ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರು ಕ್ಷೇತ್ರ: ಸರ್ವಜ್ಞನ ನಾಡಿನಲ್ಲಿ ಜೋಡೆತ್ತುಗಳ ಕಾಳಗ

ಹುರಿಯಾಳುಗಳ ಪಕ್ಷಗಳು ಅದಲು–ಬದಲು: ಹ್ಯಾಟ್ರಿಕ್‌ ಗೆಲುವು ಪಡೆದಿದ್ದ ಶಂಕರರಾವ್‌ ಗುಬ್ಬಿ
Last Updated 10 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಹಾವೇರಿ: ‘ಸರ್ವಜ್ಞನ ನಾಡು’ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ವ್ಯಕ್ತಿಯ ವರ್ಚಸ್ಸು ಮತ್ತು ಜಾತಿಯ ಪ್ರಾಬಲ್ಯ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. 2019ರ ಉಪಚುನಾವಣೆಯಲ್ಲಿ ‘ಜೋಡೆತ್ತು’ಗಳಂತೆ ಸಮನ್ವಯದಿಂದ ಕ್ಷೇತ್ರದಾದ್ಯಂತ ಸಂಚರಿಸಿದ್ದ ಬಿ.ಸಿ.ಪಾಟೀಲ ಮತ್ತು ಯು.ಬಿ.ಬಣಕಾರರ ನಡುವೆಯೇ ಈ ಬಾರಿ ಚುನಾವಣಾ ಕದನ ನಡೆಯಲಿರುವುದು ಕುತೂಹಲ ಗರಿಗೆದರುವಂತೆ ಮಾಡಿದೆ.

ಚುನಾವಣಾ ಕಣದಲ್ಲಿ ಕೌರವ– ಬಣಕಾರ ಪರಸ್ಪರ ಎದುರಾಳಿಗಳಾಗುತ್ತಿರುವುದು ಇದು ಮೊದಲ ಬಾರಿಯೇನೂ ಅಲ್ಲ. ಈಗಾಗಲೇ ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿ, ಬಿ.ಸಿ.ಪಾಟೀಲರು ಮೂರು ಬಾರಿ ಮತ್ತು ಯು.ಬಿ.ಬಣಕಾರ ಅವರು ಒಂದು ಬಾರಿ ಗೆಲುವಿನ ನಗೆ ಬೀರಿದ್ದಾರೆ. 5ನೇ ಬಾರಿಯ ಸ್ಪರ್ಧೆಗೆ ಅಖಾಡ ಸಿದ್ಧವಾಗಿದೆ.

ಬಿ.ಸಿ.ಪಾಟೀಲ ಅವರು 2004ರಲ್ಲಿ 4,990 ಮತಗಳ ಅಂತರದಿಂದ, 2008ರಲ್ಲಿ 4,190 ಮತಗಳ ಅಂತರದಿಂದ ಹಾಗೂ 2018ರಲ್ಲಿ 555 ಮತಗಳ ಅಂತರದಿಂದ ಗೆಲುವಿನ ನಗಾರಿ ಬಾರಿಸಿದ್ದಾರೆ. ಕೆಜೆಪಿಯಿಂದ ಸ್ಪರ್ಧಿಸಿದ್ದ ಯು.ಬಿ.ಬಣಕಾರ ಅವರು 2013ರಲ್ಲಿ 2,606 ಮತಗಳ ಅಂತರದಿಂದ ಜಯದ ಕಹಳೆ ಮೊಳಗಿಸಿದ್ದಾರೆ.

ಅದಲು–ಬದಲಾದ ಪಕ್ಷಗಳು:

ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ.ಪಾಟೀಲರು 4 ಬಾರಿ ಶಾಸಕರಾಗಿ ಮತ್ತು ಯು.ಬಿ.ಬಣಕಾರ ಅವರು 2 ಬಾರಿ ಶಾಸಕರಾಗಿದ್ದಾರೆ. ಮೂಲತಃ ಬಿಜೆಪಿಯ ಬಣಕಾರ ಅವರು ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌, ಬಿಜೆಪಿಯಿಂದ ತಲಾ ಒಂದು ಬಾರಿ ಹಾಗೂ 2 ಬಾರಿ ಕಾಂಗ್ರೆಸ್‌ನಿಂದ ಗೆದ್ದಿರುವ ಬಿ.ಸಿ.ಪಾಟೀಲರು ಈ ಚುನಾಣೆಯಲ್ಲಿ ಬಿಜೆಪಿ ಅಭ್ಯರ್ಥಿ. ಈ ಇಬ್ಬರು ಅಭ್ಯರ್ಥಿಗಳ ಪಕ್ಷಗಳು ಅದಲು–ಬದಲಾಗಿರುವುದು ಈ ಬಾರಿಯ ವಿಶೇಷವೂ ಹೌದು.

29 ಸಾವಿರ ಮತಗಳ ಜಯಭೇರಿ:

2018ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಬಿ.ಸಿ.ಪಾಟೀಲರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, 2019ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದರು. ಇದರಿಂದ ಅಸಮಾಧಾನಗೊಂಡಿದ್ದ ಯು.ಬಿ.ಬಣಕಾರ ಅವರಿಗೆ ಪಕ್ಷದ ನಾಯಕರು ಉತ್ತಮ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು. ಬೈ ಎಲೆಕ್ಷನ್‌ನಲ್ಲಿ ಪಾಟೀಲರು ಬರೋಬ್ಬರಿ 29,067 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಚ್‌.ಬನ್ನಿಕೋಡ ಅವರನ್ನು ಮಣಿಸಿದ್ದರು.

ಬಿಜೆಪಿ ಸರ್ಕಾರದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಯು.ಬಿ.ಬಣಕಾರ ಅವರು ನಿಗಮ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ 2022ರ ನವೆಂಬರ್‌ನಲ್ಲಿ ರಾಜೀನಾಮೆ ನೀಡಿ, ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಹೀಗಾಗಿ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಬಣಕಾರರಿಗೆ ಸಿಕ್ಕಿದೆ.

ಶಂಕರರಾವ್‌ಗೆ ಹ್ಯಾಟ್ರಿಕ್‌ ಗೆಲುವು:

ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಂಕರರಾವ್‌ ಗುಬ್ಬಿ ಅವರು 1957, 1962 ಮತ್ತು 1967ರಲ್ಲಿ ಸತತವಾಗಿ ಗೆದ್ದು ‘ಹ್ಯಾಟ್ರಿಕ್‌ ಗೆಲುವಿನ ಸರದಾರ’ ಎನಿಸಿಕೊಂಡಿದ್ದಾರೆ. ಪಕ್ಷಗಳ ಬಲಾಬಲ ಹೇಳುವುದಾರೆ, 1957ರಿಂದ 2019ರವರೆಗೆ ನಡೆದ ಒಟ್ಟು 15 ಚುನಾವಣೆಗಳಲ್ಲಿ ಕಾಂಗ್ರೆಸ್‌–7, ಬಿಜೆಪಿ–2, ಪಕ್ಷೇತರ–2, ಜನತಾದಳ–2 ಹಾಗೂ ಜೆಡಿಎಸ್‌ ಮತ್ತು ಕೆಜೆಪಿ ತಲಾ ಒಂದು ಬಾರಿ ಗೆಲುವು ಸಾಧಿಸಿವೆ.

ಜಯಾನಂದ ಜಾವಣ್ಣನವರನ್ನು ಜೆಡಿಎಸ್‌ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಲಾಗಿದೆ. ಹಿರೇಕೆರೂರು ಕ್ಷೇತ್ರದಲ್ಲಿ ಒಂದು ಬಾರಿ ಜೆಡಿಎಸ್‌ಗೆ ಗೆಲುವು ಸಿಕ್ಕಿದ್ದರೂ, ಅದು ವ್ಯಕ್ತಿ ವರ್ಚಸ್ಸಿನಿಂದ ಎಂಬುದು ಮತದಾರರ ಅಭಿಪ್ರಾಯ. ಹೀಗಾಗಿ ಈ ಬಾರಿ ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆಯಲಿದೆ.

ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲೇ ಹಿರೇಕೆರೂರು ಕ್ಷೇತ್ರ ಅತಿ ಕಡಿಮೆ ಮತದಾರರನ್ನು ಹೊಂದಿದೆ. ಇಲ್ಲಿ ಲಿಂಗಾಯತ, ಕುರುಬ, ಮುಸ್ಲಿಂ ಮತ್ತು ದಲಿತ ಸಮುದಾಯಗಳು ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.

ಬಂಡಾಯ ಬಾವುಟ ಹಾರಿಸಿದ ಬನ್ನಿಕೋಡ

1989ರಲ್ಲಿ ಜನತಾದಳ ಮತ್ತು 1999ರಲ್ಲಿ ಪಕ್ಷೇತರರಾಗಿ ಗೆದ್ದು, ಎರಡು ಬಾರಿ ಶಾಸಕರಾಗಿದ್ದ ಬಿ.ಎಚ್‌.ಬನ್ನಿಕೋಡ ಅವರು ಈ ಬಾರಿ ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್‌ ಕೈತಪ್ಪಿದ ಕಾರಣ ಬಂಡಾಯ ಬಾವುಟ ಹಾರಿಸಿದ್ದಾರೆ.

‘1978ರಲ್ಲಿ ನಿಮ್ಮ ತಂದೆಯನ್ನು ಸೋಲಿಸಿದಂತೆ, ಈ ಚುನಾವಣೆಯಲ್ಲಿ ನಿನ್ನನ್ನು ಸೋಲಿಸುತ್ತೇನೆ. ಇದು ನನ್ನ ಚಾಲೆಂಜ್’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಯು.ಬಿ.ಬಣಕಾರ ಅವರಿಗೆ ಬನ್ನಿಕೋಡ ಅವರು ಸವಾಲು ಹಾಕಿರುವುದು ಕಾಂಗ್ರೆಸ್‌ನಲ್ಲಿ ತಳವಳ ಉಂಟು ಮಾಡಿದೆ. ಬನ್ನಿಕೋಡ ಅವರನ್ನು ಸಮಾಧಾನಪಡಿಸಲು ಕಾಂಗ್ರೆಸ್‌ ನಾಯಕರು ಯತ್ನಿಸಿದ್ದಾರೆ.

‘ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಇತ್ತೀಚೆಗೆ ನನ್ನ ಮನೆಗೆ ಭೇಟಿ ನೀಡಿ, ಚುನಾವಣೆಯಲ್ಲಿ ಬೆಂಬಲಿಸುವಂತೆ ವಿನಂತಿಸಿದ್ದಾರೆ. ಏ.13ರಂದು ನನ್ನ ಅಭಿಮಾನಿಗಳೊಂದಿಗೆ ಚರ್ಚಿಸಿ, ನಂತರ ನನ್ನ ಮುಂದಿನ ರಾಜಕೀಯ ನಡೆ ನಿರ್ಧರಿಸುತ್ತೇನೆ’ ಎಂದು ಬನ್ನಿಕೋಡ ತಿಳಿಸಿದ್ದಾರೆ.

ಹಿರೇಕೆರೂರು ಕ್ಷೇತ್ರ: ವಿಜೇತರ ವಿವರ

ವರ್ಷ;ವಿಜೇತ ಅಭ್ಯರ್ಥಿ;ಪಕ್ಷ

1957;ಶಂಕರರಾವ್‌ ಗುಬ್ಬಿ;ಕಾಂಗ್ರೆಸ್‌

1962;ಶಂಕರರಾವ್‌ ಗುಬ್ಬಿ;ಕಾಂಗ್ರೆಸ್‌

1967;ಶಂಕರರಾವ್‌ ಗುಬ್ಬಿ;ಕಾಂಗ್ರೆಸ್‌

1972;ಬಿ.ಜಿ.ಬಣಕಾರ;ಕಾಂಗ್ರೆಸ್‌

1978;ಶಂಕರರಾವ್‌ ಗುಬ್ಬಿ;ಕಾಂಗ್ರೆಸ್‌

1983;ಬಿ.ಜಿ.ಬಣಕಾರ;ಪಕ್ಷೇತರ

1985;ಬಿ.ಜಿ.ಬಣಕಾರ;ಜನತಾದಳ

1989;ಬಿ.ಎಚ್‌.ಬನ್ನಿಕೋಡ;ಜನತಾದಳ

1994;ಯು.ಬಿ.ಬಣಕಾರ;ಬಿಜೆಪಿ

1999;ಬಿ.ಎಚ್‌.ಬನ್ನಿಕೋಡ;ಕಾಂಗ್ರೆಸ್‌

2004;ಬಿ.ಸಿ.ಪಾಟೀಲ;ಜೆಡಿಎಸ್‌

2008;ಬಿ.ಸಿ.ಪಾಟೀಲ;ಕಾಂಗ್ರೆಸ್‌

2013;ಯು.ಬಿ.ಬಣಕಾರ;ಕೆಜೆಪಿ

2018;ಬಿ.ಸಿ.ಪಾಟೀಲ;ಕಾಂಗ್ರೆಸ್‌

2019;ಬಿ.ಸಿ.ಪಾಟೀಲ;ಬಿಜೆಪಿ

***

ಮತದಾರರ ವಿವರ

94,897– ಪುರುಷರು

90,157– ಮಹಿಳೆಯರು

1,85,054– ಒಟ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT