ಬುಧವಾರ, ಮಾರ್ಚ್ 3, 2021
23 °C

‘ಕತ್ತಿ’ ರಿಮೇಕ್‌ನಲ್ಲಿ ಅಕ್ಷಯ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯ್‌ ಅಭಿನಯದ ‘ಕತ್ತಿ’ ತಮಿಳು ಸಿನಿಮಾ ಹಿಂದಿಗೆ ರಿಮೇಕ್‌ ಆಗಲಿದೆ. ವಿಜಯ್‌ ಮಾಡಿದ ಪಾತ್ರವನ್ನು ಹಿಂದಿಯಲ್ಲಿ ನಟ ಅಕ್ಷಯ್‌ ಕುಮಾರ್‌ ನಿಭಾಯಿಸಲಿದ್ದಾರೆ. 

2014ರಲ್ಲಿ ಬಿಡುಗಡೆಯಾದ ‘ಕತ್ತಿ’ ಹಿಟ್‌ ಆಗಿತ್ತು. ಕೆಲ ವರ್ಷಗಳಿಂದಲೂ ಹಿಂದಿಗೆ ರಿಮೇಕ್‌ ಆಗಲಿರುವ ಸುದ್ದಿ ಇತ್ತು. ಇದೀಗ ಸೆಟ್ಟೇರುವ ಸೂಚನೆ ಕಾಣುತ್ತಿದೆ. ಅಕ್ಷಯ್‌ ಕುಮಾರ್‌ ಇದರಲ್ಲಿ ನಟಿಸಲು ಆಸಕ್ತಿ ವಹಿಸಿ ಪಾತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಹಿಂದೆಯೇ ಚಿತ್ರದ ಕೆಲಸ ಆರಂಭವಾಗಬೇಕಿತ್ತು. ಆದರೆ ‘ಮಿಷನ್‌ ಮಂಗಲ’ ಸಿನಿಮಾದಲ್ಲಿ ಅಕ್ಷಯ್‌ ಬ್ಯುಸಿಯಾಗಿದ್ದರಿಂದ ಕೊಂಚ ತಡವಾಗಿದೆ. 

ಈಗ ‘ಮಿಷನ್‌ ಮಂಗಲ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಕ್ಷಯ್‌ ಕುಮಾರ್‌ ಕೂಡ ಮುಂದಿನ ಸಿನಿಮಾಕ್ಕೆ ರೆಡಿಯಾಗಿದ್ದಾರೆ. ಈ ಚಿತ್ರಕ್ಕೆ ‘ಇಕ್ಕಾ’ ಎಂದು ಹೆಸರಿಡಾಗಿದೆ. ಸ್ವಲ್ಪ ದಿನದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ‘ಮಿಷನ್‌ ಮಂಗಲ’ ನಿರ್ದೇಶಿಸಿದ ಜಗನ್‌ ಶಕ್ತಿ ಅವರೇ ಈ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ. 

‘ಕತ್ತಿ ಚಿತ್ರವು ಸಮಾಜದಲ್ಲಿ ದಮನಿತರ ಕತೆಯನ್ನು ಹೇಳುತ್ತದೆ. ನನ್ನ ಎರಡನೇ ಪ್ರಯತ್ನದಲ್ಲಿ ಆ್ಯಕ್ಷನ್‌ ಚಿತ್ರವನ್ನು ನಿರ್ದೇಶಿಸಲಿದ್ದೇನೆ’ ಎಂದು ನಿರ್ದೇಶಕ ಹೇಳಿಕೊಂಡಿದ್ದಾರೆ. 

ಮೂಲ ಚಿತ್ರದಲ್ಲಿ ವಿಜಯ್‌ ದ್ವಿಪಾತ್ರದಲ್ಲಿ ನಟಿಸಿದ್ದರು. ಸಮಂತಾ ನಾಯಕಿಯಾಗಿ ಅಭಿನಯಿಸಿದ್ದರು. ನೀಲ್‌ ನಿತಿನ್‌ ಮುಕೇಶ್‌ ವಿಲನ್‌ ಪಾತ್ರದಲ್ಲಿ ಮಿಂಚಿದ್ದರು.

‘ಕಾಂಚನಾ’ ರಿಮೇಕ್‌ನಲ್ಲೂ ಅಕ್ಷಯ್‌ ನಟಿಸುತ್ತಿದ್ದಾರೆ.

‘ರೌಡಿ ರಾಥೋಡ್‌ 2’ ಸಂಭಾವನೆ ₹54 ಕೋಟಿ
‘ರೌಡಿ ರಾಥೋಡ್‌’ ಚಿತ್ರಕ್ಕಾಗಿ ₹27 ಕೋಟಿ ಸಂಭಾವನೆ ಪಡೆದಿದ್ದ ನಟ ಅಕ್ಷಯ್‌ ಕುಮಾರ್‌, ಈಗ ಅದರ ಸಿಕ್ವೆಲ್‌ ಚಿತ್ರಕ್ಕಾಗಿ ₹54 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ. ಸಂಜಯ್‌ ಲೀಲಾ ಬನ್ಸಾಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಬಾಲಿವುಡ್‌ನ ಸ್ಟಾರ್‌ ನಟರಲ್ಲಿ ಅಕ್ಷಯ್‌ ಕೂಡ ಒಬ್ಬರು. ಅವರ ಸಿನಿಮಾಗಳನ್ನು ತಪ್ಪದೇ ನೋಡುವಂತಹ ಅಭಿಮಾನಿಗಳ ವರ್ಗವೇ ಅವರಿಗಿದೆ. ಹಾಗೇ ಅವರು ಆಯ್ಕೆ ಮಾಡುವ ಪಾತ್ರಗಳೂ ಸಹ ಒಂದು ಸಿನಿಮಾದಿಂದ ಮತ್ತೊಂದಕ್ಕೆ ವಿಭಿನ್ನವಾಗಿರುವುದೂ ಅವರ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿದೆ.

‘ರೌಡಿ ರಾಥೋಡ್‌’ ಚಿತ್ರಕ್ಕೆ 7 ವರ್ಷಗಳ ಹಿಂದೆ ಅಕ್ಷಯ್‌ ₹27 ಕೋಟಿ ಸಂಭಾವನೆ ಪಡೆದಿದ್ದರು. ಈಗ ಇದರ ಮುಂದುವರಿದ ಭಾಗಕ್ಕೆ ಅದರ ಎರಡರಷ್ಟು ಅಂದರೆ ಬರೋಬ್ಬರಿ ₹54 ಕೋಟಿ ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿದೆ.

ಆದರೆ ಈ ಮೊತ್ತವನ್ನು ಅಕ್ಷಯ್‌ಗೆ ನೀಡಲು ಸಂಜಯ್‌ ಲೀಲಾ ಬನ್ಸಾಲಿ ತಯಾರಿದ್ದಾರೆ. ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸಲಿದ್ದಾರೆ. ‘ಪ್ಯಾಡ್‌ ಮ್ಯಾನ್‌’ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅಕ್ಷಯ್‌ ಅವರನ್ನು ರೌಡಿ ರಾಥೋಡ್‌ ಸೀಕ್ವೆಲ್‌ನಲ್ಲಿ ನಟಿಸಲು ಸಂಜಯ್‌ ಲೀಲಾ ಬನ್ಸಾಲಿ ಹಾಗೂ ಪ್ರಭುದೇವ ಕೇಳಿಕೊಂಡಿದ್ದರು. ಈಗ ಈ ಚಿತ್ರದ ಬಗ್ಗೆ ಗಂಭೀರವಾಗಿ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.

2019ರಲ್ಲಿ ಬಿಡುಗಡೆಯಾದ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರ ಫೋರ್ಬ್ಸ್‌ ಪಟ್ಟಿಯಲ್ಲಿ ಅಕ್ಷಯ್‌ ಕುಮಾರ್‌ ಅವರ ಹೆಸರೂ ಇದೆ. ಅವರು 33ನೇ ಸ್ಥಾನದಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು