ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಲೋಕಸಭಾ | ಬಿಜೆಪಿಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು

1991ರಿಂದ ಸ್ಪರ್ಧೆ, 2019ರಲ್ಲಿ ಮೊದಲ ಬಾರಿ ಗೆದ್ದಿದ್ದ ‘ಕಮಲ’ ಪಾಳಯ
Published 31 ಮಾರ್ಚ್ 2024, 7:07 IST
Last Updated 31 ಮಾರ್ಚ್ 2024, 7:07 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ 2019ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ, ಮೊದಲ ಬಾರಿ ಖಾತೆ ತೆರೆದಿರುವ ಬಿಜೆಪಿಗೆ ಈ ಬಾರಿ ಕ್ಷೇತ್ರ ಉಳಿಸಿಕೊಳ್ಳುವ ಬಹುದೊಡ್ಡ ಸವಾಲು ಇದೆ.

1962ರಿಂದ ಮೀಸಲು ಲೋಕಸಭಾ ಕ್ಷೇತ್ರವಾಗಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ ಎಂದೇ ಗುರುತಿಸಿಕೊಂಡಿದೆ. 1991ರಲ್ಲಿ ಮೊದಲ ಬಾರಿಗೆ ಬಿಜೆಪಿ ಇಲ್ಲಿ ಸ್ಪರ್ಧಿಸಿತ್ತು. ಅಲ್ಲಿಂದ 2019ರವರೆಗೂ ಗೆಲುವು ಅದಕ್ಕೆ ಗಗನ ಕುಸುಮವಾಗಿತ್ತು.

ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿದ್ದ ಶ್ರೀನಿವಾಸ ಪ್ರಸಾದ್‌ ಅವರನ್ನು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮನವೊಲಿಸಿ, ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಹಳೆ ಮೈಸೂರು ಭಾಗದ ದಲಿತ ಸಮುದಾಯದ ಪ್ರಭಾವಿ ನಾಯಕರಾಗಿರುವ ಶ್ರೀನಿವಾಸ ಪ್ರಸಾದ್‌ ಅವರು, ತಮ್ಮ ವೈಯಕ್ತಿಕ ವರ್ಚಸ್ಸು ಮತ್ತು ಮೋದಿ ಅಲೆಯ ನಡುವೆ, ಕೇವಲ 1,817 ಮತಗಳ ಅಂತರದಿಂದ ಗೆಲುವಿನ ದಡ ಸೇರಿದ್ದರು. ಎರಡು ಬಾರಿಯ ಸಂಸದ ಕಾಂಗ್ರೆಸ್‌ನ ಆರ್‌.ಧ್ರುವನಾರಾಯಣ ಅವರ ಹ್ಯಾಟ್ರಿಕ್‌ ಗೆಲುವಿಗೆ ತಡೆ ಒಡ್ಡಿದ್ದರು. 

ರಾಜ್ಯದಲ್ಲಿ ಈಗ ಆಡಳಿತದಲ್ಲಿರುವ ಕಾಂಗ್ರೆಸ್, ಕ್ಷೇತ್ರವನ್ನು ಮತ್ತೆ ‘ಕೈ’ವಶಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ಕೆ.ವೆಂಕಟೇಶ್‌, ಕ್ಷೇತ್ರ ವ್ಯಾಪ್ತಿಯ ಏಳು ಶಾಸಕರು, ಮುಖಂಡರು ಅವರ ಕೈ ಬಲಪಡಿಸುತ್ತಿದ್ದಾರೆ. 

ಅಭ್ಯರ್ಥಿ ಸುನೀಲ್‌ ಬೋಸ್‌ ಗೆಲುವು ಸಾಧಿಸಲೇ ಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್‌, ಬಿಜೆಪಿಯ ಮುಖಂಡರನ್ನು ತನ್ನದ ಸೆಳೆಯುವ ಪ್ರಯತ್ನ ನಡೆಸುತ್ತಿದೆ. ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿ ಮಾಡಿರುವುದು ಇದೇ ಕಾರ್ಯತಂತ್ರದ ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ.

‘ಇತ್ತೀಚಿನವರೆಗೂ ಪರಸ್ಪರ ಮುಖಕೊಟ್ಟು ಮಾತನಾಡದೇ ಇದ್ದ ನಾಯಕರು ಏಕಾ ಏಕಿ ಮನೆಗೆ ಹೋಗಿ ಭೇಟಿ ನೀಡುತ್ತಾರೆ ಎಂದರೆ, ಅದರ ಹಿಂದೆ ರಾಜಕೀಯ ಕಾರ್ಯತಂತ್ರ ಇದ್ದೇ ಇರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ಶ್ರೀನಿವಾಸ ಪ್ರಸಾದ್‌ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಸಚಿವ ಮಹದೇವಪ್ಪ, ಅವರ ಮಗ, ಅಭ್ಯರ್ಥಿ ಸುನೀಲ್‌ ಬೋಸ್‌, ಸಿದ್ದರಾಮಯ್ಯ ಮಗ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿ ರಾಜಕೀಯ ವಿಚಾರ ಚರ್ಚೆಯಾಗದಿದ್ದರೂ, ಇಂತಹ ರಾಜಕೀಯ ಭೇಟಿ ರಾಜಕೀಯವಾಗಿ ಕಾರ್ಯಕರ್ತರಿಗೆ ದೊಡ್ಡ ಸಂದೇಶ ನೀಡುತ್ತದೆ’ ಎಂದು ಹೇಳುತ್ತಾರೆ ಎರಡೂ ಪಕ್ಷಗಳ ಮುಖಂಡರು.

ಕ್ಷೇತ್ರ ವ್ಯಾಪ್ತಿಯ ಹಲವು ಬಿಜೆಪಿ ಮುಖಂಡರ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ನಾಯಕರು, ಅವರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿ ಮುಖಂಡ, ಪರಿಶಿಷ್ಟ ಜಾತಿ ಎಡಗೈ ಸಮುದಾಯದ ನಾಯಕ ಕೋಟೆ ಎಂ.ಶಿವಣ್ಣ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಅವರ ಬೆಂಬಲಿಗರು ಕೂಡ ಏ.3ರಂದು ಕಾಂಗ್ರೆಸ್‌ಗೆ ಸೇರುವುದಕ್ಕೆ ತೀರ್ಮಾನಿಸಿದೆ. ‌

ಕ್ಷೇತ್ರದ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಪರಿಶಿಷ್ಟ ಜಾತಿಯ ಬಲಗೈ ಸಮುದಾಯ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರೆ, ಎಡಗೈ ಸಮುದಾಯ ಬಿಜೆಪಿಯೊಂದಿಗೆ ಗುರುತಿಕೊಂಡಿದೆ. ಎಡ ಗೈ ಸಮುದಾಯದ ಮುಖಂಡ ಈಗ ಕಾಂಗ್ರೆಸ್‌ ಸೇರ್ಪಡೆಯಾಗಿರುವುದು ಬಿಜೆಪಿಯ ಮತಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಪರಿಶಿಷ್ಟ ಸಮುದಾಯದ ಇನ್ನೂ ಕೆಲವು ಮುಖಂಡರ ಜೊತೆ ಕಾಂಗ್ರೆಸ್‌ ಮಾತುಕತೆಯಲ್ಲಿ ತೊಡಗಿದ್ದು, ತನ್ನತ್ತ ಸೆಳೆಯಲು ಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

‌ಸವಾಲುಗಳೇನು?:

ಚುನಾವಣಾ ವೇಳಾಪಟ್ಟಿ ಪ್ರಕಟವಾಗುವುದಕ್ಕೂ ಮೊದಲು ಅಭ್ಯರ್ಥಿಯನ್ನು ಘೋಷಿಸಿರುವ ಬಿಜೆಪಿ, ಪ್ರಚಾರದಲ್ಲಿ ಕೊಂಚ ಮುಂದಿದೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸುತ್ತಿನ ಕಾರ್ಯಕರ್ತರ ಸಭೆಯನ್ನು ಪೂರ್ಣಗೊಳಿಸಿದೆ.

ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೋಟೆ ಶಿವಣ್ಣ ಅವರು ಪಕ್ಷ ತೊರೆದಿದ್ದು ಬಿಟ್ಟರೆ ಬೇರೆ ಬಂಡಾಯ ಕಾಣಿಸಿಕೊಂಡಿಲ್ಲ. ಟಿಕೆಟ್‌ ಕೈ ತಪ್ಪಿದ ಬಳಿಕ ಕಾಂಗ್ರೆಸ್‌ನ ಕದ ತಟ್ಟಿದ್ದ ಶ್ರೀನಿವಾಸ ಪ್ರಸಾದ್‌ ಅಳಿಯ ಡಾ.ಮೋಹನ್‌ ಬಿಜೆಪಿಯಲ್ಲೇ ಉಳಿದಿದ್ದಾರೆ. ಉಳಿದ ಆಕಾಂಕ್ಷಿಗಳು ಕೂಡ ಪಕ್ಷದ ವಿರುದ್ಧವಾಗಿ ಮಾತನಾಡಲು ಹೋಗಿಲ್ಲ.

ಕಳೆದ ಚುನಾವಣೆ ಸಂದರ್ಭದಲ್ಲಿ ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರು.ಕೊಳ್ಳೇಗಾಲದಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ಎನ್‌.ಮಹೇಶ್‌ ಶಾಸಕರಾಗಿದ್ದರು. ಚುನಾವಣೆಯಲ್ಲಿ ಬಿಜೆಪಿಗೆ ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮುನ್ನಡೆ ಸಿಕ್ಕಿತ್ತು. ಕಾಂಗ್ರೆಸ್‌ ಶಾಸಕರಿದ್ದ ಚಾಮರಾಜನಗರ ಕ್ಷೇತ್ರದಲ್ಲೂ 10 ಸಾವಿರ ಮತಗಳ ಮುನ್ನಡೆ ದೊರೆದಿತ್ತು.

‌ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಈ ಬಾರಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಒಬ್ಬರೂ ಬಿಜೆಪಿ ಶಾಸಕರು ಇಲ್ಲ. ಜೆಡಿಎಸ್‌ ಶಾಸಕರು ಒಬ್ಬರಿದ್ದು (ಹನೂರು), ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲನೆಯಾದರೆ ಬಿಜೆಪಿ ಅಭ್ಯರ್ಥಿಗೆ ಮತಗಳು ಬೀಳಬಹುದು. ಆದರೆ, ಅದನ್ನು ಖಾತರಿ ಎನ್ನುವಂತಿಲ್ಲ. 

ಬಾಲರಾಜ್‌ ಅವರು ರಾಜಕೀಯವಾಗಿ ಹೆಸರು ಕೆಡಿಸಿಕೊಂಡಿಲ್ಲ. ಆರ್‌.ಧ್ರುವನಾರಾಯಣ ಅವರೊಂದಿಗೆ ಉತ್ತಮ ಒಡನಾಟ ಇದ್ದುದರಿಂದ, ಕಾಂಗ್ರೆಸ್‌ನಲ್ಲಿ ಅವರಿಗೆ ಉತ್ತಮ ಸ್ನೇಹಿತರಿದ್ದಾರೆ. ಧ್ರುವನಾರಾಯಣ ಅಭಿಮಾನಿಗಳು ಇವರನ್ನು ‘ಬಾಲಣ್ಣ’ ಎಂದೇ ಕರೆಯುತ್ತಾರೆ. ಆ ಸ್ನೇಹ ಮತಗಳಾಗಿ ಪರಿವರ್ತನೆಯಾಗಲಿವೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಮುಖಂಡರಿದ್ದಾರೆ.

ಕಾಂಗ್ರೆಸ್‌ನ ಅಭ್ಯರ್ಥಿ ಸುನೀಲ್‌ ಬೋಸ್‌ ಅವರು ರಾಜಕಾರಣದಲ್ಲಿ ಹೊಸ ಮುಖ. ವೈಯಕ್ತಿಕ ವರ್ಚಸ್ಸು ಹೆಚ್ಚಿಲ್ಲದಿರುವುದು ತನಗೆ ಅನುಕೂಲವಾಗಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.

 ಎಸ್‌.ಬಾಲರಾಜ್‌
 ಎಸ್‌.ಬಾಲರಾಜ್‌
ಕ್ಷೇತ್ರದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಈ ಬಾರಿಯೂ ಕ್ಷೇತ್ರದಲ್ಲಿ ಪಕ್ಷ ಗೆಲ್ಲಲಿದೆ. ಅದಕ್ಕೆ ಬೇಕಾದ ಎಲ್ಲ ಕಾರ್ಯತಂತ್ರಗಳನ್ನು ಮಾಡಿದ್ದೇವೆ
ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ ಕ್ಷೇತ್ರ ಸಂಚಾಲಕ
ಶ್ರೀನಿವಾಸ ಪ್ರಸಾದ್‌ ಅವರು ರಾಜಕೀಯವಾಗಿ ಯಾವ ಆಕಾಂಕ್ಷೆ ಇಟ್ಟುಕೊಂಡಿಲ್ಲ. ಬಿಜೆಪಿಯನ್ನೇ ಬೆಂಬಲಿಸುವುದಾಗಿ ಹೇಳಿದ್ದಾರೆ
ಎಸ್‌.ಬಾಲರಾಜ್‌ ಬಿಜೆಪಿ ಅಭ್ಯರ್ಥಿ

ಸಂಸದರ ಬೆಂಬಲ ಬಿಜೆಪಿಗೆ:

‘ಸ್ವಾಭಿಮಾನಿ ರಾಜಕಾರಣಿಯಾಗಿರುವ ಸಂಸದ ಶ್ರೀನಿವಾಸ ಪ್ರಸಾದ್‌ ಅವರ ಮೇಲೆ ಕಾಂಗ್ರೆಸ್‌ನವರು ಒತ್ತಡ ಹಾಕುತ್ತಿದ್ದಾರೆ. ಅವರಿಂದ ಏನಾದರೂ ಹೇಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ ಎಸ್‌.ಬಾಲರಾಜ್‌ ಶನಿವಾರ ದೂರಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿಸಿದ ಅವರು ‘ತಮ್ಮ ಅಧಿಕಾರವಾಧಿ ಮುಗಿಯುವ ತನಕ ಬಿಜೆಪಿ ಸದಸ್ಯನಾಗಿರುತ್ತೇನೆ ಎಂದು ಸಂಸದರು  ಹಲವು ಬಾರಿ ಸ್ಪಷ್ಟ ಪಡಿಸಿದ್ದಾರೆ. ಬಿಜೆಪಿಗೇ ತಮ್ಮ ಮತ ಎಂದು ಹೇಳಿದ್ದಾರೆ. ಬಿಜೆಪಿ ಬಿಟ್ಟು ಬೇರೆ ವಿಚಾರ ತಮ್ಮ ಬಳಿ ಇಲ್ಲ ಎಂದಿದ್ದಾರೆ. ಯಾರೇ ಕೇಳಿದರೂ ಬಿಜೆಪಿಗೆ ಮತ ಕೊಡಿಸುವುದಾಗಿ ಎಂದು ಹೇಳಿದ್ದಾರೆ’ ಎಂದರು. ‘ಸಂಸದರ ಅಳಿಯಂದಿರ ಜೊತೆ ಮಾತನಾಡಿದ್ದೇನೆ. ಅವರು ಎಲ್ಲಿಗೂ ಹೋಗುವುದಿಲ್ಲ. ಹರ್ಷವರ್ಧನ್ ಅವರು ಈಗಾಗಲೇ ನಂಜನಗೂಡು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ’ ಎಂದು ಬಾಲರಾಜ್‌ ಹೇಳಿದರು. 

ಏ.3ರಂದು ರೋಡ್‌ ಶೋ, ನಾಮಪತ್ರ ಸಲ್ಲಿಕೆ‌
ಎಸ್‌.ಬಾಲರಾಜ್‌ ಅವರು ಏಪ್ರಿಲ್‌ 3ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೂ ಮೊದಲು ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದರೆಗೆ ರೋಡ್‌ ಶೋ ನಡೆಸಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಸಂಸದ ಡಿ.ವಿ.ಸದಾನಂದ ಗೌಡ ಮುಖಂಡರಾದ ಅರವಿಂದ ಲಿಂಬಾವಳಿ ನಟಿ ಶ್ರುತಿ ಅವರು ರೋಡ್‌ ಶೋನಲ್ಲಿ ಭಾಗವಹಿಸಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT