ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಮೈಸೂರು-ಕೊಡಗು, ಚಾಮರಾಜನಗರದಲ್ಲಿ ಕಾಂಗ್ರೆಸ್‌ಗೆ ಜಯ ಖಚಿತ: ಸಿಎಂ

Published 24 ಮಾರ್ಚ್ 2024, 12:35 IST
Last Updated 24 ಮಾರ್ಚ್ 2024, 12:35 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲುವುದು ಖಚಿತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮೂರು ಜಿಲ್ಲೆಗಳ ವ್ಯಾಪ್ತಿಯ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ ಮಟ್ಟದ ಮುಖಂಡರು, ಬೋರ್ಡ್ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಇವೆರಡೂ ಕಾಂಗ್ರೆಸ್ ಕ್ಷೇತ್ರಗಳು. ಮತ್ತೆ ನಮ್ಮ ಕೈಗೆ ಬರಲೇಬೇಕು, ಬರುತ್ತವೆ. ಹಿಂದಿನ ಬಾರಿ ಕೆಲವು ಕಾರಣಗಳಿಂದಾಗಿ ಅತ್ಯಂತ ಕಡಿಮೆ ಮತಗಳಿಂದ ನಮಗೆ ಹಿನ್ನೆಡೆಯಾಗಿತ್ತು. ಆದರೆ, ಈ ಬಾರಿ ಬಿಜೆಪಿ ಪರವಾದ ಯಾವ ಕಾರಣಗಳೂ ಇಲ್ಲ. ರಾಜ್ಯದಲ್ಲಿ ಬಿಜೆಪಿ ವಿರೋಧಿಯಾದ ಅಲೆ ಜೋರಾಗಿದೆ. ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ತುತ್ತಾಗಿದ್ದ ರಾಜ್ಯದ ಎಲ್ಲಾ ಕುಟುಂಬಗಳಿಗೆ ಕಾಂಗ್ರೆಸ್ ಗ್ಯಾರಂಟಿಗಳು ನೆಮ್ಮದಿ ತಂದಿರುವುದನ್ನು ಜನರು ಹೃದಯಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ’ ಎಂದರು.

‘ನಾವು ನಡೆಸಿರುವ ಹಲವು‌ ಸಮೀಕ್ಷೆಗಳಲ್ಲಿ ಮೈಸೂರು–ಕೊಡಗು, ಚಾಮರಾಜನಗರ ಸೇರಿದಂತೆ 20 ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ಖಚಿತ ಎಂಬ ವರದಿಗಳು ಬಂದಿವೆ. ಹೀಗಾಗಿ‌ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಪರ ಅಭೂತಪೂರ್ವ ಫಲಿತಾಂಶ ಬರಲಿದೆ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಜನರಿಗೆ ತೋರಿಸುವ ಕೆಲಸ ಮಾಡಿಲ್ಲ:

‘ಬಿಜೆಪಿಯವರಿಗೆ ಜನರ ಬಳಿ ಹೋಗಲು ಮುಖವಿಲ್ಲ. ಏಕೆಂದರೆ, 10 ವರ್ಷಗಳಲ್ಲಿ ಜನರಿಗೆ ತೋರಿಸಲು ಒಂದೇ ಒಂದು ಕೆಲಸವನ್ನೂ ಬಿಜೆಪಿ ಮಾಡಿಲ್ಲ. ಹೀಗಾಗಿ ಶ್ರೀರಾಮನ ಹೆಸರಲ್ಲಿ ಮತ ಕೇಳುವಂತಾಗಿದೆ. ಮೋದಿ ಮುಖ ತೋರಿಸಿ ಚುನಾವಣೆ ಮಾಡುತ್ತೇವೆ ಎಂದು ಹೆಣಗಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ 50 ಸಾವಿರದಿಂದ 60 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದೆ’ ಎಂದರು.

‘ಬಿಜೆಪಿ ಸುಳ್ಳುಗಳ ಮೊರೆ ಹೋಗಿದೆ. ನನ್ನ, ನಮ್ಮ ನಾಯಕರ ಹಾಗೂ ಪಕ್ಷದ ಬಗ್ಗೆ ಸರಣಿ ಸುಳ್ಳುಗಳನ್ನು ಹೇಳುತ್ತಾ, ಅವುಗಳ ಆಧಾರದಲ್ಲೇ ಚುನಾವಣೆ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಎಲ್ಲಾ ಜಾತಿ– ಧರ್ಮದವರಿಗೂ ಸಿಗುತ್ತಿದೆ. ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿ ಮತ್ತು ನರೇಂದ್ರ ಮೋದಿ ಹೇಳಿದ್ದರಲ್ಲಿ ಒಂದನ್ನೂ ಮಾಡಿಲ್ಲ’ ಎಂದು ಅವರ ಅಶ್ವಾಸನೆಗಳ ಪಟ್ಟಿಯನ್ನೇ ನೀಡಿದರು.

ದೇವೇಗೌಡರ ವಿರುದ್ಧ ವಾಗ್ದಾಳಿ:

‘ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದೆಲ್ಲಾ ಹೇಳಿದ್ದ ಎಚ್‌.ಡಿ. ದೇವೇಗೌಡರು ಈಗ ಬಿಜೆಪಿ ಜೊತೆ ಸೇರಿದ್ದಾರೆ. ಅಳಿಯ ಮಂಜುನಾಥ್ ಅವರನ್ನು ಬಿಜೆಪಿಗೆ ಕಳುಹಿಸಿದ್ದಾರೆ. ಮೊದಲು ನೀನು ಹೋಗಿರು, ಆಮೇಲೆ ನಾವೂ ಬರುತ್ತೇವೆ ಎನ್ನುವ ರೀತಿ ಕಳುಹಿಸಿದ್ದಾರೆ. ಅದಕ್ಕಾಗಿ ಅವರು ಆ ಪಕ್ಷದ ಹೆಸರಿನಲ್ಲಿರುವ ಜಾತ್ಯತೀತ ಪದವನ್ನು ತೆಗೆದುಹಾಕುವುದು ಉತ್ತಮ’ ಎಂದು ವ್ಯಂಗ್ಯವಾಡಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಲಕ್ಷ್ಮಣ, ಶಾಸಕರಾದ ಕೆ.ಹರೀಶ್‌ಗೌಡ, ಡಿ.ರವಿಶಂಕರ್‌, ದರ್ಶನ್‌ ಧ್ರುವನಾರಾಯಣ, ಅನಿಲ್ ಚಿಕ್ಕಮಾದು, ಸಿ.ಪುಟ್ಟರಂಗಶೆಟ್ಟಿ, ಎಚ್‌.ಎಂ. ಗಣೇಶ್‌ಪ್ರಸಾದ್, ಎ.ಆರ್.ಕೃಷ್ಣಮೂರ್ತಿ, ಎ.ಎಸ್. ಪೊನ್ನಣ್ಣ, ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ, ಮುಡಾ ಅಧ್ಯಕ್ಷ ಕೆ.ಮರೀಗೌಡ, ‍ಪ‍ಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್‌, ನಗರ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಚಾಮರಾಜನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಮರಿಸ್ವಾಮಿ, ಮುಖಂಡರಾದ ಕಾಗಲವಾಡಿ ಶಿವಣ್ಣ, ಸಂದೇಶ್‌ ನಾಗರಾಜ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT