ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಲೆ ಇದೆ ಎಂದು ಮೈಮರೆಯುವುದು ಬೇಡ: ವಿಜಯೇಂದ್ರ

ಕಾರ್ಯಕರ್ತರಿಗೆ ಕಿವಿಮತು ಹೇಳಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ
Published 28 ಮಾರ್ಚ್ 2024, 4:38 IST
Last Updated 28 ಮಾರ್ಚ್ 2024, 4:38 IST
ಅಕ್ಷರ ಗಾತ್ರ

ಮಡಿಕೇರಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಕೊಡಗಿಗೆ ಬಂದ ಬಿ.ವೈ.ವಿಜಯೇಂದ್ರ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದರು. ಜೊತೆಗೆ, ‘ಮೋದಿ ಅಲೆ’ ಇದೆ ಎಂದು ಮೈಮರೆಯುವುದು ಬೇಡ ಎಂದು ಹೇಳುವ ಮೂಲಕ ಮುಂಬರುವ ಲೋಕಸಭಾ ಚುನಾವಣೆ ಕೊಡಗು ಜಿಲ್ಲೆಯ ಕಾರ್ಯಕರ್ತರಿಗೆ ಅಷ್ಟು ಸುಲಭವಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದರು.

ಇಲ್ಲಿನ ಕ್ರಿಸ್ಟಲ್‌ಕೋರ್ಟ್‌ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇವಲ ಒಂದು ಜಾತಿಗೆ ಸೀಮಿತರಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ಒಂದು ರೂಪಾಯಿಯನ್ನೂ ನೀಡದ ದರಿದ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ನಮ್ಮ ತಪ್ಪಿನಿಂದಲೇ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ, ಪರಿಸ್ಥಿತಿ ಹೇಗೆ ಬದಲಾಗಿದೆ ಎಂದರೆ, ಯಾವುದೇ ಕ್ಷಣದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದರೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹತ್ತು ವರ್ಷ ಮನಮೋಹನ್‌ಸಿಂಗ್ ಅವರು ಅಧಿಕಾರದಲ್ಲಿದ್ದಾಗ ಎಷ್ಟು ಹಗರಣಗಳು ಆ ಸರ್ಕಾರವನ್ನು ಸುತ್ತಿಕೊಂಡಿದ್ದವು ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ಆದರೆ, ನರೇಂದ್ರ ಮೋದಿ ಅವರ ಈ ಹತ್ತು ವರ್ಷದಲ್ಲಿ ಒಂದೇ ಒಂದು ಕಳಂಕವೂ ಇಲ್ಲ. ವಿಶ್ವದಲ್ಲೇ ಇವರಿಗೆ ಸರಿಸಮನಾದ ನಾಯಕ ಇಲ್ಲ. ಇವರ ಜನಪ್ರಿಯತೆಯೂ ಕಡಿಮೆಯಾಗಿಲ್ಲ. ಎಲ್ಲೆಡೆ ಮೋದಿ ಅಲೆ ಇದೆ ಎಂದು ಕಾರ್ಯಕರ್ತರು ಮೈಮರೆಯದೇ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಮುಂದಿನ ದಿನಗಳಲ್ಲಿ ಯೋಗಿ ಆದಿತ್ಯನಾಥ ಅವರು ಮಡಿಕೇರಿ ಭಾಗದಲ್ಲಿ ಹಾಗೂ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ‌ ಎಂದರು.

ಬಿಜೆಪಿಯ ಹಿರಿಯ ಮುಖಂಡರಾದ ಎಸ್.ಎ.ರಾಮದಾಸ್, ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಸುಜಾ ಕುಶಾಲಪ್ಪ, ಮೇದಪ್ಪ, ಸುನಿಲ್ ಸುಬ್ರಹ್ಮಣ್ಯ, ರಾಬಿನ್ ದೇವಯ್ಯ. ಉದಯಕುಮಾರ್ ಶೆಟ್ಟಿ, ರೀನಾ ಪ್ರಕಾಶ್ ಭಾಗವಹಿಸಿದ್ದರು. ಸಾವಿರಕ್ಕೂ ಅಧಿಕ ಕಾರ್ಯಕರ್ತರು ಇದ್ದರು.

ಮಡಿಕೇರಿಯಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಕ್ಷದ ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು
ಮಡಿಕೇರಿಯಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಕ್ಷದ ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು
ಸಮಾವೇಶದಲ್ಲಿ ಭಾಗವಹಿಸಿದ್ದ ಜನಸ್ತೋಮ
ಸಮಾವೇಶದಲ್ಲಿ ಭಾಗವಹಿಸಿದ್ದ ಜನಸ್ತೋಮ

ಸಮಾವೇಶದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗಿ ವೀರಸೇನಾನಿಗಳು, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳಿಗೆ ಗೌರವ ಸಮರ್ಪಣೆ ಹಲವು ಹಿರಿಯ ಮುಖಂಡರು ಭಾಗಿ

ಮೋದಿ ಅವರ ಸಾಧನೆಯನ್ನು ಪ್ರತಿ ಮತದಾರರಿಗೆ ತಲುಪಿಸಬೇಕು. ಕೇಂದ್ರ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ.‌ ಪ್ರತಿ ಮನೆಯಲ್ಲು ಒಬ್ಬರಲ್ಲ ಒಬ್ಬರೂ ಕೇಂದ್ರ ಸರ್ಕಾರದ ಫಲಾನುಭವಿಗಳಿದ್ದಾರೆ.

-ನಾಪಂಡ ರವಿ‌‌ಕಾಳಪ್ಪ ಬಿಜೆಪಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ.

ಸೋಲನ್ನು ಒಪ್ಪಿಕೊಳ್ಳುವುದಿಲ್ಲ; ಸಂಸದ ಪ್ರತಾಪ ಸಿಂಹ

ಸಂಸದ ಪ್ರತಾಪಸಿಂಹ ಅವರು ತಮ್ಮ ಭಾಷಣವನ್ನು ಅಟಲ್ ಬಿಹಾರಿ ವಾಜಪೇಯಿ ಅವರ ‘ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಹೊಸ ಗೀತೆಯನ್ನು ಹಾಡುತ್ತೇವೆ’ ಎಂಬ ಕವಿತೆಯನ್ನು ವಾಚಿಸುವ ಮೂಲಕ ಆರಂಭಿಸಿ ಗಮನ ಸೆಳೆದರು. ಜೊತೆಗೆ ‘ಇದು ನನ್ನ ವಿದಾಯದ ಸಭೆಯೂ ಅಲ್ಲ’ ಎಂದರು. ‘ನನಗೆ ತೋರಿದ ಪ್ರೀತಿ ವಿಶ್ವಾಸವನ್ನು ಯದುವೀರ್ ಅವರಿಗೂ ತೋರಬೇಕು. ಗೆಲುವಿನ ಅಂತರ ಒಂದು ಲಕ್ಷಕ್ಕೆ ಒಂದು ಮತವೂ ಕಡಿಮೆಯಾಗದಂತಹ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಮನವಿ ಮಾಡಿದರು. ‘ಕೆಲಸದಲ್ಲಿ ಯಾರೂ ನನಗೆ ಸವಾಲೆಸೆಯುವಂತಿಲ್ಲ’ ಎಂದು ಹೇಳಿ ತಾವು ಸಂಸದರಾಗಿದ್ದಾಗ ಮಾಡಿದ ಕೆಲಸಗಳನ್ನು ಸವಿಸ್ತಾರವಾಗಿ ತಿಳಿಸಿದರು. ಜೊತೆಗೆ ‘ನಾನು ಆರಂಭಿಸಿರುವ ಕೆಲಸ ನಿಲ್ಲದೇ ಅದನ್ನು ಯದುವೀರ್ ಮುಂದುವರಿಸುತ್ತಾರೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದರು. ‘ನಾನು ಸಂಸದನಾಗದೇ ಹೋದರೂ ಕ್ಷೇತ್ರ ಪುನರ್ ವಿಂಗಡನೆ ವೇಳೆ‌ ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರಕ್ಕೆ ಒತ್ತಾಯಿಸುವೆ’ ಎಂದು ‍‍ಪುನರುಚ್ಚರಿಸಿದರು.

ಪ್ರತಾಪಸಿಂಹ ಅವರ ಸಲಹೆ ಸಹಕಾರ ಪಡೆಯುವೆ; ಯದುವೀರ್

ಮೈಸೂರಿನ ಅಭಿವೃದ್ಧಿಯಲ್ಲಿ ಸಂಸದ ಪ್ರತಾಪಸಿಂಹ ಅವರು ಹೆಸರು ಶಾಶ್ವತ. ಮುಂದೆಯೂ ಅಭಿವೃದ್ಧಿಯಲ್ಲಿ ಅವರ ಸಲಹೆ ಸಹಕಾರ ಪಡೆಯುವೆ ಎಂದು ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಎಲ್ಲರಿಗೂ ಅರಮನೆಗೆ ದಸರೆಗೆ ಸ್ವಾಗತ. ತಮ್ಮ ಕೆಲಸ ಕಾರ್ಯಗಳು ಆಗಬೇಕೇಂದರೆ ಅದಕ್ಕೆ ಮಡಿಕೇರಿ ಮತ್ತು ಮೈಸೂರಿನಲ್ಲಿ ಸಂಸದರ ಕಚೇರಿ ಇರುತ್ತದೆ. ಅದು ಕಾರ್ಯಕರ್ತರ ಕಚೇರಿಯೂ ಆಗಿರುತ್ತದೆ ಎಂದರು. ಇದು ದೇಶದ ವಿಚಾರದಲ್ಲಿ ನಡೆಯುವ ಚುನಾವಣೆಯೇ ಹೊರತು ಕೇವಲ‌ ಮೈಸೂರು – ಕೊಡಗಿಗೆ ಮಾತ್ರ ಸಂಬಂಧಿಸಿದ್ದಲ್ಲ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT