ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024 | ನಾನು ಒಕ್ಕಲಿಗ: ಜಾತಿ ಪ್ರಮಾಣಪತ್ರ ಪ್ರದರ್ಶಿಸಿದ ಲಕ್ಷ್ಮಣ್‌

Published 28 ಮಾರ್ಚ್ 2024, 13:14 IST
Last Updated 28 ಮಾರ್ಚ್ 2024, 13:14 IST
ಅಕ್ಷರ ಗಾತ್ರ

ಮೈಸೂರು: ನಾನು ಒಕ್ಕಲಿಗ ಸಮುದಾಯದ ಮತ ಸೆಳೆಯುತ್ತೇನೆ ಎಂಬ ಆತಂಕದಿಂದ ಬಿಜೆಪಿಯು ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ ಎಂದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ದೂರಿದರು.

ಚಾಮುಂಡಿಬೆಟ್ಟದಲ್ಲಿ ಗುರುವಾರ ಪೂಜೆ ಸಲ್ಲಿಸಿದ ಸಂದರ್ಭ ಮಾಧ್ಯಮದ ಎದುರು ತಮ್ಮ ಜಾತಿ ಪ್ರಮಾಣಪತ್ರ ಪ್ರದರ್ಶಿಸಿ ಅವರು ಮಾತನಾಡಿದರು. ‘ ನಾನು ನನ್ನ ಹೆಸರನ್ನು ‘ಲಕ್ಷ್ಮಣ ಗೌಡ’ ಎಂದು ಇಟ್ಟುಕೊಂಡಿಲ್ಲ. ಹಾಗೆಂದು ಒಕ್ಕಲಿಗ ಜಾತಿ ಬಿಟ್ಟು ಬೇರೊಂದು ಜಾತಿ–ಮತಕ್ಕೆ ಮತಾಂತರ ಆಗಿಲ್ಲ. ಒಕ್ಕಲಿಗ ಎಂದು ಮೈಸೂರು ತಹಶೀಲ್ದಾರ್ ಜಾತಿ ಪ್ರಮಾಣಪತ್ರ ನೀಡಿದ್ದಾರೆ’ ಎಂದು ವಿವರಿಸಿದರು.

‘ ನೆಲಮಂಗಲದ ಹಳ್ಳಿಯೊಂದರಲ್ಲಿ ಹುಟ್ಟಿದ ನಾನು ಮೈಸೂರಿಗೆ ಬಂದು ಬದುಕು ಕಟ್ಟಿಕೊಂಡು 35 ವರ್ಷ ಆಯಿತು. ನನ್ನ ಮಡದಿ ನಗರದ ಕೆ.ಜಿ. ಕೊಪ್ಪಲಿನವರು. ನನ್ನ ಜಾತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತ ಜನರಲ್ಲಿ ಗೊಂದಲ ಸೃಷ್ಟಿಸುವ ಕೀಳು ರಾಜಕಾರಣವನ್ನು ಬಿಜೆಪಿ ಹಾಗೂ ಅದರ ಸಂಸದರು ಬಿಡಬೇಕು’ ಎಂದರು.

‘ 2014ರಲ್ಲಿ ಪ್ರತಾಪ ಸಿಂಹ ಎಲ್ಲಿಂದಲೋ ಬಂದು ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಒಕ್ಕಲಿಗರನ್ನು ಸೆಳೆಯಲು ತಮ್ಮ ಹೆಸರನ್ನು ಪ್ರತಾಪ ಸಿಂಹ ಗೌಡ ಎಂದು ಬದಲಿಸಿಕೊಂಡಿದ್ದರು. ಒಕ್ಕಲಿಗ ಸಮುದಾಯವು ಅವರನ್ನು ಎರಡು ಬಾರಿ ಬೆಂಬಲಿಸಿದೆ. ಈ ಬಾರಿ ನನ್ನನ್ನು ಬೆಂಬಲಿಸಿ ಎಂದು ಕೋರುತ್ತಿದ್ದೇನೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ಬಳಿಕ ಅವರು ನಗರದ ಹೆಬ್ಬಾಳಿನಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಸೋಮೇಶ್ವರನಾಥ ಸ್ವಾಮೀಜಿ ಅವರ ಬೆಂಬಲ ಕೋರಿದರು.

ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ. ವಿಜಯಕುಮಾರ್, ನಗರ ಘಟಕದ ಅಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮುಖಂಡ ಎಂ.ಕೆ. ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT