ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಸೋಲು ನೆನಪಿಸಿಕೊಂಡು ಡಾ.ಸುಧಾಕರ್‌, ನಿಖಿಲ್‌ ಕಣ್ಣೀರು

Published 4 ಏಪ್ರಿಲ್ 2024, 23:30 IST
Last Updated 4 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ರಾಮನಗರ/ಚಿಕ್ಕಬಳ್ಳಾಪುರ: ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ವಿಧಾನಸಭೆ ಚುನಾವಣೆ ಸೋಲು ನೆನಪಿಸಿಕೊಂಡು ಕಣ್ಣೀರು ಹಾಕಿದರು.     

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅನುಭವವಿಲ್ಲದೆ ಮಂಡ್ಯದಿಂದ ಸ್ಪರ್ಧಿಸಿದ್ದ ನಾನು ಕಾಂಗ್ರೆಸ್‌ನವರ ಷಡ್ಯಂತ್ರಕ್ಕೆ ಬಲಿಯಾದೆ. ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದ್ದರೂ ನಾನು ಸೋತೆ’ ಎಂದು ನಿಖಿಲ್ ಕಣ್ಣೀರು ಹಾಕಿದರು.

ನಗರದಲ್ಲಿ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ನಾಮಪತ್ರ ಸಲ್ಲಿಕೆ ಮತ್ತು ಬಹಿರಂಗ ಸಮಾವೇಶದಲ್ಲಿ ಅವರು ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ಅಸಹನೆ ವ್ಯಕ್ತಪಡಿಸಿ ಭಾವುಕರಾದರು.

‘ತಾತ ಎಚ್‌.ಡಿ.ದೇವೇಗೌಡರು ಮತ್ತು ತಂದೆ ಎಚ್‌.ಡಿ.ಕುಮಾರಸ್ವಾಮಿ ಅವರ ನೆಲೆಯಾದ ರಾಮನಗರದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ ರಾತ್ರೋರಾತ್ರಿ ಗಿಫ್ಟ್ ಕಾರ್ಡ್ ಹಂಚಿ ಮೋಸ ಮಾಡಿದರು. ಯಾಕೆ ನನಗೇ ಹೀಗಾಯಿತು? ಯಾರಿಗಾದರೂ ಮೋಸ ಮಾಡಿದ್ದೀನಾ? ಅಗೌರವ ತೋರಿದ್ದೇನೆಯೇ? ನಡವಳಿಕೆಯಲ್ಲಿ ತಪ್ಪಾಗಿದೆಯಾ?’ ಎಂದು ಪ್ರಶ್ನಿಸಿಕೊಂಡರು.

‘ಬೇರೆಯವರು ಮೋಸ ಮಾಡಿದರೂ ರಾಮನಗರದ 76 ಸಾವಿರ ಜನ ನನಗೆ ಮತ ಹಾಕಿದರು. ಅವರ ಋಣವನ್ನು ಎಂದಿಗೂ ಮರೆಯಲಾರೆ. ನನಗೂ ಅವಕಾಶ ಸಿಗುತ್ತದೆ. ನಾನೆಂದಿಗೂ ರಾಮನಗರ ಜಿಲ್ಲೆ ಬಿಟ್ಟು ಹೋಗುವವನಲ್ಲ. ಇಲ್ಲೇ ಗೆದ್ದು ತೋರಿಸುವೆ’ ಎಂದು ಸವಾಲು ಹಾಕಿದರು.

‘ನನಗಾದಂತೆ ಡಾ. ಸಿ.ಎನ್.ಮಂಜುನಾಥ್ ಅವರಿಗೆ ಆಗಬಾರದು. ಅವರು ರಾಜಕಾರಣವನ್ನು ಹುಡುಕಿಕೊಂಡು ಬಂದಿಲ್ಲ. ಬದಲಿಗೆ, ರಾಜಕಾರಣವೇ ಅವರನ್ನು ಹುಡುಕಿಕೊಂಡು ಬಂದಿದೆ. ಇದು ದುಡ್ಡು ಮತ್ತು ಮಾನವೀಯತೆಯ ನಡುವಣ ಚುನಾವಣೆ. ಜನ ದುಡ್ಡಿಗೆ ಸೆಡ್ಡು ಹೊಡೆದು ಮಾನವೀಯತೆ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಅಜ್ಞಾತವಾಸ ತಂದ ಕಣ್ಣೀರು!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ನಗರದಲ್ಲಿ ಗುರುವಾರ ನಡೆದ ರೋಡ್ ಷೊ ವೇಳೆ ಮಾತನಾಡುತ್ತಲೇ ಗದ್ಗದಿತರಾಗಿ ಕಣ್ಣೀರು ಹಾಕಿದರು.

ಭಾಷಣದ ವೇಳೆ ವಿಧಾನಸಭೆಯ ಸೋಲು ನೆನಪಿಸಿಕೊಂಡು ಭಾವುಕರಾದ ಅವರು ‘ನನ್ನ ದೂರ ಮಾಡಿದ್ದೀರಿ. ಅಜ್ಞಾತವಾಸ ಅನುಭವಿಸಿದ್ದೇನೆ. ಮತ್ತೆ ಸೇವೆ ಮಾಡಲು ಅವಕಾಶ ಕೊಡಿ’ ಎನ್ನುತ್ತಲೇ ಕಣ್ಣೀರು ಹಾಕಿದರು.

ಹೆಗಲ ಮೇಲೆ ಹಾಕಿಕೊಂಡಿದ್ದ ಚಿಕ್ಕ ಟವೆಲ್‌ನಿಂದ ಕಣ್ಣೀರು ಒರೆಸಿಕೊಂಡರು. ಸುಧಾಕರ್‌ 11 ವರ್ಷಗಳ ರಾಜಕೀಯ ಬದುಕಿನಲ್ಲಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದು ಇದೇ ಮೊದಲು. ಅವರ ಈ ಕಣ್ಣೀರು ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಜಾತಿ ರಾಜಕಾರಣ ಮತ್ತು ಧ್ರುವೀಕರಣದ ಮಾತುಗಳು ಹೆಚ್ಚು ಚಾಲ್ತಿಗೆ ಬರುತ್ತಿವೆ. ಇದನ್ನು ಪ್ರಸ್ತಾಪಿಸಿದ ಅವರು ‘ನಾನು ಎಂದಿಗೂ ಜಾತಿ ರಾಜಕೀಯ ಮಾಡಿಲ್ಲ. ಆದರೆ ಈಗ ಜಾತಿಯನ್ನು ಬಂಡವಾಳ ಮಾಡುತ್ತಿದ್ದಾರೆ. ನಾಡಪ್ರಭು ಕೆಂಪೇಗೌಡರು  ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇನೆ. ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದೇನೆ’ ಎಂದರು.

‘ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದರೂ ಎಲ್ಲ ಸಮುದಾಯವನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೇನೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವವನೇ ಒಕ್ಕಲಿಗ’ ಎಂದು ಭಾಷಣಕ್ಕೆ ವಿರಾಮ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT