ಶುಕ್ರವಾರ, ಡಿಸೆಂಬರ್ 3, 2021
24 °C

ಅನಸೂಯ ಬಟ್ಟೆ ಬಗ್ಗೆ ಶ್ರೀನಿವಾಸ ರಾವ್ ಟೀಕೆ: ನಟಿ ಬೆಂಬಲಕ್ಕೆ ನಿಂತ ಗೌರಿ ನಾಯ್ಡು

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆಲುಗಿನ ಆ್ಯಂಕರ್‌, ನಟಿ ಅನಸೂಯ ಅವರಿಗೆ ಅಭಿಮಾನಿಗಳು ಸೇರಿದಂತೆ ಆಪ್ತರಿಂದ ಬೆಂಬಲ ವ್ಯಕ್ತವಾಗಿದೆ.

ಹಿರಿಯ ನಟ ಕೋಟ ಶ್ರೀನಿವಾಸ ರಾವ್‌ ಅವರು ನಿರೂಪಕಿ, ನಟಿ ಅನಸೂಯ ಭಾರದ್ವಾಜ್‌ ಅವರು ಧರಿಸಿದ್ದ ಬಟ್ಟೆಯ ಬಗ್ಗೆ ಟೀಕಿಸಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಅನಸೂಯ ಅವರು ತಿರುಗೇಟು ನೀಡಿದ್ದರು. ಇದು ಟ್ವಿಟರ್‌ನಲ್ಲಿ ಪರ–ವಿರೋಧದ ಚರ್ಚೆಗಳಿಗೆ ಗ್ರಾಸವಾಗಿತ್ತು.

ಇದರ ನಡುವೆ ಅನಸೂಯ ಅವರಿಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್‌ ಮಾಡಿರುವ ವಸ್ತ್ರ ವಿನ್ಯಾಸಕಿ ಗೌರಿ ನಾಯ್ಡು, ‘ನಾವು ಯಾರೊಂದಿಗಾದರೂ ವ್ಯವಹರಿಸುವಾಗ ಕೇವಲ ಬಟ್ಟೆಗಳ ಬಗ್ಗೆ ಮಾತನಾಡುವುದು ಏಕೆ ಮುಖ್ಯ? ನಾನು  ಅನಸೂಯ ಅವರನ್ನು ವೈಯಕ್ತಿಕವಾಗಿ ಹತ್ತಿರದಿಂದ ನೋಡಿದ್ದೇನೆ. ಜತೆಗೆ, ಆಕೆ ಧರಿಸುವ ಬಟ್ಟೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಮಂದಿ ಕಾಮೆಂಟ್‌ ಮಾಡಿರುವುದನ್ನು ಗಮನಿಸಿದ್ದೇನೆ. ಅದು ನನಗೂ ಬೇಸರ ಮೂಡಿಸಿದೆ. ಇತರರ ವೈಯಕ್ತಿಕ ಆಯ್ಕೆಗಳ ಬಗ್ಗೆ ಎಲ್ಲರೂ ಗೌರವಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಇತ್ತೀಚಿಗೆ ಮನರಂಜನಾ ವಾಹಿನಿಗಳು ಪ್ರಸಾರ ಮಾಡುತ್ತಿರುವ ಹಾಸ್ಯ ಕಾರ್ಯಕ್ರಮಗಳ ಬಗ್ಗೆ ಕೋಟ ಶ್ರೀನಿವಾಸ ರಾವ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ತೆಲುಗು ‘ಈಟಿವಿ’ ವಾಹಿನಿಯ ‘ಜಬರ್ದಸ್ತ್​’ ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಆ ಕಾರ್ಯಕ್ರಮ ನಿರೂಪಿಸುತ್ತಿರುವ ಅನಸೂಯ ಅವರ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಟೀಕಿಸಿದ್ದರು.

ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಅನಸೂಯ, ‘ನಾನು ಧರಿಸುವ ಬಟ್ಟೆಯ ಬಗ್ಗೆ ಹಿರಿಯ ನಟರು ಟೀಕಿಸಿರುವುದು ಬೇಸರ ತರಿಸಿದೆ. ಯಾವ ರೀತಿ ಬಟ್ಟೆ ಧರಿಸಬೇಕು ಎಂಬುದು ಎಲ್ಲರ ವೈಯಕ್ತಿಕ ಆಯ್ಕೆಯಾಗಿದೆ. ಮದುವೆ-ಮಕ್ಕಳು ಆಗಿರುವ ನಟರೆಲ್ಲ ಶರ್ಟ್​ ಬಿಚ್ಚಿಕೊಂಡು ತೆರೆ ಮೇಲೆ ನಟಿಯರ ಜೊತೆ ರೊಮ್ಯಾನ್ಸ್​ ಮಾಡುವುದನ್ನು ಯಾಕೆ ಯಾರೂ ಕೂಡ ಪ್ರಶ್ನೆ ಮಾಡಿಲ್ಲ’ ಎಂದು​ ಪ್ರಶ್ನಿಸಿದ್ದರು.

ಇದನ್ನೂ ಓದಿ... ಆ್ಯಂಕರ್ ಅನಸೂಯ ಬಟ್ಟೆ ಬಗ್ಗೆ ಶ್ರೀನಿವಾಸ ರಾವ್ ಟೀಕೆ: ನಟಿ ತಿರುಗೇಟು ಹೀಗಿತ್ತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು