ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಕೊನೆ ಕಸರತ್ತು: ಅದೃಷ್ಟ ಯಾರಿಗೆ?

Published 26 ಏಪ್ರಿಲ್ 2024, 4:21 IST
Last Updated 26 ಏಪ್ರಿಲ್ 2024, 4:21 IST
ಅಕ್ಷರ ಗಾತ್ರ

ತುಮಕೂರು: ತಮ್ಮತ್ತ ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ಕೊನೆ ಕ್ಷಣದ ಕಸರತ್ತು ನಡೆಸಿದರು. ಮನೆಗಳಿಗೆ ಭೇಟಿನೀಡಿ ಮನವೊಲಿಸಿದರು. ಮುನಿಸಿಕೊಂಡಿದ್ದ ಮುಖಂಡರು, ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ನಡುವೆ ಹಣಾಹಣಿ ಏರ್ಪಟ್ಟಿದೆ. ಇಬ್ಬರೂ ಗೆಲವಿಗಾಗಿ ಅಂತಿಮ ಹಂತದ ಕಸರತ್ತಿನಲ್ಲಿ ತೊಡಗಿದ್ದರು. ಕೊನೆಯ ಎರಡು ದಿನಗಳಲ್ಲಿ ನಡೆಯುವ ಕರಾಮತ್ತು ಫಲಿತಾಂಶದ ದಿಕ್ಕನ್ನೇ ಬದಲಿಸಲಿದೆ. ಬುಧವಾರ ಹಾಗೂ ಗುರುವಾರ ನಡೆದಿರುವ ತಂತ್ರಗಾರಿಕೆ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ.

ಪಕ್ಷಗಳ ಮುಖಂಡರು, ಕಾರ್ಯಕರ್ತರು ಮನೆಗಳಿಗೆ ಭೇಟಿನೀಡಿ ಪ್ರಚಾರ ನಡೆಸಿದರೆ, ಮುದ್ದಹನುಮೇಗೌಡ ಹಾಗೂ ಸೋಮಣ್ಣ ಅವರು ಕೊನೆಯ ಅವಕಾಶ ಬಳಸಿಕೊಂಡು ಮತದಾರರನ್ನು ‘ಮುಟ್ಟುವ’ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದರು. ಯಾವ ಭಾಗದಲ್ಲಿ ಎಷ್ಟು ಮತಗಳು ಬರಬಹುದು, ಯಾವ ತಾಲ್ಲೂಕು ಕೈ ಹಿಡಿದು ಮೇಲೆತ್ತಲಿದೆ, ಎಲ್ಲಿ ಕೈ ಕೋಡಲಿದೆ, ಯಾವ ನಾಯಕರು ಕೈ ಕೊಟ್ಟಿದ್ದಾರೆ, ಎಲ್ಲಿ ಮತಬುಟ್ಟಿ ಏರುಪೇರಾಗಬಹುದು, ಅದನ್ನು ಸರಿಪಡಿಸಿಕೊಳ್ಳಲು ಏನೆಲ್ಲ ಮಾಡಬೇಕು ಎಂಬ ಬಗ್ಗೆ ಕಾರ್ಯತಂತ್ರ ರೂಪಿಸಿದರು. ಕೆಲವು ಮುಖಂಡರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಇಲ್ಲವೆ ತಮ್ಮ ಬೆಂಬಲಿಗರನ್ನು ಕಳುಹಿಸಿ ಮನವೊಲಿಸಿ, ಭರವಸೆ ಪಡೆದುಕೊಂಡರು.

ಪ್ರಮುಖವಾಗಿ ಯಾವ ಭಾಗದಲ್ಲಿ ಕಡಿಮೆ ಮತಗಳು ಬರಬಹುದು ಎಂಬ ಪಟ್ಟಿಯನ್ನು ಇಟ್ಟುಕೊಂಡು, ಅಂತಹ ಪ್ರದೇಶಗಳನ್ನು ಕೇಂದ್ರೀಕರಿಸಿದರು. ಮುದ್ದಹನುಮೇಗೌಡ ಅವರು ‘ಇದೊಂದು ಬಾರಿ ಅವಕಾಶ ಮಾಡಿಕೊಡಿ. ನಿಮ್ಮ ಜತೆಗೆ ನಾನಿರುತ್ತೇನೆ. ತಪ್ಪಾಗಿದ್ದರೆ ಕ್ಷಮಿಸಿ’ ಎಂದು ಕೇಳಿಕೊಂಡಿದ್ದಾರೆ. ಸೋಮಣ್ಣ ಸಹ ಇಂತಹುದೇ ಪ್ರಯತ್ನ ಮಾಡಿದರು. ‘ಜಿಲ್ಲೆಯಲ್ಲಿ ನೆಲೆ ನಿಲ್ಲುವಂತೆ ಮಾಡಿ. ನಿಮ್ಮ ಕೆಲಸ ಮಾಡಿಕೊಡುತ್ತೇನೆ’ ಎಂದು ಮನವೊಲಿಸುವ ಪ್ರಯತ್ನ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಕ್ಷೇತ್ರದಲ್ಲಿ ತೀವ್ರ ಹಣಾಹಣಿ ಇರುವುದರಿಂದ ಪ್ರತಿ ಮತವೂ ಮುಖ್ಯವಾಗಿದ್ದು, ಕಡಿಮೆ ಮತಗಳು ಬರುವಂತಹ ಪ್ರದೇಶಗಳನ್ನು ಕೇಂದ್ರೀಕರಿಸಿದ್ದರು. ಆದರೆ ಪ್ರಮುಖವಾಗಿ ಇಬ್ಬರಿಗೂ ಒಳೇಟು ಜೋರಾಗಿಯೇ ತಟ್ಟಿದೆ. ಕಳೆದ ಕೆಲವು ದಿನಗಳಿಂದ ಈ ವಿಚಾರ ಚರ್ಚೆಯಾಗುತ್ತಿದ್ದು, ಮೂರ್ನಾಲ್ಕು ದಿನಗಳಿಂದ ಮುನ್ನೆಲೆಗೆ ಬಂದಿದೆ. ಪ್ರಮುಖ ನಾಯಕರೇ ಕೈ ಕೊಟ್ಟಿರುವುದು, ಆಂತರಿಕವಾಗಿ ‘ಸಂದೇಶ’ ರವಾನಿಸಿರುವುದು, ಒಳ ಒಪ್ಪಂದಗಳು ಇಬ್ಬರೂ ನಾಯಕರ ತಲೆ ಬಿಸಿಗೆ ಕಾರಣವಾಗಿದೆ.

ಎಸ್.ಪಿ.ಮುದ್ದಹನುಮೇಗೌಡ
ಎಸ್.ಪಿ.ಮುದ್ದಹನುಮೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT