ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅಹಿಂಸಾ ಗಾಂಧಿ’ಗೆ ನ್ಯೂಯಾರ್ಕ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ ಪ್ರಶಸ್ತಿ

ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಆಫ್ರಿಕಾದ ಸಿನಿಮಾ ನಿರ್ಮಾಪಕ ಅನಂತ್‌ ಸಿಂಗ್‌ ಅವರ 'ಅಹಿಂಸಾ - ಗಾಂಧಿ: ದಿ ಪವರ್‌ ಆಫ್‌ ದಿ ಪವರ್‌ಲೆಸ್‌' ಸಾಕ್ಷ್ಯಚಿತ್ರವು 21ನೇ ನ್ಯೂಯಾರ್ಕ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ಡಾಕ್ಯೂಮೆಂಟರಿ ಫೀಚರ್‌ ಪ್ರಶಸ್ತಿಗೆ ಭಾಜನವಾಗಿದೆ.

ಮಹಾತ್ಮ ಗಾಂಧಿ ಕುರಿತ ಸಾಕ್ಷ್ಯಚಿತ್ರವನ್ನು ರಮೇಶ್‌ ಶರ್ಮಾ ನಿರ್ದೇಶಿಸಿದ್ದಾರೆ. 2019ರಲ್ಲಿ ಮಹಾತ್ಮ ಗಾಂಧಿ ಅವರ ಜನ್ಮದಿನದ 150ನೇ ವಾರ್ಷಿಕೋತ್ಸವದ ಹಿನ್ನೆಲೆ ನಿರ್ಮಾಪಕ ಅನಂತ್‌ ಸಿಂಗ್‌ ಒಡೆತನದ ಕಂಪನಿ ವಿಡಿಯೊವಿಷನ್‌ ಅಹಿಂಸಾ - ಗಾಂಧಿ ಸಾಕ್ಷ್ಯಚಿತ್ರವನ್ನು ತಯಾರಿಸಿತ್ತು.

ಕೋವಿಡ್‌-19 ಸೋಂಕಿನ ಕಾರಣದಿಂದಾಗಿ ಚಿತ್ರ ಬಿಡುಗಡೆ ತಡವಾಗಿತ್ತು. 'ಪ್ರತಿಷ್ಠಿತ ನ್ಯೂಯಾರ್ಕ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಪಡೆದುದಕ್ಕೆ ಹೆಮ್ಮೆಯಾಗುತ್ತಿದೆ. ಗಾಂಧಿ ಬೋದನೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಗೆಯನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇವೆ. ಈ ಚಿತ್ರಕ್ಕೆ ಪ್ರಶಸ್ತಿ ಬಂದಿರುವುದು ಗಾಂಧಿ ವಿಶ್ವಕ್ಕೆ ನೀಡಿರುವ ಸಂದೇಶದಿಂದ. ನಮ್ಮ ಚಿತ್ರದ ಮೂಲಕ ಗಾಂಧಿ ಚಿಂತನೆಗಳನ್ನು ಅವಿಸ್ಮರಣೀಯವಾಗಿಸುವ ಪ್ರಯತ್ನ ಮಾಡಿದ್ದೇವೆ' ಎಂದು ನಿರ್ದೇಶಕ ರಮೇಶ್‌ ಶರ್ಮಾ ತಿಳಿಸಿದ್ದಾರೆ.

'ರಮೇಶ್‌ ಶರ್ಮಾ ಅವರ ಜೊತೆಗೆ ಕೆಲಸ ಮಾಡಿದ್ದು ಹೆಚ್ಚು ಸಂತೋಷ ನೀಡಿತು. ಗಾಂಧಿ ಅವರ ಚಿಂತೆಗಳು ಜಾಗತಿಕ. ದಕ್ಷಿಣ ಆಫ್ರಿಕಾ ಜನತೆಗೆ ಗಾಂಧಿ ಬಗ್ಗೆ ವಿಶೇಷ ಗೌರವವಿದೆ. ಇಲ್ಲಿನ ಜನತೆಯೊಂದಿಗಿನ ಗಾಂಧಿ ಸಂಪರ್ಕವನ್ನು ಇದ್ದ ಹಾಗೆ ಚಿತ್ರದಲ್ಲಿ ತೋರಿಸುವ ಪ್ರಯತ್ನ ನಡೆಸಿದ್ದೇವೆ. ಗಾಂಧಿ ಸಾರಿದ ಮಾನವ ಹಕ್ಕು ಮತ್ತು ಸಮಾನತೆಗೆ ದಕ್ಷಿಣ ಆಫ್ರಿಕಾದ ಜನತೆ ಬೆಸೆದುಕೊಂಡಿದ್ದಾರೆ. ಗಾಂಧಿ ಜೀವನ ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡುವಂತದ್ದು. ಶಾಂತಿ ಮತ್ತು ಅಹಿಂಸೆ ಇತರ ನಾಯಕರನ್ನು ಪ್ರಭಾವಗೊಳಿಸುವಂತದ್ದು'ಎಂದು ಅನಂತ್‌ ಸಿಂಗ್‌ ತಿಳಿಸಿದ್ದಾರೆ.

ಕಳೆದ ವರ್ಷ ಜೂನ್‌ 7ರಂದು ಗಾಂಧಿ ಸಾಕ್ಷ್ಯಚಿತ್ರ ಸಿದ್ಧಗೊಂಡಿರುವುದಾಗಿ ಘೋಷಿಸಿದ್ದರು. 1893ರಲ್ಲಿ ದಕ್ಷಿಣ ಆಫ್ರಿಕಾದ ಪೀಟರ್‌ಮರಿಟ್ಸ್‌ಬರ್ಗ್‌ ನಿಲ್ದಾಣದಲ್ಲಿ ಬಿಳಿಯರಿಗೆ ಮೀಸಲಾದ ಸ್ಥಳದಲ್ಲಿ ಕುಳಿತಿದ್ದಾರೆ ಎಂಬ ಕಾರಣಕ್ಕೆ ಗಾಂಧಿ ಅವರನ್ನು ರೈಲಿನಿಂದ ಕೆಳಗಿಳಿಸಿದ ಘಟನೆ ಜೀವನದುದ್ದಕ್ಕೂ ಅಸಮಾನತೆ ವಿರುದ್ಧ ಹೋರಾಡುವಂತೆ ಮಾಡಿತ್ತು.

ಗಾಂಧಿ ಅವರ ಸಂದೇಶದಿಂದ ಜಗತ್ತಿನ ಇತರ ನಾಯಕರಾದ ಮಾರ್ಟಿನ್‌ ಲೂಥರ್‌ ಕಿಂಗ್‌, ಜಾನ್‌ ಲೆವಿಸ್‌, ಬರಾಕ್‌ ಒಬಾಮ ಅವರಿಗೆ ಹೇಗೆ ಸ್ಪೂರ್ತಿ ನೀಡಿತು ಎಂಬುದನ್ನು ಚಿತ್ರದಲ್ಲಿ ಎತ್ತಿತೋರಿಸಲಾಗಿದೆ. ಅಮೆರಿಕದಲ್ಲಿ ನಾಗರಿಕ ಹಕ್ಕುಗಳ ಹೋರಾಟ, ಪೋಲೆಂಡ್‌ನಲ್ಲಿ ಸಮಾನತೆಗಾಗಿ ನಡೆದ ಹೋರಾಟಗಳು ಹೇಗೆ ಗಾಂಧಿ ಅವರಿಂದ ಪ್ರೇರಿತ ಎಂಬದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಅನಂತ್‌ ಸಿಂಗ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT