ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪ್ರಣಾಳಿಕೆ: ‘ಗ್ಯಾರಂಟಿ’ ಜತೆ ‘ಕೈ’ತುಂಬಾ ಭರವಸೆ

ಸಹಾನುಭೂತಿಯಿಂದ ಒಪಿಎಸ್‌ ಮರು ಜಾರಿ | ಮೀಸಲಾತಿ ಮಿತಿ ಶೇ 75ಕ್ಕೆ ಹೆಚ್ಚಿಸಲು ಕ್ರಮ
Published 2 ಮೇ 2023, 20:53 IST
Last Updated 2 ಮೇ 2023, 20:53 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷ, ಮತದಾರರನ್ನು ತನ್ನತ್ತ ಸೆಳೆಯಲು ಈಗಾಗಲೇ ಘೋಷಿಸಿರುವ ಉಚಿತ ಕೊಡುಗೆಗಳ ಐದು ‘ಗ್ಯಾರಂಟಿ’ಗಳ ಜತೆಗೆ, ಎಲ್ಲರನ್ನೂ ಓಲೈಸುವ ಭರಪೂರ ಆಶ್ವಾಸನೆಗಳನ್ನು ಒಳಗೊಂಡ  ಪ್ರಣಾಳಿಕೆಯನ್ನು ಪ್ರಕಟಿಸಿದೆ. 

ಹೋಟೆಲ್‌ ಶಾಂಗ್ರಿ–ಲಾದಲ್ಲಿ ಪಕ್ಷದ ನಾಯಕರ ಸಮ್ಮುಖದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದರು. ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸುವ ಪ್ರಮಾಣ ತೆಗೆದುಕೊಳ್ಳುವ ಸಂಕೇತವಾಗಿ ಅರಿಶಿನ ಕುಂಕುಮ ಹಚ್ಚಿ, ವೀಳ್ಯದೆಲೆ ಅಡಿಕೆ ಇಟ್ಟು ಸಾಂಪ್ರದಾಯಿಕವಾಗಿ ಬಿಡುಗಡೆ ಮಾಡಿತು. 

ಖಾಲಿ ಇರುವ ಎಲ್ಲ ಸರ್ಕಾರಿ ಹುದ್ದೆಗಳು ವರ್ಷದೊಳಗೆ ಭರ್ತಿ, ಕೃಷಿ ಮತ್ತು ನೀರಾವರಿಗೆ ₹1.50 ಲಕ್ಷ ಕೋಟಿ ವೆಚ್ಚ, ರೈತರಿಗೆ ನೀಡುತ್ತಿರುವ ಬಡ್ಡಿರಹಿತ ಸಾಲ ₹3 ಲಕ್ಷದಿಂದ ₹10 ಲಕ್ಷಕ್ಕೆ ಏರಿಕೆ, ಶೇ 3ರ ಬಡ್ಡಿ ದರದ ಸಾಲ ₹15 ಲಕ್ಷ ವರೆಗೆ ವಿಸ್ತರಣೆ ಸೇರಿದಂತೆ ಜನಾಕರ್ಷಕ ಭರವಸೆಗಳನ್ನು ಕಾಂಗ್ರೆಸ್‌ ನೀಡಿದೆ.

ನಮ್ಮ ಘೋಷಣೆಗಳನ್ನೇ ಕಾಂಗ್ರೆಸ್‌ನವರು ಬೇರೆ ಹೆಸರಿನಲ್ಲಿ ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ. ಅವರದ್ದು ದಗಲ್ಬಾಜಿ ಪ್ರಣಾಳಿಕೆ. ಮೇ 10ರವರೆಗಷ್ಟೇ ಅವರ ಗ್ಯಾರಂಟಿ ಉಳಿಯಲಿದೆ
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಲ್ಲ ಜನವಿರೋಧಿ ಕಾನೂನು ರದ್ದು, ರಾಷ್ಟ್ರೀಯ ಶಿಕ್ಷಣ ನೀತಿ ರದ್ದು, ಕೈಬಿಟ್ಟ ಪಠ್ಯಗಳ ಮರು ಸೇರ್ಪಡೆ, ಯಾವುದೇ ಜಾತಿನಿಂದನೆ ಶಿಕ್ಷಾರ್ಹ ಅಪರಾಧವೆಂಬ ಕಾನೂನು ರಚನೆ, ಸಂಸ್ಕೃತ ಸಾಹಿತ್ಯದ ಅಧ್ಯಯನಕ್ಕಾಗಿ ಶಂಕರಾಚಾರ್ಯ ಅಧ್ಯಯನ ಪೀಠ ಸ್ಥಾಪನೆ, ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಪರಿಗಣಿಸಲು ಕ್ರಮವಹಿಸುವುದಾಗಿ ಹೇಳಿದೆ.

ಕಾಂಗ್ರೆಸ್‌ನ ಐದು ‘ಗ್ಯಾರಂಟಿ’ 

  • ಗೃಹ ಜ್ಯೋತಿ– ಪ್ರತಿ ತಿಂಗಳು 200 ಯುನಿಟ್‌ ವಿದ್ಯುತ್‌ ಉಚಿತ

  • ಗೃಹಲಕ್ಷ್ಮಿ– ಪ್ರತಿ ಮನೆಯ ಯಜಮಾನಿಗೆ ಮಾಸಿಕ ₹ 2,000

  • ಅನ್ನಭಾಗ್ಯ– ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಉಚಿತ

  • ಪದವೀಧರರಿಗೆ ಮತ್ತು ಡಿಪ್ಲೊಮಾದಾರರರಿಗೆ ಪ್ರತಿ ತಿಂಗಳು ಕ್ರಮವಾಗಿ ₹3,000 ಮತ್ತು ₹1,500 ಭತ್ಯೆ

  • ಶಕ್ತಿ– ಸರ್ಕಾರಿ ಬಸ್‌ಗಳಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ

ಸಾಮಾಜಿಕ ನ್ಯಾಯದ ಅಡಿಪಾಯದಲ್ಲಿ ಅಭಿವೃದ್ಧಿ, ಶಾಂತಿಯನ್ನು ಮನಸ್ಸಿನಲ್ಲಿಟ್ಟು ಪ್ರಣಾಳಿಕೆಗೆ ಅಂತಿಮ ರೂಪ ಕೊಟ್ಟಿದ್ದೇವೆ. ಪ್ರಣಾಳಿಕೆ ಜಾರಿಗೆ ಉನ್ನತಮಟ್ಟದ ಸಮಿತಿ ರಚಿಸಲಾಗುವುದು
ಜಿ. ಪರಮೇಶ್ವರ, ಪ್ರಣಾಳಿಕೆ ಸಮಿತಿ ಅಧ್ಯಕ್ಷ

ಪ್ರಮುಖ ಭರವಸೆಗಳು

  • ಸರ್ಕಾರಿ ಮತ್ತು ಅನುದಾನಿತ ನೌಕರರಿಗೆ ಹಳೆ ಪಿಂಚಣಿ ಯೋಜನೆ (ಒಪಿಎಸ್‌) ಮರು ಜಾರಿ

  • ಎಲ್ಲ 25 ಸಾವಿರ ಪೌರ ಕಾರ್ಮಿಕರ ಸೇವೆ ಕಾಯಂ

  • ಮೀಸಲಾತಿ ಮಿತಿಯನ್ನು ಶೇ 50ರಿಂದ 75ರವರೆಗೆ ಹೆಚ್ಚಿಸಲು ಸೂಕ್ತ ಕ್ರಮ

  • ಪೊಲೀಸ್‌ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು

  • ಗ್ರಾಮೀಣ ಪ್ರದೇಶಗಳಿಗೆ ಹಗಲು ವೇಳೆ 8 ಗಂಟೆ ತ್ರೀ ಫೇಸ್‌ ವಿದ್ಯುತ್‌

  • ಮೀನುಗಾರಿಕಾ ಕ್ಷೇತ್ರದಲ್ಲಿ 10 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿ

  • ವಿಶ್ವವಿದ್ಯಾಲಯಗಳ ಉನ್ನತೀಕರಣಕ್ಕೆ ₹2 ಸಾವಿರ ಕೋಟಿಯ ಆವರ್ತ ನಿಧಿ

ನಮ್ಮಿಂದ ಈಡೇರಿಸಲು ಸಾಧ್ಯವಾಗುವ ಭರವಸೆಗಳನ್ನು ಮಾತ್ರ ನೀಡಿದ್ದೇವೆ. ಕೊಟ್ಟ ಭರವಸೆಗಳನ್ನು ಹಿಂದೆಯೂ ಈಡೇರಿಸಿದ್ದೇವೆ, ಮುಂದೆಯೂ ಈಡೇರಿಸುತ್ತೇವೆ
ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

ನಿಷೇಧ ಪ್ರಸ್ತಾವಕ್ಕೆ ಬಿಜೆಪಿ ಕೆಂಡಾಮಂಡಲ

ಪಿಎಫ್‌ಐ ಜತೆಗೆ ಸಂಘಪರಿವಾರದ ಬಜರಂಗದಳವನ್ನೂ ನಿಷೇಧ ಮಾಡುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆ ಯಲ್ಲಿ ಘೋಷಿಸಿರುವುದನ್ನು ಬಿಜೆಪಿ ಖಂಡಿಸಿದೆ. ಹೊಸಪೇಟೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಆಂಜನೇಯನ ಪವಿತ್ರ ಸ್ಥಳಕ್ಕೆ ಬಂದಿರುವುದು ನನ್ನ ಸೌಭಾಗ್ಯ. ಆದರೆ, ದೌರ್ಭಾಗ್ಯ ನೋಡಿ, ನಾನು ಇಲ್ಲಿಗೆ ಬಂದ ದಿನವೇ ಕಾಂಗ್ರೆಸ್‌ ಪ್ರಕಟಿಸಿರುವ ತನ್ನ ಪ್ರಣಾಳಿಕೆಯಲ್ಲಿ ಆಂಜನೇಯನಿಗೆ ಬೀಗ ಹಾಕಿ ಬಂದ್‌ ಮಾಡಲು ನಿರ್ಣಯಿಸಿದೆ. ಹಿಂದೆ ಶ್ರೀರಾಮನಿಗೆ ಬೀಗ ಹಾಕಿ ಬಂದ್‌ ಮಾಡಿದವರು ಈಗ ಬಜರಂಗ ಬಲಿ ಎಂದು ಹೇಳುವವರಿಗೆ ಬೀಗ ಹಾಕಿ ಬಂದ್‌ ಮಾಡಲು ಸಂಕಲ್ಪ ಮಾಡಿದ್ದಾರೆ’ ಎಂದು ಹೇಳಿದರು. ನವಲಗುಂದದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹನುಮನ ಭಕ್ತ ಬಜರಂಗಿಗಳು ಸಿಡಿದು ನಿಂತರೆ ಕಾಂಗ್ರೆಸ್‌ ಅನ್ನು ದೇಶದಿಂದಲೇ ಕಿತ್ತೊಗೆಯುತ್ತಾರೆ’ ಎಂದರು.

‘ಬಜರಂಗದಳ, ಪಿಎಫ್‌ಐ ನಿಷೇಧಕ್ಕೆ ಕ್ರಮ’

ಧರ್ಮ ಮತ್ತು ಜಾತಿ ಹೆಸರಿನಲ್ಲಿ ದ್ವೇಷ ಬಿತ್ತಿ ವಿಭಜನೆಗೆ ಕಾರಣರಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಪಕ್ಷ ಬದ್ಧ ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಘೋಷಿಸಿದೆ.

‘ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು, ಯಾವುದೇ ವ್ಯಕ್ತಿಗಳಾಗಲಿ, ಬಜರಂಗದಳ ಮತ್ತು ಪಿಎಫ್‌ಐ ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಜನರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದಕಾರಣ, ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT