ಶನಿವಾರ, ನವೆಂಬರ್ 26, 2022
23 °C

‘ನಟರಾಕ್ಷಸ’ನ ಜನ್ಮದಿನ: ಅಪ್ಪು ಅಗಲಿಕೆ ಕಾರಣ ಇಲ್ಲ ಸಂಭ್ರಮಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಜಯನಗರ 4th ಬ್ಲಾಕ್‌’ ಕಿರುಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಚಂದನವನದ ‘ನಟರಾಕ್ಷಸ’ನಾಗಿ ಬೆಳೆದಿರುವ ನಟ ‘ಡಾಲಿ’ ಧನಂಜಯ್‌ ಜನ್ಮದಿನ ಇಂದು(ಆ.23). ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಧನಂಜಯ್‌ ಸದ್ಯ ‘ಮಾನ್ಸೂನ್‌ ರಾಗ’ ಹಾಗೂ ‘ಹೆಡ್‌ಬುಷ್‌’ ಸಿನಿಮಾಗಳ ಬಿಡುಗಡೆಗೆ ಎದುರುನೋಡುತ್ತಿದ್ದಾರೆ. ನಟ ಪುನೀತ್‌ ರಾಜ್‌ಕುಮಾರ್‌ ಅವರ ಅಗಲಿಕೆಯ ಕಾರಣ ಈ ವರ್ಷ ಜನ್ಮದಿನದ ಸಂಭ್ರಮಾಚರಣೆ ಇಲ್ಲ ಎಂದು ಧನಂಜಯ್‌ ಅಭಿಮಾನಿಗಳಿಗೆ ತಿಳಿಸಿದ್ದಾರೆ.  

‘ಆ.23ಕ್ಕೆ ನನ್ನ ಜನ್ಮದಿನವಿದ್ದರೂ, ಬಹಳ ಹಿಂದಿನಿಂದಲೇ ಜನ್ಮದಿನದ ಸಂಭ್ರಮವನ್ನು ಅಭಿಮಾನಿಗಳು ಆರಂಭಿಸಿದ್ದಾರೆ. ಬೆಂಗಳೂರು, ಬೆಳಗಾವಿಯಲ್ಲಿ ನೂರಾರು ಅಭಿಮಾನಿಗಳು ರಕ್ತದಾನ ಮಾಡಿ, ನೇತ್ರದಾನದ ಪ್ರತಿಜ್ಞೆ ತೆಗೆದುಕೊಂಡಿದ್ದಾರೆ. ಕಳೆದೆರಡು ವರ್ಷ ಕೋವಿಡ್‌ ಕಾರಣದಿಂದ ಜನ್ಮದಿನವನ್ನು ಆಚರಿಸಿಕೊಂಡಿರಲಿಲ್ಲ. ಈ ವರ್ಷವೂ ಜನ್ಮದಿನವನ್ನು ಆಚರಿಸಿಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ. ಅಪ್ಪು ಅವರು ನಮ್ಮನ್ನು ಅಗಲಿ ಇನ್ನೂ ವರ್ಷ ಕಳೆದಿಲ್ಲ. ಶಿವರಾಜ್‌ಕುಮಾರ್‌ ಅವರೂ ತಮ್ಮ ಜನ್ಮದಿನ ಆಚರಿಸಿಕೊಂಡಿಲ್ಲ. ಹೀಗಾಗಿ ಅಭಿಮಾನಿಗಳು ಎಲ್ಲಿದ್ದಿರೋ ಅಲ್ಲಿಂದಲೇ ನನಗೆ ಹರಸಿ. ಯಾರಿಗೆ ಸಹಾಯದ ಅಗತ್ಯವಿದೆಯೋ ಅಂತಹ ಜೀವಗಳಿಗೆ ನೆರವಾಗಿ. ಒಳ್ಳೆಯ ಕೆಲಸದ ಮೂಲಕ ಈ ನನ್ನ ಜನ್ಮದಿನವನ್ನು ಆಚರಿಸಿ’ ಎಂದು ಧನಂಜಯ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಧನಂಜಯ್‌ ಜನ್ಮದಿನದಂದು ‘ಹೆಡ್‌ಬುಷ್‌’ ಚಿತ್ರದ ‘ರೌಡಿಗಳು ನಾವು ರೌಡಿಗಳು’ ಲಿರಿಕಲ್‌ ಹಾಡು ಬಿಡುಗಡೆಯಾಗಿದೆ. ಅಗ್ನಿ ಶ್ರೀಧರ್‌ ಅವರ ಆತ್ಮಕಥೆ ‘ದಾದಾಗಿರಿಯ ಆ ದಿನಗಳು’ ಕೃತಿಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣಗೊಂಡಿದೆ.  ‘ಹೆಡ್‌ಬುಷ್‌’–ದಿ ರೈಸ್‌ ಆ್ಯಂಡ್‌ ರೈಸ್‌ ಆಫ್‌ ಬೆಂಗಳೂರು ಅಂಡರ್‌ವಲ್ಡ್‌ ಭಾಗ–1ರಲ್ಲಿ ಎಂ.ಪಿ ಜಯರಾಜ್‌ ಪಾತ್ರದಲ್ಲಿ ಧನಂಜಯ್‌ ಕಾಣಿಸಿಕೊಂಡಿದ್ದಾರೆ. ಅ.21ಕ್ಕೆ ಈ ಸಿನಿಮಾ ಬಿಡುಗಡೆಯಾಗಿದೆ. ಡಾಲಿ ಪಿಕ್ಚರ್ಸ್‌ ಮತ್ತು ಸೋಮಣ್ಣ ಟಾಕೀಸ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ, ಅಗ್ನಿ ಶ್ರೀಧರ್‌ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರವನ್ನು ಶೂನ್ಯ ಅವರು ನಿರ್ದೇಶಿಸುತ್ತಿದ್ದಾರೆ.

ಧನಂಜಯ್‌ ನಟನೆಯ ಹೊಸ ಚಿತ್ರ ‘ಹೊಯ್ಸಳ’ದ ಫಸ್ಟ್‌ಲುಕ್‌ ಕೂಡಾ ಮಂಗಳವಾರ(ಆ.23) ಬಿಡುಗಡೆಯಾಗಿದೆ. ‘ಆರಕ್ಷಕ ರಾಕ್ಷಸನಾದಾಗ’ ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಈ ಸಿನಿಮಾ ಸೆಟ್ಟೇರಿದೆ. ಧನಂಜಯ್‌, ಈ ಚಿತ್ರದಲ್ಲಿ ‘ಗುರುದೇವ ಹೊಯ್ಸಳ’ ಎಂಬ ಹೆಸರಿನ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಿಜಯ್ ನಾಗೇಂದ್ರ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಧನಂಜಯ್‌ ನಟನೆಯ ‘ರತ್ನನ್‌ ಪ್ರಪಂಚ’ಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ರೋಹಿತ್ ಪದಕಿ ನಿರ್ದೇಶನದ ಹೊಸ ಸಿನಿಮಾ ‘ಉತ್ತರಕಾಂಡ’ ಸಿನಿಮಾದ ಫಸ್ಟ್‌ಲುಕ್‌ ಕೂಡಾ ಬಿಡುಗಡೆಯಾಗಿದೆ. ರಗಡ್‌ಲುಕ್‌ನಲ್ಲಿ ಇಲ್ಲಿ ಧನಂಜಯ್‌ ಕಾಣಿಸಿಕೊಂಡಿದ್ದು, ‘ಇನ್‌ ಮ್ಯಾಲಿಂದ ಫುಲ್‌ ಗುದ್ದಾಂ ಗುದ್ದಿ’ ಎಂದಿದ್ದಾರೆ ‘ಡಾಲಿ’. ಒಟ್ಟಾರೆ ಧನಂಜಯ್‌ ಅವರ ಕೈಯಲ್ಲೀಗ ಆರೇಳು ಸಿನಿಮಾಗಳಿದ್ದು, ಕಾಲ್‌ಶೀಟ್‌ ಸದ್ಯಕ್ಕೆ ಭರ್ತಿಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು