ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Elections | ಭ್ರಷ್ಟಾಚಾರದ ಹೊದಿಕೆ, ಅಭಿವೃದ್ಧಿ ಕನವರಿಕೆ

Last Updated 19 ಏಪ್ರಿಲ್ 2023, 8:31 IST
ಅಕ್ಷರ ಗಾತ್ರ

ದಾವಣಗೆರೆ: ಚುನಾವಣಾ ವರ್ಷದ ಆರಂಭದಲ್ಲೇ ಸದ್ದು ಮಾಡಿದ್ದ ‘ಹಿಂದುತ್ವ’, ‘ಮುಸ್ಲಿಂ ಗೂಂಡಾಗಿರಿ’ ವಿಚಾರಗಳು ಇದೀಗ ಕ್ಷೀಣಿಸಿದೆ. ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲೀಗ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ‘ಅಭಿವೃದ್ಧಿ’ ಹಾಗೂ ‘ಭ್ರಷ್ಟಾಚಾರ’ ವಿಚಾರಗಳನ್ನೇ ಪ್ರಮುಖ ಅಸ್ತ್ರಗನ್ನಾಗಿ ವಿಧಾನಸಭಾ ಚುನಾವಣಾ ಕಣದಲ್ಲಿ ಪ್ರಯೋಗಿಸುತ್ತಿವೆ.

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಶಾಸಕ ಕೆ.ಎಸ್‌. ಈಶ್ವರಪ್ಪ ಅವರು ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಈ ಬಾರಿ ‘ಹೊಸ ನೀರು’ ಹರಿಯಲು ದಾರಿ ಮಾಡಿಕೊಟ್ಟಿರುವುದು ವಿಶೇಷವಾಗಿದೆ.

ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ, ಹಿಜಾಬ್‌ ವಿವಾದ, ಸಾವರ್ಕರ್‌ ಭಾವಚಿತ್ರವಿರುವ ಫ್ಲೆಕ್ಸ್‌ ಅಳವಡಿಕೆ ವಿಚಾರಗಳಿಗೆ ನಡೆದ ಕೋಮುಗಲಭೆಗಳು, ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ತೀರ್ಥಹಳ್ಳಿಯ ಶಾರಿಕ್‌ ಬಂಧನದ ವಿಚಾರಗಳು ಶಿವಮೊಗ್ಗ ಜಿಲ್ಲೆಯ ಜನರ ನೆಮ್ಮದಿಯನ್ನು ಕೆಡಿಸಿತ್ತು. ಒಂದು ಕಾಲದಲ್ಲಿ ‘ಸಮಾಜವಾದ’ಕ್ಕೆ ಹೆಸರಾಗಿದ್ದ ಶಿವಮೊಗ್ಗದಲ್ಲಿ ‘ಕೋಮುವಾದ’ ವಿಜ್ರಂಭಿಸಿತ್ತು.

ಬಿಜೆಪಿಯು ‘ಹಿಂದುತ್ವ’ವನ್ನು ಮತ್ತೆ ಮುಂಚೂಣಿಗೆ ತರಲು ಮುಂದಾದ ಬೆನ್ನಲ್ಲೇ ಕಾಂಗ್ರೆಸ್‌– ಜೆಡಿಎಸ್‌ ಪಕ್ಷದವರು ವಿವಿಧ ಸಂಘಟನೆಗಳ ಜೊತೆಗೂಡಿ ‘ಶಾಂತಿ–ಸೌಹಾರ್ದ’ಕ್ಕಾಗಿ ಹೋರಾಟ ನಡೆಸಿ ಜನರ ವಿಶ್ವಾಸ ಗಳಿಸಲು ಮುಂದಾಗಿದ್ದರು.

‘ಕೆಂಪುಕೋಟೆ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ’ ಹಾಗೂ ‘ಅಲ್ಲಾನಿಗೆ ಕಿವಿ ಕೇಳಿಸುವುದಿಲ್ಲವೇ’ ಎಂದು ಕೆ.ಎಸ್‌. ಈಶ್ವರಪ್ಪ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ಬಿಜೆಪಿಗೆ ಮುಜುಗರ ತಂದಿತ್ತು. ಇನ್ನೊಂದೆಡೆ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಅವರು ಈಶ್ವರಪ್ಪ ವಿರುದ್ಧ ಸಮರ ಸಾರಿ, ಅವರ ಕ್ಷೇತ್ರದಿಂದಲೇ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಪಟ್ಟು ಹಿಡಿದಿದ್ದರು. ಈ ಬೆಳವಣಿಗೆಗಳಿಂದ ಪಕ್ಷಕ್ಕೆ ಹಿನ್ನಡೆಯಾಗುವ ಆತಂಕ ಎದುರಾದ ಬೆನ್ನಲ್ಲೇ ಬಿಜೆಪಿ ವರಿಷ್ಠರು, ಈಶ್ವರಪ್ಪ ಅವರಿಂದ ‘ಚುನಾವಣಾ ರಾಜಕಾರಣದಿಂದ ನಿವೃತ್ತಿ’ ಘೋಷಿಸುವಂತೆ ಮಾಡಿದ್ದಾರೆ. ಆ ಮೂಲಕ ಶಿವಮೊಗ್ಗದಲ್ಲಿ ಮತ್ತೆ ಮುಸ್ಲಿಂ ಮತದಾರರನ್ನು ಪಕ್ಷದತ್ತ ಸೆಳೆಯಲು ಯತ್ನಿಸಿದ್ದಾರೆ. ‘ಹಿಂದುತ್ವ’ ವಿಚಾರಕ್ಕಿಂತಲೂ ಹೆಚ್ಚಾಗಿ ವಿಮಾನ ನಿಲ್ದಾಣ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಯೋಜನೆಗಳನ್ನೇ ಬಿಜೆಪಿ ಇದೀಗ ಪ್ರಚಾರದ ಸರಕನ್ನಾಗಿ ಮಾಡಿಕೊಂಡಿದೆ.

ಶರಾವತಿ ಹಿನ್ನೀರು ಸಂತ್ರಸ್ತರಿಗೆ ಹಕ್ಕುಪತ್ರ ಸಿಗದಿರುವುದು, ಬಗರ್‌ ಹುಕುಂ ಸಾಗುವಳಿದಾರರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೆಪಿಸಿಸಿ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ಆಯನೂರಿನಿಂದ ಶಿವಮೊಗ್ಗವರೆಗೆ ಪಾದಯಾತ್ರೆ ನಡೆಸುವ ಮೂಲಕ ಕಾಂಗ್ರೆಸ್‌ ರೈತರ ಬೆಂಬಲಕ್ಕೆ ನಿಂತಿತ್ತು. ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚುತ್ತಿರುವುದು, ಕಸ್ತೂರಿರಂಗನ್‌ ವರದಿ ವಿಚಾರಗಳೂ ಚುನಾವಣೆಯಲ್ಲಿ ಚರ್ಚೆಯ ವಿಷಯವಾಗಿದೆ.

ಈಶ್ವರಪ್ಪ ವಿರುದ್ಧ ಕಮಿಷನ್‌ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ, ಗೃಹ ಸಚಿವರ ವಿರುದ್ಧ ಆರೋಪ ಕೇಳಿಬಂದ ಪಿಎಸ್‌ಐ ನೇಮಕಾತಿ ಹಗರಣಗಳನ್ನು ಮುಂದಿಟ್ಟು ಕೊಂಡು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಆಡಳಿತ ವಿರೋಧಿ ಅಲೆಯನ್ನು ಎಬ್ಬಿಸಲು ಯತ್ನಿಸುತ್ತಿದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಇದುವರೆಗೂ ಹಾವು– ಮುಂಗುಸಿ ಯಂತೆ ಕಿತ್ತಾಡುತ್ತಿದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ ಹಾಗೂ ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ ಇದೀಗ ಒಂದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ‘ಖೆಡ್ಡಾ’ದಲ್ಲಿ ಬೀಳಿಸಲು ತಂತ್ರ ರೂಪಿಸುತ್ತಿದ್ದಾರೆ.

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರವು ಶಿಫಾರಸು ಮಾಡಿರುವುದಕ್ಕೆ ವಿಶೇಷವಾಗಿ ಬಂಜಾರ, ಭೋವಿ ಸಮುದಾಯದ ಆಕ್ರೋಶ ಸ್ಫೋಟಗೊಂಡಿದೆ. ಶಿಕಾರಿಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಲಾಗಿತ್ತು. ಶಿಕಾರಿಪುರದ ತಾಂಡಾಗಳಿಗೆ ಪ್ರಚಾರಕ್ಕೆ ತೆರಳಿದಾಗ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಅವರಿಗೆ ಪ್ರತಿರೋಧ ವ್ಯಕ್ತವಾಗುತ್ತಿದೆ. ಒಳ ಮೀಸಲಾತಿ ಕಲ್ಪಿಸುವ ಹಾಗೂ ಮುಸ್ಲಿಮರಿಗೆ 2ಬಿ ಮೀಸಲಾತಿ ರದ್ದುಗೊಳಿಸಿರುವ ವಿವಾದದ ಲಾಭವನ್ನು ಪಡೆಯಲು ಕಾಂಗ್ರೆಸ್‌ ಹವಣಿಸುತ್ತಿದೆ.

ನೀರಾವರಿ ರಾಜಕಾರಣ: ಬರಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿಯೂ ‘ನೀರಾವರಿ ರಾಜಕಾರಣ’ ಮುಂದುವರಿದಿದೆ. ಎರಡು ದಶಕಗಳಾದರೂ ಪೂರ್ಣಗೊಳ್ಳದ ಭದ್ರಾ ಮೇಲ್ದಂಡೆ ಯೋಜನೆಯನ್ನೇ ಮುಂದಿಟ್ಟುಕೊಂಡು ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ರಾಜಕಾರಣ ಮಾಡುತ್ತಿವೆ.

ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಡಿಪಿಆರ್‌ ತಯಾರಿಸಲಾಗಿತ್ತು ಎಂದು ಜೆಡಿಎಸ್‌ ಹೇಳುತ್ತಿದ್ದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯೋಜನಾ ವೆಚ್ಚ ವನ್ನು ₹ 12,500 ಕೋಟಿಗೆ ಹೆಚ್ಚಿಸಿದ್ದರಿಂದಲೇ ಕಾಮಗಾರಿ ವೇಗ ಪಡೆದುಕೊಂಡಿತು ಎಂದು ಕಾಂಗ್ರೆಸ್‌ ಪ್ರತಿಪಾದಿಸುತ್ತಿದೆ. ‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕಾಮಗಾರಿ ಆರಂಭಿಸಲಾಗಿತ್ತು. ಕೇಂದ್ರ ಸರ್ಕಾರವು ಈ ಯೋಜನೆಗೆ ₹ 5,300 ಕೋಟಿ ಅನುದಾನ ಘೋಷಿಸಿದ್ದು, ‘ಡಬಲ್‌ ಎಂಜಿನ್‌’ ಸರ್ಕಾರದಿಂದಾಗಿ ರೈತರ ಬಹುದಿನಗಳ ಕನಸು ನನಸಾಗುತ್ತಿದೆ’ ಎಂದು ಬಿಜೆಪಿಯು ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಪ್ರಚಾರ ಮಾಡುತ್ತಿದೆ.

ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕು ಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ; ವಾಣಿವಿಲಾಸ ಸಾಗರದ ಕಾಲುವೆ ಪುನಶ್ಚೇತನ ವಿಚಾರಗಳೂ ಇದೀಗ ಮುಂಚೂಣಿಗೆ ಬಂದಿದೆ.

ಚಿತ್ರದುರ್ಗದಲ್ಲಿ ಆಡಳಿತ ಪಕ್ಷದ ಶಾಸಕರೊಬ್ಬರ ಮೇಲೆ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರು ಮಾಡಿದ್ದ ಕಮಿಷನ್‌ ಆರೋಪಗಳನ್ನೂ ಕಾಂಗ್ರೆಸ್‌, ಜೆಡಿಎಸ್‌ನವರು ಚುನಾವಣಾ ಅಸ್ತ್ರವನ್ನಾಗಿ ಪ್ರಯೋಗಿಸುತ್ತಿದ್ದಾರೆ.

ಸದ್ದು ಮಾಡುತ್ತಿರುವ ಮಾಡಾಳ್‌ ಪ್ರಕರಣ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ (ಕೆ.ಎಸ್‌.ಡಿ.ಎಲ್‌) ಟೆಂಡರ್‌ ಕೊಡಿಸಲು ಪುತ್ರನ ಮೂಲಕ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪ್ರಕರಣ ರಾಜ್ಯದಲ್ಲೇ ಸಂಚಲನ ಮೂಡಿಸಿತ್ತು. ಇದೀಗ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನವರು ‘40 ಪರ್ಸೆಂಟ್‌ ಸರ್ಕಾರ’ ಎಂದು ‘ಭ್ರಷ್ಟಾಚಾರದ ಅಸ್ತ್ರ’ವನ್ನು ಬಿಜೆಪಿ ಮೇಲೆ ಪ್ರಯೋಗಿಸುತ್ತಿದ್ದಾರೆ. ಚನ್ನಗಿರಿ ಕ್ಷೇತ್ರದಲ್ಲಿ ಮಾಡಾಳ್‌ ಕುಟುಂಬಕ್ಕೆ ಟಿಕೆಟ್‌ ನೀಡದ ಬಿಜೆಪಿಯ ವರಿಷ್ಠರು, ‘ಭ್ರಷ್ಟಾಚಾರ ಸಹಿಸಲ್ಲ’ ಎಂಬ ಸಂದೇಶ ರವಾನಿಸಿ, ಪಕ್ಷದ ಘನತೆಗೆ ಕುಂದುಂಟಾಗುತ್ತಿರುವುದನ್ನು ತಡೆಯಲು ಯತ್ನಿಸಿದ್ದಾರೆ.

92 ವರ್ಷದ ಶಾಸಕ ಶಾಮನೂರು ಶಿವಂಕರಪ್ಪ ಹಾಗೂ ಅವರ ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಗೇ ಮತ್ತೆ ಟಿಕೆಟ್‌ ನೀಡುವ ಮೂಲಕ ಕಾಂಗ್ರೆಸ್‌ ‘ಕುಟುಂಬ ರಾಜಕಾರಣ’ಕ್ಕೆ ಮಣೆ ಹಾಕುತ್ತಿದೆ ಎಂದು ಬಿಜೆಪಿಯವರು ಸ್ಥಳೀಯವಾಗಿ ಪ್ರಚಾರದ ವಿಷಯವನ್ನಾಗಿಸಿಕೊಂಡಿದ್ದಾರೆ.

ಮಾಯಕೊಂಡ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಬಸವರಾಜ ನಾಯ್ಕ ವಿರುದ್ಧ 11 ಜನ ಆಕಾಂಕ್ಷಿಗಳು ಸೇರಿ ಬಂಡಾಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮುಂದಾಗಿರುವುದಕ್ಕೆ ವಿರೋಧ ಪಕ್ಷದವರು, ‘ಕಮಲ’ಕ್ಕೆ ಕೆಸರು ಮೆತ್ತಿಕೊಳ್ಳುತ್ತಿದೆ ಎಂದು ಕುಹಕವಾಡುತ್ತಿದ್ದಾರೆ.

ಮಠಾಧಿಪತಿಗಳ ರಾಜಧರ್ಮ
ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿರುವ ವಿವಿಧ ಸಮುದಾಯಗಳ ಮಠಗಳು ತಮ್ಮ ಸಮುದಾಯದವರಿಗೆ ಟಿಕೆಟ್‌ ಕೊಡಿಸುವುದು ಹಾಗೂ ಚುನಾವಣೆಯಲ್ಲಿ ಅವರು ಗೆಲ್ಲುವಂತೆ ಮಾಡಲು ಪ್ರಭಾವ ಬೀರುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ‘ರಾಜಕೀಯ ಪಕ್ಷಗಳು ಭೋವಿ ಸಮಾಜದವರಿಗೆ ಟಿಕೆಟ್‌ ನೀಡುವಲ್ಲಿ ಅನ್ಯಾಯ ಮಾಡಿವೆ’ ಎಂದು ಚಿತ್ರದುರ್ಗದ ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿರಿಗೆರೆಯ ತರಳಬಾಳು ಮಠ, ಚಿತ್ರದುರ್ಗದ ಮುರುಘಾ ಮಠ, ಹರಿಹರದ ಪಂಚಮಸಾಲಿ ಗುರುಪೀಠ, ವಾಲ್ಮೀಕಿ ಗುರುಪೀಠ, ಕನಕ ಗುರುಪೀಠ, ಚಿತ್ರದುರ್ಗ ಜಿಲ್ಲೆಯಲ್ಲಿರುವ ಭಗೀರಥ ಗುರುಪೀಠ, ಮಾದಾರ ಗುರುಪೀಠಗಳು ರಾಜಕಾರಣದ ಮೇಲೆ ಪ್ರಭಾವ ಬೀರುವಂಥವು. ಅಂತೆಯೇ ವಿವಿಧ ರಾಜಕೀಯ ಪಕ್ಷಗಳ ನಾಯಕರು ಇಲ್ಲಿನ ಮಠಗಳಿಗೆ ಭೇಟಿ ನೀಡಿ ಆ ಸಮುದಾಯದವರನ್ನು ತಮ್ಮ ಮತಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸುತ್ತಾರೆ.



ಪರಿಣಾಮ ಬೀರಬಹುದಾದ ವಿಷಯಗಳು

ಶಿವಮೊಗ್ಗ ಜಿಲ್ಲೆ

*ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ

*ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆ

*ಶಿವಮೊಗ್ಗ ನಗರದಲ್ಲಿ ನಡೆದ ಕೋಮುಗಲಭೆ

*ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚುವ ನಿರ್ಧಾರ

*ಅಡಿಕೆಗೆ ರೋಗಬಾಧೆ ಹಾಗೂ ಬೆಲೆ ಅಸ್ಥಿರತೆ

ಚಿತ್ರದುರ್ಗ ಜಿಲ್ಲೆ

*ಮಂದಗತಿಯಲ್ಲಿ ಸಾಗುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ

*ವಾಣಿವಿಲಾಸ ಸಾಗರದ ಕಾಲುವೆ ಆಧುನೀಕರಣ

*ನನೆಗುದಿಗೆ ಬಿದ್ದ ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗ

*ಇನ್ನೂ ಪುನರಾರಂಭವಾಗದ ವಾಣಿವಿಲಾಸ ಸಕ್ಕರೆ ಕಾರ್ಖಾನೆ

*ಆರಂಭಗೊಳ್ಳದ ಸರ್ಕಾರಿ ವೈದ್ಯಕೀಯ ಕಾಲೇಜು

ದಾವಣಗೆರೆ ಜಿಲ್ಲೆ

*ಮಂಜೂರಾಗದ ಸರ್ಕಾರಿ ವೈದ್ಯಕೀಯ ಕಾಲೇಜು

*ಸಾಕಾರಗೊಳ್ಳದ ಕೈಗಾರಿಕಾ ಕಾರಿಡಾರ್‌

*ಈಡೇರದ ಮಾಯಕೊಂಡ ತಾಲ್ಲೂಕು ಬೇಡಿಕೆ

*ನನೆಗುದಿಗೆ ಬಿದ್ದಿರುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ

*ಪೂರ್ಣಗೊಳ್ಳದ ಕೆರೆ ತುಂಬಿಸುವ ಯೋಜನೆಗಳು

ಪೂರಕ ಮಾಹಿತಿ: ವೆಂಕಟೇಶ್‌ ಜಿ.ಎಚ್‌., ಜಿ.ಬಿ. ನಾಗರಾಜ್‌, ಬಾಲಕೃಷ್ಣ ಪಿ.ಎಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT