ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಬಿ.ಶ್ರೀರಾಮುಲು ಪರ ಆನಂದ್ ಸಿಂಗ್ ಭರ್ಜರಿ ಪ್ರಚಾರ

Published 30 ಮಾರ್ಚ್ 2024, 8:23 IST
Last Updated 30 ಮಾರ್ಚ್ 2024, 8:23 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಒಪ್ಪಂದ ಮಾಡಿಕೊಂಡು ಕಣಕ್ಕೆ ಇಳಿದಿದ್ದಾರೆಯೇ ಹೊರತು ನಿಜವಾದ ಕ್ಷೇತ್ರದ ಜನರ ಸೇವೆಗಾಗಿ ಸ್ಪರ್ಧಿಸಿಲ್ಲ. ಅಂತಹವರಿಗೆ ಮತ ಹಾಕುತ್ತೀರಾ?’ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಆನಂದ್ ಸಿಂಗ್ ಬಿಜೆಪಿ ಪರ ಪ್ರಚಾರ ಆರಂಭಿಸಿದ್ದಾರೆ.

ಇಲ್ಲಿಗೆ ಸಮೀಪದ ಹೊಸೂರಿನಲ್ಲಿ ಶನಿವಾರ ಹೊಸೂರಮ್ಮ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಪ್ರಚಾರ ಆರಂಭಿಸಿದ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು, ‘ತಾನು ಗೆದ್ದರೆ ತನ್ನ ಪುತ್ರಿಗೆ ಶಾಸಕ ಟಿಕೆಟ್, ಸೋತರೆ ತನಗೆ ಮಂತ್ರಿ ಪದವಿ ನೀಡಬೇಕೆಂಬ ಷರತ್ತು ಹಾಕಿ ಸ್ಪರ್ಧೆಗೆ ಇಳಿದಿದ್ದಾರೆ. ಇಂತಹವರು ನಿಮಗಾಗಿ ಕೇಂದ್ರದಲ್ಲಿ ಏನು ಕೆಲಸ ಮಾಡಬಲ್ಲರು?’ ಎಂದು ಪ್ರಶ್ನಿಸಿದರು.

‘ಈ ದೇಶದ ಮತ್ತು ನಮ್ಮ ಮಕ್ಕಳ ಭವಿಷ್ಯ ಭದ್ರವಾಗಿರುವುದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮಾತ್ರ. ಅವರ ಕೈ ಬಲಪಡಿಸಬೇಕಿದ್ದರೆ ಬಳ್ಳಾರಿ–ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿಗೆ ಮತ ಚಲಾಯಿಸಬೇಕು’ ಎಂದು ಅವರು ಮನವಿ ಮಾಡಿದರು.

‘ಯುವರಾಜ’ನ ಕೈಯಲ್ಲಿ ದೇಶ ಭದ್ರವಾಗಿರಲು ಸಾಧ್ಯವೇ ಇಲ್ಲ, ಹೀಗಾಗಿ ಮೋದಿ ಕೈ ಬಲಪಡಿಸಬೇಕಿದ್ದರೆ ನಿಮ್ಮ ಒಂದೊಂದು ಮತವೂ ಮುಖ್ಯವಾಗುತ್ತದೆ, ಅದನ್ನು ಕಮಲದ ಗುರುತಿಗೇ ಹಾಕಬೇಕಾಗುತ್ತದೆ ಎಂದರು.

‘ಪ್ರಧಾನಿ ಮೋದಿ ಅವರು ಇರುವ ಕಾರಣಕ್ಕೇ ದೇಶ ಸುರಕ್ಷಿತವಾಗಿದೆ. ಭಯೋತ್ಪಾದನೆಯ ಹುಟ್ಟಡಗಿದೆ. ಅವರನ್ನು ಸೋಲಿಸಲು ವಿರೋಧ ಪಕ್ಷಗಳ ಜತೆಗೆ ಸೇರಿಕೊಂಡು ನೆರೆಹೊರೆಯ ದೇಶಗಳು ಪಿತೂರಿ ಮಾಡುತ್ತಿರುವುದೂ ಸುಳ್ಳಲ್ಲ. 2047ರ ಹೊತ್ತಿಗೆ ದೇಶ ವಿಶ್ವಗುರುವಾಗುವ ನಿಟ್ಟಿನಲ್ಲಿ ಈಗಾಗಲೇ ಅಡಿಪಾಯ ಹಾಕಲಾಗಿದೆ. ಆ ಕನಸು ಈಡೇರಲು ಮೋದಿ ಅವರ ಕೈ ಬಲಪಡಿಸಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ನಾನು ಸೋತರೆ ಮನೆಗೆ: ‘ನಾನು ಎಂಟು ಬಾರಿ ಚುನಾವಣೆ ಎದುರಿಸಿದ್ದೇನೆ. ಎರಡು ಬಾರಿ ಸೋತಿದ್ದೇನೆ. ಈ ಬಾರಿ ಮತ್ತೆ ನನ್ನನ್ನು ಸೋಲಿಸಿದರೆ ನಾನು ಮನೆಗೇ ಹೋಗಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ನಿಕಟ ಸಂಬಂಧ ಹೊಂದಿರುವ ನನ್ನನ್ನು ಗೆಲ್ಲಿಸಿದರೆ ಕ್ಷೇತ್ರದ ಹಲವು ಸಮಸ್ಯೆಗಳಿಗ ಧ್ವನಿಯಾಗಿ, ಪರಿಹಾರ ಕೆಲಸ ಮಾಡುವುದು ನಿಶ್ಚಿತ’ ಎಂದು ಬಿ.ಶ್ರೀರಾಮುಲು ಹೇಳಿದರು.

ತುಂಗಭದ್ರಾ ಜಲಾಶಯಕ್ಕೆ ಸಮತೋಲಿತ ಜಲಾಶಯ ನಿರ್ಮಾಣದ ಪ್ರಯತ್ನ ನಮ್ಮ ಸರ್ಕಾರದ ಅವಧಿಯಲ್ಲಿ ಆಗಿತ್ತು. ಅದಕ್ಕೆ ಮತ್ತೆ ಜೀವ ತುಂಬಬೇಕಿದೆ. ವಿಜಯನಗರ ಕಾಲುವೆಗಳ ಅಂಚಿನವರೆಗೂ ನೀರು ಹರಿಯಬೇಕಿದೆ. ಈ ಭಾಗದ ಇನ್ನಷ್ಟು ಸಮಸ್ಯೆಗಳ ಬಗೆಗೆ ನನಗೆ ಸಂಪೂರ್ಣ ಜ್ಞಾನ ಇದ್ದು, ಆನಂದ್ ಸಿಂಗ್ ಅವರ ಜತೆಗೂಡಿ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ನಿಶ್ಚಿತ ಎಂದು ಅವರು ಹೇಳಿದರು.

ಯುವ ಮುಖಂಡ ಸಿದ್ಧಾರ್ಥ ಸಿಂಗ್ ಮಾತನಾಡಿದರು. ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾ, ಹೊಸಪೇಟೆ ಮಂಡಲ ಅಧ್ಯಕ್ಷ ಶಂಕರ್ ಮೇಟಿ ಇತರರು ಇದ್ದರು.

ಮನೆ ಮನೆ ಪ್ರಚಾರ: ಹೊಸೂರು ಭಾಗದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಶ್ರೀರಾಮುಲು, ಆನಂದ್‌ ಸಿಂಗ್, ಸಿದ್ಧಾರ್ಥ ಸಿಂಗ್ ಹಾಗೂ ಇತರರು ಮತ ಯಾಚಿಸಿದರು. 

ಬಳಿಕ ನಾಯಕರು ತೆರೆದ ವಾಹನದಲ್ಲಿ ರೋಡ್‌ಶೋ ನಡೆಸುತ್ತ ನಾಗೇನಹಳ್ಳಿ, ಹಂಪಿ, ಕಮಲಾಪುರ ಕಡೆಗೆ ತೆರಳಿದರು.

‘ಮೇ 13ರ ನಂತರ ಮಾತನಾಡುತ್ತೇನೆ’

‘ವಿಧಾನಸಭಾ ಚುನಾವಣೆಯಲ್ಲಿ ಸಿದ್ಧಾರ್ಥ ಸಿಂಗ್ ಸೋತು ಮೇ 13ಕ್ಕೆ ಒಂದು ವರ್ಷವಾಗುತ್ತದೆ. ಅದಕ್ಕೆ ಮೊದಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆ ಇದೆ. ನಮ್ಮ ತಪ್ಪುಗಳನ್ನು ಸರಿಪಡಿಸಲು ಹಾಗೂ ವಿಜಯನಗರ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಮತ್ತೆ ಬಿಜೆಪಿಯನ್ನು ಗೆಲ್ಲಿಸಲು ನಾನು ಮಾತನಾಡಲೇಬೇಕಿದ್ದು, ಮೇ 13ರ ಬಳಿಕ ಮಾತನಾಡುತ್ತೇನೆ’ ಎಂದು ಆನಂದ್ ಸಿಂಗ್ ಹೇಳಿದರು.

ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪ್ರಚಾರ ನಡೆಸಿದರು.

ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪ್ರಚಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT