ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls 2024: ಕಾಂಗ್ರೆಸ್‌ನಿಂದ ಹತಾಶೆ ರಾಜಕಾರಣ: ವಿಜಯೇಂದ್ರ ಟೀಕೆ

Published 11 ಏಪ್ರಿಲ್ 2024, 14:14 IST
Last Updated 11 ಏಪ್ರಿಲ್ 2024, 14:14 IST
ಅಕ್ಷರ ಗಾತ್ರ

ಮೈಸೂರು: ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್, ಬಿಜೆಪಿ–ಜೆಡಿಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಬೆದರಿಕೆಯಂತಹ ಕ್ರಮಕ್ಕೆ ಮುಂದಾಗಿದ್ದು ಇದಕ್ಕೆ ನಾವು ಬಗ್ಗುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ರಾಜ್ಯದಲ್ಲಿ 18–20 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಬೀಗುತ್ತಿದ್ದರು. ಈಗ ಅವರಿಗೆ ವಾಸ್ತವ ಸ್ಥಿತಿಯ ಅರಿವಾಗಿದೆ. ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆಯು ಕಾಂಗ್ರೆಸ್‌ನ ಹತಾಶ ಮನೋಭಾವವನ್ನು ತೋರಿಸಿದೆ. ಹೀಗಾಗಿಯೇ ಅಲ್ಲಿ ಅರೆ ಮಿಲಿಟರಿ ಪಡೆ ನಿಯೋಜನೆ ಸೇರಿದಂತೆ ಅಗತ್ಯ ಕ್ರಮಕ್ಕೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದೇವೆ’ ಎಂದರು.

‘ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಪತನದ ಸಂದರ್ಭ ಕೇಂದ್ರವು ನಿರ್ಮಲಾನಂದನಾಥ ಶ್ರೀಗಳ ಟೆಲಿಫೋನ್‌ ಕದ್ದಾಲಿಕೆ ಮಾಡಿದ್ದು, ಈ ಸಂಬಂಧ ದಾಖಲೆ ಬಿಡುಗಡೆಗೆ ಸಿದ್ಧ’ ಎಂದು ಡಿ.ಕೆ. ಶಿವಕುಮಾರ್ ಹೇಳಿರುವ ಕುರಿತು ಪ್ರತಿಕ್ರಿಯಿಸಿ ‘ ಕಾಂಗ್ರೆಸ್ ಶಕ್ತಿ ಕುಸಿಯುತ್ತಿರುವ ಕಾರಣಕ್ಕೆ ಡಿಕೆಶಿ ಈ ರೀತಿ ಹತಾಶೆ ಹೇಳಿಕೆ ನೀಡುತ್ತಿದ್ದಾರೆ’ ಎಂದರು.

‘ ಪ್ರತಿ ಚುನಾವಣೆ ಬಂದಾಗ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಂದ ಮಠಾಧೀಶರ ಭೇಟಿ ಪದ್ಧತಿಯಾಗಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ’ ಎಂದು ಹೇಳಿದರು.

‘ ಏ.14ರಂದು ಸಂಜೆ 4ಕ್ಕೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್‌ ಪ್ರಚಾರ ಸಭೆಯಲ್ಲಿ ಭಾಗಿ ಆಗಲಿದ್ದಾರೆ. ಮೈಸೂರು–ಕೊಡಗು, ಮಂಡ್ಯ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಲಕ್ಷಾಂತರ ಮತದಾರರು ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರುಪಾದಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT