ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದ – ಸಿನಿಮಾ ಪ್ರಶಸ್ತಿಗೂ ಜನರೇ ತೀರ್ಪುಗಾರರಾಗಲಿ: ಅನಂತನಾಗ್‌

‘ಪ್ರಜಾವಾಣಿ’ ನನ್ನ ಎರಡನೇ ಮನೆ–ಅನಂತನಾಗ್‌
Last Updated 17 ಜುಲೈ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಇದೀಗ ಪದ್ಮ ಪ್ರಶಸ್ತಿಗೆ ಹೇಗೆ ಜನರಿಂದಲೇ ನಾಮನಿರ್ದೇಶನವನ್ನು ಕೇಳಲಾಗುತ್ತಿದೆಯೋ ಅದೇ ರೀತಿಯ ಬದಲಾವಣೆ ಚಿತ್ರರಂಗಕ್ಕೂ ಬರಬೇಕು. ಚಿತ್ರರಂಗದ ಪ್ರಶಸ್ತಿ ವ್ಯವಸ್ಥೆಯಲ್ಲೂ ಇದೇ ರೀತಿ ಜನರ ಭಾಗವಹಿಸುವಿಕೆ ಇರಬೇಕು. ಈ ರೀತಿಯ ಹೊಸ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಚಿತ್ರರಂಗದ ಪ್ರಶಸ್ತಿಯಲ್ಲಿ ಜಾರಿಗೊಳಿಸಬೇಕು’ ಎಂದು ಹಿರಿಯ ನಟ ಅನಂತನಾಗ್‌ ಆಗ್ರಹಿಸಿದ್ದಾರೆ.

‘ಪ್ರಜಾವಾಣಿ’ ಸೆಲೆಬ್ರಿಟಿ ಲೈವ್‌ನಲ್ಲಿ ಭಾಗವಹಿಸಿದ್ದ ಅನಂತನಾಗ್‌ ಅವರು ತಮ್ಮ ಸಿನಿಪಯಣ, ಪದ್ಮಶ್ರೀ ಪ್ರಶಸ್ತಿಗೆ ಅನಂತನಾಗ್‌ ಅವರನ್ನು ನಾಮನಿರ್ದೇಶನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನ, ಯುವಪ್ರತಿಭೆಗಳ ಮೂಲಕ ತನ್ನ ತಮ್ಮ ಶಂಕರನನ್ನು ಕಂಡ ಬಗೆ, ರಾಜಕೀಯ ಪಯಣದ ಬಗ್ಗೆ ಮನಸ್ಸುಬಿಚ್ಚಿ ಮಾತನಾಡಿದರು.

‘ಹೇಮಂತ್‌ ರಾವ್‌ ನಿರ್ದೇಶನದ ಮೊದಲ ಚಿತ್ರ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’. ಎಂತಹ ಅದ್ಭುತ ಚಿತ್ರ ಅದು. ಅಷ್ಟು ಜನರ ಮೆಚ್ಚುಗೆ ಸಿಕ್ಕರೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದರೂ ಈ ಚಿತ್ರಕ್ಕೆ ಒಂದೂ ಪ್ರಶಸ್ತಿ ಕೊಡಲಿಲ್ಲ. ನನಗೆ ಸಿಗಲಿಲ್ಲ ಎಂದು ನಾನು ಕೇಳುತ್ತಿಲ್ಲ. ಒಂದೇ ಒಂದು ವಿಭಾಗದಲ್ಲೂ ಪ್ರಶಸ್ತಿ ಸಿಗದಂತೆ ನೋಡಿಕೊಂಡಿದ್ದಾರೆ. ಹೀಗಿದ್ದಾಗ ಸರ್ಕಾರಗಳು ಯಾಕೆ ಈ ರೀತಿ ಪ್ರಶಸ್ತಿಗಳನ್ನು ನೀಡಬೇಕು. ಈ ತೀರ್ಪುಗಾರರ ಸಮಿತಿಗೆ ನೇಮಕ ಮಾಡುವವರು ಯಾರು? ತೀರ್ಪುಗಾರರ ಆಯ್ಕೆಗೆ ಮಾನದಂಡಗಳೇನು? ಮತ್ಸರಕ್ಕೆ ಮದ್ದಿಲ್ಲ ಎನ್ನುತ್ತಾರೆ. ಗಲ್ಲಾಪೆಟ್ಟಿಗೆಯಲ್ಲಿ ಇದರ ಯಶಸ್ಸು ಕಂಡು ಮತ್ಸರ ಹುಟ್ಟಿಕೊಂಡಿತ್ತು’ ಎಂದು ಅನಂತನಾಗ್‌ ಆಕ್ರೋಶ ವ್ಯಕ್ತಪಡಿಸಿದರು.

ಈ ಪರಿಸ್ಥಿತಿ ಅಗತ್ಯವಿತ್ತು: ಪದ್ಮಪ್ರಶಸ್ತಿಗೆ ಜನರಿಂದಲೇ ನಾಮನಿರ್ದೇಶನ ಕೇಳುವ ಅಗತ್ಯವಿತ್ತೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಪದ್ಮ ಪ್ರಶಸ್ತಿಯನ್ನು ಯಾವ ಆಧಾರದ ಮೇಲೆ ಕೊಡುತ್ತಾರೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ನಮ್ಮ ದೇಶದಲ್ಲಿ ಪದ್ಮ ಪ್ರಶಸ್ತಿಯಾಗಲಿ ಅಥವಾ ಅತ್ಯುತ್ತಮ ನಟ, ನಟಿ ಮುಂತಾದ ಪ್ರಶಸ್ತಿಗಳನ್ನು ಕೊಡುವ ವ್ಯವಸ್ಥೆ ಸರಿ ಇಲ್ಲ. ಸ್ವಜನಪಕ್ಷಪಾತ, ಪೂರ್ವಗ್ರಹ ಈ ವ್ಯವಸ್ಥೆಯಲ್ಲಿದೆ. ‘ಯಾರ್‍ಯಾರಿಗೋ ಕೊಡುತ್ತಿದ್ದಾರಲ್ಲ’ ಎನ್ನುವ ಭಾವನೆ ಜನರಂತೆಯೇ ಕೆಲವೊಮ್ಮೆ ನನಗೇ ಅನಿಸಿದ್ದಿದೆ. ಜನರೇ ಪದ್ಮ ಪ್ರಶಸ್ತಿಯನ್ನು ಕಡೆಗಣಿಸಲು ಆರಂಭಿಸಿದರು. ಮೊದಲ ಬಾರಿಗೆ ಜನರ ಭಾಗವಹಿಸುವಿಕೆಗೆ ಅವಕಾಶ ಸಿಕ್ಕಿದೆ. ಈ ಪರಿಸ್ಥಿತಿ ಅಗತ್ಯವಿತ್ತು’ ಎಂದರು.

‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇದರಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ, ಜನರ ಆಯ್ಕೆಗೇ ಬಿಡಬೇಕು. ಕಳೆದ ನಾಲ್ಕೈದು ದಿನಗಳಿಂದ ನನ್ನ ಮೇಲೆ ಅಭಿಮಾನ, ಪ್ರೀತಿ ವಿಶ್ವಾಸದ ಮಹಾಪೂರವೇ ಹರಿದುಬಂತು. ಅಭಿಮಾನದ ಮಹಾಪೂರದಲ್ಲಿ ಕೊಚ್ಚಿಕೊಂಡು ಹೋಗುವ ಭಯಬಂತು. ನಾನೀಗ ಏನಾಗಿದ್ದೇನೋ ಎಲ್ಲವೂ ಚಿತ್ರರಂಗದಿಂದ’ ಎಂದು ಮುಗುಳ್ನಕ್ಕರು ಅನಂತನಾಗ್‌.

‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ಎರಡನೇ ಮನೆ

‘ಶಾಲಾ ದಿನಗಳು ಕರಾವಳಿಯಲ್ಲಿ, ನಂತರ ಮುಂಬೈನಲ್ಲಿ ಜೀವನ. ಕಲಾ ವಿಭಾಗ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಕಲಿತರೂ ತೇರ್ಗಡೆ ಹೊಂದಿದ್ದು ರಂಗಭೂಮಿಯಲ್ಲಿ ಮಾತ್ರ. 1973ರಲ್ಲಿ ‘ಸಂಕಲ್ಪ’ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿದವರೇ ವೈಎನ್‌ಕೆ, ಗಿರೀಶ ಕಾರ್ನಾಡ ಹಾಗೂ ಜಿ.ವಿ ಅಯ್ಯರ್‌. ವೈಎನ್‌ಕೆ ನನಗೆ ಕನ್ನಡ ಲೋಕವನ್ನು ಪರಿಚಯಿಸಿದರು. ಪ್ರಜಾವಾಣಿ ಕಚೇರಿಯಲ್ಲೇ ಕುಳಿತು ಕನ್ನಡ ಪುಸ್ತಕ, ದಿನಪತ್ರಿಕೆಗಳನ್ನು ಓದುತ್ತಿದ್ದೆ. ಬೆಂಗಳೂರಿನಲ್ಲಿ ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಕಚೇರಿ ಎರಡನೇ ಮನೆಯಾಯಿತು’ ಎಂದು ನೆನಪಿಸಿಕೊಂಡರು ಅನಂತನಾಗ್‌.

‘ಯುವನಟರಲ್ಲಿ ಶಂಕರನನ್ನು ಕಾಣುತ್ತಿದ್ದೇನೆ’: ಈಗ ಶಂಕರ ಇದ್ದಿದ್ದರೆ ಎನ್ನುವ ಪ್ರಶ್ನೆಗೆ ‘35 ವರ್ಷ. ಅಷ್ಟೇ ಆಯುಷ್ಯವನ್ನು ಭಗವಂತ ಆತನಿಗೆ ಕಲ್ಪಿಸಿದ್ದ. ಜನರಿಂದ ಆತನಿಗೆ ಸಿಕ್ಕ ಪ್ರೀತಿ, ಅಭಿಮಾನವನ್ನು ನೀವೇ ನೋಡಿದ್ದೀರಿ. ಈಗಿನ ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ ಹೀಗೆ ಹಲವು ನಟರಲ್ಲಿ ನಾನು ಶಂಕರನನ್ನು ಕಾಣುತ್ತೇನೆ’ ಎಂದು ಅನಂತನಾಗ್‌ ಭಾವುಕರಾದರು.

‘ರಾಜಕೀಯ ಮುಗಿದ ಅಧ್ಯಾಯ’

ಅನಂತನಾಗ್‌ ಅವರು ಇತ್ತೀಚೆಗೆ ಮೋದಿ ಅವರನ್ನು ಹೊಗಳುತ್ತಿದ್ದಾರೆ. ಬಿಜೆಪಿ ಏನಾದರೂ ಸೇರುತ್ತಾರಾ ಎನ್ನುವ ಗಾಳಿಸುದ್ದಿ ಇದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅನಂತನಾಗ್‌, ‘ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ ಎನ್ನುವ ಮಾತಿದೆ. ಹಾಗೆ, ಯಾರೂ ಮಾಡದೇ ಇರುವ ಸಾಧನೆಯನ್ನುಏಳು ವರ್ಷದಲ್ಲಿ ಅವರು ಮಾಡಿದ್ದಾರೆ, ಮಾಡಿ ತೋರಿಸುತ್ತಿದ್ದಾರೆ. ಪದ್ಮ ಪ್ರಶಸ್ತಿಯಲ್ಲಿ ಜನರ ಭಾಗವಹಿಸುವಿಕೆಯೂ ಇದರಲ್ಲಿ ಒಂದು. ನನ್ನ ರಾಜಕೀಯ ಅಧ್ಯಾಯ ಮುಗಿದಿದೆ. 73 ವರ್ಷವಾಗಿದೆ. ಬಿಜೆಪಿಯಲ್ಲಿ 75 ವರ್ಷದ ನಿಯಮ ಬೇರೆ ಇದೆ(ನಗುತ್ತಾ). ರಾಜಕೀಯ ಮಾಡಿ ಆಯಿತು. ನಾನು ಹಿಂದಿರುಗಿ ನೋಡುವುದಿಲ್ಲ’ ಎಂದರು.

ತಾವು ಸಚಿವರಾಗಿದ್ದ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡ ಅವರು, ‘ಒಮ್ಮೆ, ಡಿ.ಕೆ.ಶಿವಕುಮಾರ್‌ ಅವರನ್ನು ವಿಧಾನಸೌಧದಲ್ಲಿ ನೋಡಿ, ‘ಎಷ್ಟು ಚೆಂದ ಇದ್ದಾನೆ ಈ ಹುಡುಗ, ಸಿನಿಮಾಗೆ ಏಕೆ ಬಂದಿಲ್ಲ. ಸಿನಿಮಾಗೆ ಬಂದಿದ್ದರೆ ಎಲ್ಲೋ ಇರುತ್ತಿದ್ದರು ಎಂದು ಯೋಚಿಸಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT