ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಪ್ರಾಯೋಗಿಕವಾಗಿ ನೋಡಬೇಕು: ನಟ ಶಿವರಾಜ್‌ಕುಮಾರ್‌

Published 21 ಮಾರ್ಚ್ 2024, 14:14 IST
Last Updated 21 ಮಾರ್ಚ್ 2024, 14:14 IST
ಅಕ್ಷರ ಗಾತ್ರ

ಕುಂದಾಪುರ: 10 ವರ್ಷಗಳಲ್ಲಿ ಸಾಕಷ್ಟು ಯುವ ಮತದಾರರು ಬಂದಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ಹೊಸ ಹೊಸ ಯೋಚನೆಗಳು ಮತದಾರರಲ್ಲಿ ಇರುವುದರಿಂದ ಪ್ರಾಯೋಗಿಕವಾಗಿ ನೋಡುವ ಮನೋಭಾವ ರೂಢಿಸಿಕೊಂಡಿದ್ದಾರೆ ಎಂದು ನಟ ಶಿವ ರಾಜ್‌ಕುಮಾರ್‌ ಹೇಳಿದರು.

ಇಲ್ಲಿಗೆ ಸಮೀಪದ ವಂಡ್ಸೆ ನೆಂಪುವಿನಲ್ಲಿ ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರ ಮನೆಯಲ್ಲಿ ಗುರುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವ ರಾಜ್‌ಕುಮಾರ್‌ ಅವರ ಪರವಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಇರುವ ಸಮಸ್ಯೆ ಬಗ್ಗೆ ಜನರಿಗೆ ಅರಿವು ಇದೆ. 10 ವರ್ಷಗಳಲ್ಲಿ ಪರಿಹಾರವಾಗದೆ ಇರುವ ಅನೇಕ ಸಮಸ್ಯೆಗಳಿಂದಾಗಿ ಮತದಾರರು ಪರ್ಯಾಯ ಪಕ್ಷದ ಕಡೆ ಆಕರ್ಷಿತರಾಗಿದ್ದಾರೆ.  ಭರವಸೆಗಳನ್ನು ನೀಡುವುದು ಮುಖ್ಯವಲ್ಲ ಅದನ್ನು ಈಡೇರಿಸುವುದು ಮುಖ್ಯ ಎಂದರು.

ಪತ್ನಿ ಗೀತಾ ಅವರ ಪರವಾಗಿ ಚಿತ್ರರಂಗದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಸಿನಿಮಾ ಕ್ಷೇತ್ರದ ಹೆಚ್ಚಿನವರು ಬೆಂಬಲಿಸುವ ವಿಶ್ವಾಸವಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸಮಯ ನೀಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಸಿನಿಮಾ ಶೂಟಿಂಗ್ ಹೊಂದಾಣಿಕೆ ಮಾಡಿಕೊಂಡು ಶೇ 85ಕ್ಕಿಂತಲೂ ಹೆಚ್ಚಿನ ಅವಧಿ ಕ್ಷೇತ್ರದಲ್ಲಿ ಕಳೆಯುತ್ತೇನೆ ಎಂದರು.

ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಜೊತೆ ನಮ್ಮ ಕುಟುಂಬಕ್ಕೆ ಬಹಳ ನಂಟಿದೆ. ಅಪ್ಪಾಜಿ ಅವರ ಬಳಿಕ ಕರಾವಳಿ ಭಾಗದಲ್ಲಿ ಹೆಚ್ಚು ಚಿತ್ರಗಳ ಶೂಟಿಂಗ್ ಮಾಡಿದ ನಟ ನಾನು. ಇಲ್ಲಿನ ಕಾಣೆ, ಅಂಜಲ್, ಬಂಗ್ಡೆ ಮೀನುಗಳ ಖಾದ್ಯ ಇಷ್ಟ. ಒಂದು ಬಾರಿ ಗೀತಾ ಅವರಿಗೆ ಈ ಕ್ಷೇತ್ರದ ಸೇವೆ ಮಾಡಲು ಅವಕಾಶ ನೀಡಿ ಎಂದು ಅವರು ಮನವಿ ಮಾಡಿದರು.

ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಮಾತನಾಡಿ, ಕೊಲ್ಲೂರು ಮೂಕಾಂಬಿಕಾ ದೇವಿ ಆಶೀರ್ವಾದ ಬೇಡಿಕೊಂಡು ಬಂದಿದ್ದೇನೆ. ಈ ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದೇನೆ. ತಂದೆ ಬಂಗಾರಪ್ಪ ಹಾಕಿಕೊಟ್ಟ ಹಾದಿಯಲ್ಲಿ ಮುನ್ನೆಡೆಯಲು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ ಅವರು ನನ್ನೊಂದಿಗೆ ಜೊತೆಯಾಗಿದ್ದು, ಆನೆ ಬಲ ನೀಡುತ್ತಾರೆ ಎನ್ನುವ ಭರವಸೆ ಇದೆ ಎಂದರು.

ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಎಸ್‌. ಬಂಗಾರಪ್ಪ ಅವರು ಬಿಜೆಪಿ ಪಕ್ಷಕ್ಕೆ ಬಂದ ಪರಿಣಾಮ ಕರಾವಳಿ ಭಾಗದಲ್ಲಿ ಬಿಜೆಪಿ ಬಲವಾಗಿದೆ ಎನ್ನುವ ಸತ್ಯ ಮರೆಮಾಚಲು ಸಾಧ್ಯವಿಲ್ಲ. ಗೀತಾ ಅವರು ಸಂಸದೆಯಾದಲ್ಲಿ ಬೈಂದೂರಿನ ಜನರ ಧ್ವನಿಯಾಗಿ ಕೆಲಸ ಮಾಡುತ್ತಾರೆ. ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿಯವರೇ, ನಿಜ ಜೀವನದಲ್ಲಿ ಹಿಂದುತ್ವದ ಪ್ರಬಲ ದ್ವೇಷಿಗಳಾಗಿದ್ದಾರೆ. ಹಿಂದೂ ಧರ್ಮ ಇನ್ನೊಂದು ಧರ್ಮವನ್ನು ದ್ವೇಷಿಸಲು ಹೇಳಿಲ್ಲ, ಎಲ್ಲರನ್ನೂ ಪ್ರೀತಿಸುವಂತೆ ಹೇಳಿತ್ತು ಎಂದರು.

ರಾಜ್ಯದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಪಕ್ಷಾತೀತವಾಗಿ ಬಡವರನ್ನು ಸೇರುತ್ತಿವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಜಾರಿಗೊಳಿಸುವ ಮೂಲಕ ಭರವಸೆ ಈಡೇರಿಸಿದೆ. 10 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಡವರಿಗೆ ಯಾವ ಗ್ಯಾರಂಟಿ ನೀಡಿದೆ ಎನ್ನುವುದನ್ನು ತಿಳಿಸಬೇಕು. ಭ್ರಷ್ಟಾಚಾರದ ಹಣದಲ್ಲಿ ಸಂಸದರಾಗಿರುವ ಬಿ.ವೈ. ರಾಘವೇಂದ್ರ ಅವರು 10 ವರ್ಷಗಳಲ್ಲಿ ಮಾಡಿರುವ ಯಾವುದಾದರೂ ಒಂದು ಜನಪರ ಯೋಜನೆ ತಿಳಿಸಲಿ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಇಲ್ಲಿನ ಸಂಸದರು ಆಯ್ಕೆಯಾಗಿ ಹೋದ ನಂತರ ಈ ಕಡೆ ತಲೆ ಹಾಕುವುದಿಲ್ಲ. ಚುನಾವಣೆ ಸಂದರ್ಭ ಮತದಾರರ ಮುಂದೆ ಪ್ರತ್ಯಕ್ಷರಾಗುತ್ತಾರೆ. ದುಡ್ಡು, ರೆಸಾರ್ಟ್, ಹೋಟೆಲ್, ಜಮೀನು ಖರೀದಿ ಮಾಡುವುದೇ ಮೊದಲ ಉದ್ದೇಶವಾಗಿರುತ್ತದೆ ಎಂದರು.

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಬೈಂದೂರು ವಿಧಾನಸಭಾ ಕ್ಷೇತ್ರದ ಕೊಲ್ಲೂರಿನಿಂದ ಮಾ.28ರಿಂದ ಬಹಿರಂಗ ಚುನಾವಣಾ ಪ್ರಚಾರ ಯಾತ್ರೆ ಪ್ರಾರಂಭಿಸುತ್ತೇವೆ. 4 ಗ್ರಾಮಗಳಲ್ಲಿ ಪಾದಯಾತ್ರೆ ಮಾಡುತ್ತೇವೆ. ನಟ ಶಿವರಾಜ್‌ಕುಮಾರ್‌, ಇತರ ಮುಖಂಡರು ಪಾಲ್ಗೊಳ್ಳುತ್ತಾರೆ. ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ನಾಡಿನ ಜನರಿಗೆ ನೀಡಿರುವ ಕೊಡುಗೆಗಳ ಆಧಾರದಲ್ಲಿ ಮತಯಾಚನೆ ಮಾಡುತ್ತೇವೆ ಎಂದರು.

ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಕಾಂಗ್ರೆಸ್ಸಿಗ ಎನ್ನುವ ಕಾರಣದಿಂದ ನನಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಟಿಕೆಟ್ ನೀಡಿದ್ದರೆ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದೆ. ರಾಜಕೀಯ ಬೇಡ ಎಂದು ಸುಮ್ಮನಿದ್ದ ನನಗೆ ಮಧು ಬಂಗಾರಪ್ಪ ಒತ್ತಾಯ ಮಾಡಿ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನಿಸಿದ್ದರು. ಜಗನ್ಮಾತೆ ಮೂಕಾಂಬಿಕೆ ಪ್ರೇರಣೆಯಿಂದ ಕಾಂಗ್ರೆಸ್ ಸೇರಿದ್ದೇನೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಕೆಪಿಸಿಸಿ ವಕ್ತಾರ ಅನಿಲ್ ಶಿವಮೊಗ್ಗ, ಪ್ರಮುಖರಾದ ಡಿ.ಆರ್. ರಾಜು ಕಾರ್ಕಳ, ರಾಜು ಎಸ್‌.ಪೂಜಾರಿ ಬೈಂದೂರು, ಪ್ರದೀಪ್‌ ಕುಮಾರ್‌ ಶೆಟ್ಟಿ ಗುಡಿಬೆಟ್ಟು, ಪ್ರಸನ್ನ ಕುಮಾರ್‌ ಶೆಟ್ಟಿ ಕೆರಾಡಿ, ಸಂಪಿಗೇಡಿ ಸಂಜೀವ ಶೆಟ್ಟಿ, ರಘುರಾಮ ಶೆಟ್ಟಿ ಬಿಜೂರು, ವಂಡಬಳ್ಳಿ ಜಯರಾಮ್ ಶೆಟ್ಟಿ, ಹರೀಶ್ ತೋಳಾರ್ ಕೊಲ್ಲೂರು, ಪಡುಮನೆ ಮಂಜುನಾಥ ಪೂಜಾರಿ ಕಟ್‌ಬೇಲ್ತೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT