ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾ ಭೇಟಿ ನಿರಾಕರಣೆ ಮೂಲಕ ನನ್ನ ಸ್ಪರ್ಧೆಗೆ ವರಿಷ್ಠರ ಗ್ರೀನ್ ಸಿಗ್ನಲ್: ಈಶ್ವರಪ್ಪ

Published 4 ಏಪ್ರಿಲ್ 2024, 10:06 IST
Last Updated 4 ಏಪ್ರಿಲ್ 2024, 10:06 IST
ಅಕ್ಷರ ಗಾತ್ರ

ಶಿವಮೊಗ್ಗ: 'ದೆಹಲಿಯಲ್ಲಿ ತಮಗೆ ಭೇಟಿ ನಿರಾಕರಿಸುವ‌ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಆಗಿ ನನ್ನ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ' ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ದೆಹಲಿಗೆ ಕರೆದಾಗ ಅವರಿಗೆ ಗೌರವಕೊಟ್ಟು ಹೋಗಿದ್ದೆನು. ಆದರೆ, ಅವರು ಭೇಟೆಯಾಗದೆ ನಾನು ಸ್ಪರ್ಧೆ ಮಾಡುವುದಕ್ಕೆ ಅಸ್ತು ಎಂಬ ಸಂದೇಶ ನೀಡಿದ್ದಾರೆ ಎಂದರು.

ಅಮಿತ್ ಶಾ ಮನೆಯಲ್ಲಿ ಬುಧವಾರ ರಾತ್ರಿ ಅವರ ಭೇಟಿಗೆ ಸೂಚಿಸಲಾಗಿತ್ತು. ಕೊನೆಯ ಗಳಿಗೆಯಲ್ಲಿ ಭೇಟಿಯ ಅವಶ್ಯಕತೆ ಇಲ್ಲ ಎಂದು ಅಮಿತ್ ಶಾ ಹೇಳಿರುವುದಾಗಿ ಅವರ ಕಚೇರಿಯ ಸಿಬ್ಬಂದಿ ತಿಳಿಸಿದರು. ಅದರ ಅರ್ಥ ನೀನು ಶಿವಮೊಗ್ಗಕ್ಕೆ ವಾಪಸ್‌ ಹೋಗು, ಅಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಾ ಎಂಬುದೇ ಆಗಿತ್ತು. ಸ್ವತಃ ಪಕ್ಷದ ವರಿಷ್ಠರೇ ಸಂದೇಶವನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.

ಅಮಿತ್ ಶಾ ಅವರು ನನಗೆ ಕರೆ ಮಾಡಿದಾಗ ನನ್ನ ಸ್ಪರ್ಧೆಯ ಸ್ಪಷ್ಟ ಉದ್ದೇಶ ಅವರಿಗೆ ತಿಳಿಸಿದ್ದೇನೆ. ರಾಜ್ಯದಲ್ಲಿ ಬಿಜೆಪಿಯ ಶುದ್ಧೀಕರಣಕ್ಕಾಗಿ ಸ್ಪರ್ಧೆ ಎಂದು ಹೇಳಿದ್ದೆ. ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣದ ವಿರುದ್ಧ ನಾನು ಆಕ್ಷೇಪಿಸಿದ್ದೆನು. ಆಗ ನನ್ನ ಪ್ರಶ್ನೆಗೆ ಅಮಿತ್ ಶಾ ಅವರ ಬಳಿ ಯಾವುದೇ ಉತ್ತರ ಇರಲಿಲ್ಲ. ಹೀಗಾಗಿಯೇ ಅವರು ನನಗೆ ಭೇಟಿಗೆ ಅವಕಾಶ ನೀಡದೇ ಹೊರಡು ಎಂದು ಹೇಳಿರಬಹುದು.

ಅಮಿತ್‌ ಶಾ ಅವರ ನಿರ್ಣಯವನ್ನು ಸ್ವಾಗತಿಸುವೆ. ಅವರು ಭೇಟಿಯಾಗಿದ್ದರೆ ಅವರಿಗೆ ಈ ಎಲ್ಲ ವಿಷಯವನ್ನು ಪ್ರಸ್ತಾಪ ಮಾಡುವವನಿದ್ದೆ. ಆದರೆ, ಅವರು ಭೇಟಿಯಾಗಲಿಲ್ಲ. ಇದು ನನ್ನ ಸ್ಪರ್ಧೆಗೆ ಭಗವಂತನೇ ಕೃಪೆ ತೋರಿದ್ದಾನೆ. ಅಮಿತ್‌ ಶಾ, ನರೇಂದ್ರ ಮೋದಿ ಅಪೇಕ್ಷೆಯಂತೆ ನಾನು ಸ್ಪರ್ಧೆ ಮಾಡಿ, ಗೆದ್ದು ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಇ.ವಿಶ್ವಾಸ್‌, ಸುವರ್ಣಾ ಶಂಕರ್‌, ಆರ್.ಕೆ.ಪ್ರಕಾಶ್, ಲಕ್ಷ್ಮಿ ನಾಯಕ್, ರಮೇಶ್, ರಾಜು, ಶಂಕರ್ ನಾಯ್ಕ್ , ಭೂಪಾಲ್ , ಶ್ರೀಕಾಂತ್, ಜಾಧವ್ , ಉಮಾ ಮೂರ್ತಿ, ಕಾಚಿನಕಟ್ಟೆ ಸತ್ಯನಾರಾಯಣ, ಆರತಿ ಅ.ಮಾ.ಪ್ರಕಾಶ್, ಮಹಾಲಿಂಗಶಾಸ್ತ್ರಿ, ಶ್ರೀಪಾಲ್, ಅನಿತಾ, ಸತೀಶ್, ರೇಖಾ, ಲಕ್ಷ್ಮೀದೇವಿ, ರಾಧಾ ರಾಮಚಂದ್ರ, ಚಿದಾನಂದ್, ಮಹೇಶ್ ಇದ್ದರು.

'ಮೋದಿ ಫೋಟೊ ರಾಘವೇಂದ್ರ ಮನೆ ಆಸ್ತಿ ಅಲ್ಲ'
'ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ನರೇಂದ್ರ ಮೋದಿ ಪೋಟೋ ಬಳಸಿಕೊಳ್ಳಬಾರದು ಎಂದು ಹೇಳಲು ಮೋದಿ ಏನೂ ರಾಘವೇಂದ್ರ ಅವರ ಮನೆ ಆಸ್ತಿ ಅಲ್ಲ. ನರೇಂದ್ರ ಮೋದಿ ವಿಶ್ವ ನಾಯಕ, ಅವರನ್ನು ನಾನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ನನ್ನ ಕಡಿದರೂ ನಾನು ನರೇಂದ್ರ ಮೋದಿ ಅವರನ್ನು ಬಿಡಲ್ಲ' ಎಂದು ಈಶ್ವರಪ್ಪ ಹೇಳಿದರು. 'ಬಿ.ವೈ.ವಿಜಯೇಂದ್ರ ಅವರು ಈಶ್ವರಪ್ಪ ಅವರ ಮನವೊಲಿಸಲಾಗುವುದು ಎಂದು ಹೇಳಿ ಎಲ್ಲರನ್ನೂ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಯಾರೂ ಸಂಧಾನಕ್ಕೆ ಬರೊಲ್ಲ. ವಿಜಯೇಂದ್ರಗೆ ಸಹೋದರನ ಸೋಲಿನ ಭೀತಿ‌ ಉಂಟಾಗಿದೆ. ಹೀಗಾಗಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ಷಡ್ಯಂತ್ರ ಮಾಡಿಯೇ ಅಭ್ಯಾಸ. ಮತ್ತೊಮ್ಮೆ ಅವರು ಈಶ್ವರಪ್ಪನವರನ್ನು ಸಮಾಧಾನಗೊಳಿಸಲಾಗದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT