ಶುಕ್ರವಾರ, ಅಕ್ಟೋಬರ್ 18, 2019
20 °C

ಮಣಿರತ್ನಂ ಚಿತ್ರ ಅನುಷ್ಕಾ ನಿರಾಕರಿಸಿದ್ದೇಕೆ ?

Published:
Updated:

ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್‌ ಸೆಲ್ವನ್‌’ಸಿನಿಮಾದ ಮುಖ್ಯಪಾತ್ರಕ್ಕೆ ಮೊದಲು ಚಿತ್ರತಂಡ, ನಟಿ ಅನುಷ್ಕಾ ಶೆಟ್ಟಿ ಅವರನ್ನು ಆಯ್ಕೆ ಮಾಡಿತ್ತು. ಆದರೆ, ಈ ಚಿತ್ರದಲ್ಲಿ ನಟಿಸಲಾರೆ ಎಂದು ಅವರು ನಿರಾಕರಿಸಿದ್ದಾರೆ. ಇದರಿಂದ ಮಣಿರತ್ನಂ, ಐಶ್ವರ್ಯಾ ರೈ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ರೈ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಇದರಲ್ಲಿ ರೈ ಅವರದ್ದು ದ್ವಿಪಾತ್ರ ಎನ್ನುವ ಮಾತು ಕೇಳಿಬರುತ್ತಿದೆ.

ಈ ಚಿತ್ರದಲ್ಲಿ ನಟಿಸಲು ಅನುಷ್ಕಾ ಶೆಟ್ಟಿ ₹4 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದರು. ಆದರೆ, ಚಿತ್ರತಂಡ ಗರಿಷ್ಠ ₹1 ಕೋಟಿ ನೀಡುವುದಾಗಿ ತಿಳಿಸಿತು. ಸಂಭಾವನೆಯ ಭಾರಿ ವ್ಯತ್ಯಾಸದಿಂದ ಈ ಮೆಗಾ ಬಜೆಟ್‌ ಸಿನಿಮಾದಲ್ಲಿ ನಟಿಸಲು ಅನುಷ್ಕಾ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

ಆದರೆ ಅನುಷ್ಕಾ ಸಿನಿಮಾ ಒಪ್ಪಿಕೊಳ್ಳದಿರಲು ಇದೊಂದೇ ಕಾರಣವಲ್ಲ ಅಂತೆ. ಕಳೆದ ವರ್ಷ ಮೀಟೂ ಅಭಿಯಾನದಲ್ಲಿ ಚಿತ್ರ ಸಾಹಿತಿ ವೈರಮುತ್ತು ಅವರ ಮೇಲೂ ಆರೋಪ ಕೇಳಿಬಂದಿತ್ತು. ಈಗ  ‘ಪೊನ್ನಿಯಿನ್‌ ಸೆಲ್ವನ್‌’ ಚಿತ್ರತಂಡದಲ್ಲಿ ವೈರಮುತ್ತು ಅವರು ಇರುವುದರಿಂದ ಅನುಷ್ಕಾ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ. ಅನುಷ್ಕಾ ಮೀಟೂ ಅಭಿಯಾನದ ಬಗ್ಗೆ ಇಲ್ಲಿಯವರೆಗೂ ಬಹಿರಂಗವಾಗಿ ಎಲ್ಲೂ ಮಾತನಾಡಿಲ್ಲ. ಆದರೆ ಆ ಅಭಿಯಾನಕ್ಕೆ ತನ್ನದೇ ರೀತಿಯಲ್ಲಿ ಬೆಂಬಲಿಸಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಕಲ್ಕಿ ಕೃಷ್ಣಮೂರ್ತಿ ಅವರ ಜನಪ್ರಿಯ ಕಾದಂಬರಿ ‘ಪೊನ್ನಿಯಿನ್‌ ಸೆಲ್ವನ್‌’ ಚಿತ್ರವನ್ನು ಅದೇ ಹೆಸರಿನಲ್ಲಿ ಮಣಿರತ್ನಂ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಘೋಷಣೆ ಮಾಡಿದಾಗಿನಿಂದಲೂ ಸಿನಿಮಾದ ಬಗ್ಗೆ ಭಾರಿ ಕುತೂಹಲ ಉಂಟು ಮಾಡಿದೆ. ಚಿತ್ರದಲ್ಲಿ ವಿಕ್ರಮ್‌, ಜಯಂ ರವಿ, ಕಾರ್ತಿ, ಮೋಹನ್‌ ಬಾಬು, ಕೀರ್ತಿ ಸುರೇಶ್‌, ಅಮಲಾ ಪೌಲ್‌ ನಟಿಸುತ್ತಿದ್ದಾರೆ. ಈ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದ್ದು, ಚಿತ್ರದ ಬಹುಭಾಗ ಥಾಯ್ಲೆಂಡ್‌ನಲ್ಲಿಯೇ ಚಿತ್ರೀಕರಣಗೊಳ್ಳಲಿದೆ.

ಇದನ್ನೂ ಓದಿ: ಮತ್ತೆ ನಿರ್ದೇಶನಕ್ಕಿಳಿದ ಮಣಿರತ್ನಂ; ಐಶ್ವರ್ಯ, ವಿಕ್ರಮ್ ನಟನೆ

Post Comments (+)