ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಲ್. ವೇಣು ಸಿನಿಯಾನ

Last Updated 30 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಬಿ.ಎಲ್‌. ವೇಣು ಅವರದ್ದು ಸಾಹಿತ್ಯ ಮತ್ತು ಸಿನಿಮಾ ಎಂಬ ಎರಡು ದೋಣಿಯಲ್ಲಿನ ಪಯಣ.‘ಅಪರಂಜಿ’ ಮತ್ತು ‘ತಿಪ್ಪಜ್ಜಿ ಸರ್ಕಲ್‌’ ಸಿನಿಮಾಗಳ ಸಂಭಾಷಣೆಗೆ ರಾಜ್ಯ ಪ್ರಶಸ್ತಿ ಪಡೆದ ಹಿರಿಮೆ ಅವರದು.

‘ನಾನು ಚಿತ್ರರಂಗ ಪ್ರವೇಶಿಸಿದ್ದು ಎಂಬತ್ತರ ದಶಕದಲ್ಲಿ. ಸಾಹಿತ್ಯ ಮತ್ತು ಸಿನಿಮಾ ಎರಡನ್ನೂ ಬಿಡಲಿಲ್ಲ. ಮುಖ್ಯವಾಗಿ ಚಿತ್ರದುರ್ಗವನ್ನು ಬಿಡಲಿಲ್ಲ...’

–ಹೀಗೆಂದು ಹೇಳಿ ಹಗುರವಾಗಿ ನಕ್ಕರು ಸಾಹಿತಿ ಬಿ.ಎಲ್‌. ವೇಣು. ಅವರು ಚಿತ್ರರಂಗ ಪ್ರವೇಶಿಸಿದ್ದು ಆಕಸ್ಮಿಕ. ಮೂರೂವರೆ ದಶಕದ ಅವರ ಸಿನಿಯಾನದಲ್ಲಿ ಅರವತ್ತೇಳು ಸಿನಿಮಾಗಳಿಗೆ ಸಂಭಾಷಣೆ ಬರೆದ ಹೆಗ್ಗಳಿಕೆ ಅವರದು. ಅವರು ಬರೆದ ಇಪ್ಪತ್ತು ಕಾದಂಬರಿಗಳು ಸಿನಿಮಾಗಳಾಗಿವೆ. ಏಳೆಂಟು ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದಾರೆ. ‘ಸಾಹಿತಿಯೊಬ್ಬರ ಇಷ್ಟು ಸಂಖ್ಯೆಯ ಕಾದಂಬರಿಗಳು ಸಿನಿಮಾಗಳಾಗಿರುವುದು ಕನ್ನಡದಮಟ್ಟಿಗೆ ದಾಖಲೆ’ ಎಂದು ಹೆಮ್ಮೆಯಿಂದಲೇ ಹೇಳುತ್ತಾರೆ ಅವರು.

ವೇಣು ಮೂಲತಃ ಸಾಹಿತಿ. ಪತ್ರಿಕೆಯಲ್ಲಿ ಪ್ರಕಟವಾದ ಅವರಕಥೆಯೊಂದು ‘ದೊಡ್ಡಮನೆ ಎಸ್ಟೇಟ್’ ಹೆಸರಿನಡಿ ಸಿನಿಮಾವಾಯಿತಂತೆ. ಇದೇ ಅವರು ಬಣ್ಣದಲೋಕ ಪ್ರವೇಶಿಸಲು ವೇದಿಕೆಯಾಯಿತು.

‘ನಾನು ಬರೆದ ‘ಬೆತ್ತಲೆ ಸೇವೆ’ ಕಾದಂಬರಿಯೂ ಸಿನಿಮಾವಾಯಿತು. ಇದರಲ್ಲಿ ಅನಂತ್‌ ನಾಗ್‌, ಮಂಜುಳಾ, ಲೋಕೇಶ್ ನಟಿಸಿದ್ದರು. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಕೆ.ವಿ. ಜಯರಾಂ. ಇದಕ್ಕೂ ನಾನೇ ಸಂಭಾಷಣೆ ಬರೆದೆ. ಆದರೆ, ಶೂಟಿಂಗ್‌ ಅರ್ಧಕ್ಕೆ ಸ್ಥಗಿತವಾಯಿತು. ಆಗ ನನಗೂ ಮತ್ತು ಸಿನಿಮಾಕ್ಕೂ ಆಗಿ ಬರುವುದಿಲ್ಲ ಎಂದುಕೊಂಡು ಸುಮ್ಮನಾಗಿದ್ದೆ. ನನ್ನ ಪ್ರತಿಭೆ ಗುರುತಿಸಿದ ನಿರ್ದೇಶಕ ಸಿದ್ದಲಿಂಗಯ್ಯ ಅವರು ‘ಪರಾಜಿತ’ ಸಿನಿಮಾಕ್ಕೆ ಡೈಲಾಗ್‌ ಬರೆಸಿದರು. ಆ ಚಿತ್ರ ಉತ್ತಮವಾಗಿ ಪ್ರದರ್ಶನ ಕಂಡಿತು. ಬಳಿಕ ‘ಪ್ರೇಮಪರ್ವ’ಕ್ಕೂ ಸಂಭಾಷಣೆ ಬರೆದೆ. ಚಂದೂಲಾಲ್‌ ಜೈನ್‌, ವರದಪ್ಪ ಅವರೂ ನನ್ನ ಪ್ರತಿಭೆ ಗುರುತಿಸಿ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟರು’ ಎಂದು ನೆನಪಿಕೊಳ್ಳತೊಡಗಿದರು.

ಮದ್ರಾಸ್‌ನಿಂದ ಫೋನ್‌: ‘ಪ್ರೇಮಪರ್ವ’ಕ್ಕೆ ನಾನು ಬರೆದ ಸಂಭಾಷಣೆ ಕೇಳಿ ಆಗ ಮದ್ರಾಸ್‌ನಿಂದ ಪುಟ್ಟಣ್ಣ ಕಣಗಾಲ್‌ ದೂರವಾಣಿ ಕರೆ ಮಾಡಿದರು. ಆಗ ನಾನು ನಂಬಲಿಲ್ಲ. ಕೊನೆಗೆ, ಅವರು ನಿರ್ದೇಶಿಸಿದ ‘ಅಮೃತಘಳಿಗೆ’ ಸಿನಿಮಾಕ್ಕೆ ನನ್ನಿಂದಲೇ ಡೈಲಾಗ್‌ ಬರೆಸಿದರು. ಆ ನಂತರ ನನಗೆ ಸ್ಟಾರ್‌ ವ್ಯಾಲೂ ಬಂದಿತು. ದೊರೆ –ಭಗವಾನ್, ಭಾರ್ಗವ, ‌ವಿಜಯ್‌, ಸೋಮಶೇಖರ್‌, ಡಿ. ರಾಜೇಂದ್ರಬಾಬು ನನ್ನ ಪ್ರತಿಭೆ ಗುರುತಿಸಿದ್ದನ್ನು ಮರೆಯಲಾಗದು’ ಎನ್ನುತ್ತಾರೆ.

‘ಬೆಂಗಳೂರಿನಲ್ಲಿ ಇದ್ದರೆ ಮಾತ್ರ ಬೆಳೆಯಲು ಸಾಧ್ಯ. ಕೆಲಸಕ್ಕೆ ರಾಜೀನಾಮೆ ನೀಡಿ ಬರುವಂತೆ ಹಲವರು ನನಗೆ ಹೇಳಿದರು. ಅವರ ಮಾತಿಗೆ ಕಿವಿಗೊಡಲಿಲ್ಲ. ಸಿನಿಮಾ ನಂಬಿಕೊಂಡು ಬದುಕಲು ಆಗುವುದಿಲ್ಲ ಎಂಬ ಸತ್ಯ ನನಗೆ ಗೊತ್ತಿತ್ತು. ಲಾಭದ ಉದ್ದೇಶ ನನಗಿರಲಿಲ್ಲ. ಪ್ರೀತಿಯಿಂದ ಕರೆದು ನನ್ನಿಂದ ಕೆಲಸ ತೆಗೆದುಕೊಂಡಿದ್ದಾರೆ. ಅದಕ್ಕೆ ನಾನು ಕನ್ನಡ ಚಿತ್ರರಂಗಕ್ಕೆ ಆಭಾರಿ’ ಎನ್ನುತ್ತಾರೆ ಅವರು.

ನಿರ್ದೇಶಕರೊಟ್ಟಿಗೆ ಜಗಳ: ಕಾದಂಬರಿಯನ್ನು ಸಿನಿಮಾ ಶೈಲಿಗೆ ಒಗ್ಗಿಸುವುದು ಸವಾಲಿನ ಕೆಲಸ. ವೃತ್ತಿಬದುಕಿನಲ್ಲಿ ವೇಣು ಅವರು ಸಾಕಷ್ಟು ಸವಾಲುಗಳನ್ನು ಎದುರಿಸುವುದು ಉಂಟು. ‘ಪ್ರೇಮಪರ್ವ’ ಕಾದಂಬರಿಯ ಕಥೆ ದುರಂತ ಅಂತ್ಯ ಹೊಂದಿದೆ. ಆದರೆ, ಸಿದ್ದಲಿಂಗಯ್ಯ ಅದನ್ನು ಹ್ಯಾಪಿ ಎಂಡಿಂಗ್‌ ಮಾಡಿದ್ದರು. ಅವರೊಟ್ಟಿಗೆ ನಾನು ಜಗಳವಾಡಿದೆ. ಸಿನಿಮಾ ಮತ್ತು ಸಾಹಿತ್ಯವೇ ಬೇರೆ ಎಂದು ನನಗೆ ಹೇಳಿದರು. ಪ್ರೀಮಿಯರ್‌ ಶೋನಲ್ಲಿ ನಾನು ಬರೆದದ್ದನ್ನು ಮತ್ತು ಅವರು ಸಿನಿಮಾ ಶೈಲಿಗೆ ಒಗ್ಗಿಸಿದ್ದನ್ನೂ ತೋರಿಸಿದರು. ಜನರು ಎರಡನ್ನೂ ನೋಡಿ ಹ್ಯಾಪಿ ಎಂಡಿಂಗ್‌ಗೆ ಸಿಳ್ಳೆ ಹಾಕಿದರು. ಆಗಲೇ ನನಗೆ ಸಿನಿಮಾ ವ್ಯಾಕರಣದ ಅರಿವಾಯಿತು ಎಂದು ವಿವರಿಸುತ್ತಾರೆ.

‘ನಿರ್ದೇಶಕರು ಲೇಖಕನಿಂದ ಕಾದಂಬರಿಯ ಹಕ್ಕು ಪಡೆಯುತ್ತಾರೆ. ಕೊನೆಗೆ ಲೇಖಕನನ್ನು ಪರಿಗಣಿಸುವುದಿಲ್ಲ. ಆದರೆ, ನನ್ನ ಬಳಿಯೇ ನಿರ್ದೇಶಕರು ಸಂಭಾಷಣೆ ಬರೆಸುತ್ತಿದ್ದರು. ನನ್ನ ಕಾದಂಬರಿಗಳನ್ನು ಸಿನಿಮಾ ಶೈಲಿಗೆ ನಾನೇ ಬದಲಾಯಿಸಿಕೊಡುತ್ತೇನೆ ಎಂದು ಹೇಳುತ್ತಿದ್ದೆ. ನಾನು ರಾಜಿಯಾಗದಿದ್ದರೆ ಡೈಲಾಗ್‌ ಬರೆಯುವ ಅವಕಾಶವೇ ಸಿಗುತ್ತಿರಲಿಲ್ಲ. ಸಿನಿಮಾದ ಗುಟ್ಟು ಡೈಲಾಗ್ ಬರೆಯುವವರಿಗಷ್ಟೇ ಗೊತ್ತಿರುತ್ತದೆ. ಲೇಖಕನಿಗೆ ಗೊತ್ತಾಗುವುದಿಲ್ಲ’ ಎಂಬುದು ಅನುಭವದ ಮಾತು.

ರಾಜವೀರ ಮದಕರಿನಾಯಕ: ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ದರ್ಶನ್‌ ನಟನೆಯ ‘ರಾಜವೀರ ಮದಕರಿನಾಯಕ’ ಚಿತ್ರವೂ ವೇಣು ಅವರ ಕಾದಂಬರಿ ಆಧಾರಿತ ಸಿನಿಮಾವಾಗಿದೆ. ಇದಕ್ಕೆ ರಾಕ್‌ಲೈನ್ ವೆಂಕಟೇಶ್‌ ಬಂಡವಾಳ ಹೂಡುತ್ತಿದ್ದಾರೆ. ಇದಕ್ಕೂ ವೇಣು ಅವರೇ ಸಂಭಾಷಣೆ ಬರೆದಿದ್ದಾರೆ.

‘ಮದಕರಿನಾಯಕನಿಗೆ ಇಬ್ಬರು ರಾಣಿಯರು ಇರುತ್ತಾರೆ. ಅದು ಕಲ್ಪನೆಯೇನಲ್ಲ. ಒಬ್ಬಳು ತರೀಕೆರೆ ರಾಣಿ. ಮತ್ತೊಬ್ಬಳು ಗುಡಿಕೋಟೆ ರಾಣಿ. ರಾಕ್‌ಲೈನ್‌ ವೆಂಕಟೇಶ್‌ಗೆ ದೊಡ್ಡಮಟ್ಟದಲ್ಲಿ ಈ ಸಿನಿಮಾ ನಿರ್ಮಿಸುವ ಆಸೆಯಿದೆ. ಇದರಲ್ಲಿ ನಟಿಸುತ್ತಿರುವುದಕ್ಕೆ ದರ್ಶನ್‌ಗೂ ಹೆಮ್ಮೆಯಿದೆ. ನಾನು ವಿಷ್ಣುವರ್ಧನ್‌ ಅವರ ಬಳಿಕ ದರ್ಶನ್‌ ಅವರಿಗೆಯೇ ಡೈಲಾಗ್ ರೀಡಿಂಗ್ ಕೊಟ್ಟಿದ್ದು’ ಎಂದರು ವೇಣು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT