ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರೊಂದು ನೆನಪು ಆನಂದದಿಂದ...

ಶಿವರಾಜ್‌ಕುಮಾರ್‌ ಹಾಗೂ ಸುಧಾರಾಣಿ ವೃತ್ತಿ ಬದುಕಿಗೆ 35 ವರ್ಷಗಳ ಸಂಭ್ರಮ
Last Updated 25 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಚಂದನವನಕ್ಕೆ ದೊಡ್ಡ ತಾರೆಗಳನ್ನು ಕೊಟ್ಟ ಸಿನಿಮಾ ಆನಂದ್‌. ಆ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಶಿವರಾಜ್‌ಕುಮಾರ್‌ ಈಗ ಕನ್ನಡ ಚಿತ್ರರಂಗದ ನೇತಾರ! ಇದೇ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಪದಾರ್ಪಣೆ ಮಾಡಿದವರು ಸುಧಾರಾಣಿ.

‘ನನ್ನ ಹೆಸರು ಆನಂದ್‌...’ ಇದು ಕ್ಯಾಮೆರಾ ಮುಂದೆ ಶಿವಣ್ಣ ಹೊಡೆದ ಮೊದಲ ಡೈಲಾಗ್‌. ‘ಚಿತ್ರದ ಮುಹೂರ್ತ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿತ್ತು. ಅಪ್ಪಾಜಿ, ಅಮ್ಮ, ಉದಯ್‌ಶಂಕರ್‌ ಸೇರಿದಂತೆ ಇಡೀ ಗಾಂಧಿನಗರವೇ ಅಲ್ಲಿತ್ತು. ಮೊದಲ ದೃಶ್ಯದ ಚಿತ್ರೀಕರಣದ ಬಳಿಕ, ನಾನು ಅತ್ತಿದ್ದೆ’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

‘ಆನಂದ್‌ ಚಿತ್ರ ರೆಡಿಯಾಗಿದೆ ಅಂತ ತಿಳಿದಾಗ ನಿದ್ದೇನೇ ಬರಲಿಲ್ಲ. ಚಿತ್ರದಲ್ಲಿ ನಾನು ಹೇಗೆ ಕಾಣಿಸಿಕೊಂಡಿದ್ದೇನೆ ಎನ್ನುವ ಆತಂಕ ಕಾಡುತ್ತಿತ್ತು. ಒಂದುವೇಳೆ ನಾಯಕ ನಟನನ್ನಾಗಿ ಜನ ನನ್ನನ್ನು ಒಪ್ಪದೇ ಹೋದರೆ ಏನು ಮಾಡುವುದು ಎಂಬ ಭಯವೂ ಇತ್ತು. ಸೋತರೆ ಕಾಲೇಜಿಗೆ ಹೋಗಿ ಮತ್ತೆ ಬಿ.ಫಾರ್ಮ್‌ ಮಾಡಿದರಾಯಿತು ಅಂದ್ಕೊಂಡಿದ್ದೆ’ ಎಂದು ಆಗಿನ ಘಟನೆಗಳನ್ನು ಮೆಲುಕು ಹಾಕುತ್ತಾರೆ.

‘1986ರಿಂದ 2021ರವರೆಗಿನ ಪಯಣವನ್ನು ತಿರುಗಿ ನೋಡಿದರೆ ವರ್ಷ ಹೇಗೆ ಕಳೆಯಿತು ಎನ್ನುವುದೇ ತಿಳಿಯುವುದಿಲ್ಲ. ಜನರು ಪ್ರೀತಿಯಿಂದ ಈ ರೀತಿ ಸಂಭ್ರಮ ಆಚರಿಸುತ್ತಾರೆ. ‘35 ವರ್ಷ ಕಳೆಯಿತು, 50 ವರ್ಷದವರೆಗೂ ಸಿನಿಮಾ ಮಾಡೋಣ’ ಎನ್ನುವ ಮೂಲಕ ಅಭಿಮಾನಿಗಳಲ್ಲಿ ಉತ್ಸಾಹ ತುಂಬುತ್ತಾರೆ.

‘ಇಂತಹ ಪಾತ್ರ ಮಾಡಿಲ್ಲ ಎನ್ನುವ ಕೊರಗು ಇಲ್ಲ. ರೌಡಿಸಂ ಆಧರಿತ ಚಿತ್ರದಲ್ಲೇ ನನ್ನನ್ನು ಜನ ನೋಡಲು ಬಯಸುತ್ತಾರೆ. ಹೀಗೆಂದು ಬರೇ ಮಚ್ಚು ಹಿಡಿದುಕೊಂಡು ಹೊರಟರೆ, ಇವನಿಗೇನು ಬೇರೆ ಕೆಲಸ ಇಲ್ವಾ ಎನ್ನುತ್ತಾರೆ. ಕೌಟುಂಬಿಕ ಚಿತ್ರಗಳು ಹಿಟ್‌ ಆಗಿವೆ. ಹಳ್ಳಿ ವಿಷಯದ ಚಿತ್ರಗಳು ಹಿಟ್‌ ಆಗಿವೆ. ಇದನ್ನು ಬಿಟ್ಟು ವಿಭಿನ್ನವಾದ ಪಾತ್ರಗಳನ್ನು ನೋಡುತ್ತಿದ್ದೇನೆ. ಇಂತಹ ಪಾತ್ರಗಳು ಬರುತ್ತಿವೆ’ ಎನ್ನುತ್ತಾರೆ ಈ ಹ್ಯಾಟ್ರಿಕ್‌ ಹೀರೊ.

ಸುಧಾರಾಣಿ ಅವರಿಗೂ ಈ ಚಿತ್ರದ ಕುರಿತು ಹೇಳಿಕೊಳ್ಳಲು ಉಮೇದಿ.

‘ಆನಂದ್‌ ಚಿತ್ರದಿಂದ ಆರಂಭವಾದ ಶಿವಣ್ಣ–ಸುಧಾರಾಣಿ ಜೋಡಿ ತೆರೆಯ ಮೇಲೆ ಇತಿಹಾಸ ಮೂಡಿಸಿತ್ತು. ಇದೇ ಜೋಡಿ ಮತ್ತೆ ತೆರೆಯ ಮೇಲೆಖಂಡಿತವಾಗಿಯೂ ಬರಬೇಕು. ಬರಲಿ ಎನ್ನುವ ಆಸೆಯೂ ಇದೆ’ ಎನ್ನುತ್ತಾರೆ ಈ ನಟಿ.

‘ಆನಂದ್‌ ಚಿತ್ರದಲ್ಲಿ ನಟನೆ ಮಾಡಿದಾಗ ನಾನಿನ್ನೂ ಚಿಕ್ಕ ಹುಡುಗಿ. ಸಿನಿಮಾದಲ್ಲಿ ನಟನೆ ಮಾಡುತ್ತಿದ್ದೇನೆ, ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವ ಅರಿವೂ ನನಗಿರಲಿಲ್ಲ. ಸಿನಿಮಾದಲ್ಲಿ ನಟನೆ ಮಾಡಲು ಹೇಳಿದ್ದಾರೆ. ಮಾಡಿದ್ದೇನೆ ಅಷ್ಟೇ ಎನ್ನುವಂತಿತ್ತು ಆಗ. ಆ ಉದ್ವೇಗ, ಜೊತೆಗೆ ಬಂದಂತಹ ಜವಾಬ್ದಾರಿಯ ಬಗ್ಗೆಯೂ ನನಗೆ ಪರಿಜ್ಞಾನ ಇರಲಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ.

‘ಮೊದಲ ಬಾರಿಗೆ ಸಿನಿಮಾದಲ್ಲಿ ನಾಯಕಿಯಾಗಿ ತೆರೆಯ ಮೇಲೆ ನನ್ನನ್ನು ನಾನು ನೋಡಿದಾಗ ಅಲ್ಲಿಯೇ ಮುಂದೆ ತಿದ್ದಿಕೊಳ್ಳಬೇಕಾದ ಅಂಶಗಳು ತಲೆಯಲ್ಲಿ ಓಡುತ್ತಿದ್ದವು. ತಾಯಿಯೂ ಜೊತೆಯಲ್ಲಿದ್ದರು, ಅವರೂ ನಟನೆಯಲ್ಲಿ ಆಗಬೇಕಾದ ಬದಲಾವಣೆಗಳನ್ನು ಹೇಳಿಕೊಡುತ್ತಿದ್ದರು’ ಎಂದು ಹೇಳುತ್ತಾರೆ.

ಅಮ್ಮನೇ ಮೊದಲ ಡೈರೆಕ್ಟರ್‌

‘ಪ್ರಾರಂಭದಲ್ಲಿ ಅಮ್ಮನೇ ಕಥೆಗಳನ್ನು ಆಯ್ಕೆ ಮಾಡುತ್ತಿದ್ದರು. ನಿರ್ದೇಶಕರು ಕಥೆ ಹೇಳುವಾಗ ನಾನೂ ಇರುತ್ತಿದ್ದೆ. ಆದರೆ ಅಂತಿಮ ನಿರ್ಧಾರವನ್ನು ಅಮ್ಮನೇ ತೆಗೆದುಕೊಳ್ಳುತ್ತಿದ್ದರು. ಕುಟುಂಬದ ಹಿನ್ನೆಲೆಗೆ ಯಾವುದೇ ಧಕ್ಕೆ ಬರಬಾರದು ಎನ್ನುವುದು ಕಟ್ಟುನಿಟ್ಟಿನ ನಿಯಮ. ಈ ನಿಯಮಗಳನ್ನು ಮೀರಿ ಯಾವುದೇ ಪಾತ್ರವನ್ನು ನಾನು ಮಾಡಿಲ್ಲ. ಪಾತ್ರವು ಚೆನ್ನಾಗಿದೆಯೇ ಎಂದು ಅಳೆದು ತೂಗಿ ನಿರ್ಧಾರವನ್ನು ಅಮ್ಮ ತೆಗೆದುಕೊಳ್ಳುತ್ತಿದ್ದರು’ ಎನ್ನುತ್ತಾರೆ.

ಆನಂದ್‌ ಚಿತ್ರದ ಮೊದಲ ದಿನವೂ ಅಮ್ಮ ಜೊತೆಯೇ ಇದ್ದರು. ಚಿತ್ರೀಕರಣಕ್ಕೂ ಮೊದಲು ಕೆಲ ವಿಚಾರಗಳನ್ನು ಅವರು ಹೇಳಿದ್ದರು. ಅಮ್ಮ ಏನೇ ವಿಚಾರಗಳನ್ನು ಹೇಳಿದ್ರೂ ನನ್ನ ಒಳ್ಳೆಯದಕ್ಕೇ ಹೇಳುವುದು ಎಂದು ತಿಳಿದಿತ್ತು. ಹೀಗಾಗಿ ಅಮ್ಮ ಹೇಳಿದ ಮಾತು ಎಂದಿಗೂ ಮೀರುತ್ತಿರಲಿಲ್ಲ. ಹೆಚ್ಚಿನ ಟೇಕ್‌ ತೆಗೆದುಕೊಳ್ಳಬಾರದು. ಚಂದನವನದಲ್ಲಿ ಒಂದು ಒಳ್ಳೆಯ ಹೆಸರು ಮಾಡಬೇಕು ಎನ್ನುವುದಷ್ಟೇ ಗುರಿಯಾಗಿತ್ತು’ ಎಂದು ಸುಧಾರಾಣಿ ‘ಅಮ್ಮ ಹಾಕಿದ ಸ್ಟ್ರಾಂಗ್‌ ಫೌಂಡೇಷನ್‌ ಇಲ್ಲಿಯವರೆಗೂ ಕರೆತಂದಿದೆ’ ಎಂದು ವಿವರಿಸುತ್ತಾರೆ.

‘ಅದೃಷ್ಟ’

‘ಚಿಕ್ಕ ಹುಡುಗಿಯಾಗಿದ್ದಾಗ ಜಾಹೀರಾತು ಇರಲಿ ಅಥವಾ ಬಾಲನಟಿಯಾಗಿ ನಟನೆ ಮಾಡುವ ಸಂದರ್ಭದಲ್ಲಿ ಕ್ಯಾಮೆರಾ ಎದುರಿಸುವುದಕ್ಕೆ ಯಾವ ಭಯವೂ ನನಗೆ ಇರಲಿಲ್ಲ. ‘ಐ ವಾಸ್‌ ಮೆಂಟ್‌ ಟು ಬಿ ಇನ್‌ ದಿಸ್‌ ಇಂಡಸ್ಟ್ರಿ’ ಎನ್ನುವಂತೆ ಆ ಧೈರ್ಯ, ಅವಕಾಶ ತಾನಾಗಿಯೇ ಬಂತು. ಮುಂಚಿನಿಂದಲೂ ಅಪ್ಪಾಜಿ (ರಾಜ್‌ಕುಮಾರ್‌) ಕುಟುಂಬದ ಜೊತೆ ಒಡನಾಟವಿತ್ತು. ಅವರ ಬ್ಯಾನರ್‌ನಲ್ಲಿ ನಾನು ನಟನೆ ಮಾಡಿದ್ದೆ. ಕೇವಲ ಒಂದು ಫೋಟೊ ನೋಡಿ, ಆನಂದ್‌ಗೆ ಇವಳೇ ನಾಯಕಿಯಾಗಬೇಕು ಎನ್ನುವ ಹಟ ಹಿಡಿದು ಪಾರ್ವತಮ್ಮ ರಾಜ್‌ಕುಮಾರ್‌ ಅವರು ಅವಕಾಶ ನೀಡಿದರು’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT