ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT
ADVERTISEMENT

ಸಂದರ್ಶನ | ಈ ವರ್ಷ ಸಾಲು ಸಾಲು ಸಿನಿಮಾ ಸಿಕ್ಕ ಖುಷಿ: ನಟಿ ಬೃಂದಾ ಆಚಾರ್ಯ

Published : 19 ಡಿಸೆಂಬರ್ 2025, 10:53 IST
Last Updated : 19 ಡಿಸೆಂಬರ್ 2025, 10:53 IST
ಫಾಲೋ ಮಾಡಿ
Comments
‘ಪ್ರೇಮಂ ಪೂಜ್ಯಂ’ ಸಿನಿಮಾ ಮೂಲಕ ನಾಯಕಿಯಾಗಿ ಚಂದನವನಕ್ಕೆ ಹೆಜ್ಜೆ ಇಟ್ಟವರು ನಟಿ ಬೃಂದಾ ಆಚಾರ್ಯ. ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದಲ್ಲಿನ ‘ಶಿವಾನಿ’ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತ್ತು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿರುವ ಬೃಂದಾ, ‘ಪ್ರಜಾವಾಣಿ ಡಿಜಿಟಲ್‌’ ನೊಂದಿಗೆ 2025ರ ನೆನಪುಗಳು, 2026ರ ಕನಸುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಪ್ರ

ಈ ವರ್ಷ ನಿಮ್ಮ ಪಾಲಿಗೆ ಹೇಗಿತ್ತು?

ಈ ವರ್ಷ ನನ್ನ ಮೂರು ಸಿನಿಮಾಗಳು ಬಿಡುಗಡೆಯಾಗಿದೆ. 2024ರಲ್ಲಿ ನನ್ನ ಯಾವುದೇ ಸಿನಿಮಾ ಬಿಡುಗಡೆ ಆಗಿರಲಿಲ್ಲ. 2023ರಲ್ಲಿ ‘ಕೌಸಲ್ಯ ಸುಪ್ರಜಾ ರಾಮ‘ ಬಿಡುಗಡೆಯಾಯಿತು. ಈ ಸಿನಿಮಾದಿಂದ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿದ್ದಲ್ಲದೆ ಉತ್ತಮ ಕಥೆಗಳನ್ನು ಆಯ್ಕೆ ಮಾಡಲು ಅನುಕೂಲವಾಯಿತು. ಇಲ್ಲಿಯವರೆಗೆ 40ರಿಂದ 45 ಕಥೆಗಳನ್ನು ಕೇಳಿಸಿಕೊಂಡಿದ್ದೇನೆ. ಅದರಲ್ಲಿ ಐದು ಕಥೆಗಳನ್ನು ಆಯ್ಕೆ ಮಾಡಿದೆ. ಈ ಐದು ಸಿನಿಮಾಗಳಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಅವುಗಳಲ್ಲಿ 'ಎಕ್ಸ್‌ ಆ್ಯಂಡ್‌ ವೈ', 'ಮಾರುತ' ಮತ್ತು 'ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ' ಈ ವರ್ಷ ಬಿಡುಗಡೆ ಆದವು. ಶೂಟಿಂಗ್ ಹಂತದಲ್ಲಿ ಸಿನಿಮಾ ಅರ್ಧಕ್ಕೆ ನಿಲ್ಲುವುದು, ಸಿನಿಮಾ ಮುಗಿದರೂ ಬಿಡುಗಡೆಯಾಗದೇ ಹೋಗುವುದು ಇಂತಹ ಯಾವುದೇ ಸಮಸ್ಯೆಗಳು ನಾನು ನಟಿಸಿದ ಚಿತ್ರಗಳಿಗೆ ಬರಲಿಲ್ಲ. ಅದೊಂದು ಖುಷಿ ಇದೆ. ಒಟ್ಟಾರೆಯಾಗಿ ಈ ವರ್ಷ ನನ್ನ ಪಾಲಿಗೆ ಚೆನ್ನಾಗಿತ್ತು.

ಪ್ರ

ನೆನಪಿನಲ್ಲಿ ಉಳಿಯುವ ಯಾವುದಾದರೂ ಘಟನೆ?

ಒಂದು ಘಟನೆ ಅಂತಾ ಹೇಳುವುದಕ್ಕೆ ಆಗಲ್ಲ. ಸಿನಿಮಾ ಬಿಡುಗಡೆಯಾದ ಸಂದರ್ಭ ನನ್ನ ಪಾತ್ರವನ್ನು ಮೆಚ್ಚಿ ಜನರಾಡುವ ಮಾತುಗಳು ತುಂಬಾ ಖುಷಿ ಕೊಡುತ್ತವೆ. ಇತ್ತೀಚೆಗೆ ಹೊಸ ಸಿನಿಮಾವೊಂದರ ಶೂಟಿಂಗ್ ಮಾಡುತ್ತಿರುವಾಗ ಹಿರಿಯ ಕಲಾವಿದರೊಬ್ಬರು ನನ್ನ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ‘ನೀವು ನೋಡುವುದಕ್ಕೂ ಜಯಮಾಲ ತರ ಇದ್ದೀರಾ, ನಟನೆಯನ್ನು ಚೆನ್ನಾಗಿ ಮಾಡುತ್ತೀರ. ತುಂಬಾ ಎತ್ತರಕ್ಕೆ ಬೆಳೆಯುವ ಲಕ್ಷಣವಿದೆ’ ಎಂದು ಪ್ರಶಂಸಿಸಿದರು. ಈ ಮಾತು ನಿಜಕ್ಕೂ ನನಗೆ ಸದಾ ನೆನಪಿನಲ್ಲುಳಿಯುತ್ತದೆ.

ಪ್ರ

ಹೀಗಾಗಬಾರದಿತ್ತು ಎಂದೆನಿಸಿದ ಘಟನೆ ಏನಾದರೂ ಇದೆಯಾ?

ಜೀವನದಲ್ಲಿ ನನ್ನ ನಿರ್ಧಾರವನ್ನು ನಾನೇ ತೆಗೆದುಕೊಳ್ಳುತ್ತೇನೆ. ಹಾಗಾಗಿ ಯಾವುದರ ಬಗ್ಗೆ ಆಗಲಿ ವಿಷಾದ ಪಡುವುದು ತೀರಾ ಕಡಿಮೆ. ಏನಾದರೂ ನಾನಂದುಕೊಂಡ ರೀತಿ ಆಗಲಿಲ್ಲ ಎಂದರೆ ಅದನ್ನು ಕಲಿಕೆ ಎಂದು ಭಾವಿಸುತ್ತೇನೆ. ನನ್ನ ನಿರ್ಧಾರದ ಬಗ್ಗೆ ವಿಷಾದ ಪಡುವುದರ ಬದಲು ಅದರಿಂದ ಏನು ಪಾಠ ಕಲಿಯಬೇಕೋ ಅದನ್ನು ಕಲಿತು ಆ ತಪ್ಪು ಪುನಾರವರ್ತನೆಯಾಗದಂತೆ ನೋಡಿಕೊಳ್ಳುತ್ತೇನೆ. ಇದನ್ನು ಜೀವನದಲ್ಲಿ ಪಾಲಿಸಿಕೊಂಡು ಬಂದಿದ್ದೇನೆ. ಬೇರೆಯವರ ಸಲಹೆ ತೆಗೆದುಕೊಳ್ಳುವುದಿಲ್ಲ ಎಂಬ ಉದ್ಧಟತನ ಇಲ್ಲ. ಆದರೆ ಕೊನೆಯಲ್ಲಿ ನನಗೆ ಏನು ಸರಿ ಅನಿಸುತ್ತದೆಯೋ ಅದನ್ನೇ ಮಾಡುತ್ತೇನೆ. ನನ್ನ ತಂದೆ–ತಾಯಿ ಕೂಡ ನನಗೆ ಅದನ್ನೇ ಕಲಿಸಿದ್ದಾರೆ. ಚಿತ್ರರಂಗಕ್ಕೆ ಬರುವ ಮೊದಲು ಎಂಜಿನಿಯರಿಂಗ್‌ ಮುಗಿಸಿ ಇನ್ಫೊಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಒಳ್ಳೆಯ ಸಂಬಳವೂ ಇತ್ತು. ಅದನ್ನೆಲ್ಲ ಬಿಟ್ಟು ಸಿನಿಮಾಕ್ಕೆ ಬಂದೆ. ನನ್ನ ಮೇಲೆ ನಂಬಿಕೆಯಿರುವುದರಿಂದ ಈ ನಿರ್ಧಾರ ಮಾಡಿದ್ದೆ. ಅದರ ಬಗ್ಗೆ ವಿಷಾದ ಪಡುವ ಮಾತೇ ಇಲ್ಲ. ನನ್ನ ಜೀವನದಲ್ಲಿ ತಪ್ಪುಗಳು ಆಗಿಯೇ ಇಲ್ಲ ಎಂದು ಹೇಳಲ್ಲ. ಈ ವರ್ಷವೂ ಕೆಲವು ತಪ್ಪುಗಳನ್ನು ಮಾಡಿದ್ದೆ. ಆದರೆ ಅದರಿಂದ ಪಾಠ ಕಲಿತು ಮುಂದುವರಿದೆ.

ಪ್ರ

2026ರ ಗುರಿ, ಯೋಜನೆ?

ಅಜಯ್‌ ರಾವ್ ಅವರೊಂದಿಗೆ ನಟಿಸಿದ ಒಂದು ಸಿನಿಮಾ ಮತ್ತು ನಿರೂಪ್ ಭಂಡಾರಿ ಅವರೊಂದಿಗೆ ನಟಿಸಿದ ‘ಸತ್ಯ ಸನ್‌ ಆಫ್‌ ಸತ್ಯಹರಿಶ್ಚಂದ್ರ’ ಸಿನಿಮಾಗಳು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಎರಡು ಸಿನಿಮಾಗಳು ಅದ್ಭುತವಾಗಿ ಮೂಡಿಬಂದಿವೆ. ಕಥೆಯೂ ಚೆನ್ನಾಗಿದೆ. ಮನೋರಂಜನ್ ರವಿಚಂದ್ರನ್‌ ಜೊತೆ ಒಂದು ಸಿನಿಮಾದಲ್ಲಿ ನಟಿಸುತ್ತಿರುವೆ. ಅದರ ಚಿತ್ರೀಕರಣ ಕಾರ್ಯ ನಡೆಯುತ್ತಿದೆ. ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದು, ಚಿತ್ರೀಕರಣ ಶುರುವಾಗಬೇಕಷ್ಟೆ.

ಪ್ರ

ಹೊಸ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಅನಿಸಿದ್ದು ಏನು?

ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಎಂಬ ಆಸೆಯಿದೆ. ಯಾವುದೇ ಭಾಷೆಯಾಗಲಿ, ಚಿತ್ರರಂಗವಾಗಲಿ ನನಗೆ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಿದೆ. ಪಾತ್ರಗಳ ಆಯ್ಕೆ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದುಕೊಂಡಿದ್ದೇನೆ. ಹೊಸ ಹೊಸ ಭಾಷೆ ಕಲಿಯಬೇಕಿದೆ. ಇನ್ನು, ವೈಯಕ್ತಿಕ ಜೀವನಕ್ಕೆ ಬಂದರೆ, ನಾನು ಶಿಕ್ಷಕರ ಮಗಳು. ನನ್ನ ತಂದೆ ತಾಯಿ ಇಬ್ಬರೂ ಶಿಕ್ಷಕರಾಗಿದ್ದಾರೆ. ಆದ್ದರಿಂದ ಶಿಸ್ತು ಹುಟ್ಟಿನಿಂದಲೇ ಬಂದಿದೆ. ಕೆಲವೊಂದು ಬಾರಿ ಆಲಸ್ಯ ಕಾಡುತ್ತದೆ. ಅದನ್ನು ಸರಿಪಡಿಸಿಕೊಳ್ಳಬೇಕು. ಕೆಲಸದಲ್ಲಿ ಮುಳುಗಿರುವುದರಿಂದ ಕುಟುಂಬಕ್ಕೆ ಹೆಚ್ಚು ಸಮಯ ಕೊಡಲು ಸಾಧ್ಯವಾಗಿರಲಿಲ್ಲ. ಕುಟುಂಬದ ಎಷ್ಟೋ ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲು ‘ವೃತ್ತಿ ಬದುಕಿನ ಸಮತೋಲನ’ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ.

ಪ್ರ

ಹೊಸ ವರ್ಷ, ಜನತೆಗೆ ನಿಮ್ಮ ಸಂದೇಶ ಏನು?

ನೀವು ಏನು ಆಗಬೇಕು ಎಂದು ಕೊಂಡಿದ್ದರೊ ಅದನ್ನು ಸಾಧಿಸಬೇಕಾದರೆ ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬೇಕು. ಕೆಲಸವಿಲ್ಲದೇ ಸುಮ್ಮನೆ ಕುಳಿತಿದ್ದರೂ ಏನಾದರೊಂದು ಕಲಿಯುತ್ತಿರಬೇಕು. ನಟ/ನಟಿ ಆಗಬೇಕು ಎಂದುಕೊಂಡರೆ, ಡ್ಯಾನ್ಸ್ ಕಲಿಯುವುದು, ನಟನಾ ತರಗತಿಗೆ ಹೋಗುವುದು ಮಾಡಬೇಕು. ಅವಕಾಶಗಳು ಯಾವಾಗ ಬೇಕಾದರೂ ನಿಮ್ಮ ಕದವನ್ನು ತಟ್ಟಬಹುದು. ಅದು ಬಂದಾಗ ನೀವು ತಯಾರಾಗಿರಬೇಕು ಅಷ್ಟೇ. ಉದಾಹರಣೆಗೆ ತೆಲುಗು ಸಿನಿಮಾವೊಂದು ನಿಮ್ಮನ್ನು ಹುಡುಕಿಕೊಂಡು ಬರುತ್ತೆ ಎಂದು ತಿಳಿದುಕೊಳ್ಳಿ. ಆಗ ನೀವು ನನಗೆ ತೆಲುಗು ಬರುವುದಿಲ್ಲ ಎಂದರೆ ಆ ಅವಕಾಶ ನಿಮ್ಮಿಂದ ತಪ್ಪಿಹೋಗುತ್ತದೆ. ಅಷ್ಟೊತ್ತಿಗಾಗಲೇ ನೀವು ತೆಲುಗು ಕಲಿತಿದ್ದರೆ ಆ ಅವಕಾಶ ನಿಮ್ಮ ಕೈವಶವಾಗುತ್ತಿತ್ತು. ಏನೇ ಕನಸು ಕಾಣಿ, ಆದರೆ ಅದಕ್ಕೆ ಬೇಕಾದ ಕೌಶಲವನ್ನು ಮೊದಲು ಕಲಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT