ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ಮಾಪಕ MN ಕುಮಾರ್‌ ಆರೋಪಗಳ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ ಸುದೀಪ್‌ ಪತ್ರ

ನಿರ್ಮಾಪಕ ಎಂ.ಎನ್. ಕುಮಾರ್ ನೀಡಿದ ದೂರಿಗೆ ಪತ್ರ ಮುಖೇನ ಪ್ರತಿಕ್ರಿಯೆ ನೀಡಿದ ಸ್ಟಾರ್ ನಟ
Published 11 ಜುಲೈ 2023, 0:47 IST
Last Updated 11 ಜುಲೈ 2023, 0:47 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಾಪಕ ಎಂ.ಎನ್‌. ಕುಮಾರ್‌ ಹಾಗೂ ನಟ ಕಿಚ್ಚ ಸುದೀಪ್‌ ನಡುವಿನ ವಿವಾದ ದಿನದಿಂದ ದಿನಕ್ಕೆ ತೀವ್ರವಾಗುತ್ತದೆ. ಕುಮಾರ್ ನೀಡಿರುವ ದೂರಿಗೆ ಪ್ರತಿಕ್ರಿಯೆ ರೂಪದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ ಸುದೀಪ್‌ ಸೋಮವಾರ ಸುದೀರ್ಘವಾದ ಪತ್ರ ಬರೆದಿದ್ದಾರೆ.

‘ನಿರ್ಮಾಪಕರೊಬ್ಬರು ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದಾರೆ. ಸ್ಪಂದಿಸಬೇಕಾದದ್ದು ನಿಮ್ಮ ಕರ್ತವ್ಯ, ನೀವು ಸ್ಪಂದಿಸಿದ್ದೀರಿ. ಆ ಬಗ್ಗೆ ನನಗೆ ಯಾವುದೇ ತಕರಾರು ಇರುವುದಿಲ್ಲ. ಆದರೂ, ಯಾವುದೇ ನಿರ್ಮಾಪಕರು, ಯಾರೇ ಕಲಾವಿದರ ಅಥವಾ ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮಾತೃ ಸಂಸ್ಥೆಗಳಾದ ನಿಮ್ಮ ಜವಾಬ್ದಾರಿ ಆಗಿರುತ್ತದೆ. ಈ ಹಿಂದೆ ನೀವು ಇದನ್ನೆಲ್ಲ ಪರಿಶೀಲಿಸಲಿಲ್ಲವೆಂದಲ್ಲ. ಈ ಬಾರಿ ನನ್ನ ವಿಚಾರದಲ್ಲಿ ಅದೇಕೋ ನಡೆಯುತ್ತಿಲ್ಲ, ಕಾರಣವೂ ನನಗೆ ತಿಳಿಯುತ್ತಿಲ್ಲ’ ಎಂದು ಸುದೀಪ್‌ ಪತ್ರದಲ್ಲಿ ಬರೆದಿದ್ದಾರೆ.

‘ನನ್ನ ಕಡೆಯಿಂದ ಕೊಡಬೇಕಾದ ಅಷ್ಟೂ ವಿವರಣೆಗಳನ್ನು ಅತ್ಯಂತ ಸಂಯಮದಿಂದ ತಮ್ಮ ಮುಂದೆ ಇಟ್ಟಿದ್ದೇನೆ. ಆ ಬಗ್ಗೆ ಬಹಿರಂಗವಾಗಿ ವಿವರಿಸುವುದಾದರೆ, ಎಂ.ಎನ್. ಕುಮಾರ್ ಅವರನ್ನು ನಾನು ಹಲವು ಬಾರಿ ಮುಖತಃ ಭೇಟಿಯಾಗಿದ್ದೇನೆ. ಒಂದು ಅನುಕಂಪದ ಆಧಾರದಲ್ಲಿ ಅವರಿಗೆ ಸಹಾಯ ಮಾಡಲು ಪುಯತ್ನಿಸಿದ್ದೇನೆ. ನಾನು ಹಲವು ಬಾರಿ ಮುಖತಃ ಪ್ರಯತ್ನಪಟ್ಟರೂ ಹಲವಾರು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಅವರು ನನ್ನ ವಿರುದ್ಧ ವದಂತಿಗಳನ್ನು ಹಬ್ಬಿಸಲು ಶುರುಮಾಡಿದಾಗ, ಕುಮಾರ್ ಅವರನ್ನು ಮುಖತಃ ಭೇಟಿಯಾಗುವುದನ್ನು ನಿಲ್ಲಿಸಿದೆ. ಇದೆಲ್ಲವನ್ನೂ ತಮಗೆ ವಿವರಿಸಿದೆ. ಅದಾದ ನಂತರವೂ, ಮಂಡಳಿಯ ಕಚೇರಿಯಲ್ಲಿ ನನ್ನ ವಿರುದ್ಧ ಸುಳ್ಳು, ನಿರಾಧಾರ ಆರೋಪಗಳ ಪತ್ರಿಕಾಗೋಷ್ಠಿ ನಡೆಯಿತು. ಆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನಾನು ಗೌರವಿಸುತ್ತೇನೆ. ಜೊತೆಗೆ, ಸಂಧಾನ ಎಂಬ ಪದ ಹುಟ್ಟಿಕೊಂಡಿತು. ಸಂಧಾನ ಎಂದರೇನು? ಆ ನಿರ್ಮಾಪಕರು, ಅವರೆಲ್ಲ ಕಷ್ಟಗಳಿಗೆ, ನನ್ನನ್ನೇ ಹೊಣೆಗಾರನನ್ನಾಗಿಸಿ, ಬಲವಂತವಾಗಿ ಹಣ ಪಡೆಯುವುದು. ನಾನು ವರ್ಷಗಳ ಕಾಲ ಕಾಪಾಡಿಕೊಂಡು ಬಂದ ನೈತಿಕತೆ, ಹೊಣೆಗಾರಿಕೆ, ವ್ಯಕ್ತಿತ್ವದ ಕಾರಣಕ್ಕೆ, ಹಣ ಕೊಡಬೇಕಾಗಿಲ್ಲವೆಂಬ ನನ್ನ ನಿಲುವಿಗೆ ನಾನು ಬದ್ಧನಾಗಿರುವೆ' ಎಂದು ಸುದೀಪ್‌ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT