ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಕರ್ನಾಟಕದ ಮೇಲೆ ಯಾಕಿಷ್ಟು ದ್ವೇಷ?: ಕಂದಾಯ ಸಚಿವ ಕೃಷ್ಣಬೈರೇಗೌಡ

ರೈತರೊಂದಿಗೆ ಸಂವಾದ ಕಾರ್ಯಕ್ರಮ
Published 2 ಮೇ 2024, 23:30 IST
Last Updated 2 ಮೇ 2024, 23:30 IST
ಅಕ್ಷರ ಗಾತ್ರ

ಗದಗ: ‘ಪ್ರಧಾನಿ ನರೇಂದ್ರ ಮೋದಿ ಅನುಕೂಲಕ್ಕೆ ತಕ್ಕಂತೆ ಮಾತನಾಡುವ ವ್ಯಕ್ತಿ. ನಮ್ಮ ತೆರಿಗೆ ನಮ್ಮ ಹಕ್ಕು. ರಾಜ್ಯಕ್ಕೆ ಬರಬೇಕಿರುವ ಶ್ರಮದ ಪಾಲು ಕೇಳಿದರೆ ಸಂಸತ್‌ನೊಳಗೆ ನಿಂತು ಕರ್ನಾಟಕದವರು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬೊಬ್ಬಿರಿಯುತ್ತಾರೆ. ಸ್ವಂತ ಬಲದ ಮೇಲೆ ನಿಂತು, ನಮ್ಮ ತೆರಿಗೆ ಹಣದಿಂದ ಹತ್ತಾರು ರಾಜ್ಯಗಳನ್ನು ಸಾಕುತ್ತಿರುವ, ದೇಶದ ಅಭಿವೃದ್ಧಿಗೆ ನೆರವಾಗುತ್ತಿರುವ ನಮ್ಮನ್ನು ದೇಶದ್ರೋಹಿ ಎನ್ನುವ ಇವರು ಕರ್ನಾಟಕದ ಪರ ಇದ್ದಾರೋ; ವಿರೋಧವಾಗಿದ್ದಾರೋ ಎಂಬುದನ್ನು ಜನರೇ ನಿರ್ಧರಿಸಬೇಕು’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಕರ್ನಾಟಕ ರೈತರ ಸಂಘ, ದಲಿತ ಸಂಘರ್ಷ ಸಮಿತಿ, ಜಾಗೃತ ಕರ್ನಾಟಕ, ದಲಿತ ಕಲಾಮಂಡಳಿ, ಎದ್ದೇಳು ಕರ್ನಾಟಕ ವೇದಿಕೆ ವತಿಯಿಂದ ನಗರದ ಕೆ.ಎಚ್‌.ಪಾಟೀಲ ಸಭಾಂಗಣದಲ್ಲಿ ಗುರುವಾರ ನಡೆದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ಕುರಿತಾಗಿ ಅಂಕಿ –ಅಂಶಗಳ ಸಮೇತ ವಿವರಿಸಿದರು.

‘ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿ ಇದ್ದಾಗ ಅಬ್ಬರದ ಭಾಷಣ ಮಾಡಿದ್ದರು. ಪ್ರತಿ ವರ್ಷ ಕೇಂದ್ರಕ್ಕೆ ನಾವು ₹50 ಸಾವಿರ ಕೋಟಿ ತೆರಿಗೆ ಕಟ್ಟುತ್ತೇವೆ. ಆದರೆ, ಅವರು ನಮಗೆ ವಾಪಸ್‌ ಕೊಡುವುದು ₹10 ಸಾವಿರ ಕೋಟಿ ಮಾತ್ರ. ನಾವೇನು ಭಿಕ್ಷುಕರೇ? ಎಂದು ಪ್ರಶ್ನಿಸಿದ್ದರು. ಈಗ ನಾವು ನಮ್ಮ ತೆರಿಗೆಯಲ್ಲಿನ ನ್ಯಾಯಯುತ ಪಾಲು ಕೇಳಿದರೆ ದೇಶ ಒಡೆಯುವವರು ಎಂದು ನಿಂದಿಸುತ್ತಾರೆ. ಇದು ಮೋದಿ ಅವರ ಅನುಕೂಲಸಿಂಧು ವ್ಯಕ್ತಿತ್ವ ತೋರಿಸುತ್ತದೆ. ನಾವು ವರ್ಷಕ್ಕೆ ₹4.50 ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಅಂತಹದ್ದರಲ್ಲಿ ನಮ್ಮನ್ನು ದೇಶದ್ರೋಹಿ ಎನ್ನುವ ಇವರ ಬಗ್ಗೆ ನಾವೆಷ್ಟು ಮಾತನಾಡಬೇಕು?’ ಎಂದು ಕಿಡಿಕಾರಿದರು.

‘ಕೇಂದ್ರಕ್ಕೆ ಯಾರು ಹೆಚ್ಚು ತೆರಿಗೆಯನ್ನು ಕಟ್ಟುತ್ತಿದ್ದಾರೋ ಅವರ ಕತ್ತು ಹಿಸುಕುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದ ವಾರ್ಷಿಕ ಖರ್ಚು ₹2.63 ಲಕ್ಷ ಕೋಟಿ. ಇದರಲ್ಲಿ ರಾಜ್ಯ ಶೇ 77ರಷ್ಟು ಹಣವನ್ನು ಸ್ವಂತ ತೆರಿಗೆ ಮೂಲಕ ಸಂಗ್ರಹಿಸುತ್ತದೆ. ಕೇಂದ್ರ ನಮಗೆ ಕೊಡುವ ಪಾಲು ಶೇ 23ರಷ್ಟು ಮಾತ್ರ. ಕರ್ನಾಟಕ ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದಂತೆ. ಇದನ್ನು ಸಹಿಸದ ಅವರು ನಮ್ಮನ್ನು ಹೀಯಾಳಿಸಿ, ಸುಳ್ಳುಗಳನ್ನು ಹೇಳಿ ಮಾನ ಹರಾಜು ಹಾಕುವ ಕೆಲಸ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

‘ತೆರಿಗೆ ಪಾಲು ಹಂಚಿಕೆಯಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೋಸ ಮಾಡುತ್ತಿದೆ. ಬಿಹಾರದವರು ಕೇಂದ್ರಕ್ಕೆ ₹100 ತೆರಿಗೆ ಕಟ್ಟಿದರೆ ಅವರಿಗೆ ₹922 ವಾಪಸ್‌ ಸಿಗುತ್ತದೆ. ಆದರೆ, ಕರ್ನಾಟಕಕ್ಕೆ ಸಿಗುವುದು ₹13 ಮಾತ್ರ. ₹100ಯಲ್ಲಿ ₹30 ವಾಪಸ್‌ ಕೊಡಿ; ಉಳಿದಿದ್ದನ್ನು ಬೇರೆ ರಾಜ್ಯಗಳಿಗೆ ಹಂಚಿಕೆ ಮಾಡಿ ಎಂದು ಮನವಿ ಮಾಡಿದರೆ, ದೇಹದ್ರೋಹಿ ಪಟ್ಟ ಕಟ್ಟುತ್ತಾರೆ. ಅವರಿಗೆ ಕರ್ನಾಟಕದ ಮೇಲೆ ಯಾಕಿಷ್ಟು ದ್ವೇಷ’ ಎಂದು ಪ್ರಶ್ನಿಸಿದರು.

‘ಮನಮೋಹನ್‌ ಸಿಂಗ್‌ ಸರ್ಕಾರ ಇದ್ದಾಗ ಸಂಗ್ರಹಿಸಿದ ತೆರಿಗೆಯಲ್ಲಿ ರಾಜ್ಯಕ್ಕೆ ಶೇ 32ರಷ್ಟು ಪಾಲು ಸಿಗುತ್ತಿತ್ತು. 14ನೇ ಹಣಕಾಸು ಆಯೋಗ ರಚನೆ ಆದಾಗ ವೈ.ವಿ.ರೆಡ್ಡಿ ರಾಜ್ಯದ ಪಾಲನ್ನು ಶೇ 42ಕ್ಕೆ ಹೆಚ್ಚಿಸಿದರು. ಬಳಿಕ ಮೋದಿ ಸರ್ಕಾರ ಬಂತು. ಎನ್‌.ಕೆ.ಸಿಂಗ್‌ ಅಧ್ಯಕ್ಷತೆಯಲ್ಲಿ 15ನೇ ಹಣಕಾಸು ಆಯೋಗ ರಚಿನೆ ಆಯಿತು. ಅಲ್ಲಿಂದ ಕರ್ನಾಟಕಕ್ಕೆ ತೆರಿಗೆ ಪಾಲು ಕಡಿಮೆ ಆಯಿತು. ಪರಿಣಾಮವಾಗಿ ವರ್ಷಕ್ಕೆ ₹14 ಸಾವಿರ ಕೋಟಿ ಕಡಿತಗೊಂಡಿತು’ ಎಂದು ದೂರಿದರು.

‘ಮನ್‌ಮೋಹನ್‌ ಸಿಂಗ್‌ ಅವರು ಪ್ರಧಾನಿ ಇದ್ದಾಗ ರಾಜ್ಯಕ್ಕೆ ₹80 ಸಾವಿರ ಕೋಟಿ ಕೊಟ್ಟಿದ್ದರು. ನಾವು ₹2.30 ಲಕ್ಷ ಕೋಟಿ ಕೊಟ್ಟಿದ್ದೇವೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ, ಆವತ್ತು ಕೇಂದ್ರ ಬಜೆಟ್‌ನ ಗಾತ್ರ ₹5 ಲಕ್ಷ ಕೋಟಿ ಇತ್ತು. ಇವತ್ತು ₹45 ಲಕ್ಷ ಕೋಟಿ ಆಗಿದೆ. ಅಲ್ಲಿಗೆ ಒಂಬತ್ತು ಪಟ್ಟು ಬೆಳೆದಿದೆ. ಆಗಿನ ಲೆಕ್ಕ ಹಿಡಿದರೆ ಈಗ ನಮಗೆ ಕನಿಷ್ಠ ₹4 ಲಕ್ಷ ಕೋಟಿ ಬರಬೇಕಿತ್ತು. ಕರ್ನಾಟಕಕ್ಕೆ ಮತ್ತೆ ಮತ್ತೇ ಮೋಸ ಆಗುತ್ತಿದೆ’ ಎಂದು ಹರಿಹಾಯ್ದರು.

ಜಿಎಸ್‌ಟಿ ಜಾರಿ ನಂತರ ಸಾವಿರಾರು ಕೋಟಿ ವಂಚನೆ

‘ಜಿಎಸ್‌ಟಿ ಜಾರಿ ಆದ ನಂತರ ರಾಜ್ಯ ಸರ್ಕಾರ ಕ್ರೋಡೀಕರಿಸುತ್ತಿದ್ದ ಸ್ವಂತ ತೆರಿಗೆಯಲ್ಲಿ ₹32 ಸಾವಿರ ಕೋಟಿ ನಷ್ಟ ಆಗಿದೆ’ ಎಂದು ಕೃಷ್ಣಬೈರೇಗೌಡ ತಿಳಿಸಿದರು.

‘ಪೆಟ್ರೋಲ್‌, ಡೀಸೆಲ್‌ಗೆ ಕೇಂದ್ರದವರು ತೆರಿಗೆ ಬದಲು ಸೆಸ್‌ ಅಂತ ಮಾಡಿದರು. ಇದರಿಂದಾಗಿ ರಾಜ್ಯಕ್ಕೆ ತೆರಿಗೆ ಪಾಲು ಸಿಗುತ್ತಿಲ್ಲ. ಇದರಿಂದಾಗಿ ವಾರ್ಷಿಕ ನಮಗೆ ₹9 ಸಾವಿರ ಕೋಟಿ ವಂಚನೆ ಆಗುತ್ತಿದೆ. ಹೀಗೆ ಸಣ್ಣ ಸಣ್ಣದ್ದನ್ನೆಲ್ಲಾ ಹುಡುಕಿ, ರಾಜ್ಯದ ಪಾಲು ತಪ್ಪಿಸಿದ್ದರಿಂದ ವರ್ಷಕ್ಕೆ ಒಟ್ಟು ₹52 ಸಾವಿರ ಕೋಟಿ ವಂಚನೆ ಆಗುತ್ತಿದೆ’ ಎಂದು ಹರಿಹಾಯ್ದರು.

‘ಹೆಸರು ಕೇಂದ್ರದ್ದು; ಹಣ ನಮ್ಮದು’

‘ರಾಜ್ಯಕ್ಕೆ ಬೇರೆ ಬೇರೆ ಯೋಜನೆಗಳ ಮೂಲಕ ಸಾಕಷ್ಟು ಅನುದಾನ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ, ಅದೆಲ್ಲಾ ಸುಳ್ಳು. ಹಣ ನಮ್ಮದು; ಹೆಸರು ಮತ್ತು ಪ್ರಚಾರ ಅವರದ್ದು ಎಂಬಂತಾಗಿದೆ’ ಎಂದು ಕೃಷ್ಣಬೈರೇಗೌಡ ತಿಳಿಸಿದರು.

‘ಪ್ರಧಾನ್‌ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಗೆ ವರ್ಷಕ್ಕೆ ಒಟ್ಟು ಖರ್ಚಾಗುವುದು ₹17,604 ಕೋಟಿ. ಅದರಲ್ಲಿ ಕೇಂದ್ರ ಕೊಡುವುದು ₹8,870 ಕೋಟಿಯಾದರೆ; ರಾಜ್ಯ ಸರ್ಕಾರದ ಹಣ ₹9,734 ಕೋಟಿ. ಇಲ್ಲಿ ಯಾರು ಹೆಚ್ಚಿಗೆ ಹಣ ಕೊಡುತ್ತಾರೆ? ಕೇಂದ್ರದಿಂದ ನಮಗೆ ಅನುದಾನ ಬರುವುದು ಇರಲಿ, ಅವರ ಯೋಜನೆಗಳಿಗೆ ನಮ್ಮ ದುಡ್ಡು ಹೋಗುತ್ತಿದೆ’ ಎಂದು ಹೇಳಿದರು.

‘ಕಡಲೆಬೀಜ, ಸಾಸಿವೆಗೆ ಸಮನಾದ ಹಣವನ್ನೂ ಕೊಡಲಿಲ್ಲ’

‘ಕರ್ನಾಟಕಕ್ಕೆ ಕಡಿಮೆ ಪಾಲು ಸಿಗುತ್ತಿದೆ. ಈ ಪರಿಸ್ಥಿತಿಯನ್ನು ತಡೆದುಕೊಳ್ಳಲು ನೆರವಾಗುವಂತೆ ಹಣಕಾಸು ಆಯೋಗದವರು ರಾಜ್ಯಕ್ಕೆ ₹11,495 ಕೋಟಿ ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿದ್ದರು. ಆದರೆ, ಆ ಹಣವನ್ನೂ ಕೊಡದೇ ಮೋದಿ ದ್ವೇಷ ಮುಂದುವರಿಸಿದರು’ ಎಂದು ಕೃಷ್ಣಬೈರೇಗೌಡ ಕಿಡಿಕಾರಿದರು.

‘ಹಣಕಾಸು ಆಯೋಗ ಯಾವುದೇ ಶಿಫಾರಸು ಮಾಡಿದರೂ ಕೇಂದ್ರ ಸರ್ಕಾರ ಅದನ್ನು ಕಡ್ಡಾಯವಾಗಿ ಅನುಷ್ಟಾನ ಮಾಡಲೇಬೇಕಿದೆ. ಅದರಲ್ಲಿ ಬೇಕಾಗಿದ್ದನ್ನು ಮಾಡುವುದು, ಬೇಡವಾಗಿದ್ದನ್ನು ಬಿಡಲು ಸಾಧ್ಯವಿಲ್ಲ. ಆದರೆ, ಹಣಕಾಸು ಆಯೋಗ ನೀಡಿದ ಶಿಫಾರಸಿನಂತೆ ಕೇಂದ್ರ ನಮಗೆ ಹಣ ಬಿಡುಗಡೆ ಮಾಡಲಿಲ್ಲ. ಬದಲಾಗಿ, ಈ ಶಿಫಾರಸನ್ನು ವಾಪಸ್‌ ಪಡೆಯುವಂತೆ ಹೇಳಿದೆ’ ಎಂದು ಹರಿಹಾಯ್ದರು.

‘ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಬಳಿ ಇರುವ ದುಡ್ಡಿನ ಪ್ರಮಾಣ ನೋಡಿದಾಗ ₹11,495 ಕೋಟಿ ಎಂಬುದು ಕಡಲೆ ಬೀಜಕ್ಕೆ, ಸಾಸಿವೆ ಕಾಳಿಗೆ ಸಮಾನ. ಅದನ್ನೂ ಕೊಡಲಿಲ್ಲ. ಕೇಂದ್ರ ಸರ್ಕಾರಕ್ಕೆ ನಮ್ಮ ಮೇಲೆ ಯಾಕಿಷ್ಟು ಕಠಿಣ ಧೋರಣೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT