ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲ್ಯಾಕ್‌ & ವೈಟ್‌ ಕಿಶೋರ್‌

Last Updated 19 ಮಾರ್ಚ್ 2020, 19:30 IST
ಅಕ್ಷರ ಗಾತ್ರ

‘ಪ್ರೇಕ್ಷಕ ಆರಾಮವಾಗಿ ಕುಳಿತು ಸಿನಿಮಾ ವೀಕ್ಷಿಸಲು ಬಿಡಬಾರದು; ಆತ ಸೀಟಿನ ತುದಿಯಲ್ಲಿ ಕುಳಿತುಕೊಂಡು ನೋಡಬೇಕು. ಅದೇ ನಿರ್ದೇಶಕನ ಕೆಲಸ’ ಎಂದಿದ್ದಾರೆ ನಿರ್ದೇಶಕ ಆಲ್ಫ್ರೆಡ್‌ ಹಿಚ್‌ಕಾಕ್‌. ಈ ಹಿಚ್‌ಕಾಕ್‌ ಥಿಯರಿ ಇಟ್ಟುಕೊಂಡೇ ನಟ ಕಿಶೋರ್‌ ‘ಕದ’ ಚಿತ್ರದ ಮೂಲಕ ಕಪ್ಪು–ಬಿಳುಪಿನ ಯುಗಕ್ಕೆ ಪಯಣ ಹೊರಟಿದ್ದಾರೆ.

ಕಿಶೋರ್‌, ಅನುಪಮಾ ಕುಮಾರ್‌ ಮತ್ತು ಜಯ್ ಅವರು ಒಟ್ಟಾಗಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ‘ಕದ’ದಲ್ಲಿ ಮನುಷ್ಯ ಸಂಬಂಧಗಳ ಸೂಕ್ಷ್ಮತೆ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಒಂದೇ ಮನೆಯಲ್ಲಿರುವ ಕುಟುಂಬದ ಸದಸ್ಯರು ಏಕೆ ಅಪರಿಚಿತರಂತೆ ವರ್ತಿಸುತ್ತಾರೆ; ಬೆಡ್‌ರೂಮ್‌ಗಳಲ್ಲಿ ಆ ಸಂಬಂಧಗಳು ಹೇಗೆ ಸಡಿಲಗೊಳ್ಳುತ್ತವೆ ಎನ್ನುವುದೇ ಇದರ ತಿರುಳು.

ಕಲಾವಿದರು, ತಂತ್ರಜ್ಞರೇ ಇದಕ್ಕೆ ಬಂಡವಾಳ ಹೂಡಿದ್ದಾರೆ. ಕಪ್ಪು–ಬಿಳುಪಿನಲ್ಲಿಯೇ ಇದನ್ನು ಚಿತ್ರೀಕರಿಸಲಾಗಿದೆ. ವೃತ್ತಿಬದುಕು ಸೇರಿದಂತೆ ಹೊಸ ಯೋಜನೆಗಳ ಬಗ್ಗೆ ಕಿಶೋರ್‌ ಅವರೊಟ್ಟಿಗೆ ನಡೆಸಿದ ಮಾತುಕತೆ ಇಲ್ಲಿದೆ.

‘ಕದ’ ಸಿನಿಮಾ ಯಾವ ಹಂತದಲ್ಲಿದೆ?

ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಇದನ್ನು ನಿರ್ಮಿಸಲಾಗಿದೆ. ನಾನು ಅಂದುಕೊಂಡಂತೆ ಸಿನಿಮಾ ಬಂದಿದೆ. ಕೊಂಚ ರಿಪೇರಿ ಕೆಲಸ ನಡೆಯುತ್ತಿದೆ. ಒಂದು ಮನೆಯೊಳಗೆ ನಡೆಯುವ ಕಥೆ ಇದು. ಮನುಷ್ಯ ಸಂಬಂಧಗಳನ್ನು ಕುರಿತು ಚಿತ್ರ ಮಾತನಾಡುತ್ತದೆ. ಮನುಷ್ಯರು ಹೇಗೆಲ್ಲಾ ಬದಲಾಗುತ್ತಿದ್ದಾರೆ; ಯಾರೆಲ್ಲಾ ಇದನ್ನು ನಿಯಂತ್ರಿಸುತ್ತಾರೆ ಎನ್ನುವ ಸುತ್ತ ಕಥೆ ಚಲಿಸಲಿದೆ. ಈ ವರ್ತುಲದಲ್ಲಿ ನಾವು ಹೇಗೆ ಸಿಲುಕಿದ್ದೇವೆ ಎಂದು ಹೇಳಲು ಪ್ರಯತ್ನ ಮಾಡಿದ್ದೇವೆ. ವ್ಯಾವಹಾರಿಕವಾಗಿಯೂ ಸಮಾಜದೊಟ್ಟಿಗೆ ಮಾತನಾಡುವ ಸಿನಿಮಾ ಇದಾಗಿದೆ. ಹಲವರು ಹಣ ಹೂಡಿದ್ದಾರೆ. ಎಲ್ಲರಿಗೂ ಸಮಾನವಾಗಿ ಲಾಭದ ಹಂಚಿಕೆಯಾಗಲಿದೆ.

ನಿಮ್ಮ ಹೊಸ ಸಿನಿಮಾಗಳ ಬಗ್ಗೆ ಹೇಳಿ.

ಮಣಿರತ್ನಂ ನಿರ್ದೇಶಿಸುತ್ತಿರುವ ತಮಿಳಿನ ‘ಪೊನ್ನಿಯನ್‌ ಸೆಲ್ವನ್‌’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದರ ಶೂಟಿಂಗ್ ಅರ್ಧ ಮುಗಿದಿದೆ. ನನ್ನ ಪಾತ್ರದ ಶೂಟಿಂಗ್‌ ಕೂಡ ಇನ್ನೂ ಪೂರ್ಣಗೊಂಡಿಲ್ಲ. ಪಾತ್ರದ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಿದರೆ ಉತ್ತಮ. ‘ವೈಫೈ’ ಎಂಬ ಸಿನಿಮಾದಲ್ಲಿ ನಟಿಸಿದ್ದೇನೆ. ಇದರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಸಾಮಾಜಿಕ ತಲ್ಲಣವೇ ಚಿತ್ರದ ಸಾರಾಂಶ. ‘ಸಿಂಧೂರ ಲಕ್ಷ್ಮಣ’ ಸಿನಿಮಾದ ಫೋಟೊಶೂಟ್ ಆಗಿದೆ. ಶೂಟಿಂಗ್‌ ಆರಂಭವಾಗಿಲ್ಲ.

ಸಿನಿಮಾದ ಆಯ್ಕೆ ವೇಳೆ ಯಾವುದಕ್ಕೆ ಒತ್ತು ನೀಡುತ್ತೀರಿ?

ಈ ಮೊದಲು ಮನರಂಜನೆಗಾಗಿ ಸಿನಿಮಾ ಮಾಡುತ್ತಿದ್ದೆ. ಈಗ ಸಿನಿಮಾದಲ್ಲಿ ಸಾಮಾಜಿಕ ಕಳಕಳಿ ಇರಬೇಕು. ಸಮುದಾಯದೊಟ್ಟಿಗೆ ಅದು ಮಾತನಾಡಬೇಕು. ವರನಟ ರಾಜ್‌ಕುಮಾರ್‌ ಸೇರಿದಂತೆ ಕನ್ನಡದ ಹಲವು ನಟರ ಸಿನಿಮಾಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಆ ಹಾದಿಯಲ್ಲಿಯೇ ನಾವು ಸಾಗಬೇಕಿದೆ. ಅಂತಹ ಸಿನಿಮಾಗಳಿಗೆ ನನ್ನ ಮೊದಲ ಆದ್ಯತೆ.

ನನಗೆ ಕನಸಿನ ಪಾತ್ರ ಎಂಬುದಿಲ್ಲ. ಸಿನಿಮಾ ಕಲಾವಿದನ ಸಂಪಾದನೆಗಷ್ಟೇ ಸೀಮಿತವಲ್ಲ. ಅದೊಂದು ನಿಜವಾದ ಕಲಾ ಮಾಧ್ಯಮ. ಅದರ ಮೂಲಕ ಏನೆಲ್ಲಾ ಸಾಧ್ಯವೋ ಅದನ್ನು ಮಾಡಬೇಕು. ಆ ಸಾಧ್ಯತೆಗಳನ್ನು ಬಳಸಿಕೊಳ್ಳಬೇಕು. ಹೊಸ ಆಲೋಚನೆಯ ಬೀಜ ಬಿತ್ತಬೇಕು. ಹೊಸ ನೋಟ ಇರುವ ಚಿತ್ರ ವೀಕ್ಷಿಸಿ ಜನರು ಒಳ್ಳೆಯ ದಾರಿಯಲ್ಲಿ ನಡೆಯುತ್ತಿದ್ದಾರೆ ಎಂದರೆ ಅದೇ ಸಿನಿಮಾವೊಂದರ ನಿಜವಾದ ಸಕ್ಸಸ್‌.

ನಿಮಗೆ ನಿರ್ದೇಶನದ ಆಸೆ ಇಲ್ಲವೇ?

‘ಕದ’ ಚಿತ್ರವನ್ನು ಭಿನ್ನ ಸ್ಥರದಲ್ಲಿ ಮಾಡಬೇಕೆಂಬುದು ನನ್ನಾಸೆಯಾಗಿತ್ತು. ಆ ವೇಳೆ ಕೊಂಚ ಸಮಸ್ಯೆಯಾಯಿತು. ಅರ್ಧದಲ್ಲಿಯೇ ನಿರ್ದೇಶಕರು ಬಿಟ್ಟುಹೋದರು. ನಾನು ಪ್ರೊಡಕ್ಷನ್‌ ತಂಡದೊಟ್ಟಿಗೆ ಸೇರಿಕೊಂಡು ಇದರ ನಿರ್ದೇಶನ ಮುಗಿಸಿದ್ದೇನೆ. ನಾನೇ ಇದನ್ನು ನಿರ್ದೇಶಿಸಿರುವುದು ಎಂದು ಹೇಳಲಾರೆ.

ಚಿತ್ರರಂಗ ಪ್ರವೇಶಿಸುತ್ತಿರುವ ಹೊಸಬರಿಗೆ ನಿಮ್ಮ ಸಲಹೆ ಏನು?

ಚಿತ್ರರಂಗದಲ್ಲಿ ನಮಗೆ ಕಂಡ ಸತ್ಯಗಳೇ ಅವರಿಗೂ ಸತ್ಯಗಳಾಗಿರಬೇಕಿಲ್ಲ. ನಾವು ಸತ್ಯ ಅಂದುಕೊಂಡಿದ್ದು ನಮಗಷ್ಟೇ ಸೀಮಿತ. ಈಗ ಕಾಲ ಬದಲಾಗುತ್ತಿದೆ. ಜೀವನಾನುಭವದಿಂದ ಎಲ್ಲರೂ ಸತ್ಯ ಕಂಡುಕೊಳ್ಳಬೇಕು. ಓದುವ ಪ್ರವೃತ್ತಿಯೂ ಇಲ್ಲ. ಜೀವನಾನುಭವವೂ ತುಂಬಾ ಕಡಿಮೆ. ಗ್ರಾಮೀಣ ಪ್ರದೇಶದಿಂದ ಪ್ರತಿಭಾವಂತರು ಬರುತ್ತಿಲ್ಲ. ಇದರಿಂದ ಸಿನಿಮಾಗಳಲ್ಲಿ ನಮ್ಮತನ ಕಣ್ಮರೆಯಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹಣ ಇದೆ; ಅರ್ಧಂಬರ್ಧ ಭಾಷೆ ಇದೆ. ಅದನ್ನೇ ಕನ್ನಡ ಸಿನಿಮಾ ಎಂದು ನೋಡಬೇಕಿದೆ. ಅದರೊಳಗೆ ಇಣುಕಿದರೆ ಕನ್ನಡತನ ಕಾಣುತ್ತಿಲ್ಲ.

ಕನ್ನಡ ಸಿನಿಮಾಗಳಲ್ಲಿ ನಿಮಗೆ ಕಂಡಿರುವ ಕೊರತೆಗಳೇನು?‌

ರಾಜ್ಯದ ಎಲ್ಲಾ ಮೂಲೆಗಳಿಂದಲೂ ಪ್ರತಿಭಾವಂತರು ಬಂದಾಗ ಸಿನಿಮಾಕ್ಕೆ ಕನ್ನಡತನ ಸಿಗುತ್ತದೆ. ಭಾಷೆಯ ನೆಲೆಗಟ್ಟಿನಲ್ಲಷ್ಟೇ ಸಿನಿಮಾವನ್ನು ನೋಡಬಾರದು. ಈ ನೆಲದ ಗುಣ ಇರುವ, ಭಾಷೆ, ಸಂಸ್ಕೃತಿ ಬಿಂಬಿಸುವ ಸಿನಿಮಾ ನಿರ್ಮಿಸಬೇಕು. ಆಗಷ್ಟೇ ಅದು ಕನ್ನಡ ಸಿನಿಮಾ ಅನಿಸಿಕೊಳ್ಳುತ್ತದೆ.

ಚಿತ್ರರಂಗಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಹೊಸಬರು ಪ್ರವೇಶಿಸುತ್ತಿದ್ದಾರೆ. ಅವರಲ್ಲೂ ಪ್ರತಿಭೆ ಇದೆ. ಆದರೆ, ಸಿನಿಮಾದ ಕಥೆಗಳು ನಗರಕೇಂದ್ರಿತವಾಗುತ್ತಿವೆ. ಇದನ್ನು ತಡೆಯಲೂ ಆಗುವುದಿಲ್ಲ. ಸಿನಿಮಾಗಳಿಗೆ ದೇಸಿ ವಸ್ತುಗಳೇ ಸರಕಾಗಬೇಕು. ಇಲ್ಲವಾದರೆ ಆ ಚಿತ್ರ ಅಪರೂಪದ ದಾಖಲೆಯಾಗಿ ಉಳಿಯುವುದಿಲ್ಲ. ಚಿತ್ರರಂಗದ ಹಿರಿಯರು ನಮಗೆ ದೇಸಿತನದ ಮಹತ್ವ ತೋರಿಸಿ ಹೋಗಿದ್ದಾರೆ. ಅದನ್ನು ನಾವು ಕಾಪಿಟ್ಟುಕೊಳ್ಳಬೇಕು. ಅದರ ತಳಹದಿಯ ಮೇಲೆಯೇ ಸಂಸ್ಕೃತಿಯ ಕಥನಗಳನ್ನು ತೆರೆಯ ಮೇಲೆ ಕಟ್ಟಬೇಕು. ಈಗಾಗಲೇ, ನಾವು ಸಾಕಷ್ಟು ಎಡವಟ್ಟುಗಳನ್ನು ಮಾಡಿ ಕಳೆದುಕೊಂಡಿದ್ದೇವೆ. ಅದನ್ನೇ ಮುಂದುವರಿಸಬಾರದು. ಇದರಿಂದ ಮುಂದಿನ ಯುವಪೀಳಿಗೆ ಎಲ್ಲವನ್ನೂ ಕಳೆದುಕೊಳ್ಳುತ್ತದೆ. ಹಾಗಾಗಿ, ನಮ್ಮೆಲ್ಲರ ಮೇಲೆ ಗುರುತರ ಜವಾಬ್ದಾರಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT