ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ |ಲೋಕಸಭೆ ಚುನಾವಣೆ: 28 ಸಾವಿರ ಮತದಾರರಿಂದ ಮನೆಯಿಂದಲೇ ಮತದಾನ!

ಅಂಚೆ ಮತಪತ್ರದ ಮೂಲಕ ಮತದಾನ ಪ್ರಕ್ರಿಯೆ: ಸಿಬ್ಬಂದಿಗೆ ತರಬೇತಿ
Published 19 ಮಾರ್ಚ್ 2024, 15:06 IST
Last Updated 19 ಮಾರ್ಚ್ 2024, 15:06 IST
ಅಕ್ಷರ ಗಾತ್ರ

ಕಾರವಾರ: ಇಳಿ ವಯಸ್ಸಿನ ಮತದಾರರು, ಅಂಗವಿಕಲರಿಗೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಿ ಯಶಸ್ಸು ಸಾಧಿಸಿದ್ದ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗೂ ಇದೇ ಪ್ರಯೋಗ ಮುಂದುವರೆಸಲು ನಿರ್ಧರಿಸಿದೆ. ಜಿಲ್ಲೆಯಲ್ಲಿ 28 ಸಾವಿರಕ್ಕೂ ಹೆಚ್ಚು ಮತದಾರರು ಮನೆಯಿಂದಲೇ ಮತದಾನ ಮಾಡಲು ಅವಕಾಶ ಪಡೆಯುವ ಸಾಧ್ಯತೆ ಇದೆ.

85 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು, ಶೇ.75 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಅಂಗವೈಕಲ್ಯ ಹೊಂದಿರುವವರಿಗೆ ಅಂಚೆ ಮತಪತ್ರದ ಮೂಲಕ ತಾವು ಬಯಸಿದ ಅಭ್ಯರ್ಥಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಆಯಾ ಮತಗಟ್ಟೆ ಅಧಿಕಾರಿಗಳ ಮೂಲಕ ಮನೆಯಿಂದಲೇ ಮತದಾನ ಮಾಡುವವರ ಮಾಹಿತಿ ಕಲೆಹಾಕಿ ಚುನಾವಣೆ ನಡೆಯುವ ದಿನಕ್ಕಿಂತ ಮುಂಚಿತವಾಗಿ ಮತದಾನ ಮಾಡಿಸುವ ಪ್ರಕ್ರಿಯೆ ನಡೆಯಲಿದೆ.

ಚುನಾವಣಾ ಆಯೋಗದ ಮಾಹಿತಿ ಅನ್ವಯ ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನ ಅವಕಾಶ ಪಡೆಯಬಹುದಾದ 28,772 ಮತದಾರರು ಇದ್ದಾರೆ. ಈ ಪೈಕಿ 162 ಮಂದಿ ಶತಾಯುಷಿ ಮತದಾರರಾಗಿದ್ದಾರೆ. 85 ವರ್ಷ ಮೇಲ್ಪಟ್ಟ 12,320 ಮತದಾರರು, 16,290 ಅಂಗವಿಕಲ ಮತದಾರರು ಇದ್ದಾರೆ.

‘ತೀರಾ ಇಳಿ ವಯಸ್ಸಿನವರು ಮತ್ತು ಮತಗಟ್ಟೆಗೆ ತೆರಳಲಾಗದಷ್ಟು ಅಂಗವೈಕಲ್ಯತೆ ಹೊಂದಿರುವ ಮತದಾರರಿಗೆ ಮನೆಯಿಂದಲೇ ಅಂಚೆಮತಪತ್ರದ ಮೂಲಕ ಮತ ಚಲಾಯಿಸುವ ಅವಕಾಶ ನೀಡಲಾಗುತ್ತದೆ. ಚುನಾವಣಾ ಆಯೋಗ ಪರಿಚಯಿಸಿರುವ ‘ಎಲೆಕ್ಟ್ ಒನ್’ ಆ್ಯಪ್ ಮೂಲಕ ಆಯಾ ಮತಗಟ್ಟೆವಾರು ಅಂಚೆಮತಪತ್ರ ಪಡೆಯಬಹುದಾದವರ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ. ಅವರು ಮತದಾರರ ಮನೆಗೆ ಭೇಟಿ ಮತಗಟ್ಟೆಗೆ ಬರಲಾಗದವರಿಂದ 12ಡಿ ಅರ್ಜಿ ನಮೂನೆ ಭರ್ತಿ ಮಾಡಿಸಿ ಆಯಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗೆ ಸಲ್ಲಿಸಲಿದ್ದಾರೆ. ಅವರಿಂದ ಜಿಲ್ಲಾ ಚುನಾವಣಾಧಿಕಾರಿಗೆ ಮಾಹಿತಿ ಸಲ್ಲಿಕೆಯಾದ ಬಳಿಕ ಮನೆಯಿಂದಲೇ ಮತದಾನ ಮಾಡುವವರ ಪಟ್ಟಿ ಸಿದ್ಧಪಡಿಸಲಾಗುತ್ತದೆ’ ಎಂದು ಚುನಾವಣಾ ಅಧಿಕಾರಿಯೊಬ್ಬರು ವಿವರಿಸಿದರು.

‘ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ಬಳಿಕ ಚುನಾವಣೆಗೆ ಕೆಲವು ದಿನ ಮುಂಚಿನಿಂದ ಅಂಚೆಮತಪತ್ರದ ಮೂಲಕ ಮತದಾನ ಮಾಡಿಸಲಾಗುತ್ತದೆ. ಮತಗಟ್ಟೆ ಅಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳ ತಂಡವು ಮತದಾರರ ಮನೆಗೆ ತೆರಳಿ ಅವರಿಗೆ ಮತಪತ್ರ ನೀಡಿ, ಮತ ಚಲಾಯಿಸಿಕೊಂಡು ಬರಲಿದೆ. ಮತಗಟ್ಟೆಯಲ್ಲಿದ್ದಂತೆ ಇಲ್ಲಿಯೂ ಗೌಪ್ಯವಾಗಿ ಮತದಾರ ಮತದಾನ ಮಾಡಲು ಅವಕಾಶ ಕೊಡಲಾಗುತ್ತದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT