ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಿಯಾ ಭಟ್‌ ಮುಂಬೈ ಮಾಫಿಯಾ ಕ್ವೀನ್ ಆದ ಕಥೆ!

ಹಿಂದಿಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ನಟನೆ
Last Updated 11 ಜೂನ್ 2020, 14:45 IST
ಅಕ್ಷರ ಗಾತ್ರ

ಎಸ್.ಎಸ್‌. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ (ರೌದ್ರಂ ರಣಂ ರುಧಿರಂ) ಸಿನಿಮಾದಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌ ಅವರು ರಾಮ್‌ ಚರಣ್‌ ಜೊತೆಗೆ ರೊಮ್ಯಾನ್ಸ್‌ ಮಾಡಲಿದ್ದಾರೆ. ಈ ಚಿತ್ರದಲ್ಲಿ ಅಜಯ್‌ ದೇವಗನ್‌ ಕೂಡ ನಿರ್ಣಾಯಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ, ಆಲಿಯಾ ಮತ್ತು ಅಜಯ್‌ ಒಟ್ಟಾಗಿ ಕಾಣಿಸಿಕೊಳ್ಳುತ್ತಿಲ್ಲವಂತೆ. ಆದರೆ, ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ಈ ಇಬ್ಬರೂ ಮುಖಾಮುಖಿಯಾಗಲಿದ್ದಾರೆ.

ಈ ಪಿರಿಯಾಡಿಕ್‌ ಚಿತ್ರದ ಶೂಟಿಂಗ್‌ ಲಾಕ್‌ಡೌನ್‌ ತೆರವುಗೊಂಡ ಬಳಿಕ ಶುರುವಾಗುವ ನಿರೀಕ್ಷೆಯಿದೆ. ಅಂದಹಾಗೆ ಆಲಿಯಾ, ಮುಂಬೈ ಮಾಫಿಯಾ ಕ್ವೀನ್‌ ಆಗಿದ್ದ ಗಂಗೂಬಾಯಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಅಜಯ್‌ ದೇವಗನ್‌ ಅವರದ್ದು ಮುಂಬೈ ಡಾನ್‌ ಪಾತ್ರ.

ಯಾರು ಈ ಗಂಗೂಬಾಯಿ ಎಂಬ ಪ್ರಶ್ನೆ ಸಿನಿಪ್ರಿಯರಿಗೆ ಕಾಡುವುದು ಸಹಜ. ಗಂಗೂಬಾಯಿಯದು ಗುಜರಾತ್‌ನ ಕಾತೇವಾಡ. ಆಕೆಯ ಮೂಲ ಹೆಸರು ಗಂಗೂಬಾಯಿ ಹರ್ಜಿವಂದಾಸ್. ಲೇಖಕ ಎಸ್. ಹುಸೈನ್ ಜೈದಿ ಬರೆದಿರುವ ‘ಮಾಫಿಯಾ ಕ್ವೀನ್ಸ್ ಆಫ್‌ ಮುಂಬೈ’ ಪುಸ್ತಕದ ಪ್ರಕಾರ ಆಕೆ ಹದಿಹರೆಯದಲ್ಲಿಯೇ ವೇಶ್ಯಾವಾಟಿಕೆಗೆ ತಳ್ಳಲ್ಪಡುತ್ತಾಳೆ. ಮುಂಬೈನ ಕಾಮಾಟಿಪುರದಲ್ಲಿ ಆಕೆ ವೇಶ್ಯಾಗೃಹ ನಡೆಸುತ್ತಿದ್ದಳು. ಕುಖ್ಯಾತ ಕ್ರಿಮಿನಲ್‌ಗಳು ಆಕೆಯ ಗ್ರಾಹಕರಾಗಿದ್ದರಂತೆ.

ಜೈದಿಯ ಪುಸ್ತಕ ಆಕೆಯ ಬಾಲ್ಯದ ಬಗ್ಗೆಯೂ ಚಿತ್ರಣ ನೀಡುತ್ತದೆ. ಬಾಲ್ಯದಲ್ಲಿಯೇ ಆಕೆಗೆ ಸಿನಿಮಾ ನಟಿಯಾಗಬೇಕು ಎಂಬ ಕನಸು ಇತ್ತಂತೆ. ಹದಿಹರೆಯಕ್ಕೆ ಬಂದಾಗ ಬಾಲಿವುಡ್‌ನ ನಟಿಯಾಗುವ ಕನಸು ಕಂಡಳಂತೆ. ತನ್ನ 16ನೇ ವಯಸ್ಸಿಗೆ ಆಕೆ ತಂದೆ ಜೊತೆಗೆ ಅಕೌಂಟೆಂಟ್‌ ಕೆಲಸ ಮಾಡುತ್ತಿದ್ದ ನೌಕರನ ಪ್ರೀತಿಯ ಬಲೆಗೆ ಬೀಳುತ್ತಾಳೆ. ಕೊನೆಗೆ ಇಬ್ಬರೂ ಪಲಾಯನಗೈಯುವುದು ಮುಂಬೈಗೆ. ಬಣ್ಣ ಬಣ್ಣದ ಕನಸು ಕಾಣುತ್ತಲೇ ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿರುತ್ತಾಳೆ. ಆದರೆ, ನಂಬಿದ ಗಂಡನ ಮೋಸಕ್ಕೆ ಸಿಲುಕುವ ಆಕೆ ಕೇವಲ ₹ 500ಕ್ಕೆ ವೇಶ್ಯಾಗೃಹವೊಂದಕ್ಕೆ ಮಾರಾಟವಾಗುತ್ತಾಳೆ.

ಒಂದು ದಿನ ಗಂಗೂಬಾಯಿ ಮುಂಬೈನ ಆಗಿನ ಡಾನ್ ಕರೀಂ ಲಾಲ್‌ನ ಗ್ಯಾಂಗ್‌ನ ಸದಸ್ಯನಿಂದ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಕೊನೆಗೆ, ನ್ಯಾಯಕ್ಕಾಗಿ ಆಕೆ ಮೊರೆ ಹೋಗುವುದು ಕರೀಂ ಲಾಲ್‌ ಬಳಿಗೆ. ಅವನ ಮುಂದೆ ತನಗಾದ ನೋವು ತೋಡಿಕೊಳ್ಳುತ್ತಾಳೆ. ಆಗ ಆತ ಅವಳ ಕೈಗೆ ರಾಖಿ ಕಟ್ಟಿ ಸಹೋದರಿಯ ಸ್ಥಾನ ನೀಡುತ್ತಾನೆ. ಅಷ್ಟಕ್ಕೆ ಆತ ಸುಮ್ಮನಾಗುವುದಿಲ್ಲ. ಕಾಮಾಟಿಪುರದ ಉಸ್ತುವಾರಿಯನ್ನು ಆಕೆಗೆ ನೀಡುತ್ತಾನೆ. ಆ ನಂತರ ಆಕೆ ಮಾಫಿಯಾ ಕ್ವೀನ್‌ ಆಗಿ ಬೆಳೆದಿದ್ದು ಈಗ ಇತಿಹಾಸ.

ಕಾಮಾಟಿಪುರದ ದಂಧೆಯ ಅರಿವಿದ್ದ ಆಕೆ ಲೈಂಗಿಕ ಕಾರ್ಯಕರ್ತೆಯರು ಮತ್ತು ಅನಾಥರಿಗಾಗಿ ತನ್ನ ಜೀವನವನ್ನು ಮೀಸಲಿಡುತ್ತಾಳೆ. ಈ ನಡುವೆಯೇ ಆಕೆ ಮುಂಬೈನಲ್ಲಿ ವೇಶ್ಯಾವಾಟಿಯ ದಂಧೆಯ ನಿರ್ಮೂಲನೆಗಾಗಿ ಹೋರಾಟದ ಮುಂದಾಳತ್ವವಹಿಸುತ್ತಾಳೆ. ಇಂದಿಗೂ ಕಾಮಾಟಿಪುರದಲ್ಲಿ ಆಕೆಯ ಪ್ರತಿಮೆ ಇದೆ.

ಪರದೆ ಮೇಲೆ ಆಕೆಯ ಪಾತ್ರಕ್ಕೆ ಜೀವ ತುಂಬಲು ಆಲಿಯಾ ಭಟ್‌ ತಯಾರಿ ನಡೆಸಿದ್ದಾರೆ. ಈಗಾಗಲೇ, ಈ ಚಿತ್ರದ ಪೋಸ್ಟರ್‌ ಕೂಡ ಬಿಡುಗಡೆಯಾಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT