ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಬಣಗಳ ನಡುವಿನ ಕಿತ್ತಾಟ ವಿಧಾನಸೌಧದಲ್ಲಿ ಬುಧವಾರ ದೊಡ್ಡಮಟ್ಟದ ರಾಜಕೀಯ ಪ್ರಹಸನಕ್ಕೆ ಕಾರಣವಾಯಿತು.
ಆಹಾರ ಸಚಿವ ಕೆ.ಎಚ್. ಮುನಿಯಪ್ಪ ವಿರುದ್ಧ ಸಿಡಿದೆದ್ದ ಸಚಿವರು, ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡುವ ಬೆದರಿಕೆಯೊಡ್ಡಿ, ಪಕ್ಷದೊಳಗಿನ ಭಿನ್ನಮತವನ್ನು ಬೀದಿಗೆ ತಂದು ನಿಲ್ಲಿಸಿದರು. ಪರಿಷತ್ ಸದಸ್ಯರು ರಾಜೀನಾಮೆ ಪತ್ರ ಹಿಡಿದು ಸಭಾಪತಿ ಬಸವರಾಜ ಹೊರಟ್ಟಿ ಕಚೇರಿಗೆ ಬಂದು, ಕಾಂಗ್ರೆಸ್‌ನ ಒಳಜಗಳವನ್ನು ಬಹಿರಂಗಗೊಳಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಸೇರಿದಂತೆ ಮೂವರು ಶಾಸಕರು ರಾಜೀನಾಮೆ ಕೊಡುವ ಸಲುವಾಗಿ, ಸಭಾಧ್ಯಕ್ಷ ಯ.ಟಿ. ಖಾದರ್ ಭೇಟಿಗೆ ಮಂಗಳೂರಿಗೆ ತೆರಳಲು ವಿಮಾನದ ಟಿಕೆಟ್ ಕಾಯ್ದಿರಿಸಿದ್ದರು.
ಕಾಂಗ್ರೆಸ್‌ನ ಬಣ ಜಗಳ ಬೀದಿರಂಪವಾಗುತ್ತಿ ದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ತಮ್ಮ ಆಪ್ತರಿಗೆ ಕರೆ ಮಾಡಿ ‘ಪ್ರಹಸನ’ ನಿಲ್ಲಿಸಲು ಮುಂದಾಗಿ ಎಂದು ಸೂಚಿಸಿದರು. ವರಿಷ್ಠರ ಸೂಚನೆಯನ್ವಯ ತಕ್ಷಣವೇ, ಕಾರ್ಯಪ್ರವೃತ್ತರಾದ ಕೋಲಾರ ಜಿಲ್ಲೆ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಭಾಪತಿ ಹೊರಟ್ಟಿಯವರ ಕಚೇರಿಗೆ ದೌಡಾಯಿಸಿ, ಪ್ರಹಸನಕ್ಕೆ ತೆರೆ ಎಳೆದರು.
ನಡೆದಿದ್ದೇನು?: ಕ್ಷೇತ್ರದಲ್ಲಿ ಸಚಿವ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಪಕ್ಕಾ ಆಗಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಆಕ್ರೋಶ ತೀವ್ರಗೊಂಡಿತು.
ಹೀಗಿತ್ತು ರಾಜಕೀಯ ಪ್ರಹಸನ...
* ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಖಚಿತ ಮಾಹಿತಿ
* ಮಾಜಿ ಸಚಿವ ಕೆ.ಆರ್. ರಮೇಶ್‌ಕುಮಾರ್ ಮನೆಯಲ್ಲಿ ಮುನಿಯಪ್ಪ ವಿರೋಧಿ ಗುಂಪಿನ ಸಭೆ
* ದಿಢೀರ್ ರಾಜೀನಾಮೆಗೆ ಮುಂದಾದ ಸಚಿವ ಡಾ. ಎಂ.ಸಿ. ಸುಧಾಕರ್, ಶಾಸಕರಾದ ಕೊತ್ತೂರು ಮಂಜುನಾಥ್, ಕೆ.ವೈ. ನಂಜೇಗೌಡ, ಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಅನಿಲ್ ಕುಮಾರ್
* ಬಲಗೈ ಸಮುದಾಯಕ್ಕೆ ಟಿಕೆಟ್ ಕೊಡದಿದ್ದರೆ, ತಮ್ಮ ನಿರ್ಧಾರ ಪ್ರಕಟಿಸ ಬೇಕಾಗುತ್ತದೆ ಎಂದು ಬಂಗಾರಪೇಟೆಯಲ್ಲಿ ಎಚ್ಚರಿಕೆ ನೀಡಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ,
* ವಿಧಾನಸೌಧಕ್ಕೆ ಸಚಿವರು, ಶಾಸಕರ ದೌಡು
*ಸಭಾಪತಿ ಬಸವರಾಜ ಹೊರಟ್ಟಿ ಕಚೇರಿಗೆ ಸದಸ್ಯರ ಭೇಟಿ
* ಕೈಯಲ್ಲಿ ಬರೆದುಕೊಂಡು ಬಂದಿದ್ದ ರಾಜೀನಾಮೆ ಪತ್ರ ಪ್ರದರ್ಶನ
*ಲೆಟರ್‌ಹೆಡ್‌ನಲ್ಲಿ ರಾಜೀನಾಮೆ ಪತ್ರ ಬರೆಯಲು ಸೂಚಿಸಿದ ಹೊರಟ್ಟಿ
* ವರಿಷ್ಠರ ಸಂದೇಶ ಹೊತ್ತು ಹೊರಟ್ಟಿ ಕಚೇರಿಗೆ ದೌಡಾಯಿಸಿದ ಸಚಿವ ಬೈರತಿ ಸುರೇಶ್. ಪ್ರಹಸನಕ್ಕೆ ತಾತ್ಕಾಲಿಕ ಅಂತ್ಯ
ಚಿಂತಾಮಣಿ ಶಾಸಕ, ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಾ.ಎಂ.ಸಿ. ಸುಧಾಕರ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯೂ ಆಗಿರುವ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಮತ್ತು ಮತ್ತೊಬ್ಬ ಸದಸ್ಯ ಅನಿಲ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕುವ ಮೂಲಕ, ತಮ್ಮ ಎದುರಾಳಿಯನ್ನು ಕಟ್ಟಿಹಾಕುವ ತಂತ್ರ ಹೆಣೆದರು.
ರಾಜೀನಾಮೆ ಸಲ್ಲಿಸಲು ಮುಂದಾದ ನಸೀರ್ ಅಹ್ಮದ್ ಮತ್ತು ಅನಿಲ್ ಕುಮಾರ್ ಅವರು ಸಭಾಪತಿ ಹೊರಟ್ಟಿಯವರ ಕಚೇರಿಗೆ ಬಂದರು. ಮಾಧ್ಯಮದವರ ಎದುರು ರಾಜೀನಾಮೆ ಪತ್ರ ಪ್ರದರ್ಶಿಸಿದ ನಸೀರ್, ಅದನ್ನು ಸಲ್ಲಿಸಲು ಮುಂದಾದರು. ‘ಬಿಳಿಹಾಳೆಯ ಮೇಲಲ್ಲ, ಲೆಟರ್ ಹೆಡ್‌ನಲ್ಲಿ ರಾಜೀನಾಮೆ ಪತ್ರ ಬರೆದು ಕೊಡಿ’ ಎಂದು ನಸೀರ್ ಮತ್ತು ಅನಿಲ್ ಕುಮಾರ್ ಅವರಿಗೆ ಹೊರಟ್ಟಿ ಸೂಚಿಸಿದರು. ಈ ಬೆಳವಣಿಗೆಗಳ ಮಧ್ಯೆಯೇ, ಅಲ್ಲಿಗೆ ದೌಡಾಯಿಸಿದ ಸಚಿವ ಬೈರತಿ ಸುರೇಶ್ ಅವರು ಶಾಸಕರ ಮನವೊಲಿಸಿದರು.
ಹೊರಟ್ಟಿ ಕಚೇರಿಯಲ್ಲಿಯೇ ಬೈರತಿ ಸುರೇಶ್ ಮಾತನಾಡಿ, ‘ಅಸಮಾಧಾನಗೊಂಡವರ ಮನವೊಲಿಸುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನಗೆ ಹೇಳಿದರು. ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸೋಣ ಎಂದಿದ್ದಾರೆ. ಅದರಂತೆ ಪಕ್ಷದ ನಾಯಕರ ಸಂದೇಶವನ್ನು ಶಾಸಕರಿಗೆ ತಿಳಿಸಿದ್ದೇನೆ. ಅವರೂ ಒಪ್ಪಿಕೊಂಡಿದ್ದಾರೆ’ ಎಂದರು.
ಹೊರಟ್ಟಿ ಮಾತನಾಡಿ, ‘ಕಾಂಗ್ರೆಸ್‌ನ ಇಬ್ಬರು ಸದಸ್ಯರು ರಾಜೀನಾಮೆ ಕೊಡುವುದಾಗಿ ಬೆಳಿಗ್ಗೆ 11ಕ್ಕೆ ಕರೆ ಮಾಡಿದ್ದರು. ಅವರಿಗೆ 12.30ರಿಂದ 1 ಗಂಟೆಯ ಸಮಯ ನೀಡಿದ್ದೆ. ಹಾಳೆಯಲ್ಲಿ ರಾಜೀನಾಮೆ ಪತ್ರ ತಂದಿದ್ದರು. ಲೆಟರ್‌ಹೆಡ್‌ನಲ್ಲಿ ಬರೆದುಕೊಡಿ ಎಂದೆ. ನಂತರ ಲೆಟರ್ಹೆಡ್ ತರಿಸಿಕೊಂಡು ರಾಜೀನಾಮೆ ಪತ್ರ ಬರೆದರು. ಆದರೆ, ನನಗೆ ಕೊಡಲಿಲ್ಲ. ಅವರು ರಾಜೀನಾಮೆ ಕೊಟ್ಟರೆ ಸ್ವೀಕರಿಸುತ್ತೇನೆ’ ಎಂದರು.
‘ಪುಟಗೋಸಿ ಬ್ಯಾಗ್ ಹಿಡಿದು ಬರುತ್ತಿದ್ದ’
‘ಕೋಲಾರದಲ್ಲಿ ನಾಯಕರನ್ನು ಬೆಳೆಸಿದವ ನಾನು’ ಎಂಬ ಕೆ.ಎಚ್. ಮುನಿಯಪ್ಪ ಹೇಳಿಕೆಗೆ ಗರಂ ಆಗಿ ಪ್ರತಿಕ್ರಿಯಿಸಿದ ನಸೀರ್ ಅಹ್ಮದ್, ‘ನಾನು 1991ರಲ್ಲಿಯೇ ಸಚಿವನಾಗಿದ್ದೆ. ಆಗ ಆತ (ಮುನಿಯಪ್ಪ) ಪುಟಗೋಸಿ ಬ್ಯಾಗ್ ಹಿಡಿದುಕೊಂಡು ಬರುತ್ತಿದ್ದ’ ಎಂದರು.
ನಸೀರ್ ಅಹ್ಮದ್ ಪದ ಬಳಕೆ ಕುರಿತು ಮಾತನಾಡಿದ ಮುನಿಯಪ್ಪ, ‘ಕೋಪದಲ್ಲಿ ಸಣ್ಣತನದ ಮಾತನಾಡು ತ್ತಾರೆ. ನಾನು ಅವರಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ನಾನು ರಾಷ್ಟ್ರಮಟ್ಟದಲ್ಲಿ ರಾಜಕಾರಣ ಮಾಡಿದ್ದೇನೆ. ಹತ್ತು ವರ್ಷ ಕೇಂದ್ರ ಸಚಿವನಾಗಿದ್ದೆ. ಅವರ ಯಾವುದೇ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಹೇಳಿದರು.
‘ಸಾಕಷ್ಟು ಜನರನ್ನು ಶಾಸಕರಾಗಿ ಮಾಡಿದ್ದೇನೆ’
‘ಕೋಲಾರದ ಜನ ನನ್ನನ್ನು ಏಳು ಬಾರಿ ಗೆಲ್ಲಿಸಿದ್ದಾರೆ. ನಾನೇ ಸಾಕಷ್ಟು ಜನರನ್ನು ಶಾಸಕರನ್ನಾಗಿ ಮಾಡಿದ್ದೇನೆ. ಕೋಲಾರ ಟಿಕೆಟ್ ವಿಚಾರ ಸಂಬಂಧ ಶಾಸಕರ ಟೀಕೆಗೆ ನಾನು ಉತ್ತರಿಸುವುದಿಲ್ಲ. ಎಲ್ಲವನ್ನೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ’ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಕೋಲಾರ ಭಾಗದ ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವ ಬಗ್ಗೆ ಅವರನ್ನೇ ಕೇಳಿ. ಸಚಿವ ಸುಧಾಕರ್ ಸೇರಿದಂತೆ ಅಸಮಾಧಾನಿತರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ’ ಎಂದರು.
‘ರಮೇಶ್ ಕುಮಾರ್, ನಾವು ಎಲ್ಲರೂ ಒಟ್ಟಿಗಿದ್ದೇವೆ. ಸಚಿವರೂ ಜೊತೆಗಿದ್ದಾರೆ. ಎಲ್ಲರೂ ಒಟ್ಟಿಗೆ ಕೆಲಸ ಮಾಡಿ ಗೆಲ್ಲಿಸುವುದಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮುಂದೆ ಹೇಳಿದ್ದೇವೆ. ಇಷ್ಟಾದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.