ರಚನೆಗೆ ಸಿದ್ಧವಾಗುತ್ತಿದ್ದು, ಪಕ್ಷದಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬ ಚರ್ಚೆ ಬಿರುಸಾಗಿ ಸಾಗಿದೆ.

ವಿ.ಸೋಮಣ್ಣ, ಸಿ.ಟಿ.ರವಿ, ಸುಧಾಕರ್, ಬಿ.ಸಿ.ಪಾಟೀಲ್, ಕಾಗೇರಿ ವಿಶ್ವೇಶ್ವರ ಹೆಗಡೆ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮುಂತಾಗಿ ಬಿಜೆಪಿ ಸರಕಾರದ ಹಲವಾರು ಮಂತ್ರಿಗಳು ಸೋತಿದ್ದರೆ, ಹೊಸ ಮುಖಗಳಿಗೆ ಮಣೆಹಾಕುವ ತಂತ್ರ ಫಲ ನೀಡದೆ, ಬೆರಳೆಣಿಕೆಯ ಹೊಸ ಮುಖಗಳಿಗಷ್ಟೇ ಮತದಾರ ಮಾನ್ಯತೆ ನೀಡಿದ್ದಾನೆ. ಹೊನ್ನಾಳಿಯಲ್ಲಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸೋಲಾಗಿದೆ.

ಸೋತ ಮಂತ್ರಿಗಳು
ಗೋವಿಂದ ಕಾರಜೋಳ, ಜೆ.ಸಿ.ಮಾಧುಸ್ವಾಮಿ, ಬಿ.ಸಿ.ಪಾಟೀಲ, ಶಂಕರ ಪಾಟೀಲ ಮುನೇನ ಕೊಪ್ಪ, ಹಾಲಪ್ಪ ಆಚಾರ್, ಬಿ.ಶ್ರೀರಾಮುಲು, ಡಾ.ಕೆ.ಸುಧಾಕರ್‌, ವಿ.ಸೋಮಣ್ಣ (ಎರಡೂ ಕಡೆ), ಆರ್‌.ಅಶೋಕ (ಒಂದು ಕಡೆ), ನಾರಾಯಣಗೌಡ, ಬಿ.ಸಿ.ನಾಗೇಶ್‌, ಮುರುಗೇಶ ನಿರಾಣಿ, ಬಿ.ಸಿ.ಪಾಟೀಲ, ಎಂ.ಟಿ.ಬಿ.ನಾಗರಾಜ್.

ಕೆಲವರು ಪಕ್ಷ ಬದಲಿಸಿ, ಕ್ಷೇತ್ರವನ್ನೂ ಬದಲಿಸಿ ಗೆದ್ದು ಬೀಗಿದರೆ, ಇನ್ನು ಕೆಲವರು ನಿಷ್ಠಾಂತರ ಮಾಡಿ ಮತದಾರನ ಆಕ್ರೋಶಕ್ಕೆ ತುತ್ತಾದರು. ಮೂಲತಃ ಕಾಂಗ್ರೆಸಿಗನಾಗಿದ್ದ ಎನ್.ವೈ.ಗೋಪಾಲಕೃಷ್ಣ, ಬಿಜೆಪಿ ಸೇರಿದ್ದರು. ಬಳಿಕ ಅಸಮಾಧಾನಗೊಂಡು, ಮರಳಿ ಕಾಂಗ್ರೆಸಿಗೆ ಸೇರಿ ಮೊಳಕಾಲ್ಮುರು ಕ್ಷೇತ್ರದಲ್ಲಿ 22 ಸಾವಿರದಷ್ಟು ಮತಗಳಿಂದ ಗೆದ್ದಿದ್ದಾರೆ.

ಎಲ್ಲರ ಕುತೂಹಲ ಕೆರಳಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿ ತೊರೆದು ಕಾಂಗ್ರೆಸಿನಿಂದ ಟಿಕೆಟ್ ಪಡೆದು ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿದ್ದಾರೆ. ರಾಜ್ಯದ ಗಮನ ಸೆಳೆದಿದ್ದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶೆಟ್ಟರ್ ವಿರುದ್ಧ ಬಿಜೆಪಿಯ ಮಹೇಶ ಟೆಂಗಿನಕಾಯಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ಗೆ 136, ಬಿಜೆಪಿ 65, ಜೆಡಿಎಸ್ 16, ಇತರರಿಗೆ 4

ಕಾಂಗ್ರೆಸ್ ವಿಜಯ: ನಾಳೆ ಮುಖ್ಯಮಂತ್ರಿ ಘೋಷಣೆ ಸಾಧ್ಯತೆ

ಕಾಂಗ್ರೆಸ್ ಜಯದ ಹಿಂದಿನ 10 ಕಾರಣಗಳು ಇಲ್ಲಿವೆ.

ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೋಲಾಗಿದ್ದರೆ, ಕಾಂಗ್ರೆಸಿನ ಇಕ್ಬಾಲ್ ಹುಸೇನ್ ಸುಮಾರು 10 ಸಾವಿರ ಮತಗಳ ಅಂತರದಿಂದ ಅವರ ವಿರುದ್ಧ ಗೆಲುವು ದಾಖಲಿಸಿದ್ದಾರೆ.

ರಾಜ್ಯದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ಅವರು 75,673 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದರು.

ಎಲ್ಲ 23 ಸುತ್ತುಗಳೂ ಮುಕ್ತಾಯವಾಗಿದ್ದು, ಲಕ್ಷ್ಮಣ ಸವದಿಗೆ 1,30,428 ಮತಗಳು ಬಂದವು. ಪ್ರತಿಸ್ಪರ್ಧಿ ಬಿಜೆಪಿಯ ಮಹೇಶ್ ಕುಮಠಳ್ಳಿ 54805 ಮತ ಪಡೆದರು.

2018ರಲ್ಲಿ ಕಾಂಗ್ರೆಸ್‌ನಿಂದ ಮಹೇಶ ಕುಮಠಳ್ಳಿ ಅವರು ಸವದಿ ವಿರುದ್ಧ ಗೆದ್ದಿದ್ದರು. 2019ರಲ್ಲಿ ಆಪರೇಷನ್‌ ಕಮಲದ ಮೂಲಕ, ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ಬಿಜೆಪಿ ಸೇರಿದ್ದರು. ಆಗ ನಡೆದ ಉಪಚುನಾವಣೆಯಲ್ಲಿ ಸ್ವತಃ ಲಕ್ಷ್ಮಣ ಸವದಿ ಅವರೇ ಮುಂದೆ ನಿಂತು ಕುಮಠಳ್ಳಿ ಅವರನ್ನು ಗೆಲ್ಲಿಸಿದ್ದರು.

ಈ ಬಾರಿ ಟಿಕೆಟ್‌ ಹಂಚಿಕೆ ದಿನದಿಂದಲೂ ಇಬ್ಬರ ಮಧ್ಯೆ ಗುದ್ದಾಟ ನಡೆದೇ ಇತ್ತು. ಬಿಜೆಪಿಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ನೊಂದ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಕಣಕ್ಕಿಳಿದಿದ್ದರು.

ಚುನಾವಣೆಯ ಸಮಗ್ರ ವರದಿಗಳು ಇಲ್ಲಿವೆ. ಕ್ಲಿಕ್ ಮಾಡಿ.

ಮತ್ತೊಂದೆಡೆ ಬಿಜೆಪಿ ಜೊತೆ ಮುನಿಸಿಕೊಂಡು ಕೆಆರ್‌ಪಿಪಿ ಪಕ್ಷ ಕಟ್ಟಿ ಸ್ಪರ್ಧಿಸಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ಸ್ವಕ್ಷೇತ್ರಕ್ಕಿಂತ ದೂರದ ಗಂಗಾವತಿಯಲ್ಲಿ ಗೆದ್ದಿದ್ದರೆ, ಕ್ಷೇತ್ರಕ್ಕೇ ಕಾಲಿಡದಂತೆ ನಿರ್ಬಂಧ ಪಡೆದಿದ್ದ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಧಾರವಾಡ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ವಯಸ್ಸಿನಲ್ಲಿ ರಾಜ್ಯದಲ್ಲೇ ಅತಿ ಹಿರಿಯ ಅಭ್ಯರ್ಥಿ ಎನಿಸಿಕೊಂಡಿದ್ದ ಕಾಂಗ್ರೆಸ್‌ನ ಶಾಸಕ ಶಾಮನೂರು ಶಿವಶಂಕರಪ್ಪ (92 ವರ್ಷ) ದಾವಣಗೆರೆ ದಕ್ಷಿಣದಲ್ಲಿ ಹಾಗೂ ಅವರ ಪುತ್ರ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಗೆದ್ದಿದ್ದರೆ, ವರುಣ ಕ್ಷೇತ್ರದಲ್ಲಿ 'ಇದು ನನ್ನ ಕೊನೆಯ ಚುನಾವಣೆ' ಎಂದು ಘೋಷಿಸಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಗೆದ್ದುಬಂದಿದ್ದಾರೆ. ಮಾಜಿ ಸಚಿವ ಸೋಮಣ್ಣ ಇಲ್ಲಿ ಸೋಲನ್ನಪ್ಪಿದ್ದಾರೆ.

ಚನ್ನಪಟ್ಟಣದಲ್ಲಿ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಜಯ ಗಳಿಸಿದ್ದರೆ, ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ನ ಸ್ವರೂಪ್ ಪ್ರಕಾಶ್ ಗೆಲುವು‌ ಸಾಧಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಗೆಲ್ಲಿಸುವುದಾಗಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆ ನಿಜವಾಗಿದೆ. ಮೂರು ಬಾರಿ ಶಾಸಕರಾಗಿದ್ದ ದಿವಂಗತ‌ ಎಚ್.ಎಸ್‌. ಪ್ರಕಾಶ ಅವರ ಪುತ್ರ ಸ್ವರೂಪ್ ಸುಮಾರು 8 ಸಾವಿರ ಮತಗಳಿಂದ ಗೆಲುವು‌ ಸಾಧಿಸಿದ್ದಾರೆ. ರೇವಣ್ಣ ಕುಟುಂಬದ‌ ಯಾರೇ ಸ್ಪರ್ಧಿಸಿದರೂ, 50‌ ಸಾವಿರ‌ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ‌ ಸವಾಲು ಹಾಕಿದ್ದ ಪ್ರೀತಂ ಗೌಡ ಸೋಲು ಅನುಭವಿಸಬೇಕಾಗಿದೆ.

ಇದರೊಂದಿಗೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳ ಈಡೇರಿಕೆಯಾಗುತ್ತದೆಯೇ ಎಂದು ಕರ್ನಾಟಕದ ಮತದಾರ ನಿರೀಕ್ಷೆಯಲ್ಲಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT