ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಲೋಕ ಮೂಲಕ ಚಂದನವನ ಪ್ರವೇಶಿಸಿದ್ದ ಸಾಹಸ ನಿರ್ದೇಶಕ ಜಾಲಿ ಬಾಸ್ಟಿಯನ್‌ ನಿಧನ

Published 27 ಡಿಸೆಂಬರ್ 2023, 8:56 IST
Last Updated 27 ಡಿಸೆಂಬರ್ 2023, 8:56 IST
ಅಕ್ಷರ ಗಾತ್ರ

ಬೆಂಗಳೂರು: 950ಕ್ಕೂ ಅಧಿಕ ಸಿನಿಮಾಗಳಲ್ಲಿ ಸ್ಟಂಟ್‌ ಡ್ಯೂಪ್‌ ಕಲಾವಿದನಾಗಿ, ಸಾಹಸ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದ ಜಾಲಿ ಬಾಸ್ಟಿಯನ್‌ (57) ಹೃದಯಾಘಾತದಿಂದ ನಿಧನರಾಗಿದ್ದಾರೆ.  ‌

ಗುರುವಾರ (ಡಿ. 28) ಹಲಸೂರು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಕೇರಳ ಕೊಚ್ಚಿ ಮೂಲದ ಜಾಲಿ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ಜಾಲಿ ಬೆಂಗಳೂರಿನಲ್ಲೇ ಬೆಳೆದಿದ್ದರು. ಅವರ ತಂದೆ ಹಾಗೂ ತಾಯಿ ಗ್ಯಾರೆಜ್‌ನಲ್ಲಿ ಮೆಕ್ಯಾನಿಕ್‌ ಆಗಿದ್ದರು. ಆಟೊಮೊಬೈಲ್‌ ಡಿಪ್ಲೊಮಾ ಮಾಡಿದ್ದ ಜಾಲಿ ಅವರೂ ಮೆಕ್ಯಾನಿಕ್‌ ಆಗಿ ಕಾರ್ಯನಿರ್ವಹಿಸಿದ್ದರು. 17ನೇ ವಯಸ್ಸಿಗೆ ಬುಲೆಟ್‌, ಜಾವಾದಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದ ಜಾಲಿ ಅವರನ್ನು ನಟ ರವಿಚಂದ್ರನ್‌ ಅವರ ಟ್ರೈನರ್‌ ಮೂರ್ತಿ ಎನ್ನುವವರು ಗಮನಿಸಿದ್ದರು. ನಂತರದಲ್ಲಿ ಜಾಲಿ ಅವರನ್ನು ರವಿಚಂದ್ರನ್‌ ಅವರಿಗೆ ಮೂರ್ತಿ ಪರಿಚಯಿಸಿದರು. ಇದೇ ಸಂದರ್ಭದಲ್ಲಿ ‘ಪ್ರೇಮಲೋಕ’ ಸಿನಿಮಾಗೆ ಸಿದ್ಧತೆ ನಡೆಸಿದ್ದ ರವಿಚಂದ್ರನ್‌, ತಮ್ಮ ಸ್ಟಂಟ್‌ ಡ್ಯೂಪ್‌ ಆಗಿ ಜಾಲಿಗೆ ಅವಕಾಶ ನೀಡಿದ್ದರು. ಇದು ಜಾಲಿ ಅವರ ಬದುಕಿಗೆ ತಿರುವು ನೀಡಿತ್ತು. 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಜಾಲಿ ಇಲ್ಲಿಯವರೆಗೂ 950ಕ್ಕೂ ಅಧಿಕ ಸಿನಿಮಾಗಳಲ್ಲಿ ಡ್ಯೂಪ್‌ ಕಲಾವಿದನಾಗಿ, ಸಾಹಸ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.  

ಫೈಟ್‌ ಮಾಸ್ಟರ್‌ ಆಗಿ ಜಾಲಿ ಅವರಿಗೆ ಬ್ರೇಕ್‌ ಕೊಟ್ಟ ಸಿನಿಮಾ ‘ಪುಟ್ನಂಜ’. ‘ಸಿಪಾಯಿ’, ‘ರಣಧೀರ’, ‘ಏಕಾಂಗಿ’, ‘ಶಾಂತಿ ಕ್ರಾಂತಿ’, ‘ಅಣ್ಣಯ್ಯ’, ‘ಡೇಂಜರ್‌’, ‘ಧಮ್‌’, ‘ರಾಕ್ಷಸ’ ಹೀಗೆ ಕನ್ನಡದ ಜೊತೆಗೆ ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲೂ ಸ್ಟಂಟ್‌ ಡ್ಯೂಪ್‌ ಆಗಿ, ಸಾಹಸ ನಿರ್ದೇಶಕರಾಗಿ ಜಾಲಿ ಕಾರ್ಯನಿರ್ವಹಿಸಿದ್ದಾರೆ. ಶಿವರಾಜ್‌ಕುಮಾರ್‌ ಅವರ ಹಿಟ್‌ ಸಿನಿಮಾ ‘ಟಗರು’ಗೂ ಜಾಲಿ ಸಾಹಸ ನಿರ್ದೇಶನ ಮಾಡಿದ್ದರು. ರವಿಚಂದ್ರನ್‌, ವಿಷ್ಣುವರ್ಧನ್‌, ಚಿರಂಜೀವಿ, ಮೋಹನ್‌ಲಾಲ್‌ ಹೀಗೆ ಖ್ಯಾತ ನಟರ ಜೊತೆ ಅವರು ಕೆಲಸ ಮಾಡಿದ್ದಾರೆ. ಮಲಯಾಳಂನ ‘ಅಂಗಮಾಲಿ ಡೈರೀಸ್‌’ನ ಎಲ್ಲ ಸಾಹಸ ದೃಶ್ಯಗಳಿಗೆ ಅವರು ಆ್ಯಕ್ಷನ್‌–ಕಟ್‌ ಹೇಳಿದ್ದರು. ಇತ್ತೀಚೆಗೆ ಉಪೇಂದ್ರ ಅವರ ನಟನೆಯ ‘45’, ದುನಿಯಾ ವಿಜಯ್‌ ನಟನೆಯ ‘ಭೀಮ’ ಸಿನಿಮಾದ ಸಾಹಸ ನಿರ್ದೇಶನ ಮಾಡಿದ್ದರು. ಜೊತೆಗೆ ಮಲಯಾಳಂನ ನಾಲ್ಕೈದು ಸಿನಿಮಾಗಳೂ ಇವರ ಕೈಯಲ್ಲಿದ್ದವು. ಸಾಹಸ ನಿರ್ದೇಶನದ ಜೊತೆಗೆ ‘ಲಾಕ್‌ಡೌನ್‌ ಡೈರೀಸ್‌’ ಎಂಬ ಒಂದು ತಮಿಳು ಸಿನಿಮಾವನ್ನೂ ಜಾಲಿ ನಿರ್ದೇಶಿಸಿದ್ದಾರೆ.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT