ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಖಿತ ಪರೀಕ್ಷೆ ನಡೆಸಿ ‘ಬಿ’ ಫಾರಂ ಕೊಟ್ಟಿದ್ದೇನೆ!: ಉಪೇಂದ್ರ

’ರಾಜಕೀಯ ಸೇವೆಯಲ್ಲ, ಬದಲಿಗೆ ಅದೊಂದು ಕೆಲಸ'
Last Updated 30 ಏಪ್ರಿಲ್ 2019, 14:28 IST
ಅಕ್ಷರ ಗಾತ್ರ

ಬಾಗಲಕೋಟೆ: ‘ರಾಜಕೀಯ ಎಂದರೆ ಅದೊಂದು ಸೇವೆ ಅಲ್ಲ. ಬದಲಿಗೆ ಸಂಬಳ ಪಡೆದು ಮಾಡುವ ಜನರ ಕೆಲಸ. ಹಾಗಾಗಿಪಕ್ಷದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ತೆಗೆದುಕೊಂಡು, ಸಂದರ್ಶನ ಮಾಡಿ ನಂತರ ಬಿ ಫಾರಂ ಕೊಟ್ಟಿದ್ದೇನೆ’ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕರೂ ಆದ ಚಿತ್ರನಟ ಉಪೇಂದ್ರ ಹೇಳಿದರು.

‘ರಾಜಕೀಯ ಎಂದರೆ ಸೇವೆ ಎಂದು ಹೇಳುತ್ತಾ ವ್ಯಾಪಾರ ಮಾಡಿಕೊಂಡು ಕಳೆದ 72 ವರ್ಷಗಳಿಂದ ದೇಶದ ಜನರನ್ನು ವಂಚಿಸಲಾಗಿದೆ. ಕಂಪೆನಿ ಅಥವಾ ಸಂಸ್ಥೆಯಲ್ಲಿ ಕೆಲಸ ಸರಿಯಾಗಿ ಮಾಡದವರನ್ನು ತೆಗೆದು ಹಾಕುವಂತೆ ನಾಳೆ ಗೆದ್ದರೆ ಜನರ ಆಶಯಗಳಿಗೆ ಸ್ಪಂದಿಸದ ನಮ್ಮ ಪಕ್ಷದ ಪ್ರತಿನಿಧಿಯನ್ನು ರಾಜೀನಾಮೆ ಕೊಡಿಸುವೆ. ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವೆ’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಬಾಗಲಕೋಟೆ ಕ್ಷೇತ್ರದಿಂದ ಎನ್‌.ಶಶಿಕುಮಾರ ಸ್ಪರ್ಧಿಸಿದ್ದಾರೆ. ಐಹೊಳೆ ಪಕ್ಕದ ಉಪನಾಳ ಗ್ರಾಮದ ಶಶಿಕುಮಾರ 20 ವರ್ಷಗಳ ಹಿಂದೆ ದುಡಿಯಲು ಬೆಂಗಳೂರಿಗೆ ಬಂದವರು ಅಲ್ಲಿ ಗುತ್ತಿಗೆದಾರರಾಗಿ ಒಳ್ಳೆಯ ಹೆಸರು ಮಾಡಿದ್ದಾರೆ. ಮತದಾರರಿಗೆ ಪತ್ರ ಬರೆದು, ಮನೆ ಮನೆಗೆ ಹೋಗಿ ಪಕ್ಷದ ಧ್ಯೇಯೋದ್ದೇಶಗಳ ಬಗ್ಗೆ ಅವರ ಗಮನ ಸೆಳೆಯಲಿದ್ದೇವೆ ಹೊರತು ರ್‍ಯಾಲಿ, ಸಭೆ, ಸಮಾರಂಭ, ರೋಡ್‌ ಶೋ ನಡೆಸಿ ಜನರಿಗೆ ತೊಂದರೆ ಮಾಡುವ ಕೆಲಸ ಮಾಡುವುದಿಲ್ಲ ಎಂದರು.

‘ರಾಜಕೀಯದಲ್ಲಿ ಹಣದ ಹೊಳೆ ಹರಿದಾಗ ಅಲ್ಲಿ ಸೇವೆ ಅರ್ಥ ಕಳೆದುಕೊಳ್ಳುತ್ತದೆ. ಹಾಗಾಗಿ ಹಣ ಖರ್ಚು ಮಾಡದೇ ಚುನಾವಣೆ ಎದುರಿಸುವ ಕಾರ್ಯಕ್ಕೆ ಮುಂದಾಗಿದ್ದೇನೆ. ಯಾರಿಂದಲೂ ಪಕ್ಷಕ್ಕೆ ದೇಣಿಗೆ ಪಡೆದಿಲ್ಲ. ಬದಲಿಗೆ ರಾಜ್ಯಾದ್ಯಂತ ತಿರುಗಾಟ, ಕರಪತ್ರ ಮುದ್ರಣ ಮೊದಲಾದ ಖರ್ಚುಗಳನ್ನು ನನ್ನ ಜೇಬಿನಿಂದಲೇ ಭರಿಸುತ್ತಿದ್ದೇನೆ’ ಎಂದರು.

‘ಬಳ್ಳಾರಿ ಹೊರತಾಗಿ ರಾಜ್ಯದ 27 ಜಿಲ್ಲೆಗಳಿಂದಲೂ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನು ಹಾಕಿದ್ದೇನೆ. ಅವರ ಗೆಲುವಿಗೆ ಓಡಾಟ ನಡೆಸಬೇಕಿರುವ ಕಾರಣ, ನಾನು ಚುನಾವಣೆಗೆ ಸ್ಪರ್ಧಿಸಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧೆ ಮಾಡುವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಪ್ರಾದೇಶಿಕ ಪಕ್ಷದ ಅಗತ್ಯವಿದೆ’

‘ಕರ್ನಾಟಕಕ್ಕೆ ಪ್ರಬಲ ಪ್ರಾದೇಶಿಕ ಪಕ್ಷವೊಂದರ ಅಗತ್ಯವಿದೆ. ಹಾಗಾಗಿ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪಿಸಿದ್ದೇನೆ. ಅದಕ್ಕೊಂದು ಕಂಪೆನಿಯ ಸ್ವರೂಪ ನೀಡಿದ್ದೇನೆ. ಸಂಬಳ ಪಡೆಯುವುದರಿಂದ ಇಲ್ಲಿ ಲಾಭ–ನಷ್ಟದ ಪ್ರಶ್ನೆಯೇ ಬರುವುದಿಲ್ಲ. ಇಲ್ಲಿ ಅಭ್ಯರ್ಥಿಗಳಿಗೆ ಡ್ರೆಸ್‌ಕೋಡ್ ಇದೆ. ಶಿಸ್ತು ರೂಢಿಸಲಾಗಿದೆ. ವೃತ್ತಿಪರತೆ ತರಲಿದ್ದೇನೆ. ಆಟೊ ಚಾಲಕರು, ಹೋಟೆಲ್‌ ಕೆಲಸಗಾರರೇ ನಮ್ಮ ಪಕ್ಷದ ಸ್ಟಾರ್‌ ಪ್ರಚಾರಕರು’ ಎಂದು ಉಪೇಂದ್ರ ಹೇಳಿದರು.

‘ಬಾಗಲಕೋಟೆ ಕ್ಷೇತ್ರದ ಅಭ್ಯರ್ಥಿ ಬೆಂಗಳೂರಿನಲ್ಲಿ ವಾಸವಿದ್ದರೂ ಅವರು ಗೆದ್ದ ಮೇಲೆ ಇಲ್ಲಿಯೇ ಇರಲಿದ್ದಾರೆ.ನನಗೆ ಪಕ್ಷದ ಭವಿಷ್ಯ ಗೊತ್ತಿಲ್ಲ. ಅಭ್ಯರ್ಥಿಗಳಿಗೂ ಹೆಚ್ಚು ಖರ್ಚು ಮಾಡದಂತೆ ಹೇಳಿದ್ದೇನೆ. ಮಿಲಿಟರಿ ಸಿಸ್ಟಮ್ ರೀತಿ ತಮ್ಮ ತಮ್ಮ ಖರ್ಚು–ವೆಚ್ಚ ಅವರೇ ನೋಡಿಕೊಳ್ಳಲಿದ್ದಾರೆ. ಯಾರಿಗೂ ಪಾರ್ಟಿ ಫಂಡ್ ಕೊಟ್ಟಿಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ಶಶಿಕುಮಾರ, ಆರ್.ಡಿ.ಬಾಬು ಇದ್ದರು.

* ನಾವು ಪ್ರವಾಹದ (ರಾಷ್ಟ್ರೀಯ ಪಕ್ಷಗಳು) ವಿರುದ್ಧ ಈಜುತ್ತಿದ್ದೇವೆ ಎಂಬುದು ಗೊತ್ತಿದೆ. ಸತ್ತ ಮೀನುಗಳು ಮಾತ್ರ ಪ್ರವಾಹದ ಜೊತೆ ಕೊಚ್ಚಿಕೊಂಡು ಹೋಗುತ್ತವೆ, ಜೀವಂತ ಮೀನುಗಳು ಮಾತ್ರ ಎದುರಾಗಿ ಈಜುತ್ತವೆ.
-ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT