ಭಾನುವಾರ, ಜೂನ್ 26, 2022
26 °C

ಅಂಬರೀಶ್‌ ಎಂದರೆ ಆಕಾಶದ ಒಡೆಯ: ಅಂಬಿ ನೆನಪಿನಲ್ಲಿ ಸುಮಲತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಆಕಾಶಕ್ಕೆ ಅಳತೆಯಿದೆಯೆ? ಆಕಾಶಕ್ಕೆ ಮಿತಿ ಎನ್ನುವುದೇ ಇಲ್ಲ. ಅಂಬರೀಶ್‌ ಅಂದರೆ ಆಕಾಶದ ಒಡೆಯ...’ ಹೀಗೆ ನಟ ದಿವಂಗತ ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರನ್ನು ನೆನಪಿಸಿಕೊಂಡಿದ್ದು ಅವರ ಪತ್ನಿ, ಸಂಸದೆ ಸುಮಲತಾ ಅಂಬರೀಶ್‌.

ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ಅಂಬರೀಷ್‌ ಅವರ ಸಮಾಧಿಗೆ ಸುಮಲತಾ ಹಾಗೂ ಅಂಬರೀಷ್‌ ಅವರ ಪುತ್ರ, ನಟ ಅಭಿಷೇಕ್‌ ಭಾನುವಾರ ಪೂಜೆ ಸಲ್ಲಿಸಿದರು. 

ಅಂಬರೀಶ್‌ ಅವರ 70ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಅಂಬರೀಶ್‌ ಕುರಿತು ಸುದೀರ್ಘ ಪೋಸ್ಟ್‌ ಒಂದನ್ನು ಸುಮಲತಾ ಅಪ್‌ಲೋಡ್‌ ಮಾಡಿದ್ದಾರೆ. ‘ನಿಮ್ಮ ಪ್ರೀತಿಯ ಆ ಹೃದಯ ಮಿತಿಯನ್ನೇ ಮೀರಿದ್ದು. ಅಸಂಖ್ಯಾತ ನೆನಪುಗಳನ್ನು ನೀವು ನನ್ನಲ್ಲಿ ಬಿಟ್ಟು ಹೋಗಿದ್ದೀರಿ. ಈ ಜೀವನಕ್ಕೆ ಸಾಕಾಗುವಷ್ಟು ಸಂತಸ ಮತ್ತು ಪ್ರೀತಿ ನೀಡಿದ್ದೀರಿ. ಶ್ರೀಮಂತ ಹೃದಯದ ಅಂಬಿಗೆ 70 ವರ್ಷ ಅನ್ನುವುದು ಅತ್ಯಂತ ಚಿಕ್ಕ ಸಂಖ್ಯೆ. ಏಕೆಂದರೆ ನನ್ನಲ್ಲಿ ನೀವು ಶಾಶ್ವತವಾಗಿ ಜೀವಿಸಿದ್ದೀರಿ. ಹಾಗಾಗಿ ನಿಮ್ಮ ವಯಸ್ಸೆನ್ನುವುದು ನಿಮಗೆ ಕೇವಲ ನಂಬರ್ ಅಷ್ಟೆ. ಅಂಬಿ ಎಂದಿಗೂ, ಎಂದೆಂದಿಗೂ ಅಮರ. ಅಂಬಿ ಅಮರ’ ಎಂದು ಉಲ್ಲೇಖಿಸಿದ್ದಾರೆ. 

‘ಅಂಬರೀಶ್ ಅಂದರೆ ಕೇವಲ ವ್ಯಕ್ತಿಯಲ್ಲ ಅವರೊಂದು ಶಕ್ತಿಯ ಪರ್ವತವೇ ಆಗಿದ್ದರು. ನಟನಾಗಿ, ಸಮಾಜದ ಬಗ್ಗೆ ಕಾಳಜಿ ಇರುವ ಧೀಮಂತ ವ್ಯಕ್ತಿಯಾಗಿ, ನಾಡು, ನುಡಿಯ ವಿಚಾರದಲ್ಲಿ ಅಪ್ಪಟ ಹೋರಾಟಗಾರನಾಗಿ ನಾಡಿನ ಜನರ ಜೀವನಾಡಿಯಾಗಿದ್ದರು. ನನ್ನ ಪಾಲಿಗೆ ಅವರ ಹುಟ್ಟು ಹಬ್ಬ ಯಾವತ್ತಿಗೂ ಸ್ಪೆಷಲ್. ಅದೊಂದು ಹಬ್ಬವೇ ಆಗಿರುತ್ತಿತ್ತು. ನನ್ನ ಪ್ರೀತಿಯ, ಅಭಿಮಾನದ ಅಂಬಿಗೆ 70 ವರುಷ. ಎಪ್ಪತ್ತು ಸಾವಿರ ನೆನಪುಗಳೊಂದಿಗೆ ಶುಭಾಶಯ ಕೋರುವೆ. ಅಂಬರೀಶ್ ಅವರ ಹುಟ್ಟು ಹಬ್ಬಕ್ಕಾಗಿ ಹಲವಾರು ಜನಪರ ಕಾರ್ಯಕ್ರಮ ಆಯೋಜಿಸಿದ್ದೇವೆ. ಇದು ಅವರ ಹುಟ್ಟು ಹಬ್ಬಕ್ಕೆ ನಮ್ಮೆಲ್ಲರ ಉಡುಗೊರೆ’ ಎಂದು ಸುಮಲತಾ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಟ ದರ್ಶನ್‌, ನಟಿ ರಚಿತಾ ರಾಮ್‌ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು ಸಾಮಾಜಿಕ ಮಾಧ್ಯಮಗಳಲ್ಲಿ ಅಂಬರೀಶ್‌ ಅವರ ಜೊತೆಗಿರುವ ಫೋಟೊ ಅಪ್‌ಲೋಡ್‌ ಮಾಡಿ ಶುಭಾಶಯ ಕೋರಿದ್ದಾರೆ. ನಟ ನಿಖಿಲ್‌ ಕುಮಾರ್‌ ಅವರೂ ಅಂಬರೀಶ್‌ ಅವರನ್ನು ಸ್ಮರಿಸಿ ಟ್ವೀಟ್‌ ಮಾಡಿದ್ದು, ‘ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್‌ರವರ ಜನ್ಮದಿನ ಇಂದು. ದೈಹಿಕವಾಗಿ ನೀವು ನಮ್ಮನ್ನು ಅಗಲಿದರೂ ನಿಮ್ಮೊಂದಿಗಿನ ನೆನಪುಗಳು ಸದಾ ಅಮರ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು