ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ರಾಜಕೀಯ ವೈಮನಸ್ಯ ಮತ್ತೆ ಸ್ಫೋಟ!

16 ವರ್ಷಗಳಿಂದ ರಮೇಶ್‌ ಕುಮಾರ್‌–ಕೆ.ಎಚ್‌.ಮುನಿಯಪ್ಪ ನಡುವೆ ಶೀತಲ ಸಮರ
Published 28 ಮಾರ್ಚ್ 2024, 6:41 IST
Last Updated 28 ಮಾರ್ಚ್ 2024, 6:41 IST
ಅಕ್ಷರ ಗಾತ್ರ

ಕೋಲಾರ: ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಹಾಗೂ ಸಚಿವ ಕೆ.ಎಚ್‌.ಮುನಿಯಪ್ಪ ನಡುವಿನ ರಾಜಕೀಯ ವೈಮನಸ್ಯ ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಮತ್ತೊಮ್ಮೆ ಸ್ಫೋಟಗೊಂಡಿದೆ.

ಕ್ಷೇತ್ರದಲ್ಲಿ ಎರಡೂ ಬಣಗಳೇ ಸೃಷ್ಟಿಯಾಗಿ ಗುಂಪುಗಾರಿಕೆ ನಡೆಯುತ್ತಿದೆ. ತಮ್ಮ ಬೆಂಬಲಿಗರೊಂದಿಗೆ ಕೆ.ಎಚ್‌.ಮುನಿಯಪ್ಪ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ರಮೇಶ್‌ ಕುಮಾರ್ ಬಣದಲ್ಲಿರುವ ಚಿಂತಾಮಣಿ ಶಾಸಕರೂ ಆಗಿರುವ ಸಚಿವ ಡಾ.ಎಂ.ಸಿ.ಸುಧಾಕರ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌, ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಸಡ್ಡೊಡೆದು ನಿಂತಿದ್ದಾರೆ. ಇದಕ್ಕೆ ‘ಘಟಬಂಧನ್‌’ ಎಂಬ ಹೆಸರೂ ಇದೆ.

ಕೋಲಾರ ರಾಜಕಾರಣದಲ್ಲಿ ರಮೇಶ್‌ ಕುಮಾರ್‌ ಹಾಗೂ ಮುನಿಯಪ್ಪ ನಡುವಿನ ರಾಜಕೀಯ ವೈಮನಸ್ಯ ಹೊಸದೇನಲ್ಲ. 16 ವರ್ಷಗಳಿಂದ ಉಭಯ ಮುಖಂಡರ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಇವರ ಬೆಂಬಲಿಗರ ನಡುವೆ ಆಗಾಗ್ಗೆ ಜಗಳ ನಡೆಯುತ್ತಲೇ ಇರುತ್ತದೆ. ಈಚೆಗೆ ಕೋಲಾರ ಕಾಂಗ್ರೆಸ್‌ ಕಚೇರಿಯಲ್ಲಿ ಮಾರಾಮಾರಿ ನಡೆದಿತ್ತು.

2008ರ ವಿಧಾನಸಭೆ ಚುನಾವಣೆಯಲ್ಲಿ ಶ್ರೀನಿವಾಸಪುರ ಕ್ಷೇತ್ರದಲ್ಲಿ ರಮೇಶ್‌ ಕುಮಾರ್‌ ಸೋಲಿಗೆ ಮುನಿಯಪ್ಪ ಅವರ ಒಳಸಂಚು ಕಾರಣ ಎಂಬ ಆರೋಪದ ನಂತರ ಉಭಯರ ನಡುವೆ ರಾಜಕೀಯ ವೈಮನಸ್ಯ ಆರಂಭವಾಯಿತು. ಇದಲ್ಲದೇ, ಕೆ.ಸಿ.ವ್ಯಾಲಿ ಯೋಜನೆ ರೂವಾರಿ ಯಾರೆಂಬ ‘ಕ್ರೆಡಿಟ್‌ ವಾರ್’ ಕೂಡ ಇಬ್ಬರ ನಡುವೆ ಒಳಜಗಳ ಹೆಚ್ಚಿಸುತ್ತಲೇ ಹೋಯಿತು. ಜೊತೆಗೆ ಜಿಲ್ಲೆಯಲ್ಲಿ ಹಿಡಿತ (ಅಧಿಕಾರ) ಸಾಧಿಸುವ ಜಿದ್ದಿಗೆ ಬಿದ್ದರು. ಪ್ರತಿ ಚುನಾವಣೆಯಲ್ಲಿ ಅದು ಮುಂದುವರಿದಿದೆ. 

2019ರ ಲೋಕಸಭೆ ಚುನಾವಣೆಯಲ್ಲಿ ಕೆ.ಎಚ್‌.ಮುನಿಯಪ್ಪ ಸೋತ ನಂತರ ಈ ವೈಮನಸ್ಯ ದೊಡ್ಡದಾಗಿ ಬೆಳೆಯಿತು. ಸತತ ಏಳು ಬಾರಿ ಗೆದ್ದಿದ್ದ ಅವರು ಮೊದಲ ಬಾರಿ ಪರಾಭವಗೊಂಡಿದ್ದರು. ಆ ಚುನಾವಣೆಯಲ್ಲಿ ಡಾ.ಎಂ.ಸಿ.ಸುಧಾಕರ್‌, ಕೊತ್ತೂರು ಮಂಜುನಾಥ್‌ ಸೇರಿದಂತೆ ರಮೇಶ್‌ ಕುಮಾರ್‌ ಬಣದಲ್ಲಿ ಗುರುತಿಸಿಕೊಂಡಿದ್ದ ಹಲವರು ಬಹಿರಂಗವಾಗಿ ಮುನಿಯಪ್ಪ ವಿರುದ್ಧ ಕೆಲಸ ಮಾಡಿದ್ದರು. ‘ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ಅವರನ್ನು ಗೆಲ್ಲಿಸಲು ನಾವು ಕೆಲಸ ಮಾಡಿದೆ’ ಎಂಬುದಾಗಿ ಕೊತ್ತೂರು ಮಂಜುನಾಥ್‌ ಈಗಲೂ ಹೇಳುತ್ತಿರುತ್ತಾರೆ. ಸುಧಾಕರ್‌ ಹಾಗೂ ಕೊತ್ತೂರು ಕಾಂಗ್ರೆಸ್‌ಗೆ ಮತ್ತೆ ಸೇರಲು ಮುಂದಾದಾಗ ಮುನಿಯಪ್ಪ ವಿರೋಧಿಸಿದ್ದರು.

ಅಂದಿನಿಂದ ಇಂದಿನವರೆಗೆ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಮನೆಯೊಂದು ಮೂರು ಬಾಗಿಲು ಎಂಬಂಥ ಪರಿಸ್ಥಿತಿ ಇದ್ದು, ಮುಖಂಡರಲ್ಲಿ ಮಾತ್ರವಲ್ಲ; ಕಾರ್ಯಕರ್ತರ ನಡುವೆಯೂ ಗೋಡೆ ಸೃಷ್ಟಿಯಾದಂತಿದೆ. ಕಾಂಗ್ರೆಸ್‌ ಭವನದಲ್ಲಿ ಸಭೆ ನಡೆದರೆ ಜಗಳವಿಲ್ಲದೆ ಹೊರಬರುವುದು ವಿರಳವಾಗಿದೆ. 

1952ರಿಂದ ಬಹುತೇಕ ಚುನಾವಣೆಗಳಲ್ಲಿ ಗೆದ್ದು ಕೋಲಾರ ಲೋಕಸಭಾ ಕ್ಷೇತ್ರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಕಾಂಗ್ರೆಸ್‌ಗೆ ಈ ಬಾರಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಲೂ ಈ ಜಗಳವೇ ಮುಖ್ಯ ಕಾರಣ. 

ಅಭ್ಯರ್ಥಿ ವಿಚಾರದಲ್ಲಿ ಸತತ ಎಂಟು ಚುನಾವಣೆಗಳಲ್ಲಿ ಮುನಿಯಪ್ಪ ಅವರಿಗೆ ಸಡ್ಡು ಹೊಡೆಯುವವರೇ ಇರಲಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿನ ಒಳ ಏಟಿನಿಂದ ಸೋಲು, ನಂತರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಉದ್ಭವಿಸಿದ ಬಣಗಳ ಕಿತ್ತಾಟ, ಎಡ–ಬಲ ಸಮುದಾಯದ ಗೊಂದಲ, ಮುಖಂಡರ ನಡುವಿನ ಅಸಹನೆ, ವೈಮನಸ್ಯ ಪಕ್ಷದ ವಿಶ್ವಾಸವನ್ನೇ ಕಿತ್ತುಕೊಂಡಿರುವಂತಿದೆ.

ಕಳೆದ ವಿಧಾನಸಭಾ ಚುಣಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದ ಸಿದ್ದರಾಮಯ್ಯ, ಇಲ್ಲಿನ ಬಣ ರಾಜಕೀಯ ಕಂಡು ಜಾಗ ಖಾಲಿ ಮಾಡಿದ್ದರು. ಗುಂಪುಗಾರಿಕೆ ಶಮನ ಮಾಡಲು ರಾಜ್ಯದ ವರಿಷ್ಠರಿಗೂ ಸಾಧ್ಯವಾಗುತ್ತಿಲ್ಲ.

ಈ ಬಾರಿ  ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಸಿ.ಎಂ.ಮುನಿಯಪ್ಪ ಅವರಿಗೆ ಟಿಕೆಟ್‌ ನೀಡದಿದ್ದರೆ ಯಾರೊಬ್ಬರೂ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲವೆಂದು ರಮೇಶ್‌ ಕುಮಾರ್‌ ಬಣದವರು ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ತಮ್ಮ ಸಹಿ ಇರುವ ಪತ್ರವನ್ನು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದ್ದಾರೆ. ಆದರೆ, ಕೆ.ಎಚ್‌.ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ನೀಡಲಾಗುತ್ತಿದೆ ಎಂಬ ವಿಚಾರ ತಿಳಿದು ಸಿಡಿದೆದ್ದಿದ್ದಾರೆ.

ಕೆ.ಎಚ್‌.ಮುನಿಯಪ್ಪ
ಕೆ.ಎಚ್‌.ಮುನಿಯಪ್ಪ
2008ರಲ್ಲಿ ರಮೇಶ್‌ ಕುಮಾರ‌ ಸೋತ ಬಳಿಕ ಉಭಯರ ನಡುವೆ ಒಳಜಗಳ ಕೆ.ಸಿ.ವ್ಯಾಲಿ ಯೋಜನೆ ರೂವಾರಿ ಯಾರೆಂದು ‘ಕ್ರೆಡಿಟ್‌ ವಾರ್’ 2019ರಲ್ಲಿ ಕೆ.ಎಚ್‌.ಮುನಿಯಪ್ಪ ಸೋಲಿಗೆ ಸಂಚು ಆರೋಪ
ಕೆ.ಎಚ್‌.ಮುನಿಯಪ್ಪ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್‌ ಕೋರಿದ್ದೆವು. ಬ್ಲ್ಯಾಕ್‌ಮೇಲ್‌ ಮಾಡುತ್ತಿಲ್ಲ. ಅಭಿಪ್ರಾಯಕ್ಕೆ ವಿರುದ್ಧವಾಗಿ ಟಿಕೆಟ್‌ ನೀಡುತ್ತಿರುವುದು ಬೇಸರ ತಂದಿದೆ
ಕೆ.ವೈ.ನಂಜೇಗೌಡ ಮಾಲೂರು ಶಾಸಕ
ನಾನು ಮಂತ್ರಿಯಾಗಿದ್ದಾಗ ಕೆ.ಎಚ್‌.ಮುನಿಯಪ್ಪ ಪುಟ್ಗೋಸಿ ಬ್ಯಾಗ್‌ ಹಿಡಿದು ನನ್ನ ಹಿಂದೆ ಬರುತ್ತಿದ್ದರು. ಈಗ ಏಕೆ ಮರೆತಿದ್ದಾರೆ ಕೇಳಿ. ಅವರಿಗೆ ಮೊದಲು ಟಿಕೆಟ್‌ ಕೊಡಿಸಿದ್ದು ನಾನೇ
ನಸೀರ್‌ ಅಹ್ಮದ್‌ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ
ಇಬ್ಬರ ಕಿತ್ತಾಟ; ಮೂರನೇಯವರಿಗೆ ಲಾಭ?
ಇಬ್ಬರ ಕಿತ್ತಾಟದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ಬಣಗಳ ಜಗಳ ಈಗ ಉಭಯರಿಗೂ ಕುತ್ತು ತರುವ ಸಾಧ್ಯತೆ ಇದೆ. ಏಕೆಂದರೆ ಕೆ.ಜಿ.ಚಿಕ್ಕಪೆದ್ದಣ್ಣ (ಕೆ.ಎಚ್‌.ಮುನಿಯಪ್ಪ ಅಳಿಯ) ಹಾಗೂ ಸಿ.ಎಂ.ಮುನಿಯಪ್ಪ (ರಮೇಶ್‌ ಕುಮಾರ್‌ ಬಣ) ಯಾರಿಗೆ ಟಿಕೆಟ್‌ ಕೊಟ್ಟರೂ ಮತ್ತೊಂದು ಬಣದ ಅಸಮಾಧಾನಕ್ಕೆ ಕಾರಣವಾಗಲಿದೆ. ಹೀಗಾಗಿ ರಾಜ್ಯಸಭೆ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಅವರನ್ನು ಈಗಾಗಲೇ ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಯಾರೀ ಸಿ.ಎಂ.ಮುನಿಯಪ್ಪ?
ಸಿ.ಎಂ.ಮುನಿಯಪ್ಪ ಕೋಲಾರದಲ್ಲಿ ನಾಲ್ಕು ದಶಕಗಳಿಂದ ದಲಿತ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರ ಹೋರಾಟ ಗುರುತಿಸಿ ಈಚೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿ ಕೂಡ ನೀಡಿತ್ತು. ‘ಸಂಚಿಕೆ’  ಪತ್ರಿಕೆ ಸಂಪಾದಕ ಕೂಡ. ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಮುಖಂಡ. ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲದ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್‌ ಪರ ಪ್ರಚಾರ ನಡೆಸಿದ್ದರು. ಅವರಿಗೆ ಕೋಲಾರ ಟಿಕೆಟ್‌ ಕೊಡಿಸಲು ಕೆ.ಆರ್‌.ರಮೇಶ್‌ ಕುಮಾರ್ ಬಣ ಲಾಬಿ ನಡೆಸಿದೆ.
ಹಿರಿಯ ಉಪನೋಂದಣಾಧಿಕಾರಿ ಚಿಕ್ಕಪೆದ್ದಣ್ಣ
ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಸೇರಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೋಡಿಗಲ್‌ ಗ್ರಾಮದ ಕೆ.ಜಿ.ಚಿಕ್ಕಪೆದ್ದಣ್ಣ ಕಂದಾಯ ಇಲಾಖೆಯ ಉದ್ಯೋಗಿ. ಕೆ.ಆರ್‌.ಪುರಂನಲ್ಲಿ ಹಿರಿಯ ಉಪನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುನಿಯಪ್ಪ ಅವರ ಪುತ್ರಿ ನಂದಿನಿ ಅವರನ್ನು ವಿವಾಹವಾಗಿದ್ದಾರೆ. ಮಾವನ ಜೊತೆ ರಾಜಕೀಯ ಒಡನಾಟ ಇಟ್ಟುಕೊಂಡಿರುವ ಅವರು ಕೋಲಾರ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಟಿಕೆಟ್‌ ಅರ್ಜಿ ಸಲ್ಲಿಸಿ ಪ್ರಯತ್ನ ನಡೆಸಿದ್ದಾರೆ.
ಗೋ ಬ್ಯಾಕ್‌ ಅಭಿಯಾನ
ಕೋಲಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗೋಬ್ಯಾಕ್‌ ಅಭಿಯಾನ ಶುರುವಾಗಿದೆ. ‘ಪೆದ್ದಣ್ಣ ನಿಕಿ ಸೀಟು ವದ್ದನ್ನ’ ‘ಗೋ ಬ್ಯಾಕ್‌ ಕೆ.ಎಚ್‌.ಮುನಿಯಪ್ಪ ಅಂಡ್‌ ‌ಫ್ಯಾಮಿಲಿ’ ಎಂದು ಫೇಸ್‌ಬುಕ್ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ. ‘ಎಡಗೈಗೆ ಟಿಕೆಟ್‌ ನೀಡಿ ಸಾಮಾಜಿಕ ನ್ಯಾಯ ಕಲ್ಪಿಸಿ’ ಎಂದು ಚಿಕ್ಕಪೆದ್ದಣ್ಣ ಪರವಾಗಿಯೂ ಪೋಸ್ಟ್‌ಗಳು ಕಾಣಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT