ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಲಕ್ಷ್ಮಣಗಿಂತಲೂ ಸಿದ್ದ‘ರಾಮ’ನಿಗೇ ಹೆಚ್ಚು ಸವಾಲು

Published 8 ಏಪ್ರಿಲ್ 2024, 8:11 IST
Last Updated 8 ಏಪ್ರಿಲ್ 2024, 8:11 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಈ ಬಾರಿಯ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ ಅವರಿಗಿಂತಲೂ ಇಲ್ಲಿಯವರೇ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಪ್ರತಿಷ್ಠೆ ಮತ್ತು ಸವಾಲಿನದಾಗಿದೆ.

ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆದ್ದಿಲ್ಲ. ಬಿಜೆಪಿಯ ಪ್ರತಾಪ ಸಿಂಹ ಗೆಲುವು ಕಾಂಗ್ರೆಸ್‌ ಪಕ್ಷದವರ ನಿದ್ದೆಗೆಡಿಸಿತ್ತು. ಈ ಬಾರಿ ಹೇಗಾದರೂ ಮಾಡಿ ಕ್ಷೇತ್ರ ವಶಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಚುನಾವಣೆಯನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿದ್ದಾರೆ. ಎಲ್ಲರ ಶಕ್ತಿಯನ್ನು ಒಗ್ಗೂಡಿಸಲು ತಂತ್ರ ರೂಪಿಸಿದ್ದಾರೆ.

ರಾಜ್ಯದ ಅಧಿಕಾರದ ಗದ್ದುಗೆ ಹಿಡಿದಿರುವ ಅವರು ತಮ್ಮ ಸ್ಥಾನವನ್ನು ಮುಂದೆಯೂ ಭದ್ರಪಡಿಸಿಕೊಳ್ಳಲು ತವರಿನಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ‘ರಾಜಕೀಯ ಜೀವನ’ದ ಸಂಧ್ಯಾಕಾಲದಲ್ಲಿ ಗೆಲುವಿನ ಕೊಡುಗೆಯನ್ನು ಅವರು ಕಾರ್ಯಕರ್ತರಿಂದ ಬಯಸುತ್ತಿದ್ದಾರೆ. ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ತಂತ್ರಕ್ಕೆ ‍ಪ್ರತಿತಂತ್ರ–ರಣತಂತ್ರ ರೂಪಿಸಲೇಬೇಕಾದ ಅನಿವಾರ್ಯತೆಯೂ ಅವರಿಗೇ ಜಾಸ್ತಿ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಎಲ್ಲವೂ, ಎಲ್ಲರೂ ಇದ್ದು: ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಇಬ್ಬರು ನಾಯಕರು ಅಂದರೆ ಡಾ.ಎಚ್‌.ಸಿ. ಮಹದೇವಪ್ಪ ಹಾಗೂ ಕೆ.ವೆಂಕಟೇಶ್ ಸಚಿವರಾಗಿದ್ದಾರೆ. ಶಾಸಕರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್‌ ಸೇಠ್ ಮೈಸೂರಿನವರೇ. ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮುಖ್ಯಮಂತ್ರಿಯ ಕಾನೂನು ಸಲಹೆಗಾರರೂ ಹೌದು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್‌ ಹಾಗೂ ಸೂರಜ್‌ ಹೆಗ್ಡೆ ಈ ಕ್ಷೇತ್ರದವರೇ.

ಇದಲ್ಲದೇ, ನಿಗಮ–ಮಂಡಳಿಗಳ ಅಧ್ಯಕ್ಷರಾದ ಕೆ.ಮರೀಗೌಡ, ಅಯೂಬ್‌ ಖಾನ್‌ ಇಲ್ಲಿಯವರೇ. ಇವರೆಲ್ಲರೂ ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವವರೇ. ಕಾರ್ಯಕರ್ತರ ದೊಡ್ಡ ಪಡೆಯೇ ಇದೆ. ಸಾಕಷ್ಟು ಮುಖಂಡರೂ ಇದ್ದಾರೆ. ‘ಪಂಚ ಗ್ಯಾರಂಟಿ’ ಯೋಜನೆಗಳ ಅನುಷ್ಠಾನಕ್ಕೂ ಕ್ರಮ ಕೈಗೊಂಡಿದ್ದಾರೆ. ಇಷ್ಟೆಲ್ಲ ಇದ್ದರೂ ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವ್ಯತಿರಿಕ್ತವಾದ ಫಲಿತಾಂಶ ಬಂದರೆ ನೇರವಾಗಿ ಮುಖ್ಯಮಂತ್ರಿಯೇ ಹೊಣೆ ಹೊರಬೇಕಾಗುತ್ತದೆ. ಅಲ್ಲದೇ, ಮುಖಭಂಗವನ್ನೂ ಎದುರಿಸಬೇಕಾಗುತ್ತದೆ. ಇದೆಲ್ಲ ಕಾರಣದಿಂದಾಗಿ ಅವರು ಮೈಸೂರು–ಕೊಡಗು ಜೊತೆಗೆ ನೆರೆಯ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ‘ಬಲ’ವನ್ನು ಮತವಾಗಿಸಿಕೊಳ್ಳುವ ಸವಾಲು ಇವರೆಲ್ಲರ ಮೇಲೂ ಇದೆ.

‘ನಮ್ಮವರೇ ಆದ ಮುಖ್ಯಮಂತ್ರಿಯ ಮರ್ಯಾದೆ ಕಾಪಾಡಿಕೊಳ್ಳುವುದಕ್ಕಾಗಿ ಮುಖಂಡರೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಭಿನ್ನಾಭಿ‍ಪ್ರಾಯಗಳನ್ನು ಮರೆತು ಪಕ್ಷದ ಗೆಲುವಿಗೆ ಶ್ರಮಿಸಬೇಕು’ ಎಂದು ಅಭ್ಯರ್ಥಿ ಲಕ್ಷ್ಮಣ ಆದಿಯಾಗಿ ಕಾಂಗ್ರೆಸ್ ನಾಯಕರೆಲ್ಲರೂ ಹೇಳುತ್ತಿರುವುದು ಈ ಚುನಾವಣೆಯು ಸಿದ್ದರಾಮಯ್ಯ ಅವರಿಗೇ ಹೆಚ್ಚಿನ ಪ್ರತಿಷ್ಠೆಯದಾಗಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ.

ಸಚಿವರು, ಶಾಸಕರಿಗೂ ಇದೆ ಜವಾಬ್ದಾರಿ ‘ಬಲ’ವನ್ನು ಮತವಾಗಿಸಿಕೊಳ್ಳಲು ಪ್ರಯತ್ನ ಸಿಎಂ ವಿರುದ್ಧ ತೊಡೆ ತಟ್ಟಿರುವ ಜಿಟಿಡಿ, ವಿಶ್ವನಾಥ್‌!
ನಮ್ಮವರೇ ಮುಖ್ಯಮಂತ್ರಿ ಆಗಿದ್ದಾರೆ. ಅವರು ನೀಡಿರುವ ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ಅವರೂ ಗಂಭೀರವಾಗಿಯೇ ಪರಿಗಣಿಸಿದ್ದಾರೆ
ಬಿ.ಜೆ. ವಿಜಯ್‌ಕುಮಾರ್‌ ಅಧ್ಯಕ್ಷ ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಘಟಕ
ಮುಖಭಂಗ ಮಾಡಲೆಂದೇ...!
ಕಾರ್ಯತಂತ್ರದ ಭಾಗವಾಗಿಯೇ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದ ಲಕ್ಷ್ಮಣ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. 47 ವರ್ಷಗಳ ಬಳಿಕ ಈ ಸಮಾಜದ ನಾಯಕನಿಗೆ ಟಿಕೆಟ್ ಸಿಕ್ಕಿದೆ. ಇದನ್ನು ಮುಂದು ಮಾಡಿ ‘ಒಕ್ಕಲಿಗಾಸ್ತ್ರ’ವನ್ನು ಬಳಸಿ ಮತ ಬೇಟೆಗೆ ಇಳಿದಿದ್ದಾರೆ. ಮುಖ್ಯಮಂತ್ರಿಗೆ ಮುಖಭಂಗ ಮಾಡಬೇಕು ಎಂಬ ದೃಷ್ಟಿಯಿಂದಲೇ ಬಿಜೆಪಿ–ಜೆಡಿಎಸ್‌ನವರು ಒಗ್ಗೂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೋದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಇದ್ದಾಗಲೂ ತಮ್ಮ ಪಕ್ಷದ (ಕಾಂಗ್ರೆಸ್) ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಿರಲಿಲ್ಲ. ಈ ಬಾರಿ ಬಿಜೆಪಿ–ಜೆಡಿಎಸ್‌ ಒಂದಾಗಿದೆ. ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಹಾಗೂ ಇತ್ತೀಚಿನ ವರ್ಷಗಳಲ್ಲಿ ಜೊತೆಗೇ ಗುರುಸಿಕೊಂಡಿದ್ದ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದು ತೊಡೆ ತಟ್ಟಿರುವುದು ಮುಖ್ಯಮಂತ್ರಿಗೆ ಸವಾಲು ಹೆಚ್ಚಾಗುವಂತೆ ಮಾಡಿದೆ! ಚಾಮುಂಡೇಶ್ವರಿ ಪಿರಿಯಾಪಟ್ಟಣ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿರುವ ಒಕ್ಕಲಿಗ ಮತದಾರರ ಮನವೊಲಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT