ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ಮೇಕೆದಾಟು' ಯೋಜನೆಗೆ ಅನುಮತಿ ಕೊಡಿಸಿದರೆ ನಾಳೆಯೇ ಕೆಲಸ ಶುರು: ಸಿಎಂ ಸಿದ್ದರಾಮಯ್ಯ

ಬೆಂಗಳೂರು ಟ್ಯಾಂಕರ್‌ ಸಿಟಿ ಎಂದಿದ್ದಕ್ಕೆ ಸಿದ್ದರಾಮಯ್ಯ ಗರಂ, ಖಾಲಿ ಚೊಂಬು ಎಂದು ವಾಗ್ದಾಳಿ
Published 21 ಏಪ್ರಿಲ್ 2024, 10:45 IST
Last Updated 21 ಏಪ್ರಿಲ್ 2024, 10:45 IST
ಅಕ್ಷರ ಗಾತ್ರ

ಕೋಲಾರ/ಬಂಗಾರಪೇಟೆ: ‘ಹಾಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಒಂದೇ ವೇದಿಕೆಯಲ್ಲಿ ಪೈಪೊಟಿ ಮೇಲೆ ಸುಳ್ಳು ಹೇಳಿದ್ದಾರೆ. ಬೆಂಗಳೂರನ್ನು ಟ್ಯಾಂಕರ್ ಸಿಟಿ ಎಂಬುದಾಗಿ ಮೋದಿ ಜರಿದಿದ್ದಾರೆ. ಬೆಂಗಳೂರಿನ ಮೇಲೆ ಕಾಳಜಿ ಇದ್ದರೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ. ನಾಳೆಯೇ ಕೆಲಸ ಆರಂಭಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಬಂಗಾರಪೇಟೆಯಲ್ಲಿ ಭಾನುವಾರ ಕೋಲಾರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್‌ ಪರ ರೋಡ್‌ ಶೋನಲ್ಲಿ ಮತಯಾಚಿಸಿ ಮಾತನಾಡಿದ ಅವರು, ಮೋದಿ ಹಾಗೂ ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

‘ರಾಜ್ಯಕ್ಕೆ ಮೋದಿ ಕೊಟ್ಟ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಎಂದು ದೇವೇಗೌಡರು ಚಿಕ್ಕಬಳ್ಳಾಪುರದಲ್ಲಿ ಪ್ರಚಾರದ ವೇಳೆ ರೈಲು ಬಿಟ್ಟಿದ್ದಾರೆ. ಖಾಲಿ ಚೊಂಬು ತಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದರೆ ರಾಜ್ಯದ ಪಾಲಿನ ತೆರಿಗೆ ಹಣ ವಾಪಾಸ್ ಏಕೆ ಬರಲಿಲ್ಲ? ಬರಗಾಲದ ಅನುದಾನ ಏಕೆ ಕೊಡಲಿಲ್ಲ’ ಎಂದು ಪ್ರಶ್ನಿಸಿದರು.

‘ಮೋದಿ ಶ್ರೀಮಂತರ, ಉದ್ಯಮಿಗಳ ₹ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಅವರು ಶ್ರೀಮಂತರ ಅಕ್ಷಯ ಪಾತ್ರೆ. ನಾಡಿನ ಜನರ ಪಾಲಿಗೆ ಖಾಲಿ ಚೊಂಬು ಅಷ್ಟೆ. ರೈತರ ಸಾಲಮನ್ನಾ ಮಾಡಿ ಎಂದರೆ ದುಡ್ಡು ಇಲ್ಲ ಎನ್ನುತ್ತಾರೆ. ದೇವೇಗೌಡರೇ, ಆಗ ಎಲ್ಲಿ ಹೋಗಿತ್ತು ತಾವು ಹೇಳಿದ ಅಕ್ಷಯಪಾತ್ರೆ? ಮಾಜಿ ಪ್ರಧಾನಿಯಾಗಿ ಇಷ್ಟೊಂದು ಸುಳ್ಳು ಹೇಳಬಾರದು’ ಎಂದು ಹರಿಹಾಯ್ದರು.

‘ಮೋದಿ ಪ್ರಧಾನಿ ಆದ ಮೇಲೆ ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ. ರೈತರು, ಮಹಿಳೆಯರು,‌ ಬಡವರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರಿಗೆ ಏನೂ ಕೊಡಲಿಲ್ಲ. ರಾಜ್ಯಕ್ಕೆ ಭಾರಿ ಅನ್ಯಾಯ ಮಾಡಿದ್ದಾರೆ. ಆದರೆ, ದೇವೇಗೌಡರು ಮಾತನಾಡುತ್ತಾ ಮನಮೋಹನ್ ಸಿಂಗ್ ಖಾಲಿ ಚೊಂಬು ಕೊಟ್ಟಿದ್ದರು‌‌, ಮೋದಿ ಅಕ್ಷಯಪಾತ್ರೆ ಕೊಟ್ಟಿದ್ದಾರೆ ಎಂದಿದ್ದಾರೆ‌‌‌. ದೇಶದ ಸಾಲವನ್ನು ₹ 187 ಲಕ್ಷ ಕೋಟಿಗೇರಿಸಿರುವುದು ಅಕ್ಷಯ ಪಾತ್ರೆಯೋ, ಖಾಲಿ ಚೊಂಬೋ’ ಎಂದು ಪ್ರಶ್ನಿಸಿದರು.

‘ಮೋದಿ ಅವರನ್ನು ಅಕ್ಷಯಪಾತ್ರೆ ಎಂದಿರುವ ದೇವೇಗೌಡರೇ, ರಾಜ್ಯಸಭೆ ಸದಸ್ಯರಾಗಿ ತಾವು ಏಕೆ ರಾಜ್ಯಕ್ಕೆ ಅಕ್ಕಿ‌ ಕೊಡಿಸಲಿಲ್ಲ. 10 ಕೆ.ಜಿ ಅಕ್ಕಿ ಕೊಟ್ಟರೆ ಬಡವರು ಸಿದ್ದರಾಮಯ್ಯ ಪರ ನಿಲ್ಲುತ್ತಾರೆ ಎಂದು ಕೊಡಿಸಲಿಲ್ಲವೇ’ ಎಂದು ಟೀಕಾ ಪ್ರಹಾರ ನಡೆಸಿದರು.

‘ಬಿಜೆಪಿ ಹಾಗೂ ಜೆಡಿಎಸ್‌ನದ್ದು ಅಪವಿತ್ರ ಮೈತ್ರಿ. ಜೆಡಿಎಸ್‌ನವರು ಕೋಮುವಾದಿಗಳ ಜೊತೆ ಸೇರಿಕೊಂಡಿದ್ದಾರೆ. ‌ಇವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯೇ’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT