ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಶಮನವಾಗದ ಕಾಂಗ್ರೆಸ್‌ನೊಳಗಿನ ಮುನಿಸು

‘ಗಜಕೇಸರಿ ಯೋಗ’ ಹೇಳಿಕೆ; ಸಂಯುಕ್ತಾ–ವೀಣಾ ಆರೋಪ, ಪ್ರತ್ಯಾರೋಪ
Published 27 ಮಾರ್ಚ್ 2024, 4:36 IST
Last Updated 27 ಮಾರ್ಚ್ 2024, 4:36 IST
ಅಕ್ಷರ ಗಾತ್ರ

ಬಾಗಲಕೋಟೆ: ಲೋಕಸಭಾ ಚುನಾವಣೆ ಟಿಕೆಟ್ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಮುನಿಸು ಶಮನವಾಗುವ ಬದಲು ಹೆಚ್ಚಾಗುತ್ತಿದೆ.

ಕಾಂಗ್ರೆಸ್‌ ಅಭ್ಯರ್ಥಿ ಎಂದು ಘೋಷಣೆಯಾಗಿರುವ ಸಂಯುಕ್ತಾ ಪಾಟೀಲ ಹಾಗೂ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ನಡುವೆ ಪರೋಕ್ಷವಾಗಿ ಆರೋಪ, ಪ್ರತ್ಯಾರೋಪ ನಡೆದಿದೆ.

ಟಿಕೆಟ್‌ ಘೋಷಣೆಯಾಗಿರುವ ಸಂಯುಕ್ತಾ ಪಾಟೀಲ ಆಡಿರುವ ಮಾತಿಗೆ ಟಿಕೆಟ್‌ ತಪ್ಪಿರುವ ವೀಣಾ ಕಾಶಪ್ಪನವರ ತಿರುಗೇಟು ನೀಡಿದ್ದಾರೆ. ಗಜಕೇಸರಿ ಯೋಗದ ಇಬ್ಬರ ಮಾತೂ ಚರ್ಚೆಗೆ ಕಾರಣವಾಗಿದೆ. ಅಭಿವೃದ್ಧಿ ಬಿಟ್ಟು ಗಜಕೇಸರಿ ಯೋಗದ ಬಗ್ಗೆ ಮಾತನಾಡುತ್ತಿರುವುದಕ್ಕೆ ಕೆಲವರಿಂದ ಆಕ್ಷೇಪವೂ ವ್ಯಕ್ತವಾಗಿದೆ.

ಬಾದಾಮಿಗೆ ಇತ್ತೀಚಿಗೆ ಭೇಟಿ ನೀಡಿದ್ದ ಸಂಯುಕ್ತಾ ಪಾಟೀಲ, ‘ನಾನು ಜನ್ಮ ತೆಳೆದ ಮೇಲೆಯೇ ನಮ್ಮ ತಂದೆ ಶಾಸಕರಾಗಿ ಆಯ್ಕೆಯಾದರು. ನನ್ನದು ಗಜಕೇಸರಿ ಯೋಗ. ಇದು ನನಗೆ ಬಾಗಲಕೋಟೆ ಕ್ಷೇತ್ರದಲ್ಲಿಯೂ ಜಯ ತಂದುಕೊಡಲಿದೆ. ವಿದ್ಯಾವಂತೆ, ವಕೀಲೆಯಾಗಿದ್ದೇನೆ’ ಎಂದು ಹೇಳುವ ಮೂಲಕ ಬಿಜೆಪಿ ಸೋಲಿಗೆ ಕಾರಣವಾಗಿದ್ದೇನೆ  ಎಂದಿದ್ದರು. ಇದೇ ವಿಷಯವನ್ನು ಟಿಕೆಟ್ ಕೈತಪ್ಪಿದ ವ್ಯಕ್ತಿ ಕುರಿತೂ ಕೆಲವೆಡೆ ಆಡಿದ್ದರು ಎನ್ನಲಾಗಿದೆ.

ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ವೀಣಾ ಕಾಶಪ್ಪನವರ, ‘ನಾನೂ ಗಜಕೇಸರಿಯಲ್ಲಿಯೇ ಹುಟ್ಟಿದ್ದೇನೆ. ಆದರೆ, ಅದನ್ನು ಹೇಳಿಕೊಂಡು ತಿರುಗಾಡುವುದಿಲ್ಲ. ಜನರ ಸೇವೆ ಮಾಡಬೇಕು ಎಂಬುದಷ್ಟೇ ನನ್ನ ಗುರಿಯಾಗಿದೆ. ಜನರ ಋಣ ತೀರಿಸುವ ಸಲುವಾಗಿ ಟಿಕೆಟ್‌ ಕೇಳಿದ್ದೇನೆ’ ಎಂದು ತಿರುಗೇಟು ಕೊಟ್ಟಿದ್ದರು.

ಇನ್ನೊಂದೆಡೆ ಬಹಿರಂಗ ಸಭೆಯಲ್ಲಿ ಮಾತನಾಡಿದ ವೀಣಾ ಕಾಶಪ್ಪನವರ ಪತಿ, ಶಾಸಕ ವಿಜಯಾನಂದ ಕಾಶಪ್ಪನವರ ಸಹ, ‘ನನ್ನ ಪತ್ನಿಯೂ ವಿದ್ಯಾವಂತೆ. ಆಡಳಿತದ ಅನುಭವವೂ ಇದೆ. ಆದರೂ, ಕೆಲವರು ತಾವೊಬ್ಬರೇ ವಿದ್ಯಾವಂತರು ಎಂಬಂತೆ ಬಿಂಬಿಸಿಕೊಳ್ಳುತ್ತಾರೆ’ ಎಂದು ಟೀಕೆ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.

28ರ ನಂತರವೇ ನಿರ್ಧಾರ: ಶಾಸಕ ವಿನಯ ಪಾಟೀಲ, ಅಸಮಾಧಾನಿತ ಕಾಶಪ್ಪನವರ ಕುಟುಂಬದವರನ್ನು ಸಮಾಧಾನ ಮಾಡಲು ಬಂದಿದ್ದರು. ಬೆಂಗಳೂರಿನಲ್ಲಿ ಮಾರ್ಚ್‌ 28ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಮೇಲೆಯೇ ಮುಂದಿನ ನಿರ್ಧಾರ ಎಂದು ಹೇಳುವ ಮೂಲಕ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ನಾಯಕರ ನಡುವಿನ ಮುನಿಸು ಮುಂದುವರಿದಿರುವುದು ಅವರ ಹೇಳಿಕೆಗಳಿಂದಲೇ ಗೊತ್ತಾಗುತ್ತದೆ. ಇದು ಎರಡನೇ ಹಂತದ ನಾಯಕರಿಗೂ ವಿಸ್ತರಿಸಿದ್ದು, ಅಸಮಾಧಾನ ಗುಪ್ತಗಾಮಿನಿಯಂತಿದೆ.

ವೀಣಾ ಕಾಶಪ್ಪನವರ
ವೀಣಾ ಕಾಶಪ್ಪನವರ

ಸಂಧಾನ ವಿಫಲ 28ರ ನಂತರ ಕಾಶಪ್ಪನವರ ಕುಟುಂಬದವರ ನಿರ್ಧಾರ ಗೊಂದಲದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT