ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024 | ರಾಜ್ಯದಲ್ಲಿ 2ನೇ ಹಂತದ ಚುನಾವಣೆಗೆ ಇಂದಿನಿಂದ ನಾಮಪತ್ರ

ಬಿಜೆಪಿ–ಕಾಂಗ್ರೆಸ್‌ ನೇರ ಹಣಾಹಣಿ, *ಬಂಡಾಯವಿದ್ದೆಡೆ ತ್ರಿಕೋನ ಸ್ಪರ್ಧೆ ಸಾಧ್ಯತೆ
Published 12 ಏಪ್ರಿಲ್ 2024, 0:30 IST
Last Updated 12 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದಲ್ಲಿ ಇದೇ ಏಪ್ರಿಲ್‌ 27ಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ದಿನದಿಂದ ದಿನಕ್ಕೆ ಕಾವು ಏರುತ್ತಿರುವ ಮಧ್ಯೆಯೇ ಎರಡನೇ ಹಂತದ 14 ಕ್ಷೇತ್ರಗಳಿಗೆ ಶುಕ್ರವಾರದಿಂದ (ಏ.12) ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಚುನಾವಣೆ ಘೋಷಣೆಯಾಗಿ, ಅಭ್ಯರ್ಥಿಗಳು ಆಖೈರಾದ ಬಳಿಕವೂ ಕಾಂಗ್ರೆಸ್–ಬಿಜೆಪಿಯಲ್ಲಿ ಅತೃಪ್ತಿ–ಬಂಡಾಯ ಶಮನವಾಗಿಲ್ಲ. ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಕೈತಪ್ಪಿದವರು, ಅಭ್ಯರ್ಥಿ ಜತೆ ಕಾಣಿಸಿಕೊಂಡಿಲ್ಲ. ಪ್ರಚಾರದಲ್ಲೂ ಭಾಗಿಯಾಗುತ್ತಿಲ್ಲ. ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಬಿರುಸುಗೊಳ್ಳುತ್ತಿದ್ದರೆ, ಅತೃಪ್ತರು ಒಳೇಟು ಕೊಡಲಿದ್ದಾರೆಯೇ ಎಂಬ ಆತಂಕ ನಾಯಕರಲ್ಲಿ ಮೂಡಿದೆ. ಈ ಬೆಳವಣಿಗೆಗಳ ಮಧ್ಯೆಯೇ ಎರಡನೇ ಹಂತ ಚುನಾವಣೆಗೆ ಪ್ರಕ್ರಿಯೆ ಶುರುವಾಗಲಿದೆ.

ಕರಾವಳಿಯ ಉತ್ತರ ಕನ್ನಡ, ಮಲೆನಾಡಿನ ಶಿವಮೊಗ್ಗ, ಮಧ್ಯ ಕರ್ನಾಟಕದ ದಾವಣಗೆರೆ, ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕದ ಕ್ಷೇತ್ರಗಳಲ್ಲಿ ಎರಡನೇ ಹಂತದ ಚುನಾವಣೆ ನಡೆಯುತ್ತಿದೆ. ಬಿಜೆಪಿ–ಜೆಡಿಎಸ್‌ ನಡುವೆ ಲೋಕಸಭಾ ಚುನಾವಣಾ ಮೈತ್ರಿಯಾಗಿ ಕ್ಷೇತ್ರಗಳ ಹಂಚಿಕೆ ಮಾಡಿಕೊಂಡಿವೆ. ಜೆಡಿಎಸ್‌ಗೆ ಬಿಟ್ಟುಕೊಟ್ಟ ಯಾವ ಕ್ಷೇತ್ರಗಳೂ ಎರಡನೇ ಹಂತದಲ್ಲಿ ಇಲ್ಲ. ಹೀಗಾಗಿ, ಎಲ್ಲ 14 ಕ್ಷೇತ್ರಗಳಲ್ಲೂ ಕಾಂಗ್ರೆಸ್‌–ಬಿಜೆಪಿ ಮಧ್ಯೆ ನೇರ ಹಣಾಹಣಿ ಇದೆ. ಆದರೆ, ನಾಲ್ಕು ಕ್ಷೇತ್ರಗಳಲ್ಲಿ ಬಂಡಾಯದ ಕಹಳೆ ಮೊಳಗಿಸಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಹಾಗೂ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಶಿವಮೊಗ್ಗ ಹಾಗೂ ಧಾರವಾಡ ಕ್ಷೇತ್ರಗಳಲ್ಲಿ ಬಿಜೆಪಿಗೆ, ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಕಾವು ಎದುರಾಗಿದೆ.

ದಾವಣಗೆರೆಯಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿನಯ್‌ಕುಮಾರ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಘೋಷಣೆ ಮಾಡಿದ್ದಾರೆ. ಕೆಪಿಸಿಸಿ ಖಜಾಂಚಿಯೂ ಆದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ, ತೋಟಗಾರಿಕಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪತ್ನಿ ಪ್ರಭಾ ಮಲ್ಲಿಕಾರ್ಜುನ್‌ ಅವರು ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಅವರ ಎದುರು ಸೆಣಸುತ್ತಿರುವ ಅವರು ವಿನಯ್‌ ಅವರ ಬಂಡಾಯದ ಬಿಸಿ ಎದುರಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ಜಿಲ್ಲೆಯ ಹಲವು ಮಾಜಿ ಶಾಸಕರು ಮುನಿಸಿಕೊಂಡಿದ್ದಾರೆ. ಯಡಿಯೂರಪ್ಪ–ವಿಜಯೇಂದ್ರ ಅವರು ಬಂಡಾಯ ಶಮನ ಮಾಡಿದ್ದರೂ, ಭಿನ್ನಮತ ಸಂಪೂರ್ಣ ಹತೋಟಿಗೆ ಬಂದಿಲ್ಲ.

ಹಾಗೆಯೇ, ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ನಾಯಕಿ ವೀಣಾ ಕಾಶಪ್ಪನವರ್‌ ತಮ್ಮ ಸ್ಪಷ್ಟ ನಿರ್ಧಾರ ಪ್ರಕಟಿಸದೇ ಇರುವುದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲರ ತಲೆಬಿಸಿ ಹೆಚ್ಚಿಸಿದೆ. ಹಾಲಿ ಸಂಸದ, ಬಿಜೆಪಿಯ ಪಿ.ಸಿ. ಗದ್ದಿಗೌಡರ್‌ ಅವರು ಕಾಂಗ್ರೆಸ್‌ ಎದುರಾಳಿ. 

ಬಿಎಸ್‌ವೈ ತವರಿನಲ್ಲೇ ಬಂಡಾಯದ ಬೇಗೆ

ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹಾಗೂ ಅವರ ಮಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಎಲ್ಲ 28 ಕ್ಷೇತ್ರಗಳ ಗೆಲುವು ಪ್ರತಿಷ್ಠೆಯಾಗಿದ್ದರೂ, ತವರು ಕ್ಷೇತ್ರ ಶಿವಮೊಗ್ಗ ಗೆಲ್ಲುವುದು ಇಬ್ಬರಿಗೂ ಸವಾಲಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಇನ್ನೊಬ್ಬ ಪುತ್ರ, ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅಭ್ಯರ್ಥಿ. ಯಡಿಯೂರಪ್ಪ ಕುಟುಂಬದ ವಿರುದ್ಧ ಮುನಿಸಿಕೊಂಡಿರುವ ಬಿಜೆಪಿ ನಾಯಕರೂ ಆದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಕ್ಷೇತ್ರದಲ್ಲಿ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ರಾಘವೇಂದ್ರ ವಿರುದ್ಧ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದು, ಬಿರುಸಿನ ಪ್ರಚಾರವನ್ನೂ ಕೈಗೊಂಡಿದ್ದಾರೆ. ಮೊದಲ ದಿನವೇ (ಏ.12) ನಾಮಪತ್ರ ಸಲ್ಲಿಸುವುದಾಗಿಯೂ ಹೇಳಿದ್ದಾರೆ. ಪಕ್ಷದ ವರಿಷ್ಠರು ಇದುವರೆಗೂ ನಡೆಸಿದ ಮನವೊಲಿಕೆಗೆ ಅವರು ಬಗ್ಗಿಲ್ಲ. ಇದರಿಂದ ಯಡಿಯೂರಪ್ಪ ಕುಟುಂಬ ಸಾಕಷ್ಟು ಮುಜುಗರಕ್ಕೆ ಒಳಗಾಗಿದೆ. 

ಸಚಿವ ಜೋಶಿಗೆ ದಿಂಗಾಲೇಶ್ವರ ದಿಗಿಲು!

ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನಡೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಸವಾಲಾಗಿದೆ. ಗೆಲುವಿಗಾಗಿ ಲಿಂಗಾಯತ ಮತ ಬ್ಯಾಂಕ್‌ ನೆಚ್ಚಿಕೊಂಡಿರುವ ಬಿಜೆಪಿ ದಿಂಗಾಲೇಶ್ವರರ ಮನವೊಲಿಕೆಯ ಪ್ರಯತ್ನ ಮುಂದುವರಿಸಿದೆ. 

ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಶ್ರೀಗಳು ತಮ್ಮ ನಿರ್ಧಾರ ಬದಲಿಸುವವರು ಎನ್ನುವ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೆ, ಶ್ರೀಗಳ ಹಟ ಮುಂದುವರಿದಿದೆ. 

ಯಾರಿಗೆಲ್ಲ ಪ್ರತಿಷ್ಠೆ? ಏಕೆ?

ಕಾಂಗ್ರೆಸ್‌–

* ಮಲ್ಲಿಕಾರ್ಜುನ ಖರ್ಗೆ–ಎಐಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿಕೊಳ್ಳುವ ಜತೆಗೆ, ತವರು ಕ್ಷೇತ್ರ ಕಲಬುರಗಿಯಲ್ಲಿ ಅಳಿಯನ ಗೆಲುವು ಅನಿವಾರ್ಯ.

* ಸಿದ್ದರಾಮಯ್ಯ–ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಗೆಲ್ಲಿಸಿದ ಉತ್ತರ ಕರ್ನಾಟಕದ ವಿವಿಧ ಕ್ಷೇತ್ರಗಳನ್ನು ಒಳಗೊಂಡ ಲೋಕಸಭೆ ಕ್ಷೇತ್ರಗಳನ್ನೂ ಗೆಲ್ಲಿಸಿಕೊಳ್ಳಬೇಕಿದೆ.

* ಡಿ.ಕೆ. ಶಿವಕುಮಾರ್–ಕೆಪಿಸಿಸಿ ಅಧ್ಯಕ್ಷರಾಗಿ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಳ್ಳುವ ಅನಿವಾರ್ಯತೆ.

* ಸತೀಶ್‌ ಜಾರಕಿಹೊಳಿ–ಬಿಜೆಪಿಯಲ್ಲಿನ ತಮ್ಮ ಸಹೋದರರ ನಡೆ ನಿಯಂತ್ರಿಸಿ, ಪುತ್ರಿಯನ್ನು ಗೆಲ್ಲಿಸಿಕೊಳ್ಳುವ ಸವಾಲು. ಬೆಳಗಾವಿ ಅಧಿಪತ್ಯ ಉಳಿಸಿಕೊಳ್ಳುವ ಸವಾಲು

* ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ಲಕ್ಷ್ಮಿ ಹೆಬ್ಬಾಳ್ಕರ – ಬೀದರ್, ಬಾಗಲಕೋಟೆ, ಬೆಳಗಾವಿಯಲ್ಲಿ ತಮ್ಮ ಮಕ್ಕಳನ್ನು ಗೆಲ್ಲಿಸಿಕೊಂಡು ಸಚಿವ ಸ್ಥಾನ ಗಟ್ಟಿ ಮಾಡಿಕೊಳ್ಳಬೇಕಿದೆ.

........

ಬಿಜೆಪಿ–ಜೆಡಿಎಸ್‌

*ಬಿ.ವೈ.ವಿಜಯೇಂದ್ರ– ಅಧ್ಯಕ್ಷರಾದ ಬಳಿಕ ಮೊದಲ ಚುನಾವಣೆ ಮುನ್ನಡೆಸುತ್ತಿರುವ ಬಿ.ವೈ. ವಿಜಯೇಂದ್ರ ತಮ್ಮ ಸ್ವಕ್ಷೇತ್ರವೂ ಸೇರಿದಂತೆ, ಲಿಂಗಾಯತ ಮತ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿಕೊಳ್ಳಬೇಕಿದೆ.

* ಪ್ರಲ್ಹಾದ ಜೋಶಿ–ಕೇಂದ್ರ ಸಚಿವರಾಗಿ ತಮ್ಮ ಕ್ಷೇತ್ರ ಉಳಿಸಿಕೊಳ್ಳುವ ಸವಾಲು

* ಜಗದೀಶ ಶೆಟ್ಟರ್‌–ಕಾಂಗ್ರೆಸ್‌ ತೊರೆದು, ಮರಳಿ ಬಿಜೆಪಿ ಸೇರಿ ಬೆಳಗಾವಿ ಅಭ್ಯರ್ಥಿಯಾಗಿದ್ದು, ತಮ್ಮ ಸಾಮರ್ಥ್ಯ ಸಾಬೀತು ಮಾಡಬೇಕಿದೆ.

* ಬಸವರಾಜ ಬೊಮ್ಮಾಯಿ–ಮಾಜಿ ಮುಖ್ಯಮಂತ್ರಿಯಾಗಿ ತವರು ಜಿಲ್ಲೆಯಲ್ಲಿ ತಮ್ಮ ಪ್ರಭಾವ ಉಳಿಸಿಕೊಳ್ಳಬೇಕಿದೆ.

* ಎಚ್‌.ಡಿ. ಕುಮಾರಸ್ವಾಮಿ– ಹೆಚ್ಚಿನ ಸ್ಥಾನಗಳಲ್ಲಿ ಮಿತ್ರ ಪಕ್ಷಗಳ ಗೆಲುವಿಗೆ ಸಹಕರಿಸುವ ಮೂಲಕ ಉತ್ತರ ಕರ್ನಾಟದಲ್ಲೂ ಜೆಡಿಎಸ್‌ಗೆ ಗಟ್ಟಿ ನೆಲೆ ಇದೆ ಎಂದು ಸಾಬೀತು ಮಾಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT