ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನ್‌ ಜನ್ಯ– ಶತಕದ ಸರದಾರ

Last Updated 9 ಮೇ 2019, 19:30 IST
ಅಕ್ಷರ ಗಾತ್ರ

‘ಹಳೆಯ ಗಾಯಕರ ಜೊತೆಗೆ ಎಷ್ಟೇ ಪ್ರಯತ್ನಪಟ್ಟರೂ ಹಾಡು ಸ್ವಲ್ಪ ಹಳೆಯದಾಗಿಯೇ ಕೇಳಿಸುತ್ತದೆ. ಹೊಸದೊಂದು ಧ್ವನಿ ಸಿಕ್ಕಿದಾಗ ಹಾಡು ಹೊಸ ಬಣ್ಣದಲ್ಲಿ ಮಿಂದೇಳುತ್ತದೆ. ಇದರಲ್ಲಿ ಮ್ಯೂಸಿಕ್‌ ಡೈರೆಕ್ಟರ್‌ನ ಸ್ವಾರ್ಥವೂ ಇರುತ್ತದೆ’ ಹೀಗೆಂದು ಸ್ಪಷ್ಟವಾಗಿ ಹೇಳಿದರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಸಂಗೀತದಲ್ಲಿ ತಾಜಾ ಗುಣ ಇರಬೇಕು. ಹಾಡು ಸರಳವಾಗಿದ್ದರಷ್ಟೇ ಜನರ ಹೃದಯಕ್ಕೆ ಬಹುಬೇಗ ಲಗ್ಗೆ ಇಡುತ್ತದೆ ಎನ್ನುವ ತತ್ವ ಅವರ ಮಾತಿನಲ್ಲಿತ್ತು.

‘ಹಳೆಯ ಗಾಯಕರಿಗೆ ಪ್ರಾಶಸ್ತ್ಯ ನೀಡುವ ಜೊತೆಗೆ ಹೊಸಬರಿಗೂ ಅವಕಾಶ‌ ನೀಡಬೇಕು. ಹಳೆಬೇರು ಮತ್ತು ಹೊಸಚಿಗುರು ಸೇರಿದರೆ ಹೊಸತನದ ತಾನ ಹುಟ್ಟುತ್ತದೆ’ ಎಂದು ಇನ್ನಷ್ಟು ವಿಸ್ತರಿಸಿ ಹೇಳಿದರು.

ಅರ್ಜುನ್‌ ಎಂಬ ಹುಡುಗನ ಸಂಗೀತ ಪ್ರತಿಭೆಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಚಿತ್ರ ‘ಕೆಂಪೇಗೌಡ’. ನಟ ಗಣೇಶ್‌ ನಟನೆಯ ‘99’ ಸಿನಿಮಾಗೆ ಸಂಗೀತ ಸಂಯೋಜಿಸುವ ಮೂಲಕ ಶತಕ ಪೂರೈಸಿದ ಖುಷಿಯಲ್ಲಿದ್ದಾರೆ ಜನ್ಯ.

‘ನಾನು ಯಾವುದೇ ಟ್ರೆಂಡ್‌ ಅನುಸರಿಸುವುದಿಲ್ಲ. ಜನರು ಮುಗ್ಧರು. ಆದರೆ, ಅವರಿಗೆ ಎಲ್ಲವೂ ಅರ್ಥವಾಗುತ್ತದೆ. ಹಾಡುಗಳಲ್ಲಿ ಗುಣಮಟ್ಟ ಇದ್ದಾಗಲಷ್ಟೇ ಜನಪ್ರಿಯತೆ ಸಿಗುತ್ತದೆ’ ಎನ್ನುವುದು ಅವರ ದೃಢ ನಂಬಿಕೆ.

‘ನಾನು ಶಕ್ತಿ ಪ್ರದರ್ಶನಕ್ಕೆ ಹಾಡು ಮಾಡುವುದಿಲ್ಲ. ನನಗೆ ಎಷ್ಟು ತಂತ್ರಗಾರಿಕೆ ಗೊತ್ತಿದೆ ಎಂದು ತೋರಿಸಲು ಹೋಗುವುದಿಲ್ಲ. ನಾನು ಹಾಡು ಮಾಡುವುದು ಜನಸಾಮಾನ್ಯರಿಗೆ. ಅಕ್ಕ, ತಂಗಿಯರು, ಅಣ್ಣ- ತಮ್ಮಂದಿರು, ಹಳ್ಳಿಗರಿಗೆ ಚಿತ್ರ ಸಾಹಿತ್ಯ ಅರ್ಥವಾಗಬೇಕು. ಜನರಿಗೆ ಸಂಗೀತದ ಮೂಲಾಂಶಗಳ ಬಗ್ಗೆ ತಿಳಿಸಲು ಹೋಗಬಾರದು. ಅದು ಅವರಿಗೆ ಅರ್ಥವೂ ಆಗುವುದಿಲ್ಲ’ ಎನ್ನುವುದು ಅವರ ವ್ಯಾಖ್ಯಾನ.

* ನೂರು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ ಅನುಭವ ಕುರಿತು ಹೇಳಿ.

ನೂರು ಚಿತ್ರಗಳಿಗೆ ಸಂಗೀತ ಸಂಯೋಜಿಸುವುದು ಸುಲಭವಲ್ಲ. ಶತಕ ಪೂರೈಸಿದ್ದು ಖುಷಿಯಾಗಿದೆ.‌ ‘ಅಮರ್’, ‘ಪೈಲ್ವಾನ್’, ‘ಒಡೆಯ’, ‘ರಾಬರ್ಟ್’ ಸೇರಿದಂತೆ ಇನ್ನೂ 20 ಚಿತ್ರಗಳಿಗೆ ಈ ವರ್ಷ ಸಂಗೀತ ಸಂಯೋಜಿಸುತ್ತಿದ್ದೇನೆ.

* ನಿಮ್ಮ ಆರಂಭದ ದಿನಗಳು ಹೇಗಿದ್ದವು?

ವೃತ್ತಿಬದುಕಿನ ಆರಂಭದಲ್ಲಿ ನನಗೆ ಅವಕಾಶಗಳೇ ಸಿಗುತ್ತಿರಲಿಲ್ಲ. ಆದರೆ, ನನ್ನ‌ ಕೆಲಸವನ್ನು ಎಂಜಾಯ್‌ ಮಾಡುತ್ತಿದ್ದೆ. ಮ್ಯೂಸಿಕ್‌ ಅಂದ್ರೆ ನನಗಿಷ್ಟ. ಅದೇ ನನ್ನ ಉಸಿರು.‌ ಸಿನಿಮಾಗಳಿಗೆ ಸಂಗೀತ ಸಂಯೋಜನೆ‌ ಮಾಡುವುದೇ ನನಗೆ ಖುಷಿ. ಸೋಲು, ಗೆಲುವು ನಂತರದ್ದು. ನಟ ಸುದೀಪ್‌ ಅವರು ಸಿಗುವವರೆಗೂ ನನ್ನ ಹಾಡುಗಳು ಜನರಿಗೆ ತಲುಪಲು ವೇದಿಕೆಯೇ ಇರಲಿಲ್ಲ.

* ವೃತ್ತಿಬದುಕಿನಲ್ಲಿ ಸಂಗೀತ ಸಂಯೋಜನೆಗೆ ಸವಾಲಾದ ಚಿತ್ರ ಯಾವುದು?

ಸವಾಲಾಗಿದ್ದು ‘99’ ಚಿತ್ರ. ಇದು ತಮಿಳಿನ ‘96’ ಚಿತ್ರದ ರಿಮೇಕ್. ಆದರೆ, ಅದೇ ಸಂಗೀತವನ್ನು ಕನ್ನಡದಲ್ಲಿ ಸಂಯೋಜಿಸಿಲ್ಲ. ಕಥೆಗೆ ವಿಭಿನ್ನವಾದ ಸಂಗೀತ ನೀಡಬೇಕಿತ್ತು. ಜನರಿಗೆ ತಮಿಳು ಚಿತ್ರದ‌ ಸಂಗೀತವೇ ಅದ್ಭುತ ಎನಿಸಿರುತ್ತದೆ. ಹಾಗಾಗಿ, ಮೂಲ ಸಂಗೀತದ ಗುಣಮಟ್ಟಕ್ಕೂ ಹೊಂದಾಣಿಕೆಯಾಗುವಂತೆ ಮ್ಯೂಸಿಕ್‌ ನೀಡಬೇಕಿತ್ತು. ಮತ್ತೊಂದೆಡೆ ಅದು ಕನ್ನಡರಿಗೂ ಹಿತವಾಗಬೇಕು. ಚಿತ್ರ ಬಿಡುಗಡೆಯವರೆಗೂ ಪ್ರಯೋಗ ಮಾಡುತ್ತಿದ್ದೆ. ಒಳ್ಳೆಯ ಕೆಲಸ ಮಾಡಿದ ತೃಪ್ತಿಯಿದೆ.

* ಸೂಪರ್ ಹಿಟ್‌ ಹಾಡುಗಳ ಹಿಂದಿರುವ ಗುಟ್ಟೇನು?

ಪ್ರೇಕ್ಷಕರು ಮುಗ್ಧರು. ಅವರು ಸಂಗೀತ ವಿಮರ್ಶೆಗೆ ಇಳಿಯುವುದಿಲ್ಲ. ಹಾಡಿನ ತಾಂತ್ರಿಕತೆಯನ್ನು ಅವಲೋಕಿಸುವ ವರ್ಗವೇ ಬೇರೆ ಇರುತ್ತದೆ. ಆದರೆ, ಹಾಡು ಮನಸ್ಸಿಗೆ ಇಷ್ಟವಾಗಬೇಕು. ಅದರಲ್ಲಿ ಸರಳತೆ ಇದ್ದರಷ್ಟೇ ಇದು ಸಾಧ್ಯ. ಜೊತೆಗೆ, ಜನರೊಟ್ಟಿಗೆ ಸಂಗೀತ ನಿರ್ದೇಶಕ ಇರಬೇಕು.ಹಾಡುಗಳು ಜನರಿಗೆ ಅರ್ಥವಾದರಷ್ಟೇ ಥಿಯೇಟರ್‌ಗೆ ಬರುತ್ತಾರೆ. ನಾನು ವಿಮರ್ಶೆ ಮಾಡುವವರಿಗಾಗಿ ಹಾಡು ಮಾಡುವುದಿಲ್ಲ. ಇದರಲ್ಲಿ ನನಗೆ ಎಳ್ಳಷ್ಟೂ ಇಷ್ಟವಿಲ್ಲ. ವಿಮರ್ಶೆ ಮಾಡುವವರಿಗೆ ಮತ್ತು ಮುಗ್ಧ ಜನರಿಗೆ ಹಾಡು ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಿರ್ದೇಶಕನಿಗೆ ತಾನು ಏನು ಮಾಡಬೇಕು ಎನ್ನುವುದು ಗೊತ್ತಿರಬೇಕು. ಆಗ ಸೂಪರ್ ಹಿಟ್‌ ಹಾಡುಗಳನ್ನು ನೀಡಬಹುದು.

* ಇತ್ತೀಚಿನ ಸಿನಿಮಾಗಳಲ್ಲಿ ಎಣ್ಣೆ ಸಾಂಗ್‌ಗಳ ಟ್ರೆಂಡ್‌ ಶುರುವಾಗಿದೆಯಲ್ಲಾ?

ಬಹುತೇಕ ಚಿತ್ರಗಳಲ್ಲಿ ಈ ಮಾದರಿಯ ಹಾಡುಗಳಿರುವುದು ನಿಜ. ಆದರೆ, ಎಲ್ಲಾ ಹಾಡುಗಳು ಹಿಟ್‌ ಆಗುವುದಿಲ್ಲ. ಆ ಪ್ರಯೋಗ ಫಲಶ್ರುತಿ ಕಾಣುವುದು ಅಪರೂಪ. ಆ ಹಾಡಿನಲ್ಲೂ ಸಿಂ‍‍ಪ್ಲಿಸಿಟಿ ಇರಬೇಕು. ಜೊತೆಗೆ, ಫನ್‌ ಇರಬೇಕು. ಹಾಡೊಂದು ಹಿಟ್‌ ಆಗುವ ಹಿಂದೆ ಕೇವಲ ಸಂಗೀತ ಸಂಯೋಜಕನಷ್ಟೇ ಮುಖ್ಯನಾಗುವುದಿಲ್ಲ. ಸಾಹಿತ್ಯ ರಚಿಸುವವರು, ಗಾಯಕರು ಕೂಡ ಮುಖ್ಯರಾಗುತ್ತಾರೆ.

* ಸಂಗೀತ ನಿರ್ದೇಶನದ ‘ಪ್ಯಾಕೇಜ್‌ ವ್ಯವಸ್ಥೆ’ ಮ್ಯೂಸಿಕ್‌ ಡೈರೆಕ್ಟರ್‌ನ ಸೃಜನಶೀಲತೆಗೆ ಧಕ್ಕೆ‌ ತರುವುದಿಲ್ಲವೇ?

ಎರಡೂವರೆ ದಶಕದಿಂದಲೂ ಈ ವ್ಯವಸ್ಥೆ ಚಾಲ್ತಿಯಲ್ಲಿದೆ. ಸಿನಿಮಾದ ವಿವಿಧ ವಿಭಾಗದಲ್ಲಿ ಕೆಲಸ ಮಾಡುವವರಿಗೆ ನಿರ್ದಿಷ್ಟ ಸಂಭಾವನೆ ಇದೆ. ಆದರೆ, ಸಂಗೀತ‌ನಿರ್ದೇಶಕನಿಗೆ ಸಂಭಾವನೆಯೇ ಇಲ್ಲ. ಗಾಯಕರು, ಸೌಂಡ್ಸ್‌ ಮಿಕ್ಸ್, ಹಿನ್ನೆಲೆ ಸಂಗೀತದ‌ ವೆಚ್ಚ ಈ ಪ್ಯಾಕೇಜ್‌ನಲ್ಲಿಯೇ ಸೇರುತ್ತದೆ. ಇಷ್ಟನ್ನು ಸಂಭಾಳಿಸಲು ಹಣ ವ್ಯಯಿಸಿ ಉಳಿಸಿಕೊಳ್ಳುವುದು ಸಂಗೀತ ನಿರ್ದೇಶಕನ ಸಾಮರ್ಥ್ಯಕ್ಕೆ ಬಿಟ್ಟ ವಿಚಾರ. ಕನ್ನಡದಲ್ಲಿ ಹಣ ಉಳಿಸಿಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ.

ತಮಿಳು, ತೆಲುಗು, ಮಲಯಾಳ, ಹಿಂದಿ, ಇಂಗ್ಲಿಷ್‌ ಸಿನಿಮಾ ನೋಡುವ ಪ್ರೇಕ್ಷಕರೇ ಕನ್ನಡ ಸಿನಿಮಾಗಳನ್ನು ನೋಡಿ ವಿಮರ್ಶೆಗೆ ಇಳಿಯುತ್ತಾರೆ. ನಮ್ಮವರು ಏನೂ ಮಾಡಿಲ್ಲ ಎಂದು ದೂರುತ್ತಾರೆ. ನಾವೂ ಈ ಟೀಕೆಯ ಸಂಕವನ್ನೂ ದಾಟಬೇಕು. ಪರಭಾಷೆಯ ಸಿನಿಮಾಗಳಲ್ಲಿ ಸಂಗೀತ ನಿರ್ದೇಶಕರಿಗೆ ₹ 2 ಕೋಟಿ ಸಂಭಾವನೆ ಇರುತ್ತದೆ. ಹೆಚ್ಚುವರಿಯಾಗಿ ₹ 50ರಿಂದ 60 ಲಕ್ಷ ನೀಡುತ್ತಾರೆ. ಕನ್ನಡದಲ್ಲಿ ಸಿನಿಮಾಗೆ ತಕ್ಕಂತೆ ನಾವು ಸಂಭಾವನೆ ಪಡೆಯುತ್ತೇವೆ. ಆ ಸಿನಿಮಾಗೆ ತಕ್ಕಂತೆ ಹಣವೂ ಖರ್ಚಾಗುತ್ತದೆ. ದುಡ್ಡು ಉಳಿಸಲು ಹೋದರೆ ಗುಣಮಟ್ಟ ಕಡಿಮೆಯಾಗುತ್ತದೆ. ಗುಣಮಟ್ಟ ಕಳೆದುಕೊಂಡರೆ ಮಾರುಕಟ್ಟೆಯಲ್ಲಿ ಉಳಿಗಾಲವಿಲ್ಲ.

ನಾನು ಸಣ್ಣದು ಅಥವಾ ದೊಡ್ಡ ಚಿತ್ರ ಎಂದು ಲೆಕ್ಕಾಚಾರ ಮಾಡುವುದಿಲ್ಲ. ಇಂದಿಗೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಹಾಗಾಗಿಯೇ, ಮಾರುಕಟ್ಟೆಯಲ್ಲಿ ಹಾಡುಗಳು ನಿಂತುಕೊಳ್ಳುತ್ತಿವೆ. ಹಣಕಾಸಿನ ಲೆಕ್ಕಾಚಾರ ಅವಲೋಕಿಸಿದರೆ ನನಗೆ ಕೊನೆಯಲ್ಲಿ ಏನೂ ಉಳಿಯುವುದಿಲ್ಲ. ನನಗೆ ಗೊತ್ತಿರುವುದು ಇದೊಂದೇ ಕೆಲಸ. ಬೇರೆ‌‌ ಕೆಲಸ ಗೊತ್ತಿಲ್ಲ.

* ಪ್ರಸ್ತುತ ಕನ್ನಡದಲ್ಲಿ ಬರುತ್ತಿರುವ ಹೊಸಬರ ಅಲೆಯಲ್ಲಿ ನೊರೆಯೇ ಜಾಸ್ತಿ ಇದೆ ಎಂಬ ಆರೋಪ ಇದೆಯಲ್ಲ?

ಹೊಸಬರು ಕೂಡ ಒಳ್ಳೆಯ ಹಾಡನ್ನೇ ಮಾಡುತ್ತಾರೆ. ಉತ್ತಮ ಪ್ರಯತ್ನ ಮಾಡುತ್ತಿದ್ದಾರೆ. ಆ ದಾರಿಯಲ್ಲಿ ಅವರಿಗೆ ಅನುಭವ ದಕ್ಕುತ್ತದೆ. ಯಾರೊಬ್ಬರಿಗೂ ಹೀಗೆಯೇ ಮಾಡಬೇಕೆಂದು ನಾನು ಸಲಹೆ ಕೊಡುವಷ್ಟರಮಟ್ಟಿಗೆ ಬೆಳೆದಿಲ್ಲ. ಹೊಸತನ ಅವರ ಒಳಗಿನಿಂದಲೇ ಬರಬೇಕು. ಹಾಡನ್ನು ಜನರಿಗೆ ಅದನ್ನು ಅರ್ಥ ಮಾಡಿಸಬೇಕು ಅಷ್ಟೇ. ಅದೇ ಸಂಗೀತ ನಿರ್ದೇಶಕನ ಕರ್ತವ್ಯ. ಚರಣ್‌ರಾಜ್‌, ಜ್ಯೂಡ ಸ್ಯಾಂಡಿಅದ್ಭುತವಾಗಿ ಸಂಗೀತ ಸಂಯೋಜಿಸುತ್ತಾರೆ. ಈ ಇಬ್ಬರ ಸಂಗೀತ ನನಗಿಷ್ಟ.

* ಸಂಗೀತ ಸಂಯೋಜನೆ ವೇಳೆ ಚಿತ್ರ ನಿರ್ದೇಶಕರ ಒತ್ತಡ ಇರುತ್ತದೆಯೇ?

ನೀವು ಏನಾದರೂ ಮಾಡಿಕೊಳ್ಳಿ. ಆದರೆ, ಕಾಸು ಕೇಳಬೇಡಿ ಎನ್ನುತ್ತಾರೆ. ಸಿನಿಮಾ ಒ‍ಪ್ಪಿಕೊಂಡಾಗ ಅದು ನನ್ನ ಮಗು. ತಾಯಿ ನೋಡಿಕೊಳ್ಳದಿದ್ದರೆ ತಂದೆಯಾದರೂ ನೋಡಿಕೊಳ್ಳಬೇಕಿದೆ. ಹಾಡಿನ ಗುಣಮಟ್ಟಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ. ಲಂಡನ್‌ನಲ್ಲಿ ಬುಡಾಫೆಸ್ಟ್ ಸಿಂಫನಿ ಆರ್ಕೆಸ್ಟ್ರಾ ಇದೆ. ಇಡೀ ಭಾರತದಲ್ಲಿ ಮೊದಲಿಗೆ ಈ ಸ್ಟುಡಿಯೊದಲ್ಲಿ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ. ಅವರ ಹಲವು ಹಾಡುಗಳು ಅಲ್ಲಿ ಸಂಯೋಜನೆಗೊಂಡಿವೆ. ‘99’ ಚಿತ್ರದ ಒಂದು ಹಾಡು ಮತ್ತು ಒಂದು ಬಿಟ್‌ ಅನ್ನು ಇಲ್ಲಿ ಸಂಯೋಜಿಸಲಾಗಿದೆ. ಆರ್ಕೆಸ್ಟ್ರಾ ತಂಡ ನನ್ನ ಹಾಡುಗಳನ್ನು ನುಡಿಸಿದ್ದು ಅದೃಷ್ಟ. ಅಲ್ಲಿ ನಾವು ಒಂದು ಹಾಡಿಗೆ ವ್ಯಯಿಸುವ ವೆಚ್ಚದಲ್ಲಿ ಇಲ್ಲಿ ಮೂರು ಹಾಡು ಮಾಡಬಹುದು.

* ‘ಪೈಲ್ವಾನ್‌’ ಚಿತ್ರದ ಸಂಗೀತ ಸಂಯೋಜನೆಯ ಬಗ್ಗೆ ಹೇಳಿ.

ಎಂಟು ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ. ಆದರೆ, ಮ್ಯೂಸಿಕ್‌ ಒಂದೇ ಇರುತ್ತದೆ. ಗಾಯಕರು ಮಾತ್ರ ಬದಲಾಗುತ್ತಾರೆ. ಮಿಕ್ಸ್‌ ಮಾಸ್ಟರ್ಸ್‌ಗಳನ್ನು ಬದಲಾಯಿಸಬೇಕಾಗುತ್ತದೆ. ಪ್ರತಿ ಅವತರಣಿಕೆಯಲ್ಲೂ ಶೇಕಡ 30ರಷ್ಟು ಮರುಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಹಣಕಾಸಿನ ಲೆಕ್ಕಾಚಾರದಲ್ಲಿ ಕೆಲಸ ಮಾಡಲಾಗುವುದಿಲ್ಲ. ಇಂಡಸ್ಟ್ರಿಯ ಬೆಳವಣಿಗೆ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT