ಬುಧವಾರ, ಆಗಸ್ಟ್ 10, 2022
24 °C
ಆನೆ ಲದ್ದಿಯಿಂದ ಮಾಡಿದ ಟೀ ಕುಡಿದ ‘ಬೆಲ್‌ ಬಾಟಂ’ ಹೀರೊ

ನಿತ್ಯ ಗೋಮೂತ್ರ ಕುಡಿಯುತ್ತಿದ್ದರಂತೆ ನಟ ಅಕ್ಷಯ್‌ ಕುಮಾರ್!

. Updated:

ಅಕ್ಷರ ಗಾತ್ರ : | |

Prajavani

ಡಿಸ್ಕವರಿ ಚಾನೆಲ್‌ನ ಜನಪ್ರಿಯ ಕಾರ್ಯಕ್ರಮವಾದ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಅನ್ನು ನಿರೂಪಿಸುವುದು ಬೇರ್‌ ಗ್ರಿಲ್ಸ್‌ ಎಂಬುದು ಎಲ್ಲರಿಗೂ ತಿಳಿದಿದೆ. ದಟ್ಟ ಕಾನನದಲ್ಲಿ ವ್ಯಕ್ತಿಯೊಬ್ಬ ಒಂಟಿಯಾಗಿ ಸಂಕಷ್ಟ ಎದುರಿಸಿ ನಿಲ್ಲುವ ಸಾಹಸಮಯ ಕಥನವನ್ನು ಈ ಕಾರ್ಯಕ್ರಮ ಕಟ್ಟಿಕೊಡುತ್ತದೆ.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ ಭರ್ಜಿ ಹಿಡಿದು ಗ್ರಿಲ್ಸ್‌ ಜೊತೆಗೆ ಹೆಜ್ಜೆ ಹಾಕಿದ್ದು ಉಂಟು. ಈ ವರ್ಷದ ಆರಂಭದಲ್ಲಿ ‘ಸೂಪರ್‌ ಸ್ಟಾರ್’ ರಜನಿಕಾಂತ್‌ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಗ್ರಿಲ್ಸ್‌ ಜೊತೆಗೆ ಕಾಡು ಸುತ್ತಿದ್ದರು.

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಕೂಡ ಬಂಡೀಪುರದಲ್ಲಿ ಗ್ರಿಲ್ಸ್‌ ಜೊತೆಗೆ ಕಾಡು ಸುತ್ತಿದ್ದಾರೆ. ಸೆಪ್ಟೆಂಬರ್‌ 11ರಂದು ರಾತ್ರಿ 8ಗಂಟೆಗೆ ಡಿಸ್ಕವರಿ ಪ್ಲಸ್‌ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಡಿಸ್ಕವರಿ ಚಾನೆಲ್‌ನಲ್ಲಿ ಸೆಪ್ಟೆಂಬರ್‌ 14ರಂದು ರಾತ್ರಿ 8ಗಂಟೆಗೆ ವೀಕ್ಷಣೆಗೆ ಲಭ್ಯವಿದೆ.

ಪ್ರಸ್ತುತ ಅಕ್ಷಯ್‌ ಕುಮಾರ್‌ ಸ್ಕಾಟ್ಲೆಂಡ್‌ನಲ್ಲಿ ‘ಬೆಲ್‌ ಬಾಟಂ’ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಈ ಮಧ್ಯೆ ಅಕ್ಷಯ್‌ ಮತ್ತು ನಟಿ ಹುಮಾ ಖುರೇಷಿ ನಡೆಸಿದ ಇನ್‌ಸ್ಟಾಗ್ರಾಮ್‌ ಲೈವ್‌ ಸೆಷನ್‌ನಲ್ಲಿ ಬೇರ್‌ ಗ್ರಿಲ್ಸ್‌ ಪಾಲ್ಗೊಂಡು, ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿರುವುದು ವಿಶೇಷ.

ಸಂವಾದದ ವೇಳೆ ಬಂಡೀಪುರದಲ್ಲಿ ನಡೆದ ಶೂಟಿಂಗ್‌ ಬಗ್ಗೆ ಇಬ್ಬರು ಮೆಲುಕು ಹಾಕಿದ್ದಾರೆ. ಈ ನಡುವೆ ಹುಮಾ ಖುರೇಷಿ, ‘ಆನೆಗಳ ಲದ್ದಿಯಿಂದ ಮಾಡಿದ ಟೀ ಕುಡಿದ ಬಗ್ಗೆ ಗಮನ ಸೆಳೆದಿದ್ದಾರೆ (elephant poop tea). ಕಾರ್ಯಕ್ರಮದ ಪ್ರೊಮೊದಲ್ಲಿಯೂ ಈ ಬಗ್ಗೆ ಇರುವುದನ್ನು ಅವರು ಪ್ರಸ್ತಾಪಿಸಿದ್ದಾರೆ.

ಆಗ ಅಕ್ಷಯ್‌ ನೀಡಿರುವ ಪ್ರತಿಕ್ರಿಯೆ ಕುತೂಹಲಕಾರಿಯಾಗಿದೆ. ‘ಅದೇನು ದೊಡ್ಡ ವಿಚಾರವಲ್ಲ. ಆಯುರ್ವೇದಿಕ್‌ ಕಾರಣಕ್ಕಾಗಿ ನಾನು ಪ್ರತಿದಿನವೂ ಗೋಮೂತ್ರ ಕುಡಿಯುತ್ತಿದ್ದೆ’ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

‘ಮತ್ತೆ ನೀವಿಬ್ಬರು ಮತ್ತೊಂದು ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತೀರಾ’ ಎನ್ನುವ ಹುಮಾ ಪ್ರಶ್ನೆಗೆ, ‘ಅಕ್ಷಯ್‌ ಜೊತೆಗೆ ಕೆಲಸ ಮಾಡಿರುವುದು ನನಗೊಂದು ವಿಶಿಷ್ಟ ಅನುಭವ. ಮತ್ತೊಂದು ಕಾರ್ಯಕ್ರಮದಲ್ಲಿ ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಅವರ ಜೊತೆಗಿನ ಪಯಣ ಖುಷಿ ಕೊಟ್ಟಿತು’ ಎಂದಿದ್ದಾರೆ ಬೇರ್‌ ಗ್ರಿಲ್ಸ್‌. ಅಕ್ಷಯ್‌ ಫಿಟ್‌ನೆಸ್‌, ಮಾನವೀಯತೆಯ ಬಗ್ಗೆಯೂ ಗ್ರಿಲ್ಸ್‌ ಪ್ರಸ್ತಾಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು