ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ| ಮಹಿಳೆಯರಿಗೆ ಮಣೆ ಹಾಕದ ಮತದಾರ

ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದರೂ ಸಿಗಲಿಲ್ಲ ಗೆಲುವಿನ ಸಿಹಿ
Last Updated 10 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಕೊಪ್ಪಳ: ಇತ್ತೀಚೆಗಿನ ವರ್ಷಗಳಲ್ಲಿ ಪ್ರತಿ ಚುನಾವಣೆಯಲ್ಲಿ ಆಯಾ ರಾಜಕೀಯ ಪಕ್ಷಗಳ ಮಹಿಳಾ ವಿಭಾಗ ಮತ್ತು ಕಾರ್ಯಕರ್ತೆಯರು ತಮ್ಮ ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪಕ್ಷದ ಯಶಸ್ಸಿಗೆ ಹಲವು ಸೂತ್ರಗಳನ್ನು ರೂಪಿಸಿ ತಂತ್ರ ಹೆಣೆಯುತ್ತಿದ್ದಾರೆ. ಆದರೆ, ಅವರಿಗೆ ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಗೆಲುವಿನ ಸಿಹಿ ಸಿಗುತ್ತಿಲ್ಲ.

ಪ್ರತಿ ರಾಜಕೀಯ ಪಕ್ಷಗಳಲ್ಲಿ ಪ್ರತ್ಯೇಕವಾಗಿ ಮಹಿಳಾ ವಿಭಾಗವೇ ಇದೆ. ಅದಕ್ಕೆ ಪದಾಧಿಕಾರಿಗಳು, ನೀತಿನಿಯಮಗಳು ಇವೆ. ಪುರುಷರಷ್ಟೇ ಕಾರ್ಯಕರ್ತೆಯರು ಪಕ್ಷವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಬೂತ್‌ ಮಟ್ಟದಿಂದ ಹಿಡಿದು ಜಿಲ್ಲಾ, ರಾಜ್ಯಮಟ್ಟದ ತನಕ ಚುನಾವಣಾ ತಯಾರಿಗೆ, ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾಳೆ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತೆಯಾಗಿದ್ದ ಹೇಮಲತಾ ನಾಯಕ ಅವರು ಇತ್ತೀಚೆಗೆ ವಿಧಾನಪರಿಷತ್‌ ಸದಸ್ಯೆಯಾಗಿದ್ದಾರೆ. ಚುನಾವಣೆಯಿಲ್ಲದೇ ನೇರವಾಗಿ ಆದ ಆಯ್ಕೆ ಅದು. ಆದರೆ, ರೆಮರೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮ ಪಡುವ ನಾಯಕಿಯರಿಗೆ ನಾಯಕತ್ವಕ್ಕೆ ಮಹತ್ವ ಸಿಕ್ಕಿಲ್ಲ.

ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದಿನ ಚುನಾವಣೆಗಳಲ್ಲಿ ಅನೇಕ ಮಹಿಳೆಯರು ಸ್ಪರ್ಧೆ ಮಾಡಿದ್ದಾರೆ. ಮತದಾರ ಕೂಡ ಯಾರಿಗೂ ಮಣೆ ಹಾಕಿಲ್ಲ. 1972ರ ಚುನಾವಣೆಯಲ್ಲಿ ಕುಷ್ಟಗಿ ಕ್ಷೇತ್ರದಿಂದ ಬಸವರಾಜೇಶ್ವರಿ ಸ್ಪರ್ಧೆ ಮಾಡಿ 1,972 ಮತಗಳನ್ನು ಪಡೆದಿದ್ದರು. ಈ ಅವಧಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಆಯ್ಕೆಯಾದ ಕಾಂತರಾವ್‌ ದೇಸಾಯಿ ನಂತರ ಹೆಚ್ಚು ಮತಗಳನ್ನು ಪ‍ಡೆದಿದ್ದು ಬಸವರಾಜೇಶ್ವರಿ ಎನ್ನುವ ದಾಖಲೆಯಿದೆ.

ಯಲಬುರ್ಗಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ 1994ರಲ್ಲಿ ಜಯಶ್ರೀ ಸುಭಾಷಚಂದ್ರ ಕಣಕ್ಕಿಳಿದು 15,347 ಮತಗಳನ್ನು ಸಂಪಾದಿಸಿದ್ದರು. ಈ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಬಸವರಾಜ ರಾಯರಡ್ಡಿ ಬಳಿಕ ಅಭ್ಯರ್ಥಿಯೊಬ್ಬರು ಗಳಿಸಿದ್ದ ಗರಿಷ್ಠ ಮತಗಳು ಇವಾಗಿದ್ದವು. 1994ರಲ್ಲಿ ಕಾಶಮ್ಮ ಶಂಕರಗೌಡ ಕೊಪ್ಪಳ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡಿ ಪಕ್ಷದ ಖ್ಯಾತಿ ಇಲ್ಲದ ದಿನಗಳಲ್ಲಿಯೂ 7,279 ಮತ ಸಂಪಾದಿಸಿದ್ದರು.

ಜಿಲ್ಲೆಯಲ್ಲಿ ಒಟ್ಟು 11,28,585 ಮತದಾರರು ಇದ್ದು ಮಹಿಳೆಯರ ಸಂಖ್ಯೆ 5,66,247, ಪುರುಷ ಮತದಾರರು 5,62,291 ಇದ್ದಾರೆ. ಪುರುಷರಿಗಿಂತ 3,956 ಜನ ಹೆಚ್ಚಿನ ಮಹಿಳಾ ಮತದಾರರಿದ್ದಾರೆ. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕೂಡ ಮಹಿಳಾ ಅಭ್ಯರ್ಥಿಗಳಿಗೆ ಮಣೆ ಹಾಕಿಲ್ಲ. ಹೀಗಾಗಿ ನಾರೀ ಶಕ್ತಿ ಕೇವಲ ಪಕ್ಷ ಸಂಘಟನೆಗೆ ಮಾತ್ರ ಸೀಮಿತವಾಗಿದೆಯೇ ಎನ್ನುವ ‍ಪ್ರಶ್ನೆಯೂ ಇದೆ.

ಮೊದಲ ಶಾಸಕಿ: ಕೊಪ್ಪಳ: 1952ರಲ್ಲಿ ಹೈದರಾಬಾದ್‌–ಕರ್ನಾಟಕ (ಈಗ ಕಲ್ಯಾಣ ಕರ್ನಾಟಕ) ವ್ಯಾಪ್ತಿಯ ಈಗಿನ ಕೊಪ್ಪಳ ಜಿಲ್ಲೆ ಆಗ ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿತ್ತು.

ಆಗಿನ ಹೈದರಾಬಾದ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮಹಾದೇವಮ್ಮ ಬಸವನಗೌಡ ಗೆಲುವು ಪಡೆದಿದ್ದರು. 1956ರಲ್ಲಿ ಭಾಷವಾರು ಪ್ರಾಂತ್ಯ ರಚನೆಯಾದ ಬಳಿಕ ಕರ್ನಾಟಕದ ವಿಧಾನಸಭೆಗೆ ಸೇರ್ಪಡೆಯಾದವು. ಅದಾದ ಬಳಿಕ ನಡೆದ ಯಾವ ವಿಧಾನಸಭಾ ಚುನಾವಣೆಗಳಲ್ಲಿಯೂ ಮಹಿಳೆಗೆ ಶಾಸಕಿಯಾಗುವ ಯೋಗ ಬಂದಿಲ್ಲ.

ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಮಹಿಳೆಯರು

ಕ್ಷೇತ್ರ;ಕುಷ್ಟಗಿ

ವರ್ಷ;ಹೆಸರು;ಪಕ್ಷ;ಪಡೆದ ಮತ

1972;ಬಸವರಾಜೇಶ್ವರಿ;ರಾಕಾಓ;16.201

2018;ಮಂಜುಳಾ ಮಡಿವಾಳ;ಇಂಡಿಯನ್‌ ನ್ಯೂ ಕಾಂಗ್ರೆಸ್;491

ಕ್ಷೇತ್ರ: ಕನಕಗಿರಿ

1999;ಸರೋಜಮ್ಮ;ಜೆಡಿಎಸ್‌; 1169

2013;ದ್ಯಾಮಮ್ಮ ಚೌಡ್ಕಿ; ಸಿಪಿಐ ಎಂಎಲ್‌;751

2018;ಮಂಜುಳಾ ರವಿಕುಮಾರ್; ಜನತಾದಳ;1464

ಕ್ಷೇತ್ರ: ಗಂಗಾವತಿ

2008;ದೇವಕ್ಕ ವಾಲ್ಮೀಕಿ;ಪಕ್ಷೇತರ;834

2018;ಸೈ ಜರೀನಾ ಸೈ ಮಕರಂರಾಜಾ;ಪಕ್ಷೇತರ;146

2018;ಫಾತಿಮಾ ರಾಜಬಕ್ಷ್ಕೀ;ಪಕ್ಷೇತರ;282

ಕ್ಷೇತ್ರ: ಯಲಬುರ್ಗಾ

1994;ಜಯಶ್ರೀ ಸುಭಾಷಚಂದ್ರ ಪಿ.; ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌;15,347

ಕ್ಷೇತ್ರ: ಕೊಪ್ಪಳ

1994;ಕಾಶಮ್ಮ ಶಂಕರಗೌಡ;ಬಿಜೆಪಿ;7279

2011;ನಿರ್ಮಲಾ ಹಡಪದ;ಪಕ್ಷೇತರ;272

2013ರಲ್ಲಿ ನಿರ್ಮಲಾ ಹಡಪದ;ಬಿಎಸ್‌ಪಿ;611

***

ಇಷ್ಟು ವರ್ಷಗಳ ಕಾಲ ನಾವು ಟಿಕೆಟ್‌ ಕೇಳಿಲ್ಲ. ಅದಕ್ಕೆ ಕೊಟ್ಟಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತೆಯನ್ನು ಸ್ಪರ್ಧೆಗೆ ಈಗಿನಿಂದಲೇ ಅಣಿ ಮಾಡುತ್ತೇವೆ. ಜಿಲ್ಲೆಯ ಒಂದು ಕ್ಷೇತ್ರಕ್ಕೆ ಮಹಿಳೆಗೆ ಆದ್ಯತೆ ನೀಡಬೇಕೆಂದು ಕೇಳುತ್ತೇವೆ.

- ವಾಣಿಶ್ರೀ ಮಠದ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷೆ

ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ಹೈಕಮಾಂಡ್‌ ಎಲ್ಲರಿಗೂ ಮುಕ್ತ ಸ್ವಾತಂತ್ರ ನೀಡಿತ್ತು. ಜಿಲ್ಲೆಯಿಂದ ಯಾವ ಮಹಿಳೆಯರೂ ಅರ್ಜಿ ಸಲ್ಲಿಸಿರಲಿಲ್ಲ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ತಯಾರಿ ನಡೆಸುತ್ತೇವೆ

- ಮಾಲತಿ ನಾಯಕ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT