ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ | ಅಭಿನಯದಲ್ಲೂ ‘ಅನಂತ’

Published 8 ಜೂನ್ 2023, 12:21 IST
Last Updated 8 ಜೂನ್ 2023, 12:21 IST
ಅಕ್ಷರ ಗಾತ್ರ
‘ಪ್ರಜಾವಾಣಿ ಸಿನಿ ಸಮ್ಮಾನ’ದಲ್ಲಿ ಜೀವಮಾನದ ಸಾಧನೆಗಾಗಿ ಪುರಸ್ಕಾರಕ್ಕೆ ಪಾತ್ರರಾದವರು ಅನಂತ ನಾಗ್. ಕಳೆದ ಎರಡು ದಶಕಗಳಲ್ಲಿ ಅವರಿಂದ ವಿಭಿನ್ನ ಪಾತ್ರಗಳನ್ನು ಮಾಡಿಸಿದ ನಿರ್ದೇಶಕ ಯೋಗರಾಜ್ ಭಟ್. ಅವರ ಕಣ್ಣಲ್ಲಿ ಅನಂತ ನಾಗ್ ಪರಿಚಯ ಹೀಗಿದೆ...

ಅನಂತ ನಾಗ್ ಯಾವತ್ತೂ ಮಾಡುವುದು ಒಂದೇ ಪ್ರಯೋಗ– ಅವರು ನಟಿಸುವುದಿಲ್ಲ, ಬದಲಿಗೆ ಪಾತ್ರವಾಗಿ ವರ್ತಿಸುತ್ತಾರೆ. ತನ್ಮೂಲಕ ಆ ಪಾತ್ರವೇ ಅನಂತ ನಾಗ್ ಆಗಿಬಿಡುತ್ತಾರೆ. ಹೀಗೆ ಮಾಡುವುದು ಸುಲಭವಲ್ಲ. ನಟನೆ ಮಾಡುವಾಗ ಅತಿ ಸಹಜವಾಗಿ ಕಾಣಿಸಿಕೊಳ್ಳುವುದಕ್ಕೆ ವಿಪರೀತ ತಲೆ ಇರಬೇಕು ಮತ್ತು ತಲೆ ತುಂಬಿಕೊಂಡಿರಬೇಕು. ಜೀವನ ಗೊತ್ತಿರಬೇಕು. ಜೊತೆಗೆ ಪ್ರೇಕ್ಷಕ ಕಣ್ಣು ಕೀಳದಂತೆ ನೋಡುವಂಥ ಗಾಢ ಲಕ್ಷಣ ಮೈ ಹಾಗೂ ಮುಖಕ್ಕೆ ಇರಬೇಕು, ನಟರಿಗೆ. ಇದೆಲ್ಲ ಮಿತಿ ಮೀರಿ ಇರುವ ಮಹನೀಯ ನಟ ಅನಂತ ನಾಗ್. ಆದ್ದರಿಂದ ಅವರ ನಟನೆಯಲ್ಲಿ ಪ್ರಯೋಗಕ್ಕಿಂತ ಹೆಚ್ಚಾಗಿ ಬೇರೆ ಮಟ್ಟದ ‘ಪಬ್ಲಿಕ್ ಕನೆಕ್ಷನ್’ ಇರುತ್ತದೆ. ನೋಡುಗನು ಅವರನ್ನು ಪಾತ್ರವಾಗಿ ಸ್ವೀಕರಿಸಲೇಬೇಕು ಎನ್ನುವಂತಹ ‘ಕನ್ವಿಕ್ಷನ್’ ಸಾಧ್ಯವಾಗುವುದೇ ಈ ರೀತಿಯ ‘ಪಬ್ಲಿಕ್‌ ಕನೆಕ್ಷನ್‌’ನಿಂದ.

ಅನಂತ್ ಸರ್ ಹಾಸ್ಯ ನಟನೆಯ ಹಿಂದೆ ಕೂಡ ತುಂಬಾ ಗಹನವಾದ ಜ್ಞಾನವಿದೆ. ಅದಕ್ಕೆ ಆಯಸ್ಕಾಂತೀಯ ಗುಣವೂ ಇರುತ್ತದೆ. ಅವರು ತುಂಟತನದಲ್ಲಿ ಏನೋ ಒಂದು ದೊಡ್ಡಮಟ್ಟದ ಆಕರ್ಷಣೆಯನ್ನು ನೋಡುಗರಲ್ಲಿ ಉಕ್ಕಿಸುತ್ತಾರೆ. ಅತಿಯಾಗಿ ಯಾವುದನ್ನೂ ಯಾವತ್ತೂ ಮಾಡದ ನಟ ಸ್ವಲ್ಪ ತುಂಟ ನಗು ನಕ್ಕರೂ ಅದು ತುಂಬಾ ಇಷ್ಟವಾಗುತ್ತದೆ. ಅವರನ್ನು ಬಹಳಷ್ಟು ದೃಶ್ಯಗಳಲ್ಲಿ ಗಂಭೀರವಾಗಿ ಕಂಡವರಿಗೆ, ಹಾಸ್ಯ ಹೊಮ್ಮಿಸಿದಾಗ ಅದು ವಿಶೇಷ ರಸಾನುಭವ ನೀಡುತ್ತದೆ. ಹಾಸ್ಯಕ್ಕೆ ಟೈಮಿಂಗ್‌ ಅತಿ ಮುಖ್ಯ. ಅನಂತ್ ಸರ್‌ಗೆ ಅವರದ್ದೇ ಆದ ಆಳವಾದ ಟೈಮಿಂಗ್ ಇರುವುದರಿಂದ ಅವರ ಹಾಸ್ಯಾಭಿನಯ ಎಂಥವರಿಗೂ ಕಚಗುಳಿ ಇಡುತ್ತದೆ. ಅಭಿನಯದಲ್ಲಿನ ಪ್ರತಿಕ್ರಿಯಾತ್ಮಕ ‘ಶಾಟ್‌’ಗಳಲ್ಲಿ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ.

ಅನಂತ್ ಅವರ ನಿಲುವು, ಘಂಟೆ ಧ್ವನಿ, ಸ್ಫುರದ್ರೂಪ ಮತ್ತು ಜ್ಞಾನದ ಕಿಂಚಿತ್ ಝಲಕ್ ಅನ್ನು ನಾನು ಹತ್ತಿರದಿಂದ ನೋಡಿ ಬಲ್ಲೆ. ಹೀಗಾಗಿ ಅವರಿಗೆ ಪಾತ್ರ ಸೃಷ್ಟಿ ಮಾಡುವಾಗ ಅವರಿಗೆಂದೇ ವಿಶೇಷ ಫೋಕಸ್ ಇಟ್ಟುಕೊಳ್ಳುತ್ತೇನೆ. ಅಕಸ್ಮಾತ್ ಸ್ಕ್ರಿಪ್ಟ್‌ನಲ್ಲಿ ಅವರಿಗೆ ಹೊಂದದೆ ಇರುವ ಅಂಶ ಇದ್ದರೆ ಅದನ್ನು ತೆರೆ ಮೇಲೆ ತರುವ ಪ್ರಯತ್ನಕ್ಕೆ ಕೈಹಾಕುವುದೇ ಇಲ್ಲ. ಅವರ ನೆನಪಾದರೆ ಸಾಕು, ಅವರಿಗೆ ಸೂಕ್ತವಾದ ಪಾತ್ರಗಳು ನನ್ನಲ್ಲಿ ರೊಚ್ಚಿಗೆದ್ದು ಹುಟ್ಟಿಕೊಳ್ಳುತ್ತವೆ. ಇದರಿಂದಾಗಿಯೇ ನನ್ನ ಸಿನಿಮಾಗಳಲ್ಲಿ ಅವರನ್ನು ವಿಶೇಷ ಫೋಕಸ್‌ನಲ್ಲಿ ಸದಾ ಇಡಲು ಸಾಧ್ಯವಾಗಿರುವುದು.

ಅವರ ಅಧ್ಯಯನ, ಅನುಭವ ಮತ್ತು ಬದುಕಿನ ರೀತಿ ನೋಡಿದಾಗ ಒಬ್ಬ ನಟನಿಗೆ ಅಭಿನಯದ ಹೊರತಾಗಿ ಇಷ್ಟೆಲ್ಲ ಜೀವನ ವೇದಾಂತ ಗೊತ್ತಿರಲು ಸಾಧ್ಯವೇ ಎನಿಸುತ್ತದೆ. ಅನಂತ್ ಸರ್ ಒಟ್ಟಾರೆ ವ್ಯಕ್ತಿತ್ವ ಮತ್ತು ವೇದಾಂತ ವಿವರಿಸಲಸದಳ.

ಇತ್ತೀಚೆಗೆ ಅವರು ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ವಸ್ತುಸ್ಥಿತಿ ಹಾಗೇನೂ ಇಲ್ಲ. ತುಂಬಾ ಸಿನಿಮಾಗಳು ಅವರ ಲೈನ್–ಅಪ್‌ನಲ್ಲಿ ಇವೆ. ಒಂದಂತೂ ಸ್ಪಷ್ಟ... ನೆಟ್ಟಗೆ ಹೂರಣ ಇರುವ ಪಾತ್ರ ಬರೆದುಕೊಂಡು ಹೋಗಿ ಕೊಟ್ಟರೆ ಓದಿ, ಒಳಗೆ ಸೇರಿಸುತ್ತಾರೆ. ಸತ್ವ ಇಲ್ಲದೆ ಏನೇ ಹೇಳಿದರೂ ಉಗಿದು ಓಡಿಸುತ್ತಾರೆ. ಇದು ಅವರ ಸ್ವಭಾವ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ‘ಜೀವಮಾನದ ಸಾಧನೆ’ ಪುರಸ್ಕಾರ ಸ್ವೀಕರಿಸಿದ ಸಂದರ್ಭ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ‘ಜೀವಮಾನದ ಸಾಧನೆ’ ಪುರಸ್ಕಾರ ಸ್ವೀಕರಿಸಿದ ಸಂದರ್ಭ

ಕೊನೆಯಿಲ್ಲದ ಪ್ರತಿಭೆಗೆ ಪುರಸ್ಕಾರದ ಪ್ರಭೆ

ಕೊನೆಯಿಲ್ಲದ್ದು 'ಅನಂತ'. ಕೊನೆಯಿಲ್ಲದ ಪ್ರತಿಭೆ ಅನಂತ‌ ನಾಗ್. ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ಈ ನಟ ಕನ್ನಡ ಪ್ರೇಕ್ಷಕನ ಮನಸಿನಿಂದ ಎಂದೂ ಕಾಣೆಯಾಗೋದಿಲ್ಲ. ಮುದ್ದುಮುಖದ ಅನಂತ, ಬುದ್ಧಿವಂತ ಅನಂತ್, ನಮ್ಮನ್ನು ರಂಜಿಸಲು ಶುರುಮಾಡಿ ಐವತ್ತು ವರ್ಷಗಳೇ ಕಳೆದಿವೆ. ಬಯಲುದಾರಿಯ ಹೆಲಿಕಾಪ್ಟರಿನೊಳಗೆ, ‘ನಾರದ ವಿಜಯ’ದ ತಂಬೂರಿ ಜೊತೆಗೆ, ‘ಗಣೇಶನ ಮದುವೆ’ಯ ವಠಾರದಲ್ಲಿ, ‘ಬೆಳದಿಂಗಳ ಬಾಲೆ’ಯ ಕನಸಿನೊಳಗೆ, ‘ಮುಂಗಾರುಮಳೆ’ಯ ಕಣ್ಣೀರಿನಲ್ಲಿ ನಾವವರ ಜೊತೆ ಒದ್ದೆಯಾಗಿದ್ದೇವೆ.

ಡಾನ್ಸು, ಫೈಟು ಮಾಡದೆಯೂ ಹೆಣ್ಣುಮಕ್ಕಳ ಹೃದಯ ಗೆಲ್ಲಬಹುದು ಅಂತ ತೋರಿಸಿಕೊಟ್ಟ ಹೀರೋ ಅನಂತ ನಾಗ್. ಭಾವುಕ ನಟನೆಗೆ ಅವರೇ ಸರಿ ಎಂದು ನಾವು ನಿರ್ಧರಿಸುವಷ್ಟರಲ್ಲಿ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಇನ್ನೊಬ್ಬನೂ ಅವರೊಳಗಿದ್ದಾನೆಂದು ಅರಿತು ಬೆರಗಾದೆವು.

ಅನಂತ ನಾಗ್ ಅವರ ಸಿರಿಕಂಠಕ್ಕಂತೂ ಬೇರೆಯದೇ ಅಭಿಮಾನಿ ಬಳಗವಿದೆ. ‘ಕೆಜಿಎಫ್‌’ನಂಥ ಜಗತ್ತಿನ ಸೃಷ್ಟಿಯಲ್ಲಿ ಅವರ ಧ್ವನಿಯ ಕೊಡುಗೆ ಎಷ್ಟು ಮಹತ್ವದ್ದು ಅಂತ ಎಲ್ಲರಿಗೂ ತಿಳಿದಿದೆ. ರಂಗಭೂಮಿಯ ಹಿನ್ನೆಲೆಯಿಂದ ಬಂದದ್ದು, ಮನೆಮಾತು ಕೊಂಕಣಿಯಾಗಿದ್ದು ಮತ್ತು ಮುಂಬಯಿ ಒಡನಾಟ ಇವೆಲ್ಲವೂ  ಸೇರಿ ಅವರ ಕನ್ನಡ ಮಾತಿಗೊಂದು ಹೊಸದಾದ ಸೊಗಡು ಬಂದಿದೆ. ಅನಂತ ನಾಗ್ ಕನ್ನಡವನ್ನು ಕೇಳುವುದೇ ಒಂದು ಸೊಗಸು. 

ಅತ್ಯುತ್ತಮ ಅಭಿನಯದ ಜೊತೆಗೆ ಸಾಹಿತ್ಯದ ಓದು, ರಾಜಕೀಯ ಪ್ರಜ್ಞೆ, ಖಚಿತ ನಿಲುವು ಇವೆಲ್ಲವನ್ನೂ  ಹೊಂದಿರುವ  ಅವರದು ಮಾಗಿದ ಮನಸ್ಸು. ಮಹಾನ್ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ಆರು ಸಿನಿಮಾಗಳಲ್ಲಿ ನಟಿಸಿದ್ದಾರೆ ಅನ್ನುವುದೇ ಅನಂತ ನಾಗ್ ಎಂಥ ಕಲಾವಿದನೆಂಬುದನ್ನು ಸಾರುತ್ತದೆ. ರಂಗಭೂಮಿ, ಗಂಭೀರ ಸಿನಿಮಾ, ಕಮರ್ಷಿಯಲ್ ಸಿನಿಮಾ, ಕಾಮಿಡಿ ಪಾತ್ರ, ಎಲ್ಲಕ್ಕೂ ಒಂದೇ ರೀತಿಯ ಶ್ರದ್ಧೆಯನ್ನು ಧಾರೆಯೆರೆದ ಅಪ್ಪಟ ಕಲಾವಿದ ಅವರು. ಅನಂತ್ ನಾಗ್ ಸಿನಿಮಾ ಅಂದರೆ ಯೋಚನೆ ಮಾಡದೆ ಚಿತ್ರಮಂದಿರದೊಳಗೆ ಹೋಗಿ ಕೂರಬಹುದು. ಕತೆ ಯಾವುದೇ ಇರಲಿ, ನಿರ್ದೇಶಕರು ಯಾರೇ ಇರಲಿ, ಅನಂತ್ ನಾಗ್ ನಮ್ಮನ್ನು ರಂಜಿಸದೇ ಇರುವುದಿಲ್ಲ ಎಂಬ ವಿಶ್ವಾಸ ಪ್ರೇಕ್ಷಕನದು. 

ಇಂಥ ಅದ್ವಿತೀಯ ನಟನಿಗೆ ಈಗ ಎಪ್ಪತ್ತೈದು ವರ್ಷ ತುಂಬಿದೆ. ಇದೇ ವೇಳೆ ‘ಪ್ರಜಾವಾಣಿ’ಯೂ ಎಪ್ಪತ್ತೈದು ವರ್ಷಗಳ ಹೊಸ್ತಿಲಿನಲ್ಲಿರುವುದು ವಿಶೇಷ. ನಮ್ಮ ಚೊಚ್ಚಲ ‘ಸಿನಿ ಸಮ್ಮಾನ’ದಲ್ಲಿ ಅನಂತ ನಾಗ್ ಅವರಂಥ ಅಮೋಘ ಪ್ರತಿಭೆಯನ್ನು ಸನ್ಮಾನಿಸಿದ್ದು ನಮಗೆ ಹೆಮ್ಮೆ. ಐವತ್ತು ವರ್ಷ ಮುಗಿಸಿರುವ ಅನಂತ್ ಅವರ ಚಿತ್ರಯಾನ ಅನಂತವಾಗಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT