ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪರಿಚಯ

Published 21 ಮಾರ್ಚ್ 2024, 23:48 IST
Last Updated 21 ಮಾರ್ಚ್ 2024, 23:48 IST
ಅಕ್ಷರ ಗಾತ್ರ

ಎಂ.ವಿ. ರಾಜೀವ್‌ ಗೌಡ

ಎಂ.ವಿ. ರಾಜೀವ್‌ ಗೌಡ ಅವರು ಜನಿಸಿದ್ದು 1963ರಲ್ಲಿ. ಅವರ ತಂದೆ ಎಂ.ವಿ. ವೆಂಕಟಪ್ಪ ಅವರು ಮುಳಬಾಗಲು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದು, ಎರಡು ಬಾರಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದರು. ಅಲ್ಲದೆ, ವಿಧಾನಸಭಾಧ್ಯಕ್ಷ ಮತ್ತು ವಿಧಾನ ಪರಿಷತ್‌ ಸಭಾಪತಿ ಆಗಿದ್ದರು. 

ರಾಜೀವ್‌ ಗೌಡ ಅವರು 1984ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ, 1985ರಲ್ಲಿ ಫೋರ್ಡಾಮ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಆರ್ಟ್ಸ್, 1992ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಿಂದ ಪಿಎಚ್‌.ಡಿ ಪಡೆದಿದ್ದಾರೆ. ಅದೇ ವರ್ಷ ಅವರು ಒಕ್ಲಹೋಮ ವಿಶ್ವವಿದ್ಯಾಲಯಕ್ಕೆ ರಾಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ಸೇರಿದರು. 2000ರಲ್ಲಿ ಭಾರತಕ್ಕೆ ಮರಳಿದ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್, ಬೆಂಗಳೂರು (ಐಐಎಂಬಿ) ಸೇರಿದರು. ಅದೇ ವೇಳೆಗೆ ರಾಜಕೀಯದಲ್ಲಿಯೂ ಸಕ್ರಿಯರಾದರು. 2004ರಲ್ಲಿ ರಾಹುಲ್ ಗಾಂಧಿ ರಾಜಕೀಯ ಪ್ರವೇಶಿಸಿದಾಗ ಅವರೊಂದಿಗೆ ಕೆಲಸ ಮಾಡಿದ 24 ನಾಯಕರ ತಂಡದಲ್ಲಿ ಇವರೂ ಇದ್ದರು. ಕೆಪಿಸಿಸಿ ವಿಚಾರ ವಿಭಾಗದ ಸಂಚಾಲಕರೂ ಆಗಿದ್ದ ರಾಜೀವ್‌ ಗೌಡ, ವಿಧಾನಸಭೆ ಮತ್ತು ಬಿಬಿಎಂಪಿ ಚುನಾವಣೆ ಪ್ರಣಾಳಿಕೆ ಸಮಿತಿಯ ಭಾಗವಾಗಿದ್ದರು.

2013ರಲ್ಲಿ ಅವರನ್ನು ಎಐಸಿಸಿ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿತ್ತು. ರಾಜ್ಯದಿಂದ 2014ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರು. ಸದ್ಯ ಅವರು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ.

ಸೌಮ್ಯಾ ರೆಡ್ಡಿ

ಸೌಮ್ಯಾ ರೆಡ್ಡಿ

ಸೌಮ್ಯಾ ರೆಡ್ಡಿ

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ. ಜನನ 1983. ಬೆಂಗಳೂರಿನ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೆಮಿಕಲ್ ಎಂಜಿನಿಯರಿಂಗ್‌ ವಿಷಯದಲ್ಲಿ ಪದವಿ ಮುಗಿಸಿದ ಬಳಿಕ ಅವರು ನ್ಯೂಯಾರ್ಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪರಿಸರ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂಎಸ್) ಮುಗಿಸಿದರು. 2014ರಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಸೌಮ್ಯಾ ರೆಡ್ಡಿ, ಬಳಿಕ ರಾಜಕೀಯದತ್ತ ಒಲವು ತೋರಿದರು. ತಂದೆಯ ಮಾರ್ಗವನ್ನೇ ಹಿಡಿದ ಅವರು, 2016ರಲ್ಲಿ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ, 2017ರಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದರು. 2019ರಲ್ಲಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಆದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಚುನಾಯಿತರಾಗಿದ್ದ ಅವರು, 2023ರ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧದ ಹಲವು ಹೋರಾಟಗಳಲ್ಲಿ ಸೌಮ್ಯಾ ರೆಡ್ಡಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಮನ್ಸೂರ್‌ ಅಲಿ ಖಾನ್‌

ಮನ್ಸೂರ್‌ ಅಲಿ ಖಾನ್‌

ಮನ್ಸೂರ್‌ ಅಲಿ ಖಾನ್‌

ಐದು ಬಾರಿ ರಾಜ್ಯಸಭೆ ಸದಸ್ಯ, 2012ರಿಂದ 2014ರವರೆಗೆ ರಾಜ್ಯಸಭೆಯ ಉಪ ಸಭಾಪತಿ ಆಗಿದ್ದ ಕೆ. ರೆಹಮಾನ್‌ ಖಾನ್‌ ಅವರ ಪುತ್ರ. ಜನನ 1972. ರೆಹಮಾನ್‌ ಖಾನ್‌ ಅವರು ಕೇಂದ್ರದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿಯೂ ಕೆಲಸ ಮಾಡಿದ್ದರು. ಮನ್ಸೂರ್‌, ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಉದ್ಯಮಿಯೂ ಹೌದು. 1996ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಬಿ.ಎಂ ಪದವಿ ಪಡೆದ ಅವರು, 2001ರಲ್ಲಿ ಬೆಂಗಳೂರಿನಲ್ಲಿ ದೆಹಲಿ ಪಬ್ಲಿಕ್‌ ಸ್ಕೂಲ್‌ (ಡಿಪಿಎಸ್‌) ಸ್ಥಾಪಿಸಿದ ಅವರು, ಅದೇ ವರ್ಷ ಕೆಕೆ ಎಜುಕೇಷನಲ್‌ ಚಾರಿಟೆಬಲ್‌ ಟ್ರಸ್ಟ್‌ ಆರಂಭಿಸಿದರು. ಈ ಟ್ರಸ್ಟ್ ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.

2013ರಲ್ಲಿ ಕೆಪಿಸಿಸಿಯ ವೃತ್ತಿನಿರತರ ಕೋಶದ ಉಪಾಧ್ಯಕ್ಷರಾದ ಅವರು ಬಳಿಕ ರಾಜಕೀಯದಲ್ಲಿ ಸಕ್ರಿಯರಾದರು. ರಾಜಕೀಯವಾಗಿ ತಂದೆಯ ಹಾದಿ ತುಳಿದಿರುವ ಮನ್ಸೂರ್‌, ಎಐಸಿಸಿ ಕಾರ್ಯದರ್ಶಿಯಾಗಿ ತೆಲಂಗಾಣದಲ್ಲಿ ಕೆಲಸ ಮಾಡಿದ್ದರು. ಅಲ್ಲದೆ, ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿನ ಹಿಂದೆ ಮನ್ಸೂರ್‌ ಕೂಡ ಸಕ್ರಿಯವಾಗಿ ಕೆಲಸ ಮಾಡಿದ್ದರು. 2022ರಲ್ಲಿ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಅವರು, ಅದೇ ವರ್ಷ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT