ಬುಧವಾರ, ಆಗಸ್ಟ್ 17, 2022
28 °C

ನಟನಾ ಹಾದಿಯಲ್ಲಿ ದಶಕ ಪೂರೈಸಿದ ರಣವೀರ್ ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ರಣವೀರ್ ಸಿಂಗ್‌ ಚಿತ್ರರಂಗಕ್ಕೆ ಕಾಲಿರಿಸಿ ಇಂದಿಗೆ ದಶಕ ಕಳೆದಿದೆ. ‘ಬ್ಯಾಂಡ್ ಬಾಜಾ ಬಾರಾತ್‌’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದ ಈ ಸುಂದರ ನಟ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ನಟನೆಯ ಪದ್ಮಾವತ್ ಸಿನಿಮಾ ₹300 ಕೋಟಿ ಗಳಿಕೆ ಕಂಡಿತ್ತು. ವಿಭಿನ್ನ ನಟನೆ, ಸ್ಟೈಲಿಶ್ ಹಾವಭಾವಗಳಿಂದ ಯುವಜನಾಂಗವನ್ನು ಸೆಳೆದಿರುವ ಇವರು ಸಿನಿಮಾ ಹಿನ್ನೆಲೆ ಇಲ್ಲದೇ ಬಂದು ಬಾಲಿವುಡ್‌ನಲ್ಲಿ ನೆಲೆಯೂರಿದವರು. 

ವಿಭಿನ್ನ ನಟನಾ ಪ್ರತಿಭೆ ಹೊಂದಿರುವ ರಣವೀರ್‌ ವಿವಿಧ ಕಥಾಹಿನ್ನೆಲೆಯ ಚಿತ್ರಗಳು ಹಾಗೂ ಪಾತ್ರಗಳ ಮೂಲಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ‘ಬ್ಯಾಂಡ್ ಬಾಜಾ ಬಾರಾತ್‌’ನಲ್ಲಿನ ಬಿಟ್ಟೂ ಶರ್ಮ, ‘ಲೂಟೆರಾ’ದಲ್ಲಿನ ಮೃದು ಹೃದಯದ ಚಾಣಾಕ್ಷ ಕಳ್ಳನ ಪಾತ್ರ, ‘ರಾಮ್‌ಲೀಲಾ’ದಲ್ಲಿ ರೋಮಿಯೋ ಪಾತ್ರ, ‘ಬಾಜಿರಾವ್‌ ಮಸ್ತಾನಿ’ಯಲ್ಲಿ ತೀಕ್ಷ್ಣ ನೋಟದ ಪೇಶ್ವಾ ಬಾಜಿರಾವ್‌, ‘ದಿಲ್‌ ಧಡಕನೆ ದೋ’ ಸಿನಿಮಾದಲ್ಲಿನ ಸಮಾಧಾನ ಚಿತ್ತದ ಮತ್ತು ಅತ್ಯಂತ ಸಂಕೀರ್ಣ ಮನಸ್ಥಿತಿಯ ಕಬೀರ್ ಮೆಹ್ತಾ, ‘ಪದ್ಮಾವತ್‌’ನಲ್ಲಿನ ಅತ್ಯಂತ ಚಾಣಾಕ್ಷ ಅಲ್ಲಾವುದ್ದೀನ್‌ ಖಿಲ್ಜಿ, ‘ಸಿಂಬಾ’ದಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿ ಮತ್ತು ‘ಗಲ್ಲಿ ಬಾಯ್‌’ನ ಬೀದಿ ಬದಿಯ ಗಾಯಕ ಮುರಾದ್‌ ಹೀಗೆ ವಿಭಿನ್ನ ಪಾತ್ರಗಳ ಮೂಲಕ ತಮ್ಮ ನಟನಾ ವೈವಿಧ್ಯವನ್ನು ತೋರಿದ್ದಾರೆ. ನಟನೆಯಲ್ಲಿ ದಶಕ ಪೂರೈಸಿದ ಈ ಸಂದರ್ಭದಲ್ಲಿ ತಮ್ಮ ಸಿನಿ ಪಯಣ, ನಿರೀಕ್ಷೆಗಳು, ಕನಸುಗಳು, ಮೊದಲ ಸಿನಿಮಾಗೂ ಮೊದಲು ತಾವು ಎದುರಿಸಿದ ಸಂಕಷ್ಟಗಳು ಮತ್ತು ದಾಖಲಿಸಲು ಬಯಸಿದ ಇತಿಹಾಸದ ಕುರಿತು ಅವರು ಮಾತನಾಡಿದ್ದಾರೆ.

* ದಶಕ ಪೂರೈಸಿದ ಈ ಸಂದರ್ಭದಲ್ಲಿ ಹಿಂದಿರುಗಿ ನೋಡಿದರೆ ಈ 10 ವರ್ಷಗಳಲ್ಲಿ ಯಾವ ಕ್ಷಣಗಳು ಅತಿದೊಡ್ಡ ವೃತ್ತಿ ಮೈಲಿಗಲ್ಲು ಎನ್ನಿಸುತ್ತದೆ ಮತ್ತು ಯಾಕೆ?

ವೃತ್ತಿಯಲ್ಲಿ ಎಲ್ಲಕ್ಕಿಂತ ಅತಿದೊಡ್ಡ ಮೈಲಿಗಲ್ಲು ಎಂದರೆ, ನಾನು ನನ್ನ ಮೊದಲ ಸಿನಿಮಾಗೆ ಆಯ್ಕೆಯಾಗಿದ್ದು. ಆ ಕ್ಷಣವನ್ನು ಎಂದಿಗೂ ಮರೆಯಲಾಗದು. ಈಗಲೂ ಅದರ ಬಗ್ಗೆ ಯೋಚಿಸಿದರೆ ನನಗೇ ಅಚ್ಚರಿಯಾಗುತ್ತದೆ. ನನ್ನಂತೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬರುವವರು ಇಷ್ಟರ ಮಟ್ಟಿಗೆ ಬೆಳೆಯುವುದು ಸುಲಭದ ಮಾತಲ್ಲ. ಒಮ್ಮೆ ಅದೃಷ್ಟ ತಿರುಗಿದ ನಂತರ ಈ ಹಾದಿಯಲ್ಲಿ ಹಿಂದೆ ತಿರುಗಿ ನೋಡಲೇ ಇಲ್ಲ. ಕ್ರಿಯಾಶೀಲ ವ್ಯಕ್ತಿ, ಪರ್ಫಾರ್ಮರ್‌ ಮತ್ತು ಸಾರ್ವಜನಿಕ ವ್ಯಕ್ತಿಯಾಗಿ ರೂಪುಗೊಂಡೆ. ವರ್ಷಗಳು ಕಳೆದಂತೆ ಹಾಗೂ ‍ಪ್ರತಿ ಸಿನಿಮಾದಲ್ಲೂ ನಟಿಸುತ್ತಾ ನಟಿಸುತ್ತಾ ಇನ್ನಷ್ಟು ಹೊಸ ಹೊಸ ಸಂಗತಿಗಳನ್ನು ಕಲಿಯುತ್ತಾ ಹೋದೆ. ನಾನು ನನ್ನನ್ನು ಸುಧಾರಿಸಿಕೊಳ್ಳುತ್ತಾ ಮತ್ತು ನನ್ನ ಕೌಶಲಗಳನ್ನು ಸುಧಾರಿಸಿಕೊಳ್ಳುತ್ತಲೇ ಸಾಗಿದೆ. ಪ್ರತಿ ಸಿನಿಮಾ ಮತ್ತು ಪ್ರತಿ ಪಾತ್ರದ ಮೂಲಕ ನಾನು ನನ್ನನ್ನು ಇನ್ನಷ್ಟು ಅನಾವರಣಗೊಳಿಸಿಕೊಳ್ಳುತ್ತಲೇ ಸಾಗಿದೆ. ಕೆಲವು ಬಾರಿ ನಾವು ಬೇರೆಯವರಾಗುತ್ತಾ, ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ಅನುಭವ ಮತ್ತು ಪ್ರತಿ ಸಿನಿಮಾ ಕೂಡ ಸ್ವಲ್ಪ ಹೆಚ್ಚು ತೆರೆದುಕೊಳ್ಳಲು ಅವಕಾಶ ಮಾಡಿತು. ಈ ಮೂಲಕ ನಾನು ಪ್ರತಿ ಅವಕಾಶಕ್ಕೂ ಆಭಾರಿಯಾಗಿದ್ದೇನೆ.

* ನಟನೆಗೂ ಮುಂಚಿನ ದಿನಗಳು ಹೇಗಿದ್ದವು?

ನಾನು ಸಿನಿಮಾದಲ್ಲಿ ನಟಿಸಲು ಪ್ರಯತ್ನಿಸುತ್ತಿದ್ದ ದಿನಗಳು ಸುಲಭದ್ದೇನೂ ಆಗಿರಲಿಲ್ಲ. ಆ ಸಮಯದಲ್ಲಿ ಆರ್ಥಿಕ ಹಿಂಜರಿಕೆ ಇತ್ತು. ಸಿನಿಮಾಗಳು ಕಡಿಮೆ ನಿರ್ಮಾಣವಾಗುತ್ತಿದ್ದವು. ಹೀಗಾಗಿ, ಈಗಿನ ನಟರಿಗಿಂತ ಆಗ ನಟರಿಗೆ ಅವಕಾಶಗಳು ಕಡಿಮೆ ಇದ್ದವು. ಈಗಿನಂತೆ ವೆಬ್‌, ಒಟಿಟಿ ವೇದಿಕೆಗಳು ಇರಲಿಲ್ಲ. ಹೀಗಾಗಿ, ಒಳ್ಳೆಯ ಅವಕಾಶಗಳು ಸಿಗುವುದೇ ಕಷ್ಟವಾಗುತ್ತಿತ್ತು. ಮೂರರಿಂದ ಮೂರುವರೆ ವರ್ಷಗಳವರೆಗೆ ಸುಮ್ಮನೆ ಅವಕಾಶಕ್ಕಾಗಿ ಅಲೆಯುತ್ತಿದ್ದೆ, ಹಲವು ಪ್ರಯತ್ನ ಮಾಡುತ್ತಿದ್ದೆ. ಒಂದು ಬ್ರೇಕ್‌ಗೆ ಕಾಯುತ್ತಿದ್ದೆ, ನನ್ನ ಪೋರ್ಟ್‌ಫೋಲಿಯೊ ಹಿಡಿದುಕೊಂಡು ಹಲವು ಕಚೇರಿಗಳಿಗೆ ಅಲೆಯುತ್ತಿದ್ದೆ. ನಾನು ಅಂದಿದ್ದ ಪರಿಸ್ಥಿತಿಯಲ್ಲಿ ಮುಖ್ಯಪಾತ್ರದಲ್ಲಿ ನಟಿಸಲು ಅವಕಾಶ ಸಿಗುತ್ತದೆ ಎಂದು ಯೋಚಿಸುವುದೇ ಕಷ್ಟವಾಗಿತ್ತು. ಸಣ್ಣ ಪುಟ್ಟ ಪಾತ್ರ ಸಿಗುವುದೇ ಕಷ್ಟವಾಗಿತ್ತು. ಆದರೆ ನನಗೆ ಒಳ್ಳೆಯ ಅವಕಾಶವೇ ಸಿಕ್ಕಿತು. ನನ್ನ ಪಾಲಕರ ಪ್ರೀತಿ, ತ್ಯಾಗ, ಬೆಂಬಲದಿಂದಾಗಿ ಹಾಗೂ ನನ್ನ ನಿರಂತರ ಪ್ರಯತ್ನದಿಂದ ನನಗೆ ಅವಕಾಶ ಸಿಕ್ಕಿತ್ತು. ನನಗೆ ಕಲಿಕೆಯ ಹಸಿವಿತ್ತು. ಕೆಲವು ಬಾರಿ ಮೂರ್ಖತನ ಮಾಡಿದ್ದೂ ಇದೆ. ಆದರೆ, ನನ್ನಲ್ಲಿ ಬದ್ಧತೆ ಇತ್ತು. ನಾನು ಪ್ರಯತ್ನ ಶುರು ಮಾಡಿದಾಗ 21 ವರ್ಷವಾಗಿತ್ತು. 24ನೇ ವಯಸ್ಸಿನಲ್ಲಿ ನನಗೆ ಬ್ರೇಕ್ ಸಿಕ್ಕಿತು. ಆ ಕಥೆಗಳು ಎಂದಿಗೂ ನೆನಪಿಸಿಕೊಳ್ಳುವಂಥದ್ದಾಗಿದೆ. 

* ಈ ಮಟ್ಟಿನ ಯಶಸ್ಸನ್ನು ನೀವು ನಿರೀಕ್ಷೆ ಮಾಡಿದ್ದೀರಾ?

ಇಲ್ಲ. ಖಂಡಿತ ಇಲ್ಲ. ನನ್ನ ಹೊಸ ಸಿನಿಮಾ ಬಿಡುಗಡೆಯಾದ ಮೊದಲ ಶುಕ್ರವಾರದವರೆಗೂ, ನನ್ನ ಎದುರು ತೆರೆದುಕೊಂಡ ಸನ್ನಿವೇಶಗಳು, ನನ್ನ ವೃತ್ತಿಯ ಮೈಲಿಗಲ್ಲುಗಳು ಮತ್ತು ನನ್ನ ಪಯಣವು ನನ್ನ ಕನಸಿಗೂ ಮೀರಿದ್ದಾಗಿತ್ತು. ನನ್ನ ಸುತ್ತ ನಡೆಯುತ್ತಿರುವ ಸಂಗತಿಗಳೆಲ್ಲವೂ ನನಗೆ ಕನಸಿನಂತೆಯೇ ಇವೆ. ಇಷ್ಟು ದೊಡ್ಡದಾಗಿ ಬೆಳೆಯುತ್ತೇನೆ ಎಂಬ ಕನಸನ್ನೂ ನಾನು ಕಟ್ಟಿರಲಿಲ್ಲ. ಏನಾದರೂ ಒಂದು ಆಗುತ್ತದೆ ಎಂದುಕೊಂಡಿದ್ದೆ. ಆದರೆ ಈ ರೀತಿ ಬೆಳೆದು ನಿಲ್ಲುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ದೊಡ್ಡ ಕನಸನ್ನು ಕಾಣಬೇಕು ಎಂದು ಹೇಳುತ್ತಾರೆ. ಆದರೆ, ನಾನೇ ನನ್ನ ಬಗ್ಗೆ ಇಷ್ಟು ದೊಡ್ಡ ಕನಸು ಕಟ್ಟಿಕೊಂಡಿರಲಿಲ್ಲ. ಹೀಗಾಗಿ, ನಾನು ಯೋಚಿಸುವುದನ್ನು ನಿಲ್ಲಿಸಿ, ಜೀವನ ಹೇಗೆ ಬದಲಾಗಿದೆ ಮತ್ತು ನಾನು ಇಂದು ಎಲ್ಲಿದ್ದೇನೆ ಎಂದು ನೋಡಿಕೊಂಡರೆ, ಇದು ನನಗೆ ಕನಸಿನಂತೆಯೇ ಇದೆ.

* ಭಾರತೀಯ ಸಿನಿರಂಗದಲ್ಲಿ ಯಾವ ರೀತಿ ಹೆಜ್ಜೆಗುರುತು ಮೂಡಿಸಲು ಬಯಸುತ್ತೀರಿ?

ಹೌದು, ಪ್ರತಿ ದಿನವೂ ನಾನು ನನ್ನ ಹೆಜ್ಜೆ ಗುರುತನ್ನು ಮೂಡಿಸುವ ಕುರಿತೇ ಶ್ರಮಿಸುತ್ತಿರುತ್ತೇನೆ. ಇದು ನನಗೆ ಹೆಮ್ಮೆ ಕೊಡುವ ಫಿಲ್ಮೋಗ್ರಫಿಯ ರೂಪದಲ್ಲಿ ಇರಬೇಕು. ಕಲೆಗೆ ನಾನು ಗಮನಾರ್ಹ ಕೊಡುಗೆ ನೀಡಬೇಕು ಮತ್ತು ಮುಂದೆ ಬರುವ ಕಲಾವಿದರಿಗೆ ಸ್ಫೂರ್ತಿಯಾಗಬೇಕು. ನನಗೂ ನನ್ನ ಹಿರಿಯ ಕಲಾವಿದರೂ ಸ್ಫೂರ್ತಿಯಾಗಿದ್ದರು. ಇತಿಹಾಸ ನಮ್ಮನ್ನು ನೆನಪಿಟ್ಟುಕೊಳ್ಳಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ನಾವು ಸಾಮಾಜಿಕ ಜೀವಿಗಳಾಗಿರುವುದರಿಂದ ಇದು ಸಹಜ ಬಯಕೆ. ಜನರು ಮನರಂಜನೆ, ವೈವಿಧ್ಯತೆ ಹಾಗೂ ಉತ್ತಮ ಸಿನಿಮಾಗಳಲ್ಲಿ ನಟಿಸಿದ ನಟ ಎಂದು ನನ್ನನ್ನು ಮನಸ್ಸಲ್ಲಿಟ್ಟುಕೊಳ್ಳಬೇಕು ಎಂದು ಆಸೆ ಪಡುತ್ತೇನೆ. ಇವು ಅತಿ ದೊಡ್ಡ ಮಹತ್ವಾಕಾಂಕ್ಷೆಗಳು. ಆದರೆ, ನಾನು ಮಾಡುವ ಸಿನಿಮಾಗಳಲ್ಲಿ ಇದು ಸಾಬೀತಾಗುವಂತೆ ಮತ್ತು ಕೆಲಸದ ಮೂಲಕ ನನ್ನ ದೇಶಕ್ಕೆ ಹೆಮ್ಮೆ ತರುವಂತೆ ಮಾಡುವಲ್ಲಿ ನಾನು ಪ್ರತಿ ದಿನವೂ ಶ್ರಮಿಸುತ್ತಿರುತ್ತೇನೆ. ಜನರಿಗೆ ನಾನು ಮನರಂಜನೆ ನೀಡಬೇಕು ಎಂಬುದೇ ನನ್ನ ಮುಖ್ಯ ಧ್ಯೇಯ. ನನ್ನನ್ನು ಜನರು ಮನರಂಜಿಸುವ ನಟ ಎಂದು ನೋಡಬೇಕು ಮತ್ತು ದೇವರು ನನ್ನನ್ನು ಆ ದಾರಿಯಲ್ಲಿ ನಡೆಸುತ್ತಿದ್ದಾನೆ ಎಂದು ನಾನು ಭಾವಿಸುತ್ತೇನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು