ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ ‌| ‘ಕೈ’ಗೆ ಕೋಲಾರವೇ ಕಗ್ಗಂಟು

Published 29 ಮಾರ್ಚ್ 2024, 22:01 IST
Last Updated 29 ಮಾರ್ಚ್ 2024, 22:01 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆಯ ಬಾಕಿ ಇದ್ದ ನಾಲ್ಕು ಕ್ಷೇತ್ರಗಳ ಪೈಕಿ ಮೂರರ ಅಭ್ಯರ್ಥಿ ಹೆಸರುಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಕೋಲಾರ ಕ್ಷೇತ್ರದ ಬಣ ಜಗಳ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಕಗ್ಗಂಟಾಗಿದೆ ಪರಿಣಮಿಸಿದೆ.

ಕೋಲಾರ ಕ್ಷೇತ್ರದಲ್ಲಿ ಸಚಿವ ಕೆ.ಎಚ್‌. ಮುನಿಯಪ್ಪ ಮತ್ತು ಮಾಜಿ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಬಣಗಳ ಮಧ್ಯದ ಹಗ್ಗ ಜಗ್ಗಾಟಕ್ಕೆ ತೆರೆ ಬಿದ್ದಿಲ್ಲ. ಎರಡೂ ಬಣಗಳು ಹಟಕ್ಕೆ ಬಿದ್ದಿರುವುದರಿಂದ ಎಡಗೈ ಸಮುದಾಯದವರಾದ ಕೆ.ವಿ. ಗೌತಮ್ ಅಥವಾ ಎಲ್. ಹನುಮಂತಯ್ಯ ಅವರಲ್ಲಿ ಒಬ್ಬರಿಗೆ ಟಿಕೆಟ್‌ ನೀಡುವ ಸೂತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮುಂದಿಟ್ಟಿದ್ದಾರೆ. ಅದಕ್ಕೂ ಮುನಿಯಪ್ಪ ತಕರಾರು ಎತ್ತಿರುವುದರಿಂದ ಕಾಂಗ್ರೆಸ್ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಎರಡೂ ಬಣಗಳ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಕಾಂಗ್ರೆಸ್‌ ಕೋಲಾರದಲ್ಲಿ ಸೋಲಲಿದೆ ಎಂಬ ಅರ್ಥದಲ್ಲಿ ಮುನಿಯಪ್ಪ ಶುಕ್ರವಾರ ಬಹಿರಂಗವಾಗಿಯೇ ಹೇಳಿದ್ದಾರೆ. ಸಂಧಾನ ಸೂತ್ರಕ್ಕಾಗಿ ಹುಡುಕಾಡುತ್ತಿರುವ ‘ಕೈ’ ನಾಯಕರು, ಕೋಲಾರ ಕ್ಷೇತ್ರದ ಅಭ್ಯರ್ಥಿ ಘೋಷಣೆಯನ್ನು ತಡೆ ಹಿಡಿದಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್‌ ನೀಡದಂತೆ ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷ ಎನ್‌.ಎಚ್‌. ಶಿವಶಂಕರ ರೆಡ್ಡಿ ಮತ್ತು ಬಾಗೇಪಲ್ಲಿ ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ ಪಟ್ಟು ಹಿಡಿದಿದ್ದರು. ಅವರ ಮನವೊಲಿಕೆಯ ಕಸರತ್ತಿನ ಮಧ್ಯದಲ್ಲೇ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಮಗ ಸುನೀಲ್‌ ಬೋಸ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಬೋಸ್‌ ಕಣಕ್ಕಿಳಿಸುವುದನ್ನು ಕ್ಷೇತ್ರದ ಹಲವು ಶಾಸಕರು ವಿರೋಧಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ಸಭೆಯಲ್ಲಿ ಸಂಧಾನ ಯಶಸ್ವಿಯಾದ ಬಳಿಕ, ಸುನಿಲ್ ಬೋಸ್‌ ಪ್ರಚಾರವನ್ನು ಆರಂಭಿಸಿದ್ದರು.

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಂಡೂರು ಶಾಸಕ ಇ. ತುಕಾರಾಂ ಅವರನ್ನು ಕಣಕ್ಕಿಳಿಸುವ ನಿರ್ಧಾರವನ್ನು ಎಐಸಿಸಿ ಅಧಿಕೃತವಾಗಿ ‍ಪ್ರಕಟಿಸಿದೆ.

ಬಾಗಲಕೋಟೆಯಲ್ಲಿ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಅವರಿಗೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನ ಪಟ್ಟ ನೀಡುವುದಾಗಿ ಭರವಸೆ ನೀಡಲಾಗಿದೆ. ಆದರೂ, ಅವರಿನ್ನೂ ಸಮಾಧಾನಗೊಂಡಿಲ್ಲ ಎನ್ನಲಾಗಿದೆ.

ಮಲ್ಲೇಶ್‌ ಬಾಬುಗೆ ಟಿಕೆಟ್ ಪಕ್ಕಾ

ಕೋಲಾರ ಲೋಕಸಭಾ ಕ್ಷೇತ್ರದಿಂದ ಎಂ. ಮಲ್ಲೇಶ್‌ ಬಾಬು ಅವರನ್ನು ಕಣಕ್ಕಿಳಿಸುವ ನಿರ್ಧಾರವನ್ನು ಜೆಡಿಎಸ್‌ ಅಧಿಕೃತವಾಗಿ ಶುಕ್ರವಾರ ಪ್ರಕಟಿಸಿದೆ.

ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಮತ್ತು ಮಂಡ್ಯದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ.

ಮಲ್ಲೇಶ್‌ ಬಾಬು, ಮುಳಬಾಗಲು ಶಾಸಕ ಸಮೃದ್ಧಿ ಮಂಜುನಾಥ್‌ ಮತ್ತು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಹೆಸರುಗಳು ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಪರಿಶೀಲನೆಯಲ್ಲಿದ್ದವು. ಅಂತಿಮವಾಗಿ ಮಲ್ಲೇಶ್‌ ಬಾಬು ಅವರನ್ನೇ ಕಣಕ್ಕಿಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT