ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls: ಸಹೋದರನ ಕಣದಿಂದ ಹಿಂದಕ್ಕೆ ತೆಗೆಸಿ; ವಿಜಯೇಂದ್ರಗೆ ಈಶ್ವರಪ್ಪ ತಿರುಗೇಟು

Published 7 ಏಪ್ರಿಲ್ 2024, 11:20 IST
Last Updated 7 ಏಪ್ರಿಲ್ 2024, 11:20 IST
ಅಕ್ಷರ ಗಾತ್ರ

ಶಿವಮೊಗ್ಗ: 'ಕಾಲ ಮಿಂಚಿಲ್ಲ. ಪಕ್ಷಕ್ಕೆ ವಾಪಸ್ ಬನ್ನಿ. ಸಮಸ್ಯೆ ಇದ್ದರೆ ಹೈಕಮಾಂಡ್ ಜೊತೆ ಮಾತನಾಡಿ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಡಿರುವ ಮನವಿಗೆ ಭಾನುವಾರ ಇಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ 'ನನಗೆ ಮನವಿ ಮಾಡಿಕೊಳ್ಳುವ ಬದಲು ನಿಮ್ಮ ಅಣ್ಣನಿಗೆ (ಬಿ.ವೈ.ರಾಘವೇಂದ್ರ) ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಣದಿಂದ ಹಿಂದೆ ಸರಿಯಲು ಹೇಳಿ. ನಿಮಗೆ ಧೈರ್ಯವಿದ್ದರೆ ವಾಪಸ್ ತೆಗೆಸಿ' ಎಂದು ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, 'ಈಶ್ವರಪ್ಪ ಗೆಲ್ಲಲ್ಲಿ ಬಿಡು. ನೀನು ಸ್ಪರ್ಧೆ ಮಾಡಬೇಡ ಅಂತಾ ನಿಮ್ಮಣ್ಣ ರಾಘವೇಂದ್ರಗೆ ಹೇಳು. ನೀನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು' ಎಂದು ಒತ್ತಾಯಿಸಿದರು.

'ಕೇಂದ್ರದ ನಾಯಕರು ಈಶ್ವರಪ್ಪನವರ ಜೊತೆ ಮಾತಾಡುತ್ತಾರೆ ಎಂದು ಹೇಳಲು ನಿನಗೆ ಅಧಿಕಾರ ಕೊಟ್ಟವನು ಯಾರು?
ಎಲ್ಲಾ ಅಧಿಕಾರ ಯಡಿಯೂರಪ್ಪ ಮತ್ತು ಮಕ್ಕಳ ಕೈಯಲ್ಲಿ ಇರಬೇಕಾ? ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀನು ಬಿಟ್ಟು‌ಕೊಡು. ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡ. ಎಲ್ಲರ ನೋವು ಪರಿಹಾರ ಆಗುತ್ತದೆ ಎಂದು ವಿಜಯೇಂದ್ರ ವಿರುದ್ಧ ಕೆ.ಎಸ್.ಈಶ್ವರಪ್ಪ ಏಕವಚನದಲ್ಲಿ ಹರಿಹಾಯ್ದರು.

'ಮೋದಿ ವಿಶ್ವ ನಾಯಕ. ಅವರ ಪೋಟೋ ಬಳಸಿಕೊಳ್ಳಬಾರದು ಅಂತಾ ಎಲ್ಲಿಯೂ ಇಲ್ಲ. ಮೋದಿ ನನ್ನ ಹೃದಯದಲ್ಲಿ ‌ಇದ್ದಾರೆ. ಯಡಿಯೂರಪ್ಪನ ಮಕ್ಕಳು ಕೇಸು ಹಾಕಿಕೊಳ್ಳುತ್ತಾರೆಂದೇ ನಾನು ಕೇವಿಯೆಟ್ ಹಾಕಿದ್ದೇನೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.‌

'ಸಹೋದರ ಬಿ.ವೈ.ರಾಘವೇಂದ್ರ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ' ಎಂಬ ವಿಜಯೇಂದ್ರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕೆ.ಎಸ್.ಈಶ್ವರಪ್ಪ, 'ನಾನು ಈ ಬಾರಿ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. ಗೆದ್ದ ನಂತರ ಬಿಜೆಪಿಗೆ ಮತ್ತೆ ವಾಪಸ್ ಬರುತ್ತೇನೆ. ಮುಂಬರು‌ವ ಮಹಾನಗರ ಪಾಲಿಕೆ ಚುನಾವಣೆಗೆ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ‌ನಾನೇ ಟಿಕೆಟ್ ‌ಕೊಡೋದು' ಎಂದು ಹೇಳಿದರು.

'ನಿಮ್ಮಣ್ಣ (ಬಿ.ವೈ.ರಾಘವೇಂದ್ರ) ಸೋಲುತ್ತಾನೆ ಅಂತಾ ಭಯನಾ? ಏನು ನೀವೇ ಗೂಟ ಹೊಡ್ಕೊಂಡು ಇರಬೇಕಾ? ಎಂದು ಪ್ರಶ್ನಿಸಿದ ಈಶ್ವರಪ್ಪ, 'ನಾನು ಈಗಲೂ ಬಿಜೆಪಿಯವನು ಆದರೆ ಪಕ್ಷೇತರವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿ ಆಗಿದೆ. ನಾನು ಸ್ಪರ್ಧೆ ಮಾಡಿದರೆ ಬಿಜೆಪಿಯವರು ಏನು ಮಾಡಬಹುದು? ಪಕ್ಷದಿಂದ ಉಚ್ಚಾಟನೆ ಮಾಡಬಹುದ. ಅಷ್ಟೇ ತಾನೇ‌ ಇನ್ನೇನೂ ಮಾಡಲು ಸಾಧ್ಯ. ನಾನೇನು ಪಕ್ಷ ಬಿಟ್ಟು ಹೋಗಿದ್ದೇನಾ? ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿಗೆ ಹೋಗಿರಲಿಲ್ಲವಾ? ಎಂದು ಪ್ರಶ್ನಿಸಿದರು.

ಜಗದೀಶ ಶೆಟ್ಟರ್ ಕಾಂಗ್ರೆಸ್ ಗೆ ಹೋಗಿ ಮತ್ತೆ ಪಕ್ಷಕ್ಕೆ ವಾಪಸ್ ಬಂದು ಲೋಕಸಭೆ ಚುನಾವಣೆಗೆ ಟಿಕೆಟ್ ತೆಗೆದುಕೊಂಡಿದ್ದಾರೆ. ನಾನೇನು ಹಾಗೆ ಮಾಡಿದ್ದೇನಾ?

ಶಿವಮೊಗ್ಗ ‌ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ. 'ನಿಮಗೆ ಅನ್ಯಾಯ ಆಗಿದೆ, ಬಿಜೆಪಿ ಅಪ್ಪ ಮಕ್ಕಳ ಕೈಯಲ್ಲಿದೆ. ನಾವು ನಿಮಗೆ ಮತ ಕೊಡುತ್ತೇವೆ' ಅಂತಾ ಮತದಾರರು ಹೇಳುತ್ತಿದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT