ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಬಿಹಾರದ ಸಾರಣ್‌ನಲ್ಲಿ ರಾಜೀವ್‌–ರೋಹಿಣಿ ಮುಖಾಮುಖಿ

Published 22 ಏಪ್ರಿಲ್ 2024, 23:37 IST
Last Updated 22 ಏಪ್ರಿಲ್ 2024, 23:37 IST
ಅಕ್ಷರ ಗಾತ್ರ
ರಾಜೀವ್‌ ಪ್ರತಾಪ್‌ ರೂಡಿ: ಬಿಜೆಪಿ

ಬಿಹಾರದ ಸಾರಣ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಕೇಂದ್ರದ ಮಾಜಿ ಸಚಿವ, ಹಿರಿಯ ಮುಖಂಡ ರಾಜೀವ್‌ ಪ್ರತಾಪ್‌ ರೂಡಿ ಅವರನ್ನು ಮತ್ತೆ ಕಣಕ್ಕಿಳಿಸಿದೆ.

2014 ಮತ್ತು 2019ರಲ್ಲಿ ಇಲ್ಲಿಂದ ಜಯಿಸಿದ್ದ ಅವರು ‘ಹ್ಯಾಟ್ರಿಕ್‌’ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ರಾಜಕೀಯ ಅನುಭವ ಮತ್ತು ಕ್ಷೇತ್ರದಲ್ಲಿ ಹೊಂದಿರುವ ಪ್ರಭಾವದಿಂದ ರೂಡಿ ಮತ್ತೊಮ್ಮೆ ಗೆಲ್ಲಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಕಳೆದ ಚುನಾವಣೆಯಲ್ಲಿ ಅವರು ಆರ್‌ಜೆಡಿಯ ಚಂದ್ರಿಕಾ ರಾಯ್‌ ವಿರುದ್ಧ 1,38,429 ಮತಗಳ ಅಂತರದಿಂದ ಗೆದ್ದಿದ್ದರು. 2014ರಲ್ಲಿ ಲಾಲು ಪ್ರಸಾದ್‌ ಪತ್ನಿ, ರಾಬ್ಡಿ ದೇವಿ ಅವರನ್ನು ಮಣಿಸಿದ್ದ ರೂಡಿ ಇದೀಗ ಮತ್ತೆ ಲಾಲು ಕುಟುಂಬದ ಸವಾಲು ಎದುರಿಸುತ್ತಿದ್ದಾರೆ.

ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಕೌಶಲಾಭಿವೃದ್ದಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು.

ರೋಹಿಣಿ ಆಚಾರ್ಯ: ಆರ್‌ಜೆಡಿ

ಸಾರಣ್ ಕ್ಷೇತ್ರದಿಂದ ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಯಾಗಿ ಆರ್‌ಜೆಡಿಯ ರೋಹಿಣಿ ಆಚಾರ್ಯ ಅಖಾಡಕ್ಕಿಳಿದಿದ್ದಾರೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಕಿರಿಯ ಪುತ್ರಿಯಾಗಿರುವ ರೋಹಿಣಿ ಅವರು ಸಿಂಗಪುರದಲ್ಲಿ ನೆಲೆಸಿರುವರಾದರೂ, ಚುನಾವಣೆಯಲ್ಲಿ ಸ್ಪರ್ಧಿಸಲು ತವರಿಗೆ ಬಂದಿದ್ದಾರೆ.

ಲಾಲು ಪ್ರಸಾದ್ ಅವರು 1977ರಲ್ಲಿ ಮೊದಲ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅದೇ ಕ್ಷೇತ್ರದಿಂದ ರೋಹಿಣಿ ಕೂಡಾ ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಆಗ ಸಾರಣ್‌ ಲೋಕಸಭಾ ಕ್ಷೇತ್ರಕ್ಕೆ ಛ‍ಪ್ರಾ ಎಂಬ ಹೆಸರಿತ್ತು.

2009ರ ಕ್ಷೇತ್ರ ಮರುವಿಂಗಡಣೆ ಬಳಿಕ ಸಾರಣ್‌ ಎಂಬ ಹೆಸರು ಪಡೆದುಕೊಂಡಿತು. ರೋಹಿಣಿ ಅವರು 2022ರಲ್ಲಿ ತಮ್ಮ ಒಂದು ಕಿಡ್ನಿಯನ್ನು ತಂದೆಗೆ ದಾನವಾಗಿ ನೀಡಿದ್ದರು. ಲಾಲು ಅವರು ಮಗಳಿಗೆ ಟಿಕೆಟ್‌ ನೀಡಿ ‘ಕುಟುಂಬ ರಾಜಕಾರಣ’ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT