ಗುರುವಾರ, 18 ಡಿಸೆಂಬರ್ 2025
×
ADVERTISEMENT
ADVERTISEMENT

ಸಂದರ್ಶನ | 2025 – ಗೆಲುವಿನ ಹರ್ಷ ತಂದ ವರ್ಷ: ನಟಿ ಅಂಕಿತಾ ಅಮರ್

Published : 18 ಡಿಸೆಂಬರ್ 2025, 10:50 IST
Last Updated : 18 ಡಿಸೆಂಬರ್ 2025, 10:50 IST
ಫಾಲೋ ಮಾಡಿ
Comments
ಪ್ರ

2025ರ ವರ್ಷವನ್ನು ಹೇಗೆ ನೆನಪಿಸಲು ಇಷ್ಟಪಡುತ್ತೀರಿ?

ಇದನ್ನು ಪ್ರಜಾವಾಣಿಯ ನೆನಪಿನೊಂದಿಗೆ ಶುರು ಮಾಡುವೆ. ಈ ವರ್ಷ 'ಪ್ರಜಾವಾಣಿ ಸಿನಿ ಸಮ್ಮಾನ ಪ್ರಶಸ್ತಿ' ಸಿಕ್ಕಿದೆ. ಒಳ್ಳೆ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ. ನನ್ನ ಕುಟುಂಬಕ್ಕೆ, ಸಿನಿಮಾ ನೋಡಿದವರಿಗೆ, ಎಲ್ಲರಿಗೂ ಇದು ಖುಷಿ ಕೊಟ್ಟಿದೆ. ಕಳೆದ ವರ್ಷ 'ಇಬ್ಬನಿ ತಬ್ಬಲಿ ಇಳೆಯಲಿ' ಬಿಡುಗಡೆಯಾದ ಮೇಲೆ ಹಲವು ಬದಲಾವಣೆಯಾಗಿದೆ. ಅದು ನನಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಗಾಯಕಿ ಅಥವಾ ಡ್ಯಾನ್ಸರ್‌ ಆಗಿ ಗುರುತಿಸಿಕೊಂಡಿದ್ದ ನನ್ನನ್ನು ನಟಿಯಾಗಿ ಗುರುತಿಸಿಕೊಳ್ಳಲು ಅದು ಕಾರಣವಾಯಿತು.

ಪ್ರ

ಸವಿ ನೆನಪುಗಳು ಏನೇನು?

ಕುಂಭಮೇಳಕ್ಕೆ ಹೋಗಿರುವುದು ಈ ವರ್ಷದ ಸವಿ ನೆನಪುಗಳಲ್ಲಿ ಒಂದಾಗಿದೆ. ಇಡೀ ದೇಶದ ಜನತೆ ಅಲ್ಲಿ ಸೇರಿದ್ದರು. ಅದನ್ನು ಕಂಡು ತುಂಬಾ ಖುಷಿಪಟ್ಟಿದ್ದೇನೆ. ಹೇಗಾದರೂ ಮಾಡಿ ಅಲ್ಲಿಗೆ ಹೋಗಲೇಬೇಕೆಂದು ನಿರ್ಧರಿಸಿ ಪ್ರಯಾಣ ಮಾಡಿದ್ದೆ. ಆ ಚಂದದ ಪಯಣ ನಿಜಕ್ಕೂ ನನ್ನ ನೆನಪುಗಳಲ್ಲಿ ಅಚ್ಚೊತ್ತಿದೆ.

ಪ್ರ

ಹೀಗಾಗಬಾರದಿತ್ತು, ಇದು ನಡೆಯಬಾರದಿತ್ತು ಎಂದೆನಿಸಿದ ಘಟನೆ ಏನಾದರೂ..?

ಹಾಗೇನಿಲ್ಲ. ಒಂದು ವೇಳೆ ಬೇಸರವಾದರೂ ಅದರ ಬಗ್ಗೆ ನೊಂದು ಕುಳಿತುಕೊಳ್ಳುವ ಸ್ವಭಾವ ನನ್ನದಲ್ಲ. ಜೀವನದಲ್ಲಿ ಏಳು- ಬೀಳು ಬಂದರೆ ಅದು ಏಕೆ ಬಂತು, ಅದರಿಂದ ಏನು ಕಲಿಯಬಹುದು ಎಂದು ಯೋಚಿಸುತ್ತೇನೆ. ಆದರೆ, ವರ್ಷದ ಮೊದಲಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟಾಗಿ ಸಕ್ರಿಯ ಇಲ್ಲದಿರುವ ಬಗ್ಗೆ ಚಿಂತಿತಳಾಗಿದ್ದೆ. ಅವುಗಳಲ್ಲಿ ಸಕ್ರಿಯವಾಗಿರುವುದು ಎಷ್ಟು ಮುಖ್ಯ ಎನ್ನುವುದರ ಬಗ್ಗೆ ತಲೆಕೆಡಿಸಿಕೊಂಡಿದ್ದೆ. ಆದರೆ, ಅದರ ಬಗ್ಗೆ ಈಗ ನನಗೆ ಸ್ಪಷ್ಟತೆ ಸಿಕ್ಕಿದೆ. ನಾನು ಅಪರೂಪಕ್ಕೆ ಕಾಣಿಸಿಕೊಳ್ಳುವುದನ್ನೇ ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ(ನಗು). ಇನ್ನು, ಏಳು- ಬೀಳು ಎನ್ನುವುದೆಲ್ಲ ಸಹಜ. ಅವಕಾಶಗಳು ಬರುತ್ತವೆ, ಕೆಲವೊಂದು ಕೈತಪ್ಪಿ ಹೋಗುತ್ತವೆ. ನನಗೆ ಏನು ಬರಬೇಕು ಏನು ಸಿಗಬೇಕು ಅದು ಸಿಕ್ಕೇ ಸಿಗುತ್ತದೆ ಎಂದು ನಂಬುವವಳು ನಾನು. ಯಾರು ನನ್ನ ಪಾತ್ರವನ್ನು ಅಭಿನಯ ಮಾಡಬೇಕು ಎಂಬುದು ಪಾತ್ರಗಳಿಗೆ ಗೊತ್ತಿರುತ್ತದೆ. ಕಲಾವಿದರನ್ನು ಪಾತ್ರಗಳೇ ಆಯ್ಕೆ ಮಾಡುತ್ತವೆ.

ಪ್ರ

2026 ರ ಯೋಜನೆ, ಗುರಿಯೇನು?

ಮುಂದಿನ ವರ್ಷ ‘ವೇಷಗಳು’ ಚಿತ್ರದ ಶೂಟಿಂಗ್ ಮಧ್ಯಪ್ರದೇಶದಲ್ಲಿ ಒಂದು ತಿಂಗಳು ನಡೆಯಲಿದೆ. ಅದು ತೂಕವಿರುವ ಪಾತ್ರವಾಗಿದೆ. ಆ ಪಾತ್ರವನ್ನು ಹೇಗೆ ನಿರ್ವಹಿಸುತ್ತೇನೆ, ಕ್ಯಾಮೆರಾವನ್ನು ಹೇಗೆ ಎದುರಿಸಬಲ್ಲೆ ಎಂಬ ಬಗ್ಗೆ ಕುತೂಹಲ ಇದೆ. ಅದಕ್ಕಾಗಿ ತುಂಬಾ ಕಾಯುತ್ತಾ ಇದ್ದೇನೆ. ಇನ್ನು, ಉಪೇಂದ್ರ ಸರ್‌ ಜೊತೆಗಿನ ‘ಭಾರ್ಗವ’ ಸಿನಿಮಾದ ಶೂಟಿಂಗ್ ಕೂಡ ಮುಂದಿನ ವರ್ಷ ನಡೆಯಲಿದೆ. ಈಗಾಗಲೇ ನಾಲ್ಕು ಶೆಡ್ಯೂಲ್‌ ಮುಗಿದಿದೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಉಪೇಂದ್ರ ಸರ್‌ ಅವರಿಗೆ ಸಿನಿಮಾದ ಮೇಲಿರುವ ಒಲವು ಕಂಡು ತುಂಬಾ ಖುಷಿಯಾಯಿತು. ಇದೇ ರೀತಿ ಒಳ್ಳೆಯ ಸಿನಿಮಾಗಳ ನಿರೀಕ್ಷೆ ಮಾಡುತ್ತಿದ್ದೇನೆ.

ಪ್ರ

ಬದಲಾವಣೆ ಮಾಡಿಕೊಳ್ಳಬೇಕು ಅನಿಸಿದ್ದು ಏನು?

ಹೌದು, ತೀರಾ ಸೆನ್ಸಿಟಿವ್ ಆಗಿರುವುದನ್ನು, ತೀರಾ ಹಚ್ಚಿಕೊಳ್ಳುವ ನನ್ನ ಗುಣವನ್ನು ಬದಲಾಯಿಸಿಕೊಳ್ಳಬೇಕಿದೆ. ಹೆಚ್ಚು ಹೆಚ್ಚು ಸಿನಿಮಾಗಳನ್ನು ನೋಡಬೇಕು. ತಿಂಗಳಿಗೆ ಕನಿಷ್ಠ ನಾಲ್ಕು ಸಿನಿಮಾಗಳನ್ನಾದರೂ ನೋಡಲೇಬೇಕು ಎಂದುಕೊಂಡಿದ್ದೇನೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿರುವ ಎಲ್ಲಾ ಭಾಷೆಯ ಉತ್ತಮ ಸಿನಿಮಾಗಳನ್ನು ನೋಡಬೇಕು. ಅದರಿಂದ ಕಲಿಯಬೇಕು ಎಂದು ಭಾವಿಸಿದ್ದೇನೆ. ಇನ್ನು, ನಾನು ‘ಚೈಲ್ಡ್‌ ಸೈಕಾಲಜಿ’ಯಲ್ಲಿ ಮಾಸ್ಟರ್ ಮಾಡುತ್ತಿದ್ದೇನೆ. ಈ ವರ್ಷ ಶೂಟಿಂಗ್ ಮತ್ತು ಇತರ ಕಾರಣಗಳಿಂದ ಮಕ್ಕಳ ಜೊತೆ ಸಮಯ ಕಳೆಯಲು ಸಾಧ್ಯವಾಗಿಲ್ಲ. ಬರುವ ದಿನಗಳಲ್ಲಿ ಈ ಬಗ್ಗೆ ಹೆಚ್ಚು ಗಮನಹರಿಬೇಕು ಅಂದುಕೊಂಡಿರುವೆ. ಹೊಸ ಭಾಷೆಯನ್ನು ಕಲಿಯುವ ಬಗ್ಗೆ ಗಮನ ಕೊಡಬೇಕು. ಭಾಷೆ ಕಲಿಯುವುದು ಕಲಾವಿದರಿಗೆ ತುಂಬಾ ಮುಖ್ಯ. ಯೋಗಭ್ಯಾಸ ರೂಢಿ ಮಾಡಿಕೊಳ್ಳಬೇಕು. ಕಲೆಗೆ, ಪ್ರಕೃತಿ ಸಂಬಂಧಪಟ್ಟ ವಿಷಯಗಳ ಬಗ್ಗೆ ಕಲಿಯುವುದು ನನ್ನ ಆದ್ಯತೆ.

ಪ್ರ

ನಿಮ್ಮ ಬದುಕಿನ ಅನುಭವದ ಬುತ್ತಿಯಿಂದ, ಒಂದು ತುಂಡು ರೊಟ್ಟಿ ಹಂಚುವುದಾದರೆ...

ಕುಟುಂಬಕ್ಕೆ ಯಾವಾಗಲೂ ಪ್ರಾಮುಖ್ಯತೆ ಕೊಡಬೇಕು. ನಮ್ಮ ತಂದೆ ತಾಯಿ ಅಕ್ಕ ತಂಗಿ ಎಲ್ಲರೂ ನಮ್ಮ ಜೀವನಕ್ಕೆ ತುಂಬಾ ಮುಖ್ಯ. ನಾವು ಎಲ್ಲೇ ಹೋದರು ಕೊನೆಗೆ ಬರುವುದು ನಮ್ಮ ಮನೆಗೆ. ಆದ್ದರಿಂದ ಕುಟುಂಬವನ್ನು ಪ್ರೀತಿಸಬೇಕು. ಜೀವನದಲ್ಲಿ ಸಂತೋಷವೂ ಬರುತ್ತದೆ, ಕಷ್ಟವೂ ಬರುತ್ತದೆ. ಎರಡನ್ನೂ ಸಮಾನವಾಗಿ ನೋಡಿ ಎಂದು ನಾನು ಹೇಳುವುದಿಲ್ಲ. ಬೇಸರವಾದಾಗ ಆ ಭಾವನೆಯನ್ನು ಅನುಭವಿಸಿ. ಆದರೆ, ಅದರಲ್ಲೇ ಮುಳುಗಿ ಬಿಡಬೇಡಿ. ಆ ಭಾವನೆಯಲ್ಲೇ ಮುಳುಗಿ ನಮಗೆ ನಾವು ನೋವುಂಟು ಮಾಡಿಕೊಳ್ಳಬಾರದು. ಮುಳುಗಿ, ಎದ್ದು, ದಡ ದಾಟಬೇಕು ಅಷ್ಟೇ. ಇನ್ನೊಂದು ವಿಚಾರ, ನಮ್ಮ ಮೇಲೆ ನಮಗೆ ದಯೆ ಇರಬೇಕು. ಬೇರೆಯವರನ್ನು ಅರ್ಥಮಾಡಿಕೊಳ್ಳಬೇಕೆಂದರೆ ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ನಮ್ಮ ಮೇಲೆ ದಯೆ ತೋರಿದಾಗ ಮಾತ್ರ ಬೇರೆಯವರ ಮೇಲೆ ದಯೆ ತೋರಲು ನಮಗೆ ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT